ರಾಜ್ಯದ ಇಂದಿನ ಪ್ರಮುಖ ಸುದ್ದಿಗಳು

1) “ಇಟ್ ಇಸ್ ಜೋಕ್ ಆಫ್ ದ ಇಯರ್ 2026”

ರಾಜ್ಯದ ದೀರ್ಘಾವಧಿ ಸಿಎಂ ಹೆಗ್ಗಳಿಕೆಗೆ ಸಿದ್ದರಾಮಯ್ಯ ಪಾತ್ರರಾಗಿದ್ದು, ಕಾಂಗ್ರೆಸ್ಸಿಗರೆಲ್ಲಾ ಕೊಂಡಾಡುತ್ತಿದ್ದಾರೆ. ಆದರೆ ವಿಪಕ್ಷಗಳು ಮಾತ್ರ ಅರಸು ಅವರಿಗೆ ಸಿದ್ದರಾಮಯ್ಯ ಸರಿಸಮ ಇಲ್ಲ ಎಂದು ಟೀಕಿಸಿದ್ದಾರೆ. ಇಟ್ ಇಸ್ ಜೋಕ್ ಆಫ್ ದ ಇಯರ್ 2026 ಎಂದು, ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ವ್ಯಂಗ್ಯವಾಡಿದ್ದಾರೆ. ಬಹುಶಃ ದೇವರಾಜ ಅರಸು ಮತ್ತು ಇಂದಿರಾ ಗಾಂಧಿ ಅವರನ್ನು ಸಿದ್ದರಾಮಯ್ಯನವರಷ್ಟು ಬೈದವರು ಯಾರಿಲ್ಲ. ಆದ್ರೀಗ ದೇವರಾಜ ಅರಸು ಅವರ ಬಗ್ಗೆ ಮಾತನಾಡುತ್ತಾರೆ. ರಾಜ್ಯದಲ್ಲಿ ಶಾಂತಿ, ಸುಭಿಕ್ಷೆ ಇಲ್ಲ. ಅರಸು ಅವರಿಗೆ ಸಾಟಿ ಇಲ್ಲ. ಅರಸು ಸಮಾನ ಎನ್ನುವುದು ನಗೆಪಾಟಲು. ಇವರು ಯಾವ ಅಹಿಂದ ನಾಯಕ?. ಸಿದ್ದರಾಮಯ್ಯಗೆ ಕೃತಜ್ಞತೆ ಇಲ್ಲ. ಯುವ ನಾಯಕತ್ವವನ್ನ ಬೆಳೆಸೋದಿಲ್ಲ. ಹೈಕಮಾಂಡ್ ಸುತ್ತಿಗೆ ಹಿಡಿದುಕೊಂಡು ಕೂತಿದೆ. ಯಾವಾಗ ಹೊಡೆಯುತ್ತೋ ಗೊತ್ತಿಲ್ಲ ಎಂದು ವಿಶ್ವನಾಥ್‌ ಟಾಂಗ್ ಕೊಟ್ಟಿದ್ದಾರೆ. ಸ

2) ಶಾಸಕರ ಹೆಸರಲ್ಲಿ ಮಹಿಳೆಯರಿಗೆ ಮೆಸೇಜ್!

