ರಾಜ್ಯ ರಾಜಕೀಯದಲ್ಲಿ RSS ಕಾರ್ಯಕ್ರಮಗಳ ಬಗ್ಗೆ ಚರ್ಚೆ ಭುಗಿಲೆದ್ದಿದೆ. ಅದರಂತೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಹಾಸನಾಂಬ ದೇವಿ ದರ್ಶನ ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. RSS ಅನ್ನು ನಿಷೇಧಿಸಲು ಇಂದಿರಾ ಗಾಂಧಿ ಯತ್ನಿಸಿದರೂ ಸೋಲಲೇಬೇಕಾಯಿತು. ಇನ್ನು ಪ್ರಿಯಾಂಕ್ ಖರ್ಗೆ ಯಾವ ಲೆಕ್ಕ? ಎಂದು ಟೀಕಿಸಿದರು.
ಹಾಸನಾಂಬ ದೇವಿ ದರ್ಶನಕ್ಕೆ ಕುಟುಂಬ ಸಮೇತರಾಗಿ ಆಗಮಿಸಿದ್ದ ಈಶ್ವರಪ್ಪ, ವಿಐಪಿಗಳ ವ್ಯವಸ್ಥೆಯನ್ನು ಶ್ಲಾಘಿಸಿದರು. ರಾಜ್ಯ ಸರ್ಕಾರ, ಸಚಿವ ಕೃಷ್ಣಭೈರೇಗೌಡ, ಜಿಲ್ಲಾಡಳಿತ ಮತ್ತು ಎಲ್ಲ ಅಧಿಕಾರಿಗಳಿಗೆ ಧನ್ಯವಾದ ಅರ್ಪಿಸಿದರು. ಈ ವ್ಯವಸ್ಥೆಯನ್ನು ಮುಂದುವರಿಸಬೇಕು ಎಂದು ಅವರು ಶ್ಲಾಘಿಸಿದರು. ಜೊತೆಗೆ ರಾಜ್ಯ ರಾಜಕೀಯದಲ್ಲಾಗುತ್ತಿರುವ ಆರ್‌ಎಸ್‌ಎಸ್ ಬಗೆಗಿನ ಚರ್ಚೆ ಬಗ್ಗೆ ಮಾತನಾಡಿ, ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಕಿಡಿಕಾರಿದರು.
RSS ನ್ನು ನಿಷೇಧಿಸಲು ಜವಾಹರಲಾಲ್ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿಯವರಂತಹ ನಾಯಕರು ಪ್ರಯತ್ನಿಸಿದರೂ ಯಶಸ್ವಿಯಾಗಲಿಲ್ಲ. RSS ಅನ್ನು ಮುಟ್ಟಿದವರು ನಾಶವಾಗಿದ್ದಾರೆ. ಇಂದಿರಾಗಾಂಧಿಯವರು ತುರ್ತು ಪರಿಸ್ಥಿತಿಯಲ್ಲಿ ಸಂಘವನ್ನು ನಿಷೇಧಿಸಲು ಯತ್ನಿಸಿ ಸೋತರು. ಇಷ್ಟು ದೊಡ್ಡವರ ಕೈಯಲ್ಲೇ ಆಗದ ಕೆಲಸ, ಇನ್ನು ಪ್ರಿಯಾಂಕ್ ಖರ್ಗೆ ಮಾಡ್ತಾರಾ? ಪ್ರಿಯಾಂಕ್ ಖರ್ಗೆ ಕುನ್ನಿ, ಅವರು ಯಾವ ಲೆಕ್ಕ ಬಿಡಿ ಎಂದು ಲೇವಡಿ ಮಾಡಿದರು.
ಸಚಿವ ಸಂಪುಟ ಪುನರ್‌ರಚನೆ ಹಿನ್ನೆಲೆಯಲ್ಲಿ ಕೆಲವರು ತಮ್ಮ ಸ್ಥಾನ ಉಳಿಸಿಕೊಳ್ಳಲು RSS ವಿರುದ್ಧ ಮಾತನಾಡುತ್ತಿರುವುದಾಗಿ ಆರೋಪಿಸಿದ ಈಶ್ವರಪ್ಪ, ಟೀಕೆ ಮಾಡುವ ಮೂಲಕ ಹೀರೋ ಆಗಲು ಯತ್ನಿಸುತ್ತಿದ್ದಾರೆ, ಆದರೆ ವಾಸ್ತವದಲ್ಲಿ ವಿಲನ್ ಆಗುತ್ತಿದ್ದಾರೆ ಎಂದಿದ್ದಾರೆ. ಕಾಂಗ್ರೆಸ್ ನಾಯಕ ಹರಿಪ್ರಸಾದ್ ದೊಡ್ಡ ನಾಯಕರಾಗಲು ಹೊರಟಿದ್ದಾರೆ. ಆದರೆ ಅದು ಆಗುವುದಿಲ್ಲ. ಆರ್‌ಎಸ್‌ಎಸ್ ಸೂರ್ಯನಂತೆ ಬೆಳೆದಿದೆ.
ಅದನ್ನು ಟೀಕಿಸಿದರೆ ಗೌರವ ಬರುತ್ತದೆ ಎಂದು ಕೆಲವರು ಅಂದುಕೊಂಡಿದ್ದಾರೆ. ಆದರೆ ಆರ್‌ಎಸ್‌ಎಸ್‌ಗೆ ಉಗುಳಿದರೆ ತಮ್ಮ ಮೈಮೇಲೆ ಬೀಳುತ್ತದೆ ಎಂಬುದು ಅವರಿಗೆ ಗೊತ್ತಿಲ್ಲ. ಒಬ್ಬ ಮಂತ್ರಿಯೂ ಅವರ ಜೊತೆ ಇಲ್ಲ, ಹೈಕೋರ್ಟ್ ಕೂಡ ಸೊಪ್ಪು ಹಾಕಲಿಲ್ಲ ಎಂದು ಈಶ್ವರಪ್ಪ ಟೀಕೆ ಮಾಡಿದರು.
ವರದಿ : ಲಾವಣ್ಯ ಅನಿಗೋಳ