ಈ ಬಾರಿ ನಿರೀಕ್ಷೆಗಿಂತ ಹೆಚ್ಚು ಮುಂಗಾರು ಮಳೆಯಾಗಿದ್ದು, ಬೆಂಗಳೂರಲ್ಲಿ ಅಂತರ್ಜಲ ಮಟ್ಟ ಏರಿಕೆಯಾಗಿದೆಯಂತೆ. ಜಲಮಂಡಳಿ ಸಹಯೋಗದಿಂದ ನಡೆಸಿದ ಅಧ್ಯಯನದ ವರದಿಯಲ್ಲಿ ಈ ಗುಡ್‌ನ್ಯೂಸ್ ಸಿಕ್ಕಿದೆ. ನವೆಂಬರ್‌ವರೆಗೂ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಅಂತರ್ಜಲ ಮಟ್ಟ ಇನ್ನಷ್ಟು ಏರಿಕೆ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ಅಂತರ್ಜಲದ ಮಟ್ಟ 0.5 ಮೀಟರ್‌ನಿಂದ 1.2 ಮೀಟರ್‌ಗೆ ಏರಿಕೆಯಾಗಿದೆ. ಕಳೆದ ಏಪ್ರಿಲ್ ಮತ್ತು ಮೇ ತಿಂಗಳಲ್ಲೇ 21 ಕೆರೆಗಳಿಗೆ ಸಂಸ್ಕರಿಸಿದ ತ್ಯಾಜ್ಯ ನೀರು ಹರಿಸಲಾಗಿದೆ. ಕೊಳವೆ ಬಾವಿಗಳಿಂದ ನಿತ್ಯ 800 ಎಂಎಲ್‌ಡಿಯಷ್ಟು ನೀರು ಪೂರೈಕೆಯಾಗುತ್ತಿತ್ತು. ಆ ಪ್ರಮಾಣವು ಶೇಕಡ 50ರಷ್ಟು ಕಡಿಮೆಯಾಗಿದೆ. ಅಲ್ಲದೆ, ವೈಯಕ್ತಿಕ ಕೊಳವೆ ಬಾವಿಗಳಿಂದ ನೀರು ಬಳಸದೆ, ಕಾವೇರಿ ನೀರು ಪಡೆಯಲು ಜಾಗೃತಿ ಮೂಡಿಸಲಾಗಿದೆ. ಜೊತೆಗೆ ಸಂಚಾರಿ ಕಾವೇರಿ ಯೋಜನೆಯನ್ನೂ ಜಾರಿಗೊಳಿಸಲಾಯಿತು.
ಬೆಂಗಳೂರಿನಲ್ಲಿ 2.50 ಲಕ್ಷ ಕಟ್ಟಡಗಳಲ್ಲಿ ಮಳೆ ನೀರಿನ ಕೊಯ್ಲು ವ್ಯವಸ್ಥೆ ಅಳವಡಿಸಲಾಗಿದೆ. ಜಲಮಂಡಳಿಯಿಂದ ಶಾಲೆಗಳು, ಸರ್ಕಾರಿ ಕಚೇರಿಗಳು ಮತ್ತು ಸಾರ್ವಜನಿಕ ಉದ್ಯಾನಗಳಲ್ಲಿ, ಸುಮಾರು 3000 ಇಂಗು ಗುಂಡಿಗಳನ್ನು ನಿರ್ಮಿಸಲಾಗಿದೆ. ಪರಿಣಾಮ ಅಂತರ್ಜಲ ಮಟ್ಟ ಏರಿಕೆ ಕಂಡಿದೆ.
2024ರ ವೇಳೆ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿತ್ತು. ಈ ಹಿನ್ನೆಲೆ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸುಸ್ಥಿರ ಹಾಗೂ ವೈಜ್ಞಾನಿಕ ಕ್ರಿಯಾ ಯೋಜನೆ ಸಿದ್ಧಪಡಿಸುವ ಉದ್ದೇಶ ಹೊಂದಲಾಗಿತ್ತು. ಹೀಗಾಗಿ ಅಂತರ್ಜಲ ಮಟ್ಟದ ಅಧ್ಯಯನಕ್ಕೆ ಭಾರತೀಯ ವಿಜ್ಞಾನ ಸಂಸ್ಥೆ, ರಾಜ್ಯ ಹಾಗೂ ಕೇಂದ್ರ ಅಂತರ್ಜಲ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ, ವಿಶೇಷ ಕಾರ್ಯಪಡೆ ರಚಿಸಲಾಗಿತ್ತು. ಈ ತಂಡ 2024ರ ಜುಲೈನಿಂದ ಅಂತರ್ಜಲ ಮಟ್ಟದ ದತ್ತಾಂಶದ ಕುರಿತು, ಅಧ್ಯಯನ ಕೈಗೊಂಡು ಜನವರಿಯಲ್ಲಿ ಜಲಮಂಡಳಿಗೆ ವರದಿ ಸಲ್ಲಿಸಿದೆ.
ಬೆಂಗಳೂರು ನಗರದ ಕೇಂದ್ರ ಭಾಗದಲ್ಲಿಅಂತರ್ಜಲ ಮಟ್ಟ ಸುಮಾರು 5 ಮೀಟರ್, ಪುರಸಭೆ ವ್ಯಾಪ್ತಿಯಲ್ಲಿ10ರಿಂದ 15 ಮೀಟರ್ ಹಾಗೂ 110 ಹಳ್ಳಿಗಳಲ್ಲಿ 20ರಿಂದ 25 ಮೀಟರ್‌ಗಳಷ್ಟು ಅಂತರ್ಜಲ ಮಟ್ಟ ಕುಸಿಯುವ ಸಾಧ್ಯತೆ ಕುರಿತು ಎಚ್ಚರಿಕೆ ನೀಡಿತ್ತು. ಆದ್ರೀಗ, ಆ ಪ್ರದೇಶಗಳಲ್ಲೇ ಅಂತರ್ಜಲ ಮಟ್ಟ ಗಣನೀಯವಾಗಿ ಏರಿಕೆಯಾಗಿದೆ.