ಬಿಜೆಪಿ ಶಾಸಕರ ಹೆಸರಿನಲ್ಲಿ ಫೇಸ್‌ಬುಕ್, ಇನ್ಸ್‌ಸ್ಟಾಗ್ರಾಂ ನಕಲಿ ಖಾತೆ ಸೃಷ್ಟಿಸಿ, ಮಹಿಳೆಯರಿಗೆ ಅಸಭ್ಯ ಸಂದೇಶ ಕಳಿಸಲಾಗಿದೆ. ಅಲ್ಲದೇ, ಹಣಕ್ಕೆ ಬೇಡಿಕೆ ಇಟ್ಟಿರುವ ಘಟನೆ ನಡೆದಿದೆ. ಈ ಸಂಬಂಧ ಸೈಬರ್ ಕ್ರೈಂಯಲ್ಲಿ ದೂರು ದಾಖಲಾಗಿದೆ. ಜಯನಗರ ಬಿಜೆಪಿ ಶಾಸಕ ಸಿ.ಕೆ. ರಾಮಮೂರ್ತಿ ಹೆಸರಿನಲ್ಲಿ ಹಲವರಿಗೆ ಮೆಸೇಜ್ ಕಳುಹಿಸಲಾಗಿದೆ. ಈ ಬೆನ್ನಲ್ಲೇ ಬೆಂಗಳೂರು ದಕ್ಷಿಣ ಸೈಬರ್ ಪೊಲೀಸ್ ಠಾಣೆಗೆ ಶಾಸಕರು ದೂರು ನೀಡಿದ್ದಾರೆ. ಅಲ್ಲದೇ ಮೊಬೈಲ್ ಹ್ಯಾಕ್ ಆಗಿದೆ ಎಂದು ಸ್ಪಷ್ಟನೆಯನ್ನೂ ನೀಡಿದ್ದಾರೆ.
ಶಾಸಕರ ಅಧಿಕೃತ ಇನ್ಸ್ಟಾ ಪೇಜ್‌ನಿಂದ ಯುವತಿಗೆ ಹಾಯ್, ಹಲೋ ಗುಡ್ ಮಾರ್ನಿಂಗ್, ಗುಡ್ ಈವ್ನಿಂಗ್, ರೀಲ್ಸ್ ಸೂಪರ್ ಅಂತಾ ಸಂದೇಶ ರವಾನಿಸಲಾಗಿದೆ. ಆ ಮಹಿಳೆ ಸ್ಟೇಟಸ್‌ನಲ್ಲಿ ಸ್ಕ್ರೀನ್‌ಶಾರ್ಟ್ಸ್‌ ಹಾಕಿಕೊಂಡಿದ್ರು. ಸದ್ಯ, ಈ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಹಿನ್ನೆಲೆ ಶಾಸಕ ಸಿ.ಕೆ. ರಾಮಮೂರ್ತಿ ಸೈಬರ್ ಕ್ರೈಂಗೆ ದೂರು ನೀಡಿದ್ದು, ಹ್ಯಾಕರ್ಸ್‌ ಹಾಗೂ ನಕಲಿ ಖಾತೆ ಸೃಷ್ಟಿಸಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ಸೂಚಿಸಿದ್ದಾರೆ.

3) ವರ್ತಿಕಾ ಕಟಿಯಾರ್ ವರ್ಗಾವಣೆ!

