ಕೆಎಸ್‌ಆರ್‌ಟಿಸಿ ಫ್ಲೈಬಸ್ ಮೂಲಕ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವವರಿಗೆ, ಇಂದಿನಿಂದ ಕೆಎಂಎಫ್ ನಂದಿನಿ ಸ್ನ್ಯಾಕ್ಸ್ ಕಿಟ್ ಸಿಗಲಿದೆ. ಈ ಹೊಸ ಯೋಜನೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ರಲ್ಲಿ ಅಧಿಕೃತ ಚಾಲನೆ ಸಿಗಲಿದೆ. ಜನರ ಪ್ರಯಾಣವನ್ನು ಇನ್ನಷ್ಟು ಉತ್ತಮಗೊಳಿಸುವುದರ ಜತೆಗೆ ಏರ್‌ಪೋರ್ಟ್‌ಗೆ ತೆರಳುವ ಬಸ್‌ಗಳಲ್ಲೂ, ವಿಮಾನ ಪ್ರಯಾಣದ ಮಾದರಿಯಲ್ಲೇ ಆತಿಥ್ಯ ನೀಡಬೇಕೆಂಬ ಗುರಿಯೊಂದಿಗೆ ನಿರ್ಧಾರ ಕೈಗೊಳ್ಳಲಾಗಿದೆ.
ಕರ್ನಾಟಕದ ಪ್ರಸಿದ್ಧ ನಂದಿನಿ ಬ್ರ್ಯಾಂಡ್, ಅದರ ಡೈರಿ ಆಧಾರಿತ ತಿಂಡಿಗಳು ಮತ್ತು ಪಾನೀಯಗಳಿಗೆ ಇನ್ನಷ್ಟು ಪ್ರಚಾರ ದೊರೆಯುವಂತೆ ಮಾಡುವ ಮೂಲಕ, ಅವುಗಳ ಉತ್ತೇಜನಕ್ಕೂ ಈ ಉಪಕ್ರಮ ಸಹಾಯ ಮಾಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಫ್ಲೈಬಸ್ ಪ್ರಯಾಣಿಕರಿಗೆ ನೀಡುವ ನಂದಿನಿ ಸ್ನ್ಯಾಕ್ ಕಿಟ್‌ನಲ್ಲಿ ಏನೇನು ಉತ್ಪನ್ನಗಳು ಇರಲಿವೆ ಎಂಬುದನ್ನು, ಕೆಎಸ್‌ಆರ್‌ಟಿಸಿ ನಿರ್ದಿಷ್ಟವಾಗಿ ಉಲ್ಲೇಖಿಸಿಲ್ಲ. ನಂದಿನಿ ಬ್ರ್ಯಾಂಡ್‌ನ ಕೆಲವು ಉತ್ಪನ್ನಗಳು ಇರಲಿವೆ ಎಂದು ತಿಳಿಸಿದೆ.
ಕೆಎಸ್‌ಆರ್‌ಟಿಸಿ ಫ್ಲೈಬಸ್ ಸೇವೆಯು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು, ಮೈಸೂರು, ಮಂಗಳೂರು, ಮಡಿಕೇರಿ, ಮಣಿಪಾಲ, ಉಡುಪಿ ಮತ್ತು ಕುಂದಾಪುರ ಸೇರಿದಂತೆ ಕರ್ನಾಟಕದ ಹಲವಾರು ಪ್ರಮುಖ ನಗರಗಳು ಮತ್ತು ಪಟ್ಟಣಗಳೊಂದಿಗೆ ಸಂಪರ್ಕಿಸುತ್ತದೆ.
ಕೆಎಸ್‌ಆರ್‌ಟಿಸಿ ತನ್ನ ಪ್ರೀಮಿಯಂ ಬಸ್‌ಗಳಲ್ಲಿ ಪ್ರಯಾಣಿಕರಿಗೆ ಉಚಿತ ಕುಡಿಯುವ ನೀರಿನ ಬಾಟಲ್ ಅನ್ನು ಈ ಹಿಂದೆ ಒದಗಿಸುತ್ತಿತ್ತು. ಆದರೆ, 2019ರ ಅಕ್ಟೋಬರ್‌ನಿಂದ, ನಿಗಮವು ಪ್ಲಾಸ್ಟಿಕ್ ಬಾಟಲಿ ನೀರು ನೀಡುವುದನ್ನು ಸ್ಥಗಿತಗೊಳಿಸಿತ್ತು.
ದಾವಣಗೆರೆಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ, ಸಂಪರ್ಕ ಕಲ್ಪಿಸುವ ಹೊಸ ಫ್ಲೈಬಸ್ ಸೇವೆಗೂ ಇಂದು ಚಾಲನೆ ದೊರೆಯುತ್ತಿದೆ. ಈ ಕ್ರಮವು ಕೆಎಸ್‌ಆರ್‌ಟಿಸಿಯ ಪ್ರಯಾಣಿಕರ ಸೌಲಭ್ಯಗಳನ್ನು ಸುಧಾರಿಸುವ ಮತ್ತು 2ನೇ ಸ್ತರದ ನಗರಗಳಿಂದ ವಿಮಾನ ನಿಲ್ದಾಣಕ್ಕೆ ಸಂಪರ್ಕವನ್ನು ವಿಸ್ತರಿಸುವ ದೊಡ್ಡ ಗುರಿಗೆ ಪೂರಕವಾಗಿದೆ.

