1) ಸಿಎಂ ಕುರ್ಚಿಗೆ DK ಸೀಕ್ರೆಟ್ ಪ್ಲ್ಯಾನ್!

ರಾಜ್ಯದ ರಾಜಕೀಯ ವಾತಾವರಣದಲ್ಲಿ ಸಿಎಂ ಕುರ್ಚಿ ಪೈಪೋಟಿ ವಿಷಯ ಮೇಲ್ನೋಟಕ್ಕೆ ತಣ್ಣಗಾಗಿದೆ ಎಂದು ತೋರುತ್ತಿದ್ದರೂ ಒಳಗೊಳಗೆ ದೊಡ್ಡ ರಾಜಕೀಯ ಚಟುವಟಿಕೆ ನಡೆಯುತ್ತಿದೆ ಎಂಬ ಚರ್ಚೆಗಳು ಮತ್ತೆ ಜೋರಾಗಿವೆ. ಒಂದು ನಿನ್ನೆ ದೆಹಲಿಯಲ್ಲಿ ಏಕಾಏಕಿ ನಡೆದ ರಹಸ್ಯ ಸಭೆ ಇದೀಗ ಕುತೂಹಲಕ್ಕೆ ಕಾರಣವಾಗಿತ್ತು. ಇನ್ನೊಂದು ಕಡೆ, ಬೆಂಗಳೂರಿನ ಸದಾಶಿವನಗರದಲ್ಲಿ ಇಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಸಚಿವ ಪ್ರಿಯಾಂಕ್ ಖರ್ಗೆ ಭೇಟಿ ಮಾಡಿದ ಘಟನೆ ಮತ್ತಷ್ಟು ಸಂಚಲನ ಸೃಷ್ಟಿಸಿದೆ. ಗಮನಿಸಬೇಕಾದ ವಿಷಯ ಏನೆಂದರೆ ಕೇವಲ ಮೂರು ದಿನಗಳಲ್ಲಿ ಮೂರು ಬಾರಿ ಈ ಇಬ್ಬರು ಮುಖಾಮುಖಿಯಾಗಿ ಮಾತುಕತೆ ನಡೆಸಿದ್ದಾರೆ. ಇಂದಿನ ಭೇಟಿಯಲ್ಲಿ ದೆಹಲಿಯ ರಹಸ್ಯ ಸಭೆಯಿಂದ ಯಾವುದಾದರೂ ವಿಶೇಷ ಸಂದೇಶ ಬಂದಿದೆಯೇ? ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಬಿರುಸಿನಿಂದ ಚರ್ಚೆಗೆ ಗ್ರಾಸವಾಗಿದೆ.
2) BJP ಸೋಲಿನ ಹಿಂದಿನ ಸತ್ಯ ಬಿಚ್ಚಿಟ್ಟ ಯತ್ನಾಳ್!

ಬಿಜೆಪಿ ಕಡಿಮೆ ಕ್ಷೇತ್ರ ಗೆಲ್ಲಲು ಗ್ಯಾರಂಟಿ ಕಾರಣ ಅಲ್ಲ ಅಂತ ಹೇಳಿ ಯತ್ನಾಳ್ ಸತ್ಯ ಬಿಚ್ಚಿಟ್ಟಿದ್ದಾರೆ. ಬಿಜಪಿಯ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಬಿಜೆಪಿ ಕಡಿಮೆ ಕ್ಷೇತ್ರಗಳನ್ನು ಗೆಲ್ಲಲು ಕಾಂಗ್ರೆಸ್ ಸರ್ಕಾರದ ‘ಗ್ಯಾರಂಟಿ’ ಯೋಜನೆಗಳು ಮಾತ್ರ ಕಾರಣವೆಂದು ಹೇಳುವುದು ತಪ್ಪು ಎಂದು ಸ್ಪಷ್ಟಪಡಿಸಿದ್ದಾರೆ. ಪಕ್ಷದ ಆಡಳಿತ ವೈಫಲ್ಯ, ಹಿಂದೂ ಕಾರ್ಯಕರ್ತರ ನಿರ್ಲಕ್ಷ್ಯ ಮತ್ತು ಗಂಭೀರ ಘಟನೆಗಳಿಗೆ ಸೂಕ್ತ ಪ್ರತಿಕ್ರಿಯೆ ನೀಡದಿರುವುದು ಪ್ರಮುಖ ಕಾರಣಗಳು ಎಂದು ಅವರು ಹೇಳಿದ್ದಾರೆ. ಮಾಧ್ಯಮಗಳ ಮುಂದೆ ಮಾತನಾಡಿದ ಯತ್ನಾಳ್, ಪರೇಶ್ ಮೇಸ್ತ ಹತ್ಯೆ ಸೇರಿದಂತೆ ಮೈಸೂರು, ಶಿವಮೊಗ್ಗಗಳಲ್ಲಿ ನಡೆದ ಹಿಂದೂ ಕಾರ್ಯಕರ್ತರ ಮೇಲಿನ ದಾಳಿ–ಕೊಲೆ ಪ್ರಕರಣಗಳಲ್ಲಿ ಸರ್ಕಾರ ಮತ್ತು ಪಕ್ಷದ ನಾಯಕತ್ವ ಸೂಕ್ತ ಹಾಗೂ ಕಠಿಣ ಕ್ರಮ ತೆಗೆದುಕೊಳ್ಳದಿರುವುದರಿಂದ ಹಿಂದೂ ಕಾರ್ಯಕರ್ತರು ಬಿಜೆಪಿ ವಿರುದ್ಧ ಕೋಪಗೊಂಡರು ಎಂದು ಹೇಳಿದರು.
3) ಮಹದೇವಪ್ಪನವರಿಗೆ ಭಗವದ್ಗೀತೆ ಸಾರ ಗೊತ್ತಿಲ್ಲ

ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ, ಸಂವಿಧಾನ ಜಪಿಸುವ ಸಚಿವ ಮಹದೇವಪ್ಪನವರಿಗೆ ಭಗವದ್ಗೀತೆಯ ಜತೆ ರಾಮಾಯಣ, ಮಹಾಭಾರತವನ್ನೂ ಓದಿ ಎಂದು ಸಲಹೆ ನೀಡಿದ್ದಾರೆ. ಮಹದೇವಪ್ಪನವರಿಗೆ ಭಗವದ್ಗೀತೆಯ ಸಾರ ಗೊತ್ತಿಲ್ಲ, ಅವರು ಕಂಸ ಮಾರ್ಗದಲ್ಲಿದ್ದಾರೆ ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಕೃಷ್ಣತತ್ತ್ವದ ಮೇಲೆ ಭಾರತದ ರಾಜನೀತಿ ನಿಂತಿದೆ ಎಂದಿದ್ದಾರೆ. HC ಮಹಾದೇವಪ್ಪ ಅವರ ಹೇಳಿಕೆ ಬಗ್ಗೆ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ನಾನು ಕೃಷ್ಣತತ್ತ್ವ ನಂಬಿದವನೇ ಹೊರತು ಕಂಸನ ಹಿಂಸೆಯನ್ನಲ್ಲ. ಕಾಂಗ್ರೆಸ್ ಕಂಸನಲ್ಲಿ ನಂಬಿಕೆ ಇಟ್ಟಿದೆ! ನನ್ನನ್ನು ಮನುವಾದಿ ಎಂದಿರುವ ಮುಖ್ಯಮಂತ್ರಿ ಹಾಗು ಮಹದೇವಪ್ಪ ಇವರಿಬ್ಬರೂ ಶಾಲಾ ಮಕ್ಕಳಿಗೇನು ಬೋಧಿಸುತ್ತಾರೆ ಅನ್ನುವುದನ್ನ ಹೇಳಿಲಿ. ಬುದ್ಧಿಗೇಡಿತನಕ್ಕೂ ಮಿತಿ ಬೇಡವೇ? ಎಂದು ಪ್ರಶ್ನೆ ಮಾಡಿದ್ದಾರೆ.