ಶಾಸಕರಾದ ಜನಾರ್ದನ ರೆಡ್ಡಿ ಮತ್ತು ಭರತ್​​ ರೆಡ್ಡಿ ಬೆಂಬಲಿಗರ ನಡುವೆ ಬ್ಯಾನರ್​ ವಿಚಾರವಾಗಿ ಗಲಾಟೆ ಸಂಬಂಧ ಎಸ್ಪಿ ತಲೆದಂಡದ ಬೆನ್ನಲ್ಲೇ ಡಿಐಜಿಪಿ ವರ್ತಿಕಾ ಕಟಿಯಾರ್ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಸಿವಿಲ್ ರೈಟ್ಸ್ ಮತ್ತು ಎನ್ಫೋರ್ಸ್‌ಮೆಂಟ್‌ ವಿಭಾಗಕ್ಕೆ ವರ್ತಿಕಾರನ್ನು ಟ್ರಾನ್ಸ್‌ಫರ್​​ ಮಾಡಲಾಗಿದ್ದು, ಬಳ್ಳಾರಿ ವಲಯದ ಐಜಿಪಿಯಾಗಿ ಡಾ. ಪಿ.ಎಸ್. ಹರ್ಷ ಅವರನ್ನು ನೇಮಕ ಮಾಡಲಾಗಿದೆ. ಪವನ್ ನೆಜ್ಜೂರು ಅವರ ಅಮಾನತಿನಿಂದ ತೆರವಾಗಿದ್ದ ಎಸ್ಪಿ ಸ್ಥಾನಕ್ಕೆ ಡಾ. ಸುಮನ ಪೆನ್ನೆಕರ್ ಅವರನ್ನು ನೇಮಿಸಿಯೂ ಆದೇಶಿಸಲಾಗಿದೆ.
ದುರ್ದೈವ ಅಂದರೆ ಬಳ್ಳಾರಿ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದ ಒಂದೇ ದಿನದಲ್ಲಿ ಪವನ್ ನೆಜ್ಜೂರು ಸಸ್ಪೆಂಡ್ ಆಗಿದ್ದರು. ಪರಿಸ್ಥಿತಿ ನಿಭಾಯಿಸುವಲ್ಲಿ ಪೊಲೀಸರು ವಿಫಲವಾಗಿದ್ದಾರೆ. ಹೀಗಾಗಿ ಪವನ್ ನೆಜ್ಜೂರು ಅವರನ್ನು ಅಮಾನತು ಮಾಡುವಂತೆ, ವರ್ತಿಕಾ ಕಟಿಯಾರ ಅವರೇ, ಸರ್ಕಾರಕ್ಕೆ ವರದಿ ನೀಡಿದ್ದರು. ಇದೀಗ ವರ್ತಿಕಾ ಕಟಿಯಾರ್‌ ಅವ್ರನ್ನೂ ಸರ್ಕಾರ ವರ್ಗಾವಣೆ ಮಾಡಿದೆ.

4) ಕಾರ್ಯಕರ್ತೆಯನ್ನು ವಿವಸ್ತ್ರಗೊಳಿಸಿದ್ಯಾರು?

ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರನ್ನು ಬಂಧಿಸುವ ವೇಳೆ ಪೊಲೀಸರೇ ಬಟ್ಟೆ ಬಿಚ್ಚಿ ಹಲ್ಲೆ ನಡೆಸಿರುವ ಗಂಭೀರ ಆರೋಪಗಳು ಕೇಳಿಬಂದಿದೆ. ಜನವರಿ 5ರಂದು ನಡೆದಿದ್ದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮಹಿಳೆಯ ಮೇಲೆ ಹಲ್ಲೆ ನಡೆಸಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಪ್ರಕರಣ ರಾಜ್ಯಮಟ್ಟದ ಗಮನ ಸೆಳೆದಿದೆ. ಬಂಧನಕ್ಕೊಳಗಾದ ಮಹಿಳೆ ಬಿಜೆಪಿ ಕಾರ್ಯಕರ್ತೆ ಸುಜಾತಾ ಹಂಡಿ ಎಂದು ಗುರುತಿಸಲಾಗಿದೆ. ಇತ್ತೀಚೆಗೆ ಕಾಂಗ್ರೆಸ್‌ ಬಿಟ್ಟು ಬಿಜೆಪಿ ಸೇರಿದ್ದರು. ಮತದಾರರ ಪಟ್ಟಿ ಪರಿಷ್ಕರಣೆ ವಿಚಾರದಲ್ಲಿ ಗಲಾಟೆ ನಡೆದ ಹಿನ್ನೆಲೆ, ಕಾಂಗ್ರೆಸ್ ಕಾರ್ಪೊರೇಟರ್ ಸುವರ್ಣ ಕಲ್ಲಕುಂಟ್ಲಾ ನೀಡಿದ ದೂರಿನ ಮೇರೆಗೆ ಕೇಶ್ವಾಪುರ ಪೊಲೀಸರು ಸುಜಾತಾ ಹಂಡಿಯನ್ನು ಬಂಧಿಸಲು ಮುಂದಾಗಿದ್ದರು. ಪ್ರತಿರೋಧ ತೋರಿದ ಸಂದರ್ಭದಲ್ಲಿ ಸುಜಾತಾ ಹಂಡಿಯನ್ನು ಬಲವಂತವಾಗಿ ಎಳೆದು ಪೊಲೀಸ್ ವ್ಯಾನ್‌ಗೆ ಕೂರಿಸಲಾಗಿದೆ. ಈ ವೇಳೆ ಪೊಲೀಸರೇ ಮಹಿಳೆಯ ಬಟ್ಟೆ ಬಿಚ್ಚಿ ಅಮಾನುಷವಾಗಿ ಥಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಪೊಲೀಸ್ ವಾಹನದಲ್ಲಿ ಕೂರಿಸಿದ ನಂತರ ಅವರು ತಾವೇ ಬಟ್ಟೆ ತೆಗೆದಿದ್ದಾರೆ. ಮಹಿಳಾ ಪೊಲೀಸ್ ಸಿಬ್ಬಂದಿ ಹೊಟ್ಟೆಗೆ ಕಚ್ಚಿ ಗಾಯಗೊಳಿಸಿದ್ದು, 5 ಮಂದಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಅವರ ವಿರುದ್ಧ ಈ ಹಿಂದೆ ಕೂಡ ಹಲವು ಪ್ರಕರಣಗಳು ದಾಖಲಾಗಿವೆ ಎಂದು ಹೇಳಿದ್ದಾರೆ.

