1. ದಿಢೀರ್ Narendra MOdi ಭೇಟಿಯಾದ ವಿಜಯೇಂದ್ರ. ವಿರೋಧಿಗಳಿಗೆ ಕೊಟ್ಟ ಸಂದೇಶವೇನು?
ಕರ್ನಾಟಕದ ಮೂರು ಉಪಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋಲು ಕಂಡ ಬಳಿಕ ಬಿ ವೈ ವಿಜಯೇಂದ್ರ ವಿರೋಧಿ ಬಣ ಬಹಿರಂಗವಾಗಿಯೇ ರಾಜ್ಯಾಧ್ಯಕ್ಷರ ಕುರಿತು ಅಸಮಾಧಾನವನ್ನ ಹೊರ ಹಾಕುತ್ತಿದೆ. ಸದ್ಯ ಚಳಿಗಾಲದ ಅಧಿವೇಶನದಲ್ಲಿ ಮಹತ್ವದ ಚರ್ಚೆಗಳು ನಡೆಯುತ್ತಿರುವಾಗಲೇ ವಿಜಯೇಂದ್ರ ದಿಢೀರ್ ಬೆಳಗಾವಿಯಿಂದಲೇ ದೆಹಲಿಗೆ ಹಾರಿ ಮೋದಿಯನ್ನ ಭೇಟಿ ಮಾಡಿದ್ದು, ಇದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ವಿಜಯೇಂದ್ರ ಏಕಾಏಕಿ ಏಕೆ ಮೋದಿಯನ್ನು ಭೇಟಿ ಮಾಡಿದ್ದಾರೆ ಎನ್ನುವ ಬಗ್ಗೆ ಚರ್ಚೆ ಸಹ ನಡೆದಿದೆ. ಸುಮಾರು 15 ನಿಮಿಷಗಳ ಕಾಲ ವಿಜಯೇಂದ್ರ, ಮೋದಿ ಜೊತೆ ಚರ್ಚಿಸಿದ್ದು, ಈ ವೇಳೆ ಸದ್ಯದ ರಾಜ್ಯ ರಾಜಕಾರಣದ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಹಾಗೇ ಪಕ್ಷದಲ್ಲಿನ ಚಟುವಟಿಕೆ, ಯತ್ನಾಳ್ ಮತ್ತು ತಂಡದಿಂದ ಪಕ್ಷಕ್ಕಾಗುತ್ತಿರುವ ಡ್ಯಾಮೇಜ್, ಭಿನ್ನರ ಹೇಳಿಕೆಯಿಂದಾಗಿ ಕಾಂಗ್ರೆಸ್ ಸರ್ಕಾರದ ಎದುರು ಆಗುತ್ತಿರುವ ಮುಜುಗರವನ್ನು ಮೋದಿ ಗಮನಕ್ಕೆ ತಂದಿದ್ದಾರೆ ಅನ್ನೋದು ತಿಳಿದುಬಂದಿದೆ. ಇನ್ನು ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆಗೆ ಯತ್ನಾಳ್ ಬಣ ಪಟ್ಟು ಹಿಡಿದಿದ್ದು, ಹೈಕಮಾಂಡ್ ಭೇಟಿಗೆ ಸಮಯ ಸಿಗದಿದ್ದಕ್ಕೆ ರೆಬೆಲ್ಸ್ ಟೀಂ ವಾಪಸ್ ಆಗಿತ್ತು. ಆದ್ರೆ, ಇದೀಗ ದಿಢೀರ್ ವಿಜಯೇಂದ್ರ ಮೋದಿಯವರನ್ನು ಭೇಟಿ ಮಾಡಿದ್ದಾರೆ. ಈ ಮೂಲಕ ವಿಜಯೇಂದ್ರ, ಪಕ್ಷದ ವರಿಷ್ಠರು ನನ್ನ ಪರವಾಗಿದ್ದಾರೆ ಅನ್ನೋ ಸಂದೇಶವನ್ನು ವಿರೋಧಿಗಳಿಗೆ ರವಾನಿಸಿದ್ದಾರೆ. ಮೋದಿ ಭೇಟಿ ಬೆನ್ನಲ್ಲೇ ಕರ್ನಾಟಕ ಬಿಜೆಪಿಯಲ್ಲಿನ ಬಣಬಡಿದಾಟಕ್ಕೆ ಬ್ರೇಕ್ ಬೀಳುತ್ತಾ ಎನ್ನುವುದು ಮುಂದಿರುವ ಪ್ರಶ್ನೆ.
