ರಾಜಕೀಯದಲ್ಲಿ ಮತ್ತೆ ಟಿಪ್ಪು ಕಾರ್ಡ್ – ಕಾಂಗ್ರೆಸ್ vs ವಿಪಕ್ಷ ಮುಖಾಮುಖಿ!

ರಾಜ್ಯದಲ್ಲಿ ಟಿಪ್ಪು ಜಯಂತಿ ಆಚರಣೆ ವಿಚಾರ ಮತ್ತೆ ಸದ್ದು ಮಾಡುತ್ತಿದೆ. ಈ ವಿಷಯವನ್ನು ಸದನದಲ್ಲಿ ಸರ್ಕಾರದ ಗಮನಕ್ಕೆ ತರಲು ಶಾಸಕ ವಿಜಯಾನಂದ ಕಾಶಪ್ಪನವರ್ ಮುಂದಾಗಿದ್ದಾರೆ. ಆದರೆ, ಟಿಪ್ಪು ಜಯಂತಿ ಆಚರಣೆಗೆ ವಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿವೆ.

ಟಿಪ್ಪು ಜಯಂತಿ ಮತ್ತೆ ಪ್ರಸ್ತಾಪವಾಗುವುದನ್ನು ಸಮರ್ಥಿಸಿಕೊಂಡ ಕಾಶಪ್ಪನವರ್, ಜಾತ್ಯತೀತ ರಾಷ್ಟ್ರದಲ್ಲಿ ಎಲ್ಲರಿಗೂ ಸಮಾನ ಹಕ್ಕು. ಅಲ್ಪಸಂಖ್ಯಾತರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿಲ್ಲವೇ? ಯಡಿಯೂರಪ್ಪ ಮತ್ತು ಶೆಟ್ಟರ್ ಟಿಪ್ಪು ವೇಷ ಹಾಕಿರಲಿಲ್ಲವೇ? ಎಂದು ಪ್ರಶ್ನಿಸಿದರು.

ಸಚಿವ ಜಮೀರ್ ಅಹ್ಮದ್ ಈ ಕುರಿತಾಗಿ ಪ್ರತಿಕ್ರಿಯಿಸಿ, ಟಿಪ್ಪು ಜಯಂತಿ ಅಭಿಮಾನಿಗಳಿಂದ ಪ್ರತಿವರ್ಷ ದೇಶಾದ್ಯಂತ ನಡೆಯುತ್ತಲೇ ಬಂದಿದೆ. 2014ರಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಸರ್ಕಾರ ಮಟ್ಟದಲ್ಲೂ ಆಚರಣೆ ನಡೆಯುತ್ತಿತ್ತು. ಬಿಜೆಪಿ ಸರ್ಕಾರ ಬಂದ ನಂತರ ಅದನ್ನು ನಿಲ್ಲಿಸಲಾಯಿತು. ಈಗ ಸರ್ಕಾರದಿಂದ ಆಚರಣೆ ಮಾಡುವ ಅಗತ್ಯವಿಲ್ಲ ಎನ್ನುವುದು ನನ್ನ ಅಭಿಪ್ರಾಯ. ಸಾರ್ವಜನಿಕರು ತಮ್ಮ ಮಟ್ಟದಲ್ಲಿ ಆಚರಿಸುತ್ತಲೇ ಇದ್ದಾರೆ ಎಂದು ಹೇಳಿದರು.

ಸಲೀಂ ಅಹ್ಮದ್ ತಮ್ಮ ಅಭಿಪ್ರಾಯ ಹಂಚಿಕೊಂಡು, ಟಿಪ್ಪು ಒಬ್ಬ ದೇಶಭಕ್ತ. ಸರ್ಕಾರವೇ ಟಿಪ್ಪು ಜಯಂತಿ ಆಚರಿಸಬೇಕು. ಕಾಶಪ್ಪನವರ್ ಹೇಳಿದ್ದದು ಅವರ ವೈಯಕ್ತಿಕ ಅಭಿಪ್ರಾಯ. ಸದನದಲ್ಲಿ ನಾನು ಈ ವಿಷಯ ಮಾತನಾಡುತ್ತೇನೆ ಎಂದರು.

ಇದಕ್ಕೆ ವಿರೋಧವಾಗಿ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಕಿಡಿಕಾರುತ್ತಾ, ಕಾಂಗ್ರೆಸ್ ಎಂದರೆ ಟಿಪ್ಪು ಪಾರ್ಟಿ. ಜನರ ಗಮನ ಸೆಳೆಯಲು ಟಿಪ್ಪು ಕಾರ್ಡ್ ಬಳಸುವ ಯತ್ನ ಇದು. ಇಸ್ಲಾಂನಲ್ಲಿ ವ್ಯಕ್ತಿಗಳ ಜಯಂತಿ ಆಚರಣೆ ನಿಷೇಧ. ಅಧಿವೇಶನದಲ್ಲಿ ಕಾಲಹರಣ ಮಾಡಲು ಈ ವಿಷಯವನ್ನು ಎಳೆದುಕೊಂಡಿದ್ದಾರೆ,” ಎಂದು ಆರೋಪಿಸಿದರು.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

About The Author