5) “ಮಹಿಳೆಯ ಕಾಲು ಮುಟ್ಟಿ ಕ್ಷಮೆ ಕೇಳಿ”

ಕೌರವರು ದ್ರೌಪದಿ ವಸ್ತ್ರಾಪಹರಣ ಮಾಡಿದ ಹಾಗೆ ಕೌರವ ವಂಶಸ್ಥರಾದ ಸಿದ್ದರಾಮಯ್ಯ ಸರ್ಕಾರದಲ್ಲಿ, ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತೆ ಮೇಲೆ ದೌರ್ಜನ್ಯ ನಡೆದಿದೆ ಎಂದು, ವಿಧಾನಸಭೆ ವಿಪಕ್ಷ ಉಪ ನಾಯಕ ಅರವಿಂದ್ ಬೆಲ್ಲದ್ ಗುಡುಗಿದ್ದಾರೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಮಹಿಳೆಯರು ಮೇಲೆ ಹೀಗೆ ಆದ ಘಟನೆ, ನಾಗರಿಕ ಸಮಾಜ ಬೆಚ್ಚಿ ಬೀಳುವ ಪ್ರಕರಣ. ಒಬ್ಬ ಮಹಿಳೆಯನ್ನ ಪೊಲೀಸರು ಸರ್ಕಾರದ ಅಣತಿ ಮೇಲೆ ನಗ್ನ ಮಾಡಿದ್ದಾರೆ. ಇದು ಭಯಾನಕ ಘಟನೆ. ಪೊಲೀಸರೇ ಬಲಾತ್ಕಾರ ಮಾಡಿ ಬಟ್ಟೆ ಕಳಚಿ ಆಕೆಯನ್ನ ಎಳೆದುಕೊಂಡು ಹೋಗಿದ್ದಾರೆ. ಸರ್ಕಾರ ಅಧಿಕಾರ ದುರುಪಯೋಗ ಮಾಡಿಕೊಂಡಿದೆ. ಯಾವ ರೀತಿ ಸರ್ಕಾರ ಇದು. ಇದು ಅಕ್ಷಮ್ಯ ಅಪರಾಧ. ಯಾವ ಪೊಲೀಸರು ಹೀಗೆ ಮಾಡಿದ್ರೋ ಅವರನ್ನ ವಜಾ ಮಾಡಿ ಗುಂಡು ಹಾರಿಸಬೇಕಿತ್ತು. ಮಹಿಳೆಯ ಕಾಲು ಮುಟ್ಟಿ ದೌರ್ಜನ್ಯ ಮಾಡಿದ ಪೊಲೀಸರು ಕ್ಷಮೆ ಕೇಳಬೇಕೆಂದು ಅರವಿಂದ್ ಬೆಲ್ಲದ್ ಆಗ್ರಹಿಸಿದ್ದಾರೆ.

