1. ಸಿಟಿ ರವಿ ಅಶ್ಲೀಲ ಪದ ಬಳಕೆ ಆರೋಪ,ಹಲ್ಲೆಗೆ ಯತ್ನಿಸಿದ ಹೆಬ್ಬಾಳ್ಕರ್ ಬೆಂಬಲಿಗರು
ವಿಧಾನ ಪರಿಷತ್ ಕಲಾಪದಲ್ಲಿ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಕೆ ಆರೋಪ ತೀವ್ರ ಸ್ವರೂಪ ಪಡೆದುಕೊಂಡಿದೆ. ಬೆಳಗಾವಿಯ ಸುವರ್ಣ ಸೌಧದ ಮೊಗಸಾಲೆಯಲ್ಲಿ ದೊಡ್ಡ ಹೈಡ್ರಾಮಾವೇ ನಡೆದಿದೆ. ವಿಧಾನಪರಿಷತ್ನ ಕಾರಿಡಾರ್ನಲ್ಲಿ ಹೋಗುತ್ತಿರುವಾಗ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಗಲಿಗರು ಏಕಾಏಕಿ ಸಿಟಿ ರವಿಗೆ ಅಡ್ಡ ಹಾಕಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಅಲ್ಲದೇ ನೂರಾರು ಬೆಂಬಲಿಗರು ಘೋಷಣೆ ಕೂಗಿ ಸಿಟಿ ರವಿ ಮೇಲೆ ಮುಗಿಬಿದ್ದಿದ್ದು, ಹಲ್ಲೆಗೆ ಯತ್ನ ನಡೆದಿದೆ ಅಂತ ತಿಳಿದುಬಂದಿದೆ. ಕೂಡಲೇ ಮಾರ್ಷಲ್ಗಳು, ಕಾರಿಡಾರ್ ಗೇಟ್ ಬಂದ್ ಮಾಡಿದರು. ಹೀಗಾಗಿ ಸಿಟಿ ರವಿ ಅಪಾಯದಿಂದ ಪಾರಾಗಿದ್ದಾರೆ. ಏಕವಚನದಲ್ಲೇ ಏನೋ ಸೂ….ಮಗನೇ…. ನಮ್ಮಕ್ಕನಿಗೆ ಹೀಗಂದ್ಯಾ ಎಂದು ಓರ್ವ ವ್ಯಕ್ತಿ ಒದೆಯುವ ರೀತಿಯಲ್ಲಿ ಕಾಲೆತ್ತಿದ್ದಾನೆ. ಆಗ ಏನೋ ಎಂದ ರವಿ ಪ್ರಶ್ನಿಸಿದ್ದಾರೆ. ಆಗ ಸಿಟಿ ರವಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಏಯ್, ಆಚೆ ಬಾರೋ, ಧೈರ್ಯವಿದ್ದರೆ ಹೊರಗೆ ಬಾ ಎಂದು ಏಕವಚನದಲ್ಲೇ ಆವಾಜ್ ಹಾಕಿದ್ದಾರೆ. ಈ ವೇಳೆ ಒಂದಿಬ್ಬರು ಹಲ್ಲೆಗೂ ಯತ್ನಿಸಿದ ಪ್ರಸಂಗ ನಡೆಯಿತು. ಇದರಿಂದ ಹೆಬ್ಬಾಳ್ಕರ್ ಬೆಂಬಲಿಗರ ವಿರುದ್ಧ ಕೆಂಡಾಮಂಡಲರಾದ ಸಿ.ಟಿ ರವಿ ʻಬಾ.. ಬಾ.. ಹೊಡಿ ಬಾ.., ಅದೇನ್ ಮಾಡ್ತಾರೆ ಮಾಡ್ಲಿ ಬಿಡ್ರಿ ಎಂದಿದ್ದಾರೆ.ಇದರಿಂದ ದೊಡ್ಡ ಗಲಾಟೆ ಉಂಟಾಗಿದ್ದು, ಕೂಡಲೇ ಪೊಲೀಸರು ದೌಡಾಯಿಸಿ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರನ್ನು ಚದುರಿಸಿದರು. ಅಲ್ಲದೇ ಕೆಲವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನು ಈ ಗಲಾಟೆ ನಡೆಯುವ ಸ್ಥಳದಲ್ಲೇ ಹೆಬ್ಬಾಳ್ಕರ್ ಸಹೋದರ ವಿಧಾನಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಕಾಣಿಸಿಕೊಂಡಿದ್ದಾರೆ.ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬೆಂಬಲಿಗರ ನಡೆಯಿಂದ ಆಕ್ರೋಶಗೊಂಡಿರುವ ಸಿಟಿ ರವಿ, ನನ್ನ ಮೇಲೆ ಅಟ್ಯಾಕ್ ಮಾಡಲು ಯತ್ನಿಸಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರು ಕೊಲೆ ಬೆದರಿಕೆ ಹಾಕಿದ್ದಾರೆ. ಕೂಡಲೇ ಅವರನ್ನು ಬಂಧಿಸಬೇಕೆಂದು ಧರಣಿ ಕುಳಿತುಕೊಂಡಿದ್ದಾರೆ. ಅವಾಚ್ಯಪದ ಬಳಕೆ ಆರೋಪದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಮ್ಮದೇ ಲೆಟರ್‌ಹೆಡ್ ಮೇಲೆ ಹಿರೇಬಾಗೇವಾಡಿ ಪೊಲೀಸ್ ಠಾಣೆಗೆ ದೂರು ಬರೆದುಕೊಟ್ಟಿದ್ದಾರೆ. ಈ ದೂರಿನ ಮೇರೆಗೆ ಇದೀಗ ಸಿಟಿ ರವಿ ವಿರುದ್ಧ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ ಕಾಯ್ದೆ 75 ಮತ್ತು 79ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ. ಹೀಗಾಗಿ ಸಿಟಿ ರವಿ ಅವರನ್ನು ಪೊಲೀಸರು ಬಂಧಿಸುವ ಸಾಧ್ಯತೆಗಳಿವೆ.ಲೈಂಗಿಕ ಕಿರುಕುಳ, ಮಹಿಳೆ ಇಚ್ಛೆ ವಿರುದ್ಧ ಅಶ್ಲೀಲತೆ ತೋರುವುದು. ಮಹಿಳೆಯ ನಮ್ರತೆ ಅವಮಾನಿಸುವ ಉದ್ದೇಶದಿಂದ ಸನ್ನೆ, ಪದ ಅಥವಾ ಕ್ರಿಯೆ, ಲೈಂಗಿಕ ಬಣ್ಣದ ಟೀಕೆ ಎಂದು ಎಫ್ಐಆರ್ನಲ್ಲಿ ಉಲ್ಲೇಖವಾಗಿದೆ.
2.ಅಮಿತ್ ಶಾ ವಿರುದ್ದ ಡಿ.ಕೆ ಶಿವಕುಮಾರ್ ಗರಂ .ಅಂಬೇಡ್ಕರ್ ಕುರಿತು ಹೇಳಿಕೆ ಪ್ರಜಾಪ್ರಭುತ್ವಕ್ಕೆ ಅಪಮಾನ
ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರು ಹೇಳುವ ಬದಲು ದೇವರ ನಾಮ ಜಪ ಮಾಡಿದ್ದರೆ ಮುಕ್ತಿ ದೊರೆಯುತ್ತಿತ್ತು ಎನ್ನುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಪ್ರಜಾಪ್ರಭುತ್ವಕ್ಕೆ ಮಾಡಿರುವ ಅಪಮಾನ ಅಂತ ಡಿಸಿಎಂ ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅಂಬೇಡ್ಕರ್ ವಿರೋಧಿ ಹೇಳಿಕೆ ಕುರಿತು