2. 60 ವರ್ಷ ಮೇಲ್ಪಟ್ಟವರಿಗೆ ಉಚಿತ ಚಿಕಿತ್ಸೆ. ದೆಹಲಿಯಲ್ಲಿ ಕೇಜ್ರಿವಾಲ್ ಸಂಜೀವಿನಿ ಯೋಜನೆ
ಮುಂದಿನ ವರ್ಷ ಫೆಬ್ರವರಿಯಲ್ಲಿ ನಡೆಯಲಿರುವ ದೆಹಲಿ ಚುನಾವಣೆಗೂ ಮುನ್ನ ಆಮ್ ಆದ್ಮಿ ಪಕ್ಷ ಇಂದು ಎಲ್ಲಾ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಹಿರಿಯ ನಾಗರಿಕರಿಗೆ ಉಚಿತ ಚಿಕಿತ್ಸೆ ನೀಡುವುದಾಗಿ ಘೋಷಿಸಿದೆ. ಈ ಮೂಲಕ ಮಹತ್ವದ ಪ್ರಕಟಣೆಯಲ್ಲಿ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ದೆಹಲಿಯಲ್ಲಿ 60 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲಾ ಹಿರಿಯ ನಾಗರಿಕರಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ನೀಡಲಾಗುವುದು ಅಂತ ಘೋಷಿಸಿದ್ದಾರೆ. ದೆಹಲಿಯಲ್ಲಿರುವ ನಮ್ಮ ಎಲ್ಲಾ ಹಿರಿಯ ನಿವಾಸಿಗಳಿಗೆ ಅರವಿಂದ್ ಕೇಜ್ರಿವಾಲ್ ಸರ್ಕಾರದಿಂದ ಇದು ಗ್ಯಾರಂಟಿ ಯೋಜನೆ ಅಂದಿದ್ದಾರೆ. ಇಂದು ನಾನು ಹಿರಿಯ ನಾಗರಿಕರಿಗಾಗಿ ಸಂಜೀವನಿ ಯೋಜನೆಯನ್ನು ಘೋಷಿಸುತ್ತಿದ್ದೇನೆ. ಇದರಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಉಚಿತ ಆರೋಗ್ಯ ಸೇವೆ ಸಿಗಲಿದೆ ಅಂತ ಕೇಜ್ರಿವಾಲ್ ಹೇಳಿದ್ದಾರೆ.“ಚಿಕಿತ್ಸೆಯ ವೆಚ್ಚದ ಮೇಲೆ ಯಾವುದೇ ಹೆಚ್ಚಿನ ಮಿತಿ ಇರುವುದಿಲ್ಲ. ಇದಕ್ಕೆ ನೋಂದಣಿ ಒಂದು ಅಥವಾ ಎರಡು ದಿನದಲ್ಲಿ ಪ್ರಾರಂಭವಾಗುತ್ತದೆ. ಆಪ್ ಕಾರ್ಯಕರ್ತರು ನೋಂದಣಿಗಾಗಿ ನಿಮ್ಮ ಮನೆಗೆ ಬರುತ್ತಾರೆ. ಅವರು ನಿಮಗೆ ಕಾರ್ಡ್ ನೀಡುತ್ತಾರೆ, ಅದನ್ನು ಸುರಕ್ಷಿತವಾಗಿ ಇರಿಸಿ. ನಾವು ಅಧಿಕಾರಕ್ಕೆ ಬಂದ ನಂತರ ಚುನಾವಣೆಯ ನಂತರ ಈ ನೀತಿಯನ್ನು ಜಾರಿಗೆ ತರಲಾಗುವುದು ಅಂತ ಕೇಜ್ರಿವಾಲ್ ಹೇಳಿದ್ದಾರೆ.
3. ವಿವಾದದ ಬಳಿಕ ಅಮಿತ್ ಶಾ ಸುದ್ದಿಗೋಷ್ಠಿ.ಕಾಂಗ್ರೆಸ್ ಸುಳ್ಳುಗಳನ್ನು ಹರಡುತ್ತಿದೆ
ರಾಜ್ಯಸಭೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಬಗ್ಗೆ ಮಾತನಾಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಅಂಬೇಡ್ಕರ್ ಜಪ ಪಠಿಸುವುದು ಫ್ಯಾಶನ್ ಆಗಿಬಿಟ್ಟಿದೆ. ಈ ರೀತಿ 100 ಬಾರಿ ಅಂಬೇಡ್ಕರ್ ಹೆಸರು ಹೇಳುವ ಬದಲು ದೇವರ ನಾಮವನ್ನಾದರೂ ಪಠಿಸಿದ್ದರೆ ಏಳೇಳು ಜನ್ಮದಲ್ಲೂ ಸ್ವರ್ಗಕ್ಕೆ ಹೋಗುತ್ತಿದ್ದಿರಿ ಅಂತ ವ್ಯಂಗ್ಯವಾಡಿದ್ದರು. ಇದಕ್ಕೆ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿ, ಅಂಬೇಡ್ಕರ್ ಕುರಿತು ಅವಮಾನಕಾರಿಯಾಗಿ ಮಾತನಾಡಿದ ಅಮಿತ್ ಶಾ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿರುವ ಅಮಿತ್ ಶಾ, ಸಂವಿಧಾನ ವಿರೋಧ ಹಾಗೂ ಅಂಬೇಡ್ಕರ್ ವಿರೋಧಿಯಾದ ಕಾಂಗ್ರೆಸ್ ಸುಳ್ಳುಗಳನ್ನು ಹರಡುತ್ತಿದೆ. ನಾನು ಅಂಬೇಡ್ಕರ್ ವಿರುದ್ಧ ಯಾವುದೇ ಹೇಳಿಕೆ ನೀಡಿಲ್ಲ. ನನ್ನ ಮಾತನ್ನು ತಿರುಚಲಾಗಿದೆ ಅಂದಿದ್ದಾರೆ.