6) ಆಧಾರ್‌ ಬಯೋಮೆಟ್ರಿಕ್‌ ದಾಖಲು ವಿಳಂಬ!

ಮಾರ್ಚ್ 1ರೊಳಗೆ ವಿದ್ಯಾರ್ಥಿಗಳ ಆಧಾರ್ ಕಡ್ಡಾಯ ಬಯೋಮೆಟ್ರಿಕ್ ದಾಖಲಾತಿಯನ್ನು ಪೂರ್ಣಗೊಳಿಸಲು, ರಾಜ್ಯ ಸರ್ಕಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ನಿರ್ದೇಶನ ನೀಡಿತ್ತು. ಆದ್ರಿನ್ನೂ 7 ಜಿಲ್ಲೆಗಳಲ್ಲಿ ಈ ಕೆಲಸ ಬಾಕಿ ಇದೆ. ಬಯೋಮೆಟ್ರಿಕ್ಸ್ ನವೀಕರಿಸಲು, ಐರಿಸ್ ಸ್ಕ್ಯಾನ್ ಮಾಡಲು ಮತ್ತು ಫೋಟೋಗಳನ್ನು ಸೆರೆಹಿಡಿಯಲು ಅಗತ್ಯವಿರುವ ಕಿಟ್‌ಗಳು ಮತ್ತು ತಾಂತ್ರಿಕ ಸಿಬ್ಬಂದಿ ಕೊರತೆ ಇದೆ. ನಿರೀಕ್ಷಿತ ಕಿಟ್‌ಗಳ ಸಂಖ್ಯೆ 170ರಿಂದ 180ರಷ್ಟಿದ್ದರೂ, 70 ಕಿಟ್‌ಗಳು ಲಭ್ಯವಿದೆ. ಪರಿಣಾಮ 2026ರ ಡಿಸೆಂಬರ್ 31ರ ವೇಳೆಗೆ, ನಾವು ಕೇವಲ 9,907 ದಾಖಲಾತಿಗಳನ್ನು ಪೂರ್ಣಗೊಳಿಸಲಾಗಿದೆ. ಇನ್ನೂ 12 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಆಧಾರ್ ಬಯೋಮೆಟ್ರಿಕ್ಸ್ ಬಾಕಿ ಇದೆ.

7) ಲಿಂಗ ಬದಲಾವಣೆ ಮಾಡಿಸಿ ಟಾರ್ಚರ್!

