ಮಲೆ ಮಹದೇಶ್ವರ ಬೆಟ್ಟದ ಹನೂರು ವಲಯದಲ್ಲಿ ಮತ್ತೊಂದು ಹುಲಿ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ, ಪಚ್ಚೆದೊಡ್ಡಿತಾಂಡಾದ ಇಬ್ಬರು ಶಂಕಿತರನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. – ಪಚ್ಚೆಮಲ್ಲು ಮತ್ತು ಮಂಜುನಾಥ ಎಂಬ ಶಂಕಿತರನ್ನ ಗುರುತಿಸಲಾಗಿದೆ ಹನೂರು ವಲಯದ ಅರಣ್ಯಾಧಿಕಾರಿಗಳ ಕಾರ್ಯಾಚರಣೆಯಲ್ಲಿ ಬಂಧನಕ್ಕೊಳಗಾಗಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, 12 ವರ್ಷದ ಗಂಡು ಹುಲಿಗೆ ವಿಷ ನೀಡುವ ಮೂಲಕ ಹತ್ಯೆ ಮಾಡಲಾಗಿದೆಯೆಂದು ತಿಳಿದುಬಂದಿದೆ. ಬಳಿಕ ಹುಲಿಯ ಶವವನ್ನು ಕೊಡಲಿಯಿಂದ ಕೊಚ್ಚಿ ಮೂರು ಭಾಗಗಳಾಗಿ ಕತ್ತರಿಸಿ, ಬೇರೆ ಬೇರೆ ಸ್ಥಳಗಳಲ್ಲಿ ಎಸೆದು ಹೋಗಲಾಗಿದೆ. ಸದ್ಯ ಹುಲಿಯ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಅಂಗಾಂಗಗಳನ್ನು ಹೆಚ್ಚಿನ ವಿಶ್ಲೇಷಣೆಗಾಗಿ FSLಗೆ ಕಳುಹಿಸಲಾಗಿದೆ. ಈ ಬಗ್ಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಮಾಹಿತಿ ನೀಡಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅರಣ್ಯ ಸಚಿವ ಈಶ್ವರ ಖಂಡ್ರೆ ಮಾತನಾಡಿದ್ದಾರೆ. ಮಲೆಮಹದೇಶ್ವರ ವನ್ಯಜೀವಿಧಾಮದ ಹನೂರು ಬಫರ್ ವಲಯ ವ್ಯಾಪ್ತಿಯಲ್ಲಿ ನಡೆದಿರುವ ಮತ್ತೊಂದು ಹುಲಿ ಹತ್ಯೆಯಿಂದ ತುಂಬಾ ನೋವಾಗಿದೆ ಎಂದಿದ್ದಾರೆ.
ಸದ್ಯ ವಶಕ್ಕೆ ಪಡೆದಿರುವ ಇಬ್ಬರು ಶಂಕಿತರನ್ನು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಹುಲಿಯನ್ನು ಕೊಂದವರಿಗೆ ಯಾರೆಲ್ಲ ಸಹಾಯ ಮಾಡಿದ್ದಾರೆ? ವಿಷವನ್ನು ಹೇಗೆ ಉಪಯೋಗಿಸಲಾಗಿದೆ? ಇತ್ಯಾದಿ ಕುರಿತು ವಿಚಾರಣೆ ಸಾಗುತ್ತಿದೆ ಎಂದಿದ್ದಾರೆ.
ಇತ್ತೀಚೆಗೆ ಇದೇ ಹನೂರು ವಲಯದಲ್ಲಿ ಐದು ಹುಲಿಗಳನ್ನು ವಿಷ ನೀಡಿ ಕೊಂದ ಪ್ರಕರಣ ಮಾಸುವ ಮೊದಲು ಮತ್ತೊಂದು ಹೇಯ ಕೃತ್ಯ ನಡೆದಿದೆ ಎಂಬುದಾಗಿ ಅರಣ್ಯ ಇಲಾಖೆ ಶಂಕೆ ವ್ಯಕ್ತಪಡಿಸಿದೆ. ಸಚಿವರ ಸೂಚನೆಯ ಮೇರೆಗೆ, PCCF ಸ್ಮಿತಾ ನೇತೃತ್ವದ ಉನ್ನತ ಮಟ್ಟದ ತಂಡ ಹುಲಿ ಹತ್ಯೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎಂಟು ದಿನಗಳೊಳಗೆ ವರದಿ ಸಲ್ಲಿಸಲು ಸೂಚನೆ ನೀಡಲಾಗಿದೆ.
ವರದಿ : ಲಾವಣ್ಯ ಅನಿಗೋಳ