ಉದ್ಯಮಿ ಆನಂದ್ ಮಹಿಂದ್ರಾ ತಮ್ಮ ಟ್ವಿಟರ್ ಅಕೌಂಟ್‌ನಲ್ಲಿ ಆಗಾಗ ಕೆಲವು ವೀಡಿಯೋಗಳನ್ನ ಶೇರ್ ಮಾಡ್ತಾನೇ ಇರ್ತಾರೆ. ಆ ವೀಡಿಯೋದಲ್‌ಲಿರುವವರು ಕಷ್ಟದಲ್ಲಿದ್ರೆ ಅಥವಾ ಸಾಧನೆ ಮಾಡಿದ್ರೆ, ಅಂಥವರಿಗೆ ತಮ್ಮ ಕಂಪನಿಯಲ್ಲಿ ಕೆಲಸಕ್ಕೆ ಕರೀತಾರೆ. ಆದ್ರೆ ಈ ಬಾರಿ ಅವರು ಶೇರ್ ಮಾಡಿರುವ ವೀಡಿಯೋದಲ್ಲಿ ಹುಲಿ ಇದೆ. ಆ ಹುಲಿ ಮಹೀಂದ್ರಾ ಗಾಡಿಯನ್ನ ತಡೆ ಹಿಡಿದು, ಅದರ ಪಾರ್ಟವೊಂದನ್ನ ಕಚ್ಚುತ್ತಿದೆ. ಕಿತ್ತು ತಿನ್ನಲು ಪ್ರಯತ್ನಿಸುತ್ತಿದೆ.
ಈ ವೀಡಿಯೋ ಬಗ್ಗೆ ಬರೆದಿರುವ ಆನಂದ್ ಮಹೀಂದ್ರಾ, ಈ ಹುಲಿ ಕಾಡ್ಗಿಚ್ಚಿನಂತೆ ಕಾರಿನ ಸುತ್ತಲೂ ಓಡಾಡುತ್ತಿದೆ. ಊಟ ಮತ್ತು ಮೈಸೂರು ರಸ್ತೆಯ ಬಳಿ ಸಿಗುವ ತೆಪ್ಪಕಾಡು ಎಂಬಲ್ಲಿ ಈ ದೃಷ್ಯ ಕಂಡುಬಂದಿದ್ದು, ಅದು ಕ್ಸೈಲೋ ಕಾರಾಗಿದೆ. ಅಂದ್ರೆ ನನ್ನ ಕಂಪೆನಿಯ ಕಾರಾಗಿದೆ. ಈ ಹುಲಿ ಅದನ್ನು ಅಗಿಯುತ್ತಿದ್ದದ್ದನ್ನು ಕಂಡು ನನಗೇನೂ ಆಶ್ಚರ್ಯವಾಗಿಲ್ಲ. ಯಾಕಂದ್ರೆ ಆ ಹುಲಿ ನನ್ನ ಕಂಪೆನಿಯ ಕಾರು ಎಷ್ಟು ರುಚಿ ಎಂಬುದನ್ನು ತೋರಿಸುತ್ತಿದೆ ಎಂದು ತಮಾಷೆ ಮಾಡಿದ್ದಾರೆ.
ಅಂದ ಹಾಗೆ ಈ ಕಾರಿನಲ್ಲಿ ಕನ್ನಡಿಗರು ಚಲಿಸುತ್ತಿದ್ದರು. ಹೆಚ್ಚಾಗಿ ಅವರು ಜಂಗಲ್ ಸಫಾರಿ ಮಾಡಲು ಹೋಗಿದ್ದರು ಅನ್ನಿಸುತ್ತೆ. ಅವರ ಕಾರ್ ಆ ರೀತಿಯಾಗಿತ್ತು. ಅದೇ ಕಾರನ್ನ ಸುತ್ತುವರಿದ ಹುಲಿ, ಆ ಕಾರ್‌ನ ಹಿಂದಿನ ಭಾಗವನ್ನು ಹಲ್ಲಿನಿಂದಲೇ ಕಿತ್ತಿ ತಿನ್ನಲು ಪ್ರಯತ್ನಿಸಿತ್ತು. ಆ ಕಾರ್ ಚಾಲಕ ಎಷ್ಟೇ ಪ್ರಯತ್ನಪಟ್ಟು ಕಾರನ್ನ ಹಿಂದೆ ತೆಗೆಯಲು ಯತ್ನಿಸಿದರೂ, ಕಾರು ಹಿಂದಕ್ಕೆ ಹೋಗಲಿಲ್ಲ. ಯಾಕಂದ್ರೆ ಹುಲಿ ಅಷ್ಟು ಗಟ್ಟಿಯಾಗಿ ಕಾರನ್ನ ಮುಂದೆ ನೂಕುತ್ತಿತ್ತು.
ಪಕ್ಕದ ಕಾರಿನಲ್ಲಿದ್ದ ಪ್ರಯಾಣಿಕರು ಈ ದೃಶ್ಯವನ್ನ ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ. ವಿಷಯ ಏನಂದ್ರೆ ಹುಲಿ ತಮ್ಮ ಕಾರಿನ ಹಿಂದೆ ಬಂದಿದ್ದು, ಕಾರಲ್ಲಿದ್ದವರಿಗೆ ಯಾರಿಗೂ ಗೊತ್ತೇ ಇರಲಿಲ್ಲ. ಡ್ರೈವರ್ ಗಾಡಿ ಸ್ಟಾರ್ಟ್ ಆಗ್ತಿಲ್ಲಾ ನೋಡೋ ಅಂದಾಗ, ಹಿಂದೆ ತಿರುಗಿ ನೋಡಿದಾಗಲೇ ಹುಲಿರಾಯನ ದರ್ಶನವಾಗಿದ್ದು. ಇದಕ್ಕೆ ಸಾಥ್ ಕೊಡೋಕ್ಕೆ ಅಂತಾ ಇನ್ನೊಂದು ಹುಲಿ ಬಂದಿತ್ತು.