ಕೇಂದ್ರ ಗೃಹ ಸಚಿವ ಅಮಿತ್ ಶಾ ದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಇಂದು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ವಿರೋಧ ಪಕ್ಷವು ಸಂಸತ್ತಿನಲ್ಲಿ ನಾನು ಮಾಡಿದ ಟೀಕೆಗಳನ್ನು ತಿರುಚಿದೆ ಮತ್ತು ಅಂಬೇಡ್ಕರ್ ವಿರೋಧಿ ನಿಲುವನ್ನು ಅನುಸರಿಸುತ್ತಿದೆ ಅಂತ ಆರೋಪಿಸಿದರು. ರಾಜ್ಯಸಭೆಯಲ್ಲಿ ಸಂವಿಧಾನದ ಚರ್ಚೆಯ ವೇಳೆ ಮಾಡಿದ ಟೀಕೆಗಳ ಕುರಿತು ಪ್ರತಿಕ್ರಿಯಿಸಿದ ಅಮಿತ್ ಶಾ, “ನನ್ನ ಹೇಳಿಕೆಗಳನ್ನು ತಪ್ಪಾಗಿ ನಿರೂಪಿಸಲಾಗಿದೆ. ಕಾಂಗ್ರೆಸ್ ಸುಳ್ಳು ಸುದ್ದಿಗಳನ್ನು ಹರಡುತ್ತದೆ, ನಾನು ಅಂಬೇಡ್ಕರ್ ವಿರುದ್ಧ ಮಾತನಾಡಿಲ್ಲ. ಸಂಸತ್ತಿನಲ್ಲಿ ಮಾಡಿದ ಕಾಮೆಂಟ್‌ಗಳನ್ನು ಕಾಂಗ್ರೆಸ್ ತಿರುಚಿದ ರೀತಿ ಅತ್ಯಂತ ಖಂಡನೀಯವಾಗಿದೆ” ಅಂತ ಹೇಳಿದ್ದಾರೆ.
4. ಪ್ರಕರಣ ಹಿಂಪಡೆಯಲು ಹಣದ ಆಮಿಷ. ಲೋಕಾಯುಕ್ತಕ್ಕೆ ಸ್ನೇಹಮಯಿ ಕೃಷ್ಣ ದೂರ
ಸಿಎಂ ಸಿದ್ದರಾಮಯ್ಯ ಮತ್ತು ಅವರ ಪತ್ನಿ ಪಾರ್ವತಿ ವಿರುದ್ಧ ಕೇಳಿಬಂದಿರುವ ಮುಡಾ ನಿವೇಶನಗಳ ಹಂಚಿಕೆ ಪ್ರಕರಣವನ್ನು ಹಿಂಪಡೆಯಲು ತನಗೆ ಹಣದ ಆಮಿಷ ಒಡ್ಡಲಾಗುತ್ತಿದೆ ಎಂದು ದೂರುದಾರ ಸ್ನೇಹಮಯಿ ಕೃಷ್ಣ ಆರೋಪಿಸಿದ್ದು, ಈ ಸಂಬಂಧ ಲೋಕಾಯುಕ್ತರಿಗೆ ದೂರು ದಾಖಲಿಸಿದ್ದಾರೆ.’ಮುಡಾ ನಿವೇಶನಗಳ ಹಂಚಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ಕೋರಿ ನ್ಯಾಯಾಲಯದಲ್ಲಿ ನಾನು ಸಲ್ಲಿಸಿರುವ ಅರ್ಜಿ ಹಿಂಪಡೆಯುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಬಿ.ಎಂ. ಪಾರ್ವತಿ ಅವರ ಕಡೆಯವರು ಎಂದು ಹೇಳಿಕೊಂಡು ಕೆಲವರು ನನಗೆ ಹಾಗೂ ನನ್ನ ಕುಟುಂಬಕ್ಕೆ ಹಣದ ಆಮಿಷ ಒಡ್ಡಿದ್ದಾರೆ ಅಂತ ಸ್ನೇಹಮಯಿ ಕೃಷ್ಣ ಆರೋಪಿಸಿದ್ದು, ಈ ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಅಂತ ಮೈಸೂರಿನ ಲೋಕಾಯುಕ್ತ ಎಸ್.ಪಿ. ಕಚೇರಿಗೆ ದೂರು ಸಲ್ಲಿಸಿದ್ದಾರೆ. ಈ ಕುರಿತು ಮಾತನಾಡಿದ ಸ್ನೇಹಮಯಿ ಕೃಷ್ಣ, ‘ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರ ಕಡೆಯವರು ಎಂದು ಹೇಳಿಕೊಂಡ ಕೆಲವರು ಡಿ. 12ರಂದು ನನ್ನ ಮನೆಗೆ ಬಂದಿದ್ದರು. ಪಾರ್ವತಿ ಅವರ ಕೆಲಸಗಳನ್ನು ನಾವೇ ನೋಡಿಕೊಳ್ಳುತ್ತಿದ್ದೇವೆ. ಅವರು ಈ ಪ್ರಕರಣದಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ. ಹೀಗಾಗಿ ಸಿಬಿಐ ತನಿಖೆಗೆ ಕೋರಿರುವ ಪ್ರಕರಣವನ್ನು ಹಿಂಪಡೆಯಿರಿ. ಬೇಕಿದ್ದರೆ ಲೋಕಾಯುಕ್ತ ತನಿಖೆ ಮುಂದುವರಿಯಲಿ ಎಂದು ಹೇಳಿದ್ದರು. ಆದರೆ ಇದಕ್ಕೆ ನಾನು ಒಪ್ಪಿರಲಿಲ್ಲ’ ಅಂದಿದ್ದಾರೆ. ಅಂತೆಯೇ ಇದಾದ ಮಾರನೇ ದಿನವೇ ಕೆ.