ಎಲ್ಲೆಡೆ ಭಾರೀ ಮಳೆಯಾಗ್ತಿದ್ದು, ನದಿಗಳೆಲ್ಲಾ ತುಂಬಿ ಹರಿಯುತ್ತಿವೆ. ಈಜಾಡಲು ನದಿಗೆ ಇಳಿಯುವ ಮುನ್ನ ಎಚ್ಚರವಾಗಿರಬೇಕಿದೆ. ಯಾಕಂದ್ರೆ, ತುಂಗಾಭದ್ರಾ ನದಿಯಲ್ಲಿ ಈಜಲು ಹೋಗಿ ಹಾಸನದ ಮೂವರು ಯುವಕರು ನೀರು ಪಾಲಾಗಿದ್ದಾರೆ.
ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಜಾವಗಲ್ ನಿವಾಸಿಗಳಾಗಿರುವ ಯುವಕರು, ಡಿಗ್ರಿ ವ್ಯಾಸಂಗ ಮಾಡುತ್ತಿದ್ರು. 7 ಮಂದಿ ಸ್ನೇಹಿತರು ಒಟ್ಟಾಗಿ ಆಂಧ್ರಪ್ರದೇಶದ ಮಂತ್ರಾಲಯಕ್ಕೆ ಹೊರಟಿದ್ರು. ರಾಯರ ದರ್ಶನಕ್ಕೂ ಮುನ್ನ ತುಂಗಾಭದ್ರಾ ನದಿಯಲ್ಲಿ ಸ್ನಾನಕ್ಕೆಂದು ಹೋಗಿದ್ದಾರೆ.
ತುಂಗಾಭದ್ರಾ ನದಿ ಉಕ್ಕಿ ಹರಿಯುತ್ತಿದ್ದು, ಈಜಾಡಲು ಹೋಗದಂತೆ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ. ಸ್ಥಳೀಯರ ಮಾತನ್ನೂ ಲೆಕ್ಕಿಸದೇ ನದಿಯೊಳಗೆ ಯುವಕರ ಗುಂಪು ಇಳಿದಿದೆ. ನೋಡನೋಡುತ್ತಿದ್ದಂತೆ ಮೂವರು ಯುವಕರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.
ಹಲವು ದಿನಗಳಿಂದ ನಿರಂತರ ಮಳೆಯಾಗ್ತಿದ್ದು, ಪರಿಣಾಮ ನದಿ ಉಕ್ಕಿ ಹರಿಯುತ್ತಿವೆ. ಅಪಾಯದ ಮುನ್ಸೂಚನೆ ಸಿಕ್ಕಿದ್ದರೂ, ಯುವಕರು ಸಾಹಸಕ್ಕೆ ಮುಂದಾಗಿದ್ರು. ಪರಿಣಾಮ 20 ವರ್ಷದ ಅಜಿತ್, 19 ವರ್ಷದ ಸಚಿನ್, 19 ವರ್ಷದ ಪ್ರಮೋದ್ ಕೊಚ್ಚಿಹೋಗಿದ್ದಾರೆ.