ತಿರುಪತಿಗೆ ಕ್ಷೇತ್ರಪಾಲ ರುದ್ರ ಎಂಬುದು ಎಲ್ಲರಿಗೂ ಪರಿಚಿತ. ಆದರೆ ಈಗ ತಿರುಪತಿ ದೇಗುಲಕ್ಕೆ ಹೊಸ ಕಾವಲುಗಾರ ಬರಲಿದ್ದಾನೆ. ಅದು ದೇವರೇನಲ್ಲ, ಕೃತಕ ಬುದ್ಧಿಮತ್ತೆ. ತಿರುಮಲ ತಿರುಪತಿ ದೇವಸ್ಥಾನ ಆಡಳಿತ ಮಂಡಳಿ ದೇಗುಲ ನಿರ್ವಹಣೆಯಲ್ಲಿ ತಂತ್ರಜ್ಞಾನ ಕ್ರಾಂತಿ ತರಲು ತೀರ್ಮಾನಿಸಿದೆ.
ಭಕ್ತರ ಉದ್ದನೆಯ ಸರತಿಗಳು, ಟಿಕೆಟ್ ಬುಕ್ಕಿಂಗ್ ತೊಂದರೆ, ವಸತಿ ವ್ಯವಸ್ಥೆಯ ಗೊಂದಲ. ಇವೆಲ್ಲಕ್ಕೂ ಈಗ ತೆರೆ ಬೀಳಲಿದೆ. ಈ ನಿತ್ಯದ ಸಮಸ್ಯೆಗಳಿಗೆ ಪರಿಹಾರವಾಗಿ TTD ಸಂಸ್ಥೆ ಎಐ ಮತ್ತು ಐಟಿ ಕಂಪನಿಗಳಾದ TCS, Jio, Amazon ಮತ್ತು Google ಸಂಸ್ಥೆಗಳ ಜೊತೆ ಒಡಂಬಡಿಕೆ ಮಾಡಿಕೊಂಡಿದೆ ಎಂದು ದೇವಸ್ಥಾನದ ಚೇರ್ಮನ್ ಬಿ. ಆರ್. ನಾಯ್ಡು ತಿಳಿಸಿದ್ದಾರೆ.
ಈ ಒಡಂಬಡಿಕೆಯಡಿ ದೇಗುಲವು ಎಐ ಆಧಾರಿತ ಹೊಸ ತಾಂತ್ರಿಕ ವ್ಯವಸ್ಥೆಗಳನ್ನು ಅಳವಡಿಸುತ್ತಿದ್ದು, ದರ್ಶನ, ಟಿಕೆಟ್ ಬುಕ್ಕಿಂಗ್, ವಸತಿ ಹಾಗೂ ಅನ್ನಪ್ರಸಾದ ವಿತರಣೆಗೂ ನಿಖರ ಮಾಹಿತಿ ಹಾಗೂ ಮಾರ್ಗದರ್ಶನ ನೀಡುವ ವ್ಯವಸ್ಥೆ ನಿರ್ಮಾಣಗೊಳ್ಳುತ್ತಿದೆ. ಇದರ ಪ್ರಮುಖ ಆಕರ್ಷಣೆ ಎಂದರೆ — ಇದು ದೇಶದ ಮೊದಲ ಎಐ ನಿಯಂತ್ರಿತ ಯಾತ್ರಾ ನಿರ್ವಹಣಾ ಕೇಂದ್ರವಾಗಿದ್ದು, ಕ್ಯೂ ಕಾಂಪ್ಲೆಕ್ಸ್-1 ಪ್ರದೇಶದಲ್ಲಿ ನಿರ್ಮಾಣಗೊಳ್ಳಲಿದೆ. ಈ ಕೇಂದ್ರದಲ್ಲಿ 6,000 ಎಐ ಕ್ಯಾಮೆರಾಗಳು ಹಾಗೂ ಅತ್ಯಾಧುನಿಕ ಕಂಪ್ಯೂಟರ್ ವ್ಯವಸ್ಥೆ ಅಳವಡಿಸಲ್ಪಟ್ಟಿವೆ.