ಆರ್. ಪೊಲೀಸ್ ಠಾಣೆಯಲ್ಲಿ ನನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಾಯಿತು. ನಾನು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ವಕೀಲರನ್ನು ಕಾಣಲು ಬೆಂಗಳೂರಿಗೆ ತೆರಳಿದೆ. ಡಿ. 15ರಂದು ಮತ್ತೆ ನನ್ನ ಮನೆಗೆ ಬಂದ ಶ್ರೀನಿಧಿ ಮತ್ತು ಹರ್ಷ ಎಂಬ ಇಬ್ಬರು ನನ್ನ ಮಗನ ಜೊತೆ ಮಾತನಾಡಿದ್ದು, ಪ್ರಕರಣ ಹಿಂಪಡೆಯಲು ಇದೇ ರೀತಿ ವ್ಯಕ್ಯಿಯೊಬ್ಬರಿಗೆ ಮೂರು ಕೋಟಿ ಕೊಟ್ಟಿದ್ದೇವೆ ಎಂದು ಹಣದ ಬ್ಯಾಗ್ ಇರುವ ವಿಡಿಯೊ ತೋರಿಸಿದ್ದಾರೆ. ನಿಮ್ಮ ತಂದೆ ನ್ಯಾಯಾಲಯದಲ್ಲಿ ಪ್ರಕರಣ ಹಿಂಪಡೆಯಲು ಒಪ್ಪಿದರೆ ಇದೇ ರೀತಿ ಹಣ ಕೊಡುವುದಾಗಿಯೂ ಆಮಿಷ ಒಡ್ಡುತ್ತಾರೆ. ನನ್ನ ಮಗ ಒಪ್ಪದಿದ್ದಾಗ ಅವನಿಂದ ನನ್ನ ಮೊಬೈಲ್ ಸಂಖ್ಯೆ ಪಡೆದು ಹಲವು ಬಾರಿ ಕರೆ ಮಾಡಿದ್ದಾರೆ ಅಂತ ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ.
5.ವಕ್ಫ್ ಆಸ್ತಿ ಕಬಳಿಕೆಯಲ್ಲಿ ಮಹಾನಾಯಕರು. ಕೈ ಪಟ್ಟಿ ಬಿಡುಗಡೆ ಮಾಡಿದ ಅನ್ವರ್ ಮಾಣಿಪ್ಪಾಡಿ
ರಾಜ್ಯಾದ್ಯಂತ ಸದ್ದು ಮಾಡಿರುವ ವಕ್ಫ್ ಆಸ್ತಿ ಕಬಳಿಕೆಯ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಅವರು ವಕ್ಫ್ ಆಸ್ತಿ ಕಬಳಿಕೆಯಲ್ಲಿ ಕಾಂಗ್ರೆಸ್‌ನ ಖ್ಯಾತ ನಾಮರು ಇದ್ದಾರೆ ಅಂತ ಗಂಭೀರ ಆರೋಪ ಮಾಡಿದ್ದಾರೆ. ಆರೋಪದ ಜೊತೆಗೆ ಕಾಂಗ್ರೆಸ್ ಪಕ್ಷದ ಅತಿರಥ ನಾಯಕರ ಹೆಸರನ್ನು ಬಹಿರಂಗ ಪಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಣಿಪ್ಪಾಡಿ , ವರದಿಯ ಎಕ್ಸ್‌ಕ್ಲೂಸಿವ್ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ವಕ್ಫ್ ಆಸ್ತಿ ಕಬಳಿಕೆಯಲ್ಲಿ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ್ ಖರ್ಗೆ, ಧರ್ಮ ಸಿಂಗ್, ಜಾಫರ್ ಶರೀಫ್, ತನ್ವೀರ್ ಸೇಠ್, ಸಿ.ಎಂ ಇಬ್ರಾಹಿಂ, ಎನ್.ಎ ಹ್ಯಾರಿಸ್ ಸೇರಿದಂತೆ ಹಲವರಿಂದ ಕಬಳಿಕೆ ಆಗಿದೆ ಅಂತಾ ವರದಿಯಲ್ಲಿ ಉಲ್ಲೇಖವಾಗಿದೆ ಎಂದಿದ್ದಾರೆ.ಬೆಂಗಳೂರಿನಲ್ಲಿರುವ ಜಾಫರ್ ಶರೀಫ್ ಅವರ ಎಂಜಿನಿಯರಿಂಗ್ ಕಾಲೇಜು ವಕ್ಫ್ ಭೂಮಿಯಲ್ಲಿದೆ. ಖಮರೂಲ್ ಇಸ್ಲಾಂ, ಮಲ್ಲಿಕಾರ್ಜುನ್ ಖರ್ಗೆ, ಧರ್ಮ ಸಿಂಗ್ ಅವರು ಎಕರೆ ಗಟ್ಟಲೆ ವಕ್ಫ್ ಭೂಮಿಯನ್ನು ಕಬಳಿಸಿದ್ದಾರೆ. ಎಲ್ಲಾ ಬೇನಾಮಿ ಹೆಸರಲ್ಲಿದೆ. ತನ್ವೀರ್ ಸೇಠ್ ಕುಟುಂಬ ಮೈಸೂರಿನಲ್ಲಿ ತಲತಲಾಂತರವಾಗಿ ವಕ್ಫ್ ಭೂಮಿ ಕಬಳಿಸಿದೆ. ರೆಹಮಾನ್ ಖಾನ್ ಇವರೆಲ್ಲರಿಗೂ ಗುರು ಇದ್ದ ಹಾಗೆ. ಇದು ದೇಶದ ಅತಿ ದೊಡ್ಡ ಭೂಹಗರಣ ಆಗಿದ್ದು ಈ ಬಗ್ಗೆ ಸಿಬಿಐ ತನಿಖೆ ಆಗಬೇಕು ಎಂದು ಅನ್ವರ್ ಮಾಣಿಪ್ಪಾಡಿ ಒತ್ತಾಯಿಸಿದ್ದಾರೆ.