ಮಂಗಳಮುಖಿಯರ ನಡುವಿನ ಆಂತರಿಕ ದೌರ್ಜನ್ಯದ ಕರಾಳ ಮುಖವೊಂದು ಬಯಲಾಗಿದೆ. ಬಿ.ಕಾಂ ಪದವೀಧರೆಯೊಬ್ಬರಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ, ಆಕೆಗೆ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆ ಮಾಡಿಸಿ, ನಂತರ ಬಲವಂತವಾಗಿ ವೇಶ್ಯಾವಾಟಿಕೆಗೆ ನೂಕಿರುವ ಘೋರ ಘಟನೆ ಬೆಂಗಳೂರಿನ ಶ್ರೀರಾಮಪುರದಲ್ಲಿ ನಡೆದಿದೆ. ಜೆರೋಮಿಯಾಗೆ ಐಶ್ವರ್ಯಾ ರೆಡ್ಡಿ ಎಂಬ ಮಂಗಳಮುಖಿ ಪರಿಚಯವಾಗಿ, ಸರ್ಕಾರಿ ಕೆಲಸ ಕೊಡಿಸುವುದಾಗಿ ಆಮಿಷವೊಡ್ಡಿದ್ದಳು. ಇದಕ್ಕೆ ಪೂರಕವಾಗಿ ಸುಮಾರು 2 ಲಕ್ಷ ರೂಪಾಯಿ ಖರ್ಚು ಮಾಡಿ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆ ಮಾಡಿಸಲಾಗಿತ್ತು. ಆದರೆ, ಶಸ್ತ್ರಚಿಕಿತ್ಸೆ ಮುಗಿಯುತ್ತಿದ್ದಂತೆ ಐಶ್ವರ್ಯಾ ರೆಡ್ಡಿಯ ಅಸಲಿ ರೂಪ ಹೊರಬಂದಿದೆ. ವೇಶ್ಯಾವಾಟಿಕೆಗೆ ನಿರಾಕರಿಸಿದ ಜೆರೋಮಿಯಾ ಮೇಲೆ ಐಶ್ವರ್ಯಾ ರೆಡ್ಡಿ ಮತ್ತು ಆಕೆಯ ಸಹಚರರು ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಬಲವಂತವಾಗಿ ಜೆರೋಮಿಯಾ ಅವರ ತಲೆ ಕೂದಲು ಬೋಳಿಸಿ, ರೂಮ್‌ನಲ್ಲಿ ಕೂಡಿ ಹಾಕಿ ಟಾರ್ಚರ್ ನೀಡಿದ್ದಾರೆ. ಈ ಅಮಾನವೀಯ ಕೃತ್ಯದಿಂದ ನೊಂದ ಜೆರೋಮಿಯಾ, ಹೇಗೋ ಅಲ್ಲಿಂದ ತಪ್ಪಿಸಿಕೊಂಡು ಪೊಲೀಸರ ಮೊರೆ ಹೋಗಿದ್ದಾರೆ. ಶ್ರೀರಾಮಪುರ ಪೊಲೀಸ್‌ ಠಾಣೆಯಲ್ಲಿ ಕೇಸ್‌ ದಾಖಲಾಗಿದ್ದು, ತನಿಖೆ ಚುರುಕುಗೊಂಡಿದೆ. ‌

8) ಬ್ಲಾಂಕೆಟ್, ಮನೆಯೂಟ ಡೌಟ್!

ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪದಲ್ಲಿ ಜೈಲು ಸೇರಿರುವ ದರ್ಶನ್‌ಗೆ ಮನೆಯ ಬ್ಲಾಂಕೆಟ್ ಸಿಗುವುದು ಅನುಮಾನ. ಸಿಕ್ಕಾಪಟ್ಟೆ ಚಳಿ ಆಗುತ್ತಿದ್ದು ಮನೆಯಿಂದ ನೀಡಿರುವ ಬ್ಲಾಂಕೆಟ್ ಕೊಡಿ ಎಂದು ಕೋರ್ಟ್ ಮೂಲಕ ದರ್ಶನ್‌ ಅನುಮತಿ ಪಡೆದುಕೊಂಡಿದ್ದರು. ಆದರೆ ಕಾರಾಗೃಹ ಮತ್ತು ಸುಧಾರಣಾ ‌ಸೇವೆಗಳ ಡಿಜಿಪಿ ಅಲೋಕ್ ಕುಮಾರ್ ತಮ್ಮ ಅಧಿಕಾರ ಬಳಸಿಕೊಂಡು ಜೈಲಿನ ನಿಯಮಗಳ ಪ್ರಕಾರವೇ, ಎಲ್ಲರಿಗೂ ಒಂದೇ ಮಾದರಿಯ ಬ್ಲಾಂಕೆಟ್ ನೀಡಲು ಮುಂದಾಗಿದ್ದಾರೆ. ಚಳಿಗಾಲ, ಮಳೆಗಾಲ ಇವೆಲ್ಲವಕ್ಕೂ ಹೊಂದಾಣಿಕೆ ಆಗುವಂತಹ ಬ್ಲಾಂಕೆಟ್ ವಿತರಣೆಗೆ ಆದೇಶ ಹೊರಡಿಸಲು ತಯಾರಿ ನಡೆಸಲಾಗಿದೆ. ಈ ಆದೇಶ ಹೊರಡಿಸಿದರೆ ದರ್ಶನ್ ಬ್ಲಾಂಕೆಟ್‌ಗೆ ಕುತ್ತು ಬರುವ ಸಾಧ್ಯತೆ ಇದೆ. ಮತ್ತೊಂದೆಡೆ ಪವಿತ್ರಗೌಡಗೂ ಮನೆ ಊಟಕ್ಕೆ ಅನುಮತಿ ನೀಡದೇ ಇರಲು ಜೈಲಾಧಿಕಾರಿಗಳು ತೀರ್ಮಾನಿಸಿದ್ದಾರೆ. ವಿಚಾರಣಾಧೀನ ಕೈದಿಗಳಿಗೆ ಮನೆ ಊಟವನ್ನು ನೀಡಿದರೆ, ಮುಂದೆ ಎಲ್ಲಾ ಆರೋಪಿಗಳು ಇದೇ ಆದೇಶದ ಮೇಲೆ ಮನೆ ಊಟವನ್ನು ಕೇಳುವ ಸಾಧ್ಯತೆ ಇರುವುದರಿಂದ, ಮನೆ ಊಟ ನೀಡದಿರಲು ನಿರ್ಧರಿಸಿದ್ದಾರೆ.