ಈ ವ್ಯವಸ್ಥೆಯು ತಿರುಮಲಕ್ಕೆ ಆಗಮಿಸುವ ಭಕ್ತರ ಸಂಖ್ಯೆಯನ್ನು ನಿಖರವಾಗಿ ಲೆಕ್ಕಿಸಲು, ಸರತಿ ಸಾಲುಗಳ ಚಲನೆಯನ್ನು ನಿಯಂತ್ರಿಸಲು ಹಾಗೂ ರಿಯಲ್ ಟೈಂ ದಟ್ಟಣೆ ಮಾಹಿತಿ ನೀಡಲು ಸಹಾಯ ಮಾಡಲಿದೆ. 3D ನಕ್ಷೆಗಳ ನೆರವಿನಿಂದ ಭಕ್ತರ ಚಲನವಲನವನ್ನು ಟ್ರ್ಯಾಕ್ ಮಾಡಿ, ಸರತಿಯನ್ನು ವೇಗವಾಗಿ ಸಾಗುವಂತೆ ಮಾಡುವುದು ಇದರ ಪ್ರಮುಖ ಉದ್ದೇಶ. ಇದರ ಫಲವಾಗಿ ಭಕ್ತರು ಕೇವಲ ಎರಡು ಗಂಟೆಗಳಲ್ಲೇ ದರ್ಶನ ಪಡೆಯಲು ಸಾಧ್ಯವಾಗಲಿದೆ.
ಇಷ್ಟೇ ಅಲ್ಲ, ಈ ಹೊಸ ಎಐ ವ್ಯವಸ್ಥೆಗೆ ಫೇಶಿಯಲ್ ರೆಕಗ್ನಿಷನ್ ತಂತ್ರಜ್ಞಾನವೂ ಅಳವಡಿಸಲಾಗಿದೆ. ಇದರ ಮೂಲಕ, ದೇಗುಲ ಪ್ರವೇಶಿಸುವವರು ನಿಜವಾದ ಭಕ್ತರೇನಾ ಎಂಬುದನ್ನು ಗುರುತಿಸಲಾಗುತ್ತದೆ. ಟಿಕೆಟ್ ಕಳ್ಳಾಟ ಅಥವಾ ದುಪ್ಪಟ್ಟು ದರಕ್ಕೆ ಮಾರಾಟವನ್ನು ಪತ್ತೆಹಚ್ಚಲಾಗುತ್ತದೆ. ಕಳೆದು ಹೋದವರು ಅಥವಾ ಅನುಮಾನಾಸ್ಪದ ವ್ಯಕ್ತಿಗಳನ್ನು ಗುರುತಿಸಲು ಸಹಾಯವಾಗುತ್ತದೆ.
ಈ ಕ್ಯಾಮೆರಾಗಳು ಕಳೆದ ಸೆಪ್ಟೆಂಬರ್‌ನಲ್ಲಿ ಉದ್ಘಾಟನೆಗೊಂಡಿದ್ದು, ಈಗಾಗಲೇ ಎರಡು ತಿಂಗಳಿನಿಂದ ಪ್ರಯೋಗಾತ್ಮಕವಾಗಿ ಕಾರ್ಯನಿರ್ವಹಿಸುತ್ತಿವೆ. ಇವು ಸರತಿ ಸಾಲಿನ ದಟ್ಟಣೆ, ದರ್ಶನ ಸಮಯ ಅಂದಾಜು ಮತ್ತು ಜನನಿಬಿಡ ಪ್ರದೇಶಗಳ ಮೇಲ್ವಿಚಾರಣೆ ಮಾಡಲು ಸಹಕಾರ ನೀಡುತ್ತಿವೆ. ಈ ಎಲ್ಲದರಿಂದ ತಿರುಪತಿಗೆ ನಿಜವಾದ ಹೊಸ ಕ್ಷೇತ್ರಪಾಲ ಸಿಕ್ಕಂತಾಗಿದೆ. ತಂತ್ರಜ್ಞಾನದಿಂದ ನಿಯಂತ್ರಿತ, ಬುದ್ಧಿವಂತ ಕಾವಲುಗಾರ. ಭಕ್ತರು ಈಗಾಗಲೇ ಈ ಬದಲಾವಣೆಯನ್ನು ಸ್ವಾಗತಿಸಿದ್ದು, ಇದು ದೇವರ ಸೇವೆಯ ಹೊಸ ಯುಗದ ಆರಂಭ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ




