Hubli News: ಹುಬ್ಬಳ್ಳಿ: ಮುಡಾ ಹಗರಣ ರಾಜ್ಯ ಕಂಡ ಅತ್ಯಂತ ದೊಡ್ಡ ಹಗರಣವಾಗಿದೆ. ಈ ಹಗರಣದಲ್ಲಿ ಸಿಎಂ ಕುಟುಂಬವೇ ಭಾಗಿಯಾಗಿದೆ. ಈ ಹಿನ್ನೆಲೆ ರಾಜ್ಯಪಾಲರು ದೂರು ಬಂದ ಹಿನ್ನೆಲೆಯಲ್ಲಿ ಪ್ರಾಸಿಕ್ಯೂಷನ್’ಗೆ ಅನುಮತಿ ಕೊಟ್ಟಿದ್ದಾರೆ. ಇದು ರಾಜ್ಯದ ಕಾನೂನಿಗೆ ದೊರೆತ ಜಯವಾಗಿದೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣದಲ್ಲಿ 4-5 ಸಾವಿರ ಕೋಟಿ ಭ್ರಷ್ಟಾಚಾರ ಆಗಿದೆ. ಇದರಿಂದ ರಾಜ್ಯದ ಜನವೇ ಶಾಕ್ ಆಗಿದ್ದಾರೆ. ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದು ಹೇಳಿದರು.
ಈ ಹಿಂದೆ ಯಡಿಯೂರಪ್ಪ ಸಿಎಂ ಆಗಿದ್ದಾಗ ಹಂಸರಾಜ್ ಭಾರದ್ವಾಜ್ ಅವರು ಯಾವುದೇ ಒಂದು ನೋಟಿಸ್ ನೀಡದೇ ಪ್ರಾಸಿಕ್ಯೂಷನ್’ಗೆ ಅನುಮತಿ ಕೊಟ್ಟಿದ್ದಾರೆ. ಆದರೆ ಇದೀಗ ಸಮರ್ಪಕವಾಗಿ ಸಿದ್ದರಾಮಯ್ಯ ಅವರಿಂದ ಉತ್ತರ ಹೇಳಿದ್ದಾರೆ. ಅದಕ್ಕಾಗಿ ನೋಟೀಸ್ ಕೊಟ್ಟಿದ್ದಾರೆ. ಆನಂತರ ರಾಜ್ಯಪಾಲರು ಪ್ರಾಸಿಕ್ಯೂಷನ್’ಗೆ ಅನುಮತಿ ಕೊಟ್ಟಿದ್ದಾರೆ. ಇದನ್ನು ಸ್ವಾಗತ ಮಾಡುತ್ತೇನೆ ಎಂದರು.
ಸಿದ್ದರಾಮಯ್ಯ ಅವರಿಗೆ ಯಾವುದೇ ನೈತಿಕತೆ ಉಳಿದಿಲ್ಲ. ಅವರು ತಮ್ಮ ಜೀವನವನ್ನು ತೆರೆದ ಪುಸ್ತಕ ಎಂದು ಹೇಳತ್ತಾರೆ. ಆದರೆ ಇದೀಗ ಭ್ರಷ್ಟಾಚಾರದ ಆರೋಪವನ್ನು ಸಿದ್ದರಾಮಯ್ಯ ಅವರು ಹೊತ್ತಿದ್ದಾರೆ. ಇಂತಹ ಸಿಎಂ ನೋಡಲು ರಾಜ್ಯದ ಜನರು ನೋಡಲು ಇಚ್ಚೆ ಪಡುವುದಿಲ್ಲ. ಹೀಗಾಗಿ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕೆಂದು ಆಗ್ರಹಿಸಿದರು.
ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವುದು, ಬೀಳಿಸುವ ಆಸಕ್ತಿ ಬಿಜೆಪಿಗೆ ಇಲ್ಲ. ಕಾಂಗ್ರೆಸ್ ಐದು ವರ್ಷ ಸ್ವಚ್ಛ ಆಡಳಿತವನ್ನು ರಾಜ್ಯದ ಜನರಿಗೆ ನೀಡಲಿ ಎಂದು ಹೇಳಿದರು.
ಇದೀಗ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವವರೆಗೆ ನಿರಂತರ ಹೋರಾಟ ಮುಂದುವರೆಯಲಿ. ಸೋಮವಾರ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಹೋರಾಟ ಮಾಡಲಾಗುವುದು ಎಂದು ಹೇಳಿದರು.
ಬಿಜೆಪಿಯಲ್ಲಿ ಯಾವುದೇ ಅಪಸ್ವರಯಿಲ್ಲ. ಕೆಲವು ವಿಚಾರದಲ್ಲಿ ಅಸಮಾಧಾನ ಇರಬಹುದು. ಆದರೆ ಹೋರಾಟ ಬಂದಾಗ ನಾವೆಲ್ಲರೂ ಒಂದಾಗಿದ್ದೇವೆ. ನಮ್ಮಲ್ಲಿರುವ ಭಿನ್ನಾಭಿಪ್ರಾಯ ನಾವು ಸರಿಮಾಡಿಕೊಳ್ಳುತ್ತೇವೆ ಎಂದು ಶಾಸಕ ಅರವಿಂದ ಬೆಲ್ಲದ್ ಹೇಳಿದರು.