9) ಮುಟ್ಟಿನ ಸಮಸ್ಯೆಗೆ ಹೊಸ ಪರಿಹಾರ!

ಶಾಲಾ- ಕಾಲೇಜು ವಿದ್ಯಾರ್ಥಿನಿಯರು ಅನುಭವಿಸುವ ಮುಟ್ಟಿನ ಸಮಸ್ಯೆಗೆ ಪರಿಹಾರವಾಗಿ, ಹೊಸ ಯೋಜನೆಯೊಂದನ್ನು ಸರ್ಕಾರ ಹಾಕಿಕೊಂಡಿದೆ. ಆಯ್ದ ಜಿಲ್ಲೆಗಳಲ್ಲಿ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಮುಟ್ಟಿನ ಕಪ್‌ಗಳನ್ನು ಒದಗಿಸುವ ಪ್ರಾಯೋಗಿಕ ಯೋಜನೆ ಯಶಸ್ವಿಯಾಗಿ ಅನುಷ್ಠಾನವಾದ ನಂತರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಲು ನಿರ್ಧರಿಸಿದೆ. ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ಲಿಮಿಟೆಡ್ ಮೂಲಕ, 61 ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚದಲ್ಲಿ, 10,38,912 ಮುಟ್ಟಿನ ಕಪ್‌ಗಳನ್ನು ಒದಗಿಸಲು ಅನುಮೋದನೆ ಸಿಕ್ಕಿದೆ. ಈ ಹಿಂದೆ ವಾರ್ಷಿಕವಾಗಿ 2 ಕೋಟಿ 35 ಲಕ್ಷದ 74 ಸಾವಿರದ 84 ಸ್ಯಾನಿಟರಿ ನ್ಯಾಪ್ಕಿನ್‌ಗಳನ್ನು ಖರೀದಿಸಲು, ಸರ್ಕಾರ 71 ಕೋಟಿ ರೂ.ಗಳನ್ನು ಖರ್ಚು ಮಾಡುತ್ತಿತ್ತು. ಆದ್ರೀಗ ಮುಟ್ಟಿನ ಕಪ್‌ ನೀಡುವ ಈ ನಿರ್ಧಾರವು ಸ್ಯಾನಿಟರಿ ನ್ಯಾಪ್ಕಿನ್‌ಗಳ ಮೇಲಿನ ವೆಚ್ಚವನ್ನು 10 ಕೋಟಿ ರೂ.ಗಳಷ್ಟು ಕಡಿತಗೊಳಿಸಲಿದೆ. ಮೂರು ತಿಂಗಳು ಸ್ಯಾನಿಟರಿ ನ್ಯಾಪ್ಕಿನ್‌ಗಳನ್ನು ಮತ್ತು ಮುಂದಿನ ಶೈಕ್ಷಣಿಕ ವರ್ಷಕ್ಕೆ 1 ಮುಟ್ಟಿನ ಕಪ್ ಅನ್ನು ಒದಗಿಸುವುದನ್ನು ಮುಂದುವರಿಸುತ್ತದೆ ಎಂದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೇಳಿದೆ.