6. ರೋಹಿಣಿ ವಿರುದ್ದ ರೂಪಾ ವಾರ್. ಮಾನನಷ್ಟ ಮೊಕದ್ದಮೆ ದಾಖಲು
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ಡಿ ರೂಪಾ ನಡುವಿನ ಜಗಳ ಹೊಸದೇನಲ್ಲ. ಅದರ ಮುಂದುವರಿದ ಭಾಗವಾಗಿ ರೂಪಾ ಅವರು ರೋಹಿಣಿ ವಿರುದ್ಧ ನಗರದ 7 ನೇ ಎಸಿಎಂಎಂ ಕೋರ್ಟಲ್ಲಿ ಮಾನನಷ್ಟ ಮೊಕದ್ದಮೆಯೊಂದನ್ನು ಹೂಡಿದ್ದು ಅವರ ಖಾಸಗಿ ದೂರಿನ ನಂತರ ಕೋರ್ಟ್ ರೋಹಿಣಿ ಗೆ ನೋಟೀಸ್ ಜಾರಿಮಾಡಿದೆ. ದೂರಿನ ಪ್ರಕಾರ ರೋಹಿಣಿ, ಫೆಬ್ರುವರಿ 19, 2023 ರಂದು ರೂಪಾ ವಿರುದ್ಧ ಅವಹೇಳನಕಾರಿ ಹೇಳಿಕೆಯೊಂದನ್ನು ನೀಡಿ ನಂತರ ಅದನ್ನು ತಮ್ಮ ಎಕ್ಸ್ ಹ್ಯಾಂಡಲ್ ನಲ್ಲಿ ಶೇರ್ ಕೂಡ ಮಾಡಿದ್ದಾರೆ. ಅವರ ಹೇಳಿಕೆಯಿಂದ ಕೇವಲ ತಾನು ಮಾತ್ರವಲ್ಲದೆ ತನ್ನ ಪತಿ, ಮಕ್ಕಳ ಮತ್ತು ಸಹೋದರಿ ವಿಪರೀತ ನೊಂದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲೇ ರೋಹಿಣಿ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಬೇಕೆಂದು ರೂಪಾ ಅರ್ಜಿ ಸಲ್ಲಿಸಿದ್ದಾರೆ.
7.ಅಪ್ಪು ಕನಸಿನ ಜೂನಿಯರ್ ಟೋಸ್. ಪತಿ ಆಸೆ ಈಡೇರಿಸಿದ ಅಶ್ವಿನಿ
ಅಪ್ಪು ಅಭಿಮಾನಿಗಳ ಹೃದಯದಲ್ಲಿ ಎಂದಿಗೂ ಅಜರಾಮರ. 20 ವರ್ಷದ ನಂತರ ಅಭಿಮಾನಿಗಳ ಅಪ್ಪು ಪುನೀತ್ ರಾಜ್‌ಕುಮಾರ್ ಅವರ ಕನಸನ್ನು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ನನಸು ಮಾಡುತ್ತಿದ್ದಾರೆ. ಇದರ ಜೊತೆಗೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಹೊಸ ಸಾಹಸಕ್ಕೆ ಮುಂದಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿರುವ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಶಿಕ್ಷಣ ಕ್ಷೇತ್ರ ಪ್ರವೇಶಿಸುವುದು ನನ್ನ ಹಾಗೂ ಪುನೀತ್ ಅವರ 20 ವರ್ಷದ ಕನಸು ಈಗ ನನಸಾಗುತ್ತಿದೆ. ಬೆಂಗಳೂರಲ್ಲಿ ಟೋಸ್ ಇಂಟರ್‌ನ್ಯಾಷನಲ್ ಪ್ರೀಸ್ಕೂಲ್ ಆರಂಭಿಸುವ ತಮ್ಮ ನಿರ್ಧಾರವನ್ನು ಘೋಷಣೆ ಮಾಡಿದ್ದಾರೆ. ಪುನೀತ್ ರಾಜ್‌ಕುಮಾರ್ ಅವರ ಕನಸಿನಂತೆ ಶಿಕ್ಷಣ ಕ್ಷೇತ್ರಕ್ಕೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಪ್ರವೇಶ ಮಾಡಿದ್ದಾರೆ. 20 ವರ್ಷದ ನಂತರ ನನ್ನ ಹಾಗೂ ಪುನೀತ್ ಕನಸು ಈಗ ನನಸಾಗುತ್ತಿದೆ. ಜೂನಿಯರ್ ಟೋಸ್ ಪ್ರೀಸ್ಕೂಲ್ ಮುಖಾಂತರ ನಾನು ನನ್ನ ಜರ್ನಿಯನ್ನು ಪ್ರಾರಂಭಿಸುತ್ತಿದ್ದೇನೆ. ಈ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ನನ್ನ ಮೊದಲನೇ ಹೆಜ್ಜೆ ಇಡುತ್ತಿದ್ದೇನೆ. ಮಕ್ಕಳಲ್ಲಿ ಒಳ್ಳೆಯ ಕ್ಯಾರೆಕ್ಟರ್, ಲೀಡರ್ ಶಿಪ್ ಬೆಳೆಸುವುದು ನಮ್ಮ ಶಾಲೆಯ ಉದ್ದೇಶ. ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಣತಿ ಗಳಿಸಿದವರು ನಮ್ಮ ಜೊತೆಗೆ ಇರುತ್ತಾರೆ ಎಂದಿದ್ದಾರೆ.