4) ಅಧಿಕಾರ ಹಂಚಿಕೆಯ ಕರಾರು ಆಗಿಲ್ಲ: ರಾಯರೆಡ್ಡಿ

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ ನಡುವೆ ಎರಡೂವರೆ ವರ್ಷಗಳ ಅಧಿಕಾರ ಹಂಚಿಕೆಯ ಕರಾರಾಗಿಲ್ಲ. ಹಾಗಾಗಿ ಇನ್ನೂ ಎರಡುವರೆ ವರ್ಷ ಸಿದ್ದರಾಮಯ್ಯ ಅವರೇ ಶಾಸಕಾಂಗ ನಾಯಕರಾಗಿರುತ್ತಾರೆ. ಅಲ್ಲದೇ ಸಿಎಂ ಆಗಿ ಮುಂದುವರೆಯುತ್ತಾರೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಸ್ಪಷ್ಟಪಡಿಸಿದರು. ‘ಅಭಿಮಾನಿಗಳು ಡಿ.ಕೆ.ಶಿವಕುಮಾರ ಸಿಎಂ ಆಗಲಿ ಎಂದು ಹೇಳಿದ್ದಾರೆ ಬಿಟ್ಟರೆ ಸ್ವತಃ ಡಿ.ಕೆ. ಅವರು ತಾನು ಸಿಎಂ ಆಗುತ್ತೇನೆಂದು ಹೇಳಿಲ್ಲ. ಎರಡುವರೆ ವರ್ಷ ನಾನು, ಎರಡುವರೆ ವರ್ಷ ನೀನು ಎಂಬ ಕರಾರು ಕೂಡ ಮಾಡಿಕೊಂಡಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಶಾಸಕಾಂಗ ನಾಯಕರನ್ನು ತೀರ್ಮಾನ ಮಾಡುವವರು ಶಾಸಕರು, ಪಕ್ಷದ ವರಿಷ್ಠರು. ಡಿ.ಕೆ.ಶಿವಕುಮಾರ ಮುಖ್ಯಮಂತ್ರಿ ಆಗಬಾರದು ಎಂದು ಯಾರೂ ಹೇಳಿಲ್ಲ. ಸಮಯ ಬಂದಾಗ ಆಗುತ್ತಾರೆ. ಹಾಗಾಗಿ ನನ್ನ ಪ್ರಕಾರ ಸಿದ್ದರಾಮಯ್ಯ ಐದು ವರ್ಷಕ್ಕೆ ಆಯ್ಕೆ ಮಾಡಿದ್ದೇವೆ. ಅವರೇ ಸಿಎಂ ಆಗಿ ಮುಂದುವರೆಯುತ್ತಾರೆ ಎಂದರು.
5) ಶಿಕ್ಷಕರ ಅರ್ಹತಾ ಪರೀಕ್ಷೆಗಳಿಗೆ ಕಠಿಣ ನಿಯಮ

ರಾಜ್ಯಾದ್ಯಂತ ಶಿಕ್ಷಕರ ಅರ್ಹತಾ ಪರೀಕ್ಷೆ ಕಠಿಣ ನಿಯಮಾವಳಿಗಳೊಂದಿಗೆ ನಡೆದ ಪರಿಣಾಮ ಪರೀಕ್ಷಾರ್ಥಿಗಳು ತೀವ್ರ ಗೊಂದಲ ಮತ್ತು ತೊಂದರೆ ಅನುಭವಿಸಿದ್ದಾರೆ. ಹಾವೇರಿಯ ಪಿಯು ಮಹಿಳಾ ಕಾಲೇಜಿನಲ್ಲಿ ಪರೀಕ್ಷಾರ್ಥಿಗಳು ಧರಿಸಿದ್ದ ಗಾಜಿನ ಬಳೆಗಳು, ಕಿವಿ ಓಲೆಗಳು ಮತ್ತು ಕಾಲಿನ ಚೈನ್ಗಳನ್ನು ಪರೀಕ್ಷಾ ಕೊಠಡಿಯೊಳಗೆ ಪ್ರವೇಶಿಸುವ ಮುನ್ನ ಸಿಬ್ಬಂದಿ ತೆಗೆಸಿದ ಪ್ರಸಂಗ ನಡೆದಿದೆ. ಪರೀಕ್ಷಾರ್ಥಿಗಳು ತಾವು ಧರಿಸಿದ್ದ ಆಭರಣಗಳನ್ನು ತೆಗೆದ ನಂತರವೇ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಈ ಕಟ್ಟುನಿಟ್ಟಿನ ನಿಯಮಗಳ ಬಗ್ಗೆ ಅನೇಕ ಪರೀಕ್ಷಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದರೂ ಪರೀಕ್ಷಾ ಕೇಂದ್ರದ ಸಿಬ್ಬಂದಿಗಳು ಮಾತ್ರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿರೋದು ಕಂಡು ಬಂದಿದೆ.