10) ಈಗಿನಿಂದ್ಲೇ ಸಂಚಾರ ಬದಲಾವಣೆಗೆ ಸಿದ್ಧರಾಗಿ!

ದಕ್ಷಿಣ ಬೆಂಗಳೂರಿಗರು ಮುಂದಿನ ಕೆಲ ತಿಂಗಳುಗಳ ಕಾಲ, ರಸ್ತೆ ಮುಚ್ಚುವಿಕೆ, ರಸ್ತೆ ಅಗೆಯುವಿಕೆ ಮತ್ತು ಸಂಚಾರ ಬದಲಾವಣೆಗಳಿಗೆ ಸಿದ್ಧರಾಗಬೇಕಾಗುತ್ತದೆ. 11 ಪ್ರಮುಖ ರಸ್ತೆಗಳಲ್ಲಿ ಶೀಘ್ರದಲ್ಲೇ ವೈಟ್ ಟಾಪಿಂಗ್‌ ಕಾರ್ಯ ನಡೆಯಲಿದೆ. ಬಿಟಿಎಂ ಲೇಔಟ್, ಜಯನಗರ ಮತ್ತು ಪದ್ಮನಾಭನಗರ ವಿಧಾನಸಭಾ ಕ್ಷೇತ್ರಗಳ ಪ್ರಮುಖ ರಸ್ತೆಗಳನ್ನು ವೈಟ್ ಟಾಪಿಂಗ್‌ ಮಾಡಲಾಗುತ್ತದೆ. ವೈಟ್ ಟಾಪಿಂಗ್ ಜೊತೆಗೆ, ಒಟ್ಟು 94.62 ಕೋಟಿ ರೂಪಾಯಿ ವೆಚ್ಚದಲ್ಲಿ ಫುಟ್ ಪಾತ್ ಅಭಿವೃದ್ಧಿ ಕೂಡ ಮಾಡಲಾಗುತ್ತದೆ. 11 ತಿಂಗಳಲ್ಲಿ ಕಾಮಗಾರಿಗಳು ಪೂರ್ಣಗೊಳ್ಳುವ ನಿರೀಕ್ಷೆಯಿದೆ. B-SMILE ಈ ಕ್ಷೇತ್ರಗಳ ವೈಟ್-ಟಾಪಿಂಗ್ ಮತ್ತು ಫುಟ್‌ಪಾತ್ ಅಭಿವೃದ್ಧಿಗೆ ಟೆಂಡರ್‌ಗಳನ್ನು ಆಹ್ವಾನಿಸಿದೆ. 2026ರ ಡಿಸೆಂಬರ್ 24ರಂದು ಬಿಡ್‌ ತೆರೆಯಲಾಯಿತು. ಬಿಡ್‌ಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಜನವರಿ 2 ಆಗಿತ್ತು. ತಾಂತ್ರಿಕ ಬಿಡ್‌ಗಳನ್ನು ಜನವರಿ 3 ರಂದು ತೆರೆಯಲಾಯಿತು. ತಾಂತ್ರಿಕ ಬಿಡ್‌ಗಳಲ್ಲಿ ಅರ್ಹತೆ ಪಡೆದವರಿಗೆ ಹಣಕಾಸಿನ ಬಿಡ್‌ನಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು.

About The Author