8. ಕೋರೊನಾ ಆಯ್ತು ಇದೀಗ ಡಿಂಗ ಡಿಂಗ. ಈ ವಿಲಕ್ಷಣ ಕಾಯಿಲೆಗೆ ಔಷಧಿಯೇ ಇಲ್ಲ!
ಕಾಯಿಲೆ ಹೇಗೆಲ್ಲಾ ಇರುತ್ತವೆ ಅನ್ನೋದನ್ನ ಹೇಳಿ ಕೊಟ್ಟಿದ್ದೆ ಕೊರೊನಾ. ಸದ್ಯ ಡಿಂಗ ಡಿಂಗ ಅನ್ನೋ ಹೊಸದೊಂದು ಕಾಯಿಲೆ ಕಾಣಿಸಿಕೊಂಡಿದೆ. ತೀರಾ ವಿಚಿತ್ರ ಏನಂದ್ರೆ ಈ ಕಾಯಿಲೆ ಬಂದವರು ಡ್ಯಾನ್ಸ್ ಮಾಡ್ತಾನೇ ಇರ್ತಾರೆ. ಅತ್ಯಂತ ವಿಚಿತ್ರ ಅನಿಸೋ ಈ ಕಾಯಿಲೆ ಅಕ್ಷರಶಃ ಬೆಚ್ಚಿ ಬೀಳಿಸುತ್ತಿದೆ. ಈ ಕಾಯಿಲೆ ಹೆಸರೂ ವಿಚಿತ್ರವಾಗಿದೆ. ಇದು ಡಿಂಗ ಡಿಂಗ ಕಾಯಿಲೆ. ಡಿಂಗ ಡಿಂಗ ಅಂದ್ರೆ ಶೇಕ್ ಶೇಕ್ ಡ್ಯಾನ್ಸ್ ಅನ್ನೋ ಅರ್ಥ. ಉಗಾಂಡದಲ್ಲಿ ಕಾಣಿಸಿಕೊಂಡಿರೋ ಈ ಕಾಯಿಲೆಯಿಂದಾಗಿ ಈಗಾಗಲೇ ಮಹಿಳೆಯರು ಹಾಗೂ ಮಕ್ಕಳು ಸಾವಿನ ಬಾಗಿಲು ತಟ್ಟುತ್ತಿದ್ದಾರೆ. ಅದರಲ್ಲೂ ಬುಂಡಿಬುಗ್ಯೋ ಜಿಲ್ಲೆಯನ್ನ ಅಕ್ಷರಶಃ ಡಿಂಗ ಡಿಂಗ ಡ್ಯಾನ್ಸ್ ಡಿಸೀಸ್ ಬೆಚ್ಚಿ ಬೀಳಿಸುತ್ತಿದೆ. ಮೊದಲಿಗೆ ಇಡೀ ದೇಹ ಶೇಕ್ ಆಗೋ ಲಕ್ಷಣ ಕಾಣಿಸಿಕೊಳ್ಳುತ್ತದೆ. ಅದನ್ನ ಸುಮ್ಮನೇ ಬಿಟ್ಟು ಬಿಟ್ಟರೆ, ನಡೆದಾಡೋದಕ್ಕೂ ಆಗದೇ ಪಾರ್ಶ್ವವಾಯು ಬಡಿಯುತ್ತದೆ. ವಿಪರೀತ ಜ್ವರ, ಅತಿಯಾದ ಸುಸ್ತು ಕಾಣಿಸಿಕೊಂಡು ಮನುಷ್ಯ ಸತ್ತೇ ಹೋಗುವ ಸಾಧ್ಯತೆ ಇದೆ ಅಂತ ಉಗಾಂಡ ವೈದ್ಯಾಧಿಕಾರಿಗಳು ಡಿಂಗ ಡಿಂಗ ಡ್ಯಾನ್ಸ್ ಲಕ್ಷಣಗಳನ್ನು ಗುರ್ತಿಸಿದ್ದಾರೆ. ಇದುವರೆಗೂ ಉಗಾಂಡದ ಒಂದೇ ಜಿಲ್ಲೆಯಲ್ಲಿ 300ಕ್ಕೂ ಅಧಿಕ ಕೇಸ್ಗಳು ಪತ್ತೆ ಆಗಿವೆ. ಇಂಥದ್ದೊಂದು ವಿಲಕ್ಷಣ ಕಾಯಿಲೆಗೆ ಕಾರಣ ಏನು ಅನ್ನೋದೇ ವಿಜ್ಞಾನಿಗಳನ್ನು ತಲೆ ಕೆಡಸಿಕೊಳ್ಳುವಂತೆ ಮಾಡಿದೆ. 2023ರಲ್ಲೇ ಮೊದಲ ಸಲ ಇಂಥದ್ದೊಂದು ಕಾಯಿಲೆ ಕಾಣಿಸಿಕೊಂಡಿತ್ತು. ಆವಾಗಿನಿಂದ್ಲೂ ಉಗಾಂಡ ವಿಜ್ಞಾನಿಗಳು ಈ ಕಾಯಿಲೆ ಯಾಕೆ ಬರುತ್ತೆ ಅನ್ನೋ ಮೂಲವನ್ನು ಪತ್ತೆ ಹಚ್ಚುತ್ತಲೇ ಇದ್ದಾರೆ. ಇದುವರೆಗೂ ಈ ಕಾಯಿಲೆಗೆ ಕಾರಣ ತಿಳಿದು ಬಂದಿಲ್ಲ. ಇನ್ನು, ಇದಕ್ಕೆ ಔಷಧಿ ಇಲ್ಲ. ಜ್ವರ, ಸುಸ್ತಿಗೆ ನೀಡುವ ಔಷಧಿ ಜೊತೆ ಪಾರ್ಶ್ವವಾಯುಗೆ ನೀಡುವ ಔಷಧವನ್ನೇ ನೀಡುತ್ತಿದ್ದಾರೆ.