6) 7 ದಿನದ ಮಗು ಬಿಟ್ಟು ದಂಪತಿ ಆತ್ಮಹತ್ಯೆ

ಕೇವಲ ಏಳು ದಿನದ ಹಸುಗೂಸನ್ನು ಬಿಟ್ಟು ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಉಪ್ಪಾರಪಲ್ಲಿಯಲ್ಲಿ ನಡೆದಿದೆ. ಅಸ್ಸಾಂ ಮೂಲದ ಫರಿಜಾ(22), ರೆಹಮಾನ್(28) ಆತ್ಮಹತ್ಯೆಗೆ ಶರಣಾದ ದಂಪತಿ. ಮೃತ ದಂಪತಿ 15 ದಿನಗಳಿಂದಷ್ಟೇ ಶ್ರೀನಿವಾಸರೆಡ್ಡಿ ಎಂಬುವರ ಕೋಳಿ ಫಾರಂನಲ್ಲಿ ಕೆಲಸಕ್ಕೆ ಸೇರಿಕೊಂಡಿತ್ತು. ಏಳು ದಿನಗಳ ಹಿಂದಷ್ಟೇ ರೆಹಮಾನ್, ಫರಿಜಾ ದಂಪತಿಗೆ ಹೆಣ್ಣು ಹುಟ್ಟಿತ್ತು. ಆದ್ರೆ, ಇದೀಗ ಚಿಕ್ಕ ಹಸುಳೆಯನ್ನು ಬಿಟ್ಟು ದಂಪತಿ ಏಕಾಏಕಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದೆ.ಆದ್ರೆ, ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ರಾಯಲ್ಪಾಡು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಫರಿಜಾ ಹಾಗೂ ರೆಹಮಾನ್ ವಿಷ ಸೇವಿಸಿ ಮನೆಯಲ್ಲಿ ಅಕ್ಕಪಕ್ಕದಲ್ಲೇ ಸಾವನ್ನಪ್ಪಿದ್ದಾರೆ. ಇನ್ನು ಮೃತಪಟ್ಟ ತಂದೆ ತಾಯಿಯ ಮಧ್ಯೆ ಏನು ಅರಿಯದ ಮಗು ಅಳುತ್ತಿದ್ದು, ಈ ದೃಶ್ಯ ನೋಡುಗರ ಕಣ್ಣಂಚಿನಲ್ಲಿ ನೀರು ತರಿಸುವಂತಿದೆ.
7) ಡಿಕೆಶಿ ಬಳಿಕ ಮತ್ತೊಬ್ಬ ಕಾಂಗ್ರೆಸ್ಸಿಗನಿಗೆ ಸಂಕಷ್ಟ

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಬಳಿಕ ದೆಹಲಿ ಆರ್ಥಿಕ ಅಪರಾಧ ಪೊಲೀಸರು ಡಿಕೆಶಿ ಆಪ್ತ ಮಂಗಳೂರಿನ ಕಾಂಗ್ರೆಸ್ ಮುಖಂಡ ಇನಾಯತ್ ಆಲಿ ಅವರಿಗೂ ನೊಟೀಸ್ ಜಾರಿ ಮಾಡಿದ್ದಾರೆ. ಕೆಪಿಸಿಸಿ ಸೆಕ್ರೆಟರಿ ಆಗಿರುವ ಇನಾಯತ್ ಗೆ ದೆಹಲಿ ಪೊಲೀಸರ ಆರ್ಥಿಕ ಅಪರಾಧ ವಿಭಾಗದಿಂದ ತನಿಖೆಗೆ ಹಾಜರಾಗುವಂತೆ ನೊಟೀಸ್ ಜಾರಿಯಾಗಿದೆ. ಸದ್ಯ ಡಿಕೆಶಿ ಜೊತೆಗೆ ವ್ಯವಹಾರ ಪಾಲುದಾರಿಕೆ ಹೊಂದಿರುವ ಇನಾಯತ್ ಅಲಿಗೂ ದೆಹಲಿ ಪೊಲೀಸರು ತನಿಖೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದಾರೆ. ಒಂದು ವಾರದದೊಳಗೆ ತನಿಖೆಗೆ ಹಾಜರಾಗುವಂತೆ ಮಂಗಳೂರಿನ ಮನೆಗೆ ಬಂದು ದೆಹಲಿ ಪೊಲೀಸರು ನೋಟಿಸ್ ನೀಡಿ ಹೋಗಿದ್ದಾರೆ. ವೈಯಕ್ತಿಕ ಹಿನ್ನೆಲೆ, ಕಾಂಗ್ರೆಸ್ ಪಕ್ಷದೊಂದಿಗಿನ ಸಂಬಂಧ, ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ನೀಡಿದ ದೇಣಿಗೆ ಬಗ್ಗೆ ಪ್ರಮಾಣಪತ್ರ ನೀಡುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
8) ನಿರಾಸೆಯಲ್ಲಿದ್ದ RCB ಫ್ಯಾನ್ಸ್ ಗೆ ಗುಡ್ ನ್ಯೂಸ್

ಜೂನ್ 4 ರಂದು ಐಪಿಎಲ್ 2025 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗೆಲುವನ್ನು ಆಚರಿಸಲು ದೊಡ್ಡ ಜನಸಮೂಹ ಜಮಾಯಿಸಿದಾಗ ಕ್ರೀಡಾಂಗಣದಲ್ಲಿ ಕಾಲ್ತುಳಿತ ಸಂಭವಿಸಿದ ನಂತರ ಕರ್ನಾಟಕದಲ್ಲಿ ಕಾರ್ಯಕ್ರಮವನ್ನು ಆಯೋಜಿಸುವ ಬಗ್ಗೆ ಅನುಮಾನಗಳ ನಡುವೆ ಈ ಪ್ರಕಟಣೆ ಬಂದಿದೆ. ಈ ಬಗ್ಗೆ ಡಿಕೆಶಿವಕುಮಾರ್ ಮಾತನಾಡಿದ್ದಾರೆ. ನಾವು IPL ಅನ್ನು ಬೇರೆಡೆಗೆ ಸ್ಥಳಾಂತರಿಸುವುದಿಲ್ಲ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅದನ್ನು ಮುಂದುವರಿಸುತ್ತೇವೆ. ಇದು ಬೆಂಗಳೂರು ಮತ್ತು ಕರ್ನಾಟಕದ ಹೆಮ್ಮೆ, ಇದನ್ನು ನಾವು ಉಳಿಸಿಕೊಳ್ಳುತ್ತೇವೆ. ಭವಿಷ್ಯದಲ್ಲಿ ದೊಡ್ಡ ಹೊಸ ಕ್ರೀಡಾಂಗಣವನ್ನು ನಿರ್ಮಿಸಲಾಗುವುದು ಎಂದು ಹೇಳಿದರು. ನಾನು ಕ್ರಿಕೆಟ್ ಪ್ರೇಮಿ. ಕರ್ನಾಟಕದಲ್ಲಿ ಇಂತಹ ಅಪಘಾತ ಮತ್ತೆ ಸಂಭವಿಸದಂತೆ ನೋಡಿಕೊಳ್ಳುತ್ತೇವೆ ಮತ್ತು ಬೆಂಗಳೂರಿನ ಗೌರವವನ್ನು ಎತ್ತಿಹಿಡಿಯುವ ರೀತಿಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾವಳಿಗಳನ್ನು ನಡೆಸುತ್ತೇವೆ. ಎಂದು ಉಪಮುಖ್ಯಮಂತ್ರಿ ಡಿಕೆಶಿ ಹೇಳಿದರು
9) ಬೆಳಗಾವಿಯಲ್ಲಿ 10 ದಿನ ಹೈವೋಲ್ಟೇಜ್ ಡ್ರಾಮಾ!

ಪ್ರತಿವರ್ಷ ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನ ಸೋಮವಾರದಿಂದ ಆರಂಭಗೊಳ್ಳಲಿದೆ. ಒಟ್ಟು 10 ದಿನಗಳ ಕಾಲ ಅಧಿವೇಶನ ನಡೆಯಲಿದೆ. ಬೆಳಗಾವಿಯಲ್ಲಿ ಈವರೆಗೆ 13 ಬಾರಿ ಉಭಯ ಸದನಗಳ ಅಧಿವೇಶನ ನಡೆದಿದ್ದು, ಒಟ್ಟು 170 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಈ ಸಲದ 10 ದಿನದ ಬೆಳಗಾವಿ ಅಧಿವೇಶನಕ್ಕೆ 21 ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಬೆಳಗಾವಿ ಜಿಲ್ಲಾಡಳಿತ ಈಗಾಗಲೇ ಸಕಲ ಸಿದ್ಧತೆ ಮಾಡಿಕೊಂಡಿದೆ. ಆಡಳಿತ ವಿಪಕ್ಷಗಳು ಗಂಭೀರ ಸ್ವರೂಪದ ಚರ್ಚೆ ನಡೆಸುವ ಬದಲಾಗಿ ಕಾಲಹರಣದಲ್ಲಿ ತೊಡಗಿಸಿಕೊಳ್ಳುತ್ತಿವೆ ಎಂಬ ಆರೋಪಗಳೂ ಇವೆ. ಶಾಸಕರು, ಅಧಿಕಾರಿಗಳ ವಸತಿಗಾಗಿ 3 ಸಾವಿರ ಕೋಠಡಿಗಳು ಬುಕ್ಕಿಂಗ್ ಆಗಿದ್ದು, 6 ಸಾವಿರ ಪೊಲೀಸ್ ಸಿಬ್ಬಂದಿ ಜರ್ಮನ್ ಟೆಂಟ್ ವ್ಯವಸ್ಥೆ ಮಾಡಲಾಗಿದೆ. ಈ ಬಾರಿ ಸುವರ್ಣ ಸೌಧದ ಸುತ್ತಮುತ್ತ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ.
10) ಉಡುಪಿಯಲ್ಲಿ ಪವನ್ ಕಲ್ಯಾಣ್ಗೆ ಭರ್ಜರಿ ಭೋಜನ

ಶ್ರೀ ಕೃಷ್ಣ ಮಠದಲ್ಲಿ ನಡೆಯುತ್ತಿರುವ ಗೀತೋತ್ಸವದ ಸಮಾರಂಭದಲ್ಲಿ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಭಾಗಿಯಾಗಲಿದ್ದಾರೆ. ವಿಶೇಷ ವಿಮಾನದ ಮೂಲಕ ಮಂಗಳೂರಿಗೆ ಆಗಮಿಸಿದ್ದಾರೆ. ಅಷ್ಟೇ ಅಲ್ಲದೆ ಒಂದು ಗಂಟೆ ಮುಂಚಿತವಾಗಿಯೇ ಉಡುಪಿಗೆ ಆಗಮಿಸಿ ಪ್ರವಾಸಿ ಮಂದಿರದಲ್ಲಿ ವಿಶ್ರಾಂತಿ ಪಡೆಯುತ್ತಿರುವ ಪವನ್ ಕಲ್ಯಾಣ್ ಸಂಜೆ ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಉಡುಪಿಗೆ ಆಗಮಿಸಿದ ಪವನ್ ಕಲ್ಯಾಣ್ ಕರಾವಳಿ ರುಚಿಯನ್ನು ಸವಿದಿದ್ದಾರೆ. ನೀರುದೋಸೆ, ಮಶ್ರೂಮ್ ಗೀ ರೋಸ್ಟ್, ಪತ್ರೊಡೆ, ಶ್ಯಾವಿಗೆ, ರೋಟಿ, ಗೀ ರೈಸ್, ದಾಲ್ ವೆರೋವಲಿ, ಪಾಯಸ, ಪುಲ್ಕ ವಿದ್ ಪನ್ನೀರ್ ಮಿಂಟ್ ಚಿಲ್ಲಿ, ಅನ್ನ, ಉಡುಪಿ ರಸಂ, ರಾಗಿ ಮಣ್ಣಿ ಸಿದ್ಧಪಡಿಸಲಾಗಿತ್ತು. ಊಟದ ಬಳಿಕ ಪ್ರವಾಸಿ ಮಂದಿರದಲ್ಲಿ ವಿಶ್ರಾಂತಿ ಪಡೆದರು. ಇನ್ನೂ ಪವನ್ ಕಲ್ಯಾಣ್ ಜೊತೆ ಮಾತುಕತೆಗೆ ಹಿರಿಯ ನಾಯಕರು ಆಗಮಿಸಿದ್ದಾರೆ.