9. ಚಿಕಿತ್ಸೆ ಪಡೆಯಲು ವಿದೇಶಕ್ಕೆ ಹೊರಟ ಶಿವಣ್ಣ. ಆತಂಕ ಇದ್ದೇ ಇರುತ್ತೇ ಭಾವನಾತ್ಮಕ ಮಾತು
ಅನಾರೋಗ್ಯ ಉಂಟಾದ ಕಾರಣದಿಂದ ನಟ ಶಿವರಾಜ್ಕುಮಾರ್ ಅವರು ವಿದೇಶಕ್ಕೆ ಹೋಗಿ ಚಿಕಿತ್ಸೆ ಪಡೆಯಲಿದ್ದಾರೆ. ಇಂದು ಅವರು ವಿದೇಶಕ್ಕೆ ಪ್ರಯಾಣ ಬೆಳೆಸಿದ್ದಾರೆ. ಅದಕ್ಕೂ ಮುನ್ನ ಅವರನ್ನು ಸುದೀಪ್ ಮುಂತಾದವರು ಭೇಟಿ ಮಾಡಿದ್ದಾರೆ. ಮನೆಯಿಂದ ವಿಮಾನ ನಿಲ್ದಾಣಕ್ಕೆ ತೆರಳುವಾಗ ಶಿವರಾಜ್ಕುಮಾರ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಅನಾರೋಗ್ಯ ಮತ್ತು ಚಿಕಿತ್ಸೆಯ ಬಗ್ಗೆ ಮಾತನಾಡುವಾಗ ಅವರು ಭಾವುಕರಾದರು.‘ಎಲ್ಲರಿಗೂ ಇರುವಂಥದ್ದೇ. ನಾವು ಕೂಡ ಸ್ವಲ್ಪ ಎಮೋಷನಲ್ ಆಗುತ್ತೇವೆ. ಅದು ಸಹಜ. ಇಲ್ಲಿ ಪರೀಕ್ಷೆ ಮಾಡಿಸಿದಾಗ ಎಲ್ಲ ಲಕ್ಷಣಗಳು ಚೆನ್ನಾಗಿವೆ. ಆದರೂ ಕೂಡ ಒಂದು ಆತಂಕ ಇದ್ದೇ ಇರುತ್ತದೆ. ಮನೆಯಿಂದ ಹೋಗುತ್ತಿದ್ದೇವಲ್ಲ.. ತಂಗಿ ಹಾಗೂ ಸಂಬಂಧಿಕರನ್ನೆಲ್ಲ ನೋಡುವಾಗ ಸ್ವಲ್ಪ ಎಮೋಷನಲ್ ಆಯಿತು. ಅಭಿಮಾನಿಗಳು ಕೂಡ ಇದ್ದಾರೆ. ಸ್ವಲ್ಪ ದುಃಖ ಆಗಿದೆ ಹೊರತೂ ಇನ್ನೇನೂ ಇಲ್ಲ’ ಅಂತ ಶಿವರಾಜ್ ಕುಮಾರ್ ಹೇಳಿದ್ದಾರೆ.‘ನಾನು ಆತ್ಮವಿಶ್ವಾಸದಿಂದ ಇದ್ದೇನೆ. ಡಿಸೆಂಬರ್ 24ರಂದು ಸರ್ಜರಿ ನಡೆಯುತ್ತದೆ. ಅದರ ಬಗ್ಗೆ ಏನೂ ಯೋಚನೆ ಇಲ್ಲ. ಕಡಿಮೆ ಅವಧಿ ಆದರೆ ಪರವಾಗಿಲ್ಲ. ಆದರೆ 35 ದಿನ ಮನೆಯಿಂದ, ಭಾರತದಿಂದ ಹೊರಗೆ ಇರುತ್ತೇನೆ ಎಂಬ ನೋವು ಇರುತ್ತದೆ. ಎಲ್ಲರ ಹಾರೈಕೆ ಇದೆ. ಅಭಿಮಾನಿಗಳು, ಮಾಧ್ಯಮದವರು ಕಾಳಜಿ ತೋರಿಸಿದ್ದಾರೆ. ಆರೋಗ್ಯ ಸಮಸ್ಯೆ ಇದೆ ಎಂಬುದು ಗೊತ್ತಿದ್ದರೂ ಕೂಡ ಯಾರೂ ಅದನ್ನು ವೈಭವಿಕರಿಸಿಲ್ಲ. ಅದು ನನಗೆ ಖುಷಿ ಕೊಟ್ಟಿದೆ. ಅಷ್ಟು ಪ್ರೀತಿ ಮತ್ತು ಗೌರವ ನನ್ನ ಮೇಲೆ ಇಟ್ಟಿದ್ದಾರೆ’ ಎಂದಿದ್ದಾರೆ ಶಿವರಾಜ್ ಕುಮಾರ್.
10.ಕರ್ನಾಟಕದಲ್ಲಿ 3 ದಿನ ಶೀತಗಾಳಿ. ತಾಪಮಾನ 2 ರಿಂದ 4 ಡಿಗ್ರಿ ಕುಸಿತ
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಬೆನ್ನಲ್ಲೇ ಇತ್ತ ಕರ್ನಾಟಕ ರಾಜ್ಯದಲ್ಲಿ ತಾಪಮಾನ ಕುಸಿತವಾಗಿದ್ದು, ಮುಂದಿನ 3 ದಿನಗಳ ಕಾಲ ಶೀತಗಾಳಿ ಬೀಸುವ ಸಾಧ್ಯತೆ ಇದೆ ಅಂತ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ರಾಜ್ಯದಲ್ಲಿ ತಾಪಮಾನ ಗಣನೀಯವಾಗಿ ಕುಸಿತವಾಗಿದ್ದು, ಮುಂದಿನ ದಿನಗಳಲ್ಲಿ ತಾಪಮಾನ 2 ರಿಂದ 4 ಡಿಗ್ರಿಗಳ ವರೆಗೂ ಕುಸಿಯುವ ಸಾಧ್ಯತೆ ಇದೆ. ಮುಂದಿನ 3 ದಿನ ಶೀತಗಾಳಿ ಬೀಸುವ ಸಾಧ್ಯತೆ ಇದ್ದು, ಮುಂದಿನ ಮೂರು ದಿನಗಳವರೆಗೆ ಉತ್ತರ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ತಾಪಮಾನವು 2-4 ಡಿಗ್ರಿ ಸೆಲ್ಸಿಯಸ್ “ಸಾಮಾನ್ಯಕ್ಕಿಂತ ಕಡಿಮೆ” ಇರಲಿದೆ ಅಂತ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ಪ್ರಮುಖವಾಗಿ ರಾಜ್ಯದ ಬೀದರ್, ವಿಜಯಪುರ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಶೀತಗಾಳಿ ಮುಂದುವರಿಯುವ ಸಾಧ್ಯತೆ ಇದ್ದು, ಡಿಸೆಂಬರ್ 18-22 ರವರೆಗೆ ರಾಜ್ಯಾದ್ಯಂತ ಶುಷ್ಕ ಹವಾಮಾನ ಮುಂದುವರಿಯುವ ಮುನ್ಸೂಚನೆ ಇದೆ. ಬೀದರ್, ವಿಜಯಪುರ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಶೀತಗಾಳಿ ವಾತಾವರಣ ನಿರೀಕ್ಷಿಸಲಾಗಿದೆ. ಉತ್ತರ ಒಳನಾಡಿನ ಕರ್ನಾಟಕದ ಉಳಿದ ಜಿಲ್ಲೆಗಳಲ್ಲಿ ತಾಪಮಾನವು ಸಾಮಾನ್ಯಕ್ಕಿಂತ 2-4 ಡಿಗ್ರಿ ಸೆಲ್ಸಿಯಸ್ ಕಡಿಮೆ ಇರುತ್ತದೆ. ಕರ್ನಾಟಕದ ಒಳನಾಡಿನ ಪ್ರತ್ಯೇಕ ಸ್ಥಳಗಳಲ್ಲಿ ಡಿಸೆಂಬರ್ 20 ರವರೆಗೆ ಮಂಜು ಆವರಿಸಬಹುದು ಅಂತ ಹವಾಮಾನ ಇಲಾಖೆ ಮಾಹಿತಿ ನೀಡಿದೆ.