ಬೆಳಗಾವಿ ಸುವರ್ಣ ವಿಧಾನಸೌಧದ ಬಳಿ ಮಾಧ್ಯಮಗಳ ಪ್ರಶ್ನೆಗೆ ಗುರುವಾರ ಉತ್ತರಿಸಿದರು. ಅಂಬೇಡ್ಕರ್ ಅವರು ಹಾಗೂ ಸಂವಿಧಾನವನ್ನು ನಾವುಗಳು ಪ್ರತಿಪಾದನೆ ಮಾಡದೆ ಮತ್ತಿನ್ಯಾರು ಮಾಡಲು ಸಾಧ್ಯ. ಅಂಬೇಡ್ಕರ್ ಅವರು ನಮಗೆ ಸಂವಿಧಾನ ಕೊಟ್ಟವರು ಅವರಿಗೆ ನಾವೆಲ್ಲ ಗೌರವ ಕೊಡುವುದು ನಮ್ಮ ಕರ್ತವ್ಯ. ಬಸವಣ್ಣ ಅವರ ಕಾಯಕವೇ ಕೈಲಾಸ ತತ್ವದಲ್ಲಿ ನಾವೆಲ್ಲರೂ ನಂಬಿಕೆ ಇಟ್ಟಿರುವವರು ಎಂದರು. ಸಂವಿಧಾನಕ್ಕೆ ಮತ್ತು ಅಂಬೇಡ್ಕರ್ ಅವರಿಗೆ ಮಾಡಿರುವ ಅಪಮಾನದ ಕುರಿತು ಹೆಚ್ಚಿನ ಚರ್ಚೆಯನ್ನು ನಾವೆಲ್ಲರೂ ಮಾಡಬೇಕಿದೆ” ಅಂತ ಹೇಳಿದರು.
3. ರಾಹುಲ್ ಗಾಂಧಿ ವಿರುದ್ದ ದೂರು . ಹಲ್ಲೆ ಹಾಗೂ ಬೆದರಿಕೆ ಆರೋಪ
ಹಲ್ಲೆ, ಬೆದರಿಕೆಗಾಗಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದೂರು ದಾಖಲಿಸಿರುವುದಾಗಿ ಬಿಜೆಪಿ ಸಂಸದ ಅನುರಾಗ್ ಠಾಕೂರ್ ಗುರುವಾರ ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿ ರಾಹುಲ್ ಗಾಂಧಿ ವಿರುದ್ಧ ಸೆಕ್ಷನ್ 109 (ಕೊಲೆಗೆ ಯತ್ನ) 115, 117,125,131, 351 ಅಡಿಯಲ್ಲಿ ದೂರು ದಾಖಲಿಸಲಾಗಿದ್ದು, ಸಂಸತ್ತಿನ ಹೊರಗಡೆ ಎನ್ ಡಿಎ ಸಂಸದರು ಶಾಂತಯುತವಾಗಿ ನಡೆಸುತ್ತಿದ್ದ ಪ್ರತಿಭಟನೆ ವೇಳೆಯಲ್ಲಿ ನಡೆದ ಘಟನೆಯನ್ನು ಸಮಗ್ರವಾಗಿ ವಿವರಿಸಲಾಗಿದೆ ಅಂತ ಅವರು ಹೇಳಿದರು. ಸಂಸತ್ತಿನಲ್ಲಿ ಎನ್ ಡಿಎ ಹಾಗೂ ಇಂಡಿಯಾ ಒಕ್ಕೂಟ ಪಕ್ಷಗಳ ಪ್ರತಿಭಟನೆ ವೇಳೆಯಲ್ಲಿ ಇಬ್ಬರು ಬಿಜೆಪಿ ಸಂಸದರು ಗಾಯಗೊಂಡಿದ್ದರು. ಗಾಯಗೊಂಡಿದ್ದ ಪ್ರತಾಪ್ ಸಾರಂಗಿ ಮತ್ತು ಮುಕೇಶ್ ರಜಪೂತ್ ಎಂಬ ಸಂಸದರನ್ನು ದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರ ತಲೆಗೆ ಗಾಯವಾಗಿದೆ. ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಅಂತ ವೈದ್ಯಕೀಯ ಅಧೀಕ್ಷಕ ಅಜಯ್ ಶುಕ್ಲಾ ಹೇಳಿದ್ದಾರೆ. ಗುರುವಾರ ಬೆಳಗ್ಗೆ ಸಂಸತ್ ಹಾಗೂ ಸಂಸತ್ತಿನ ಹೊರಗೆ ಎನ್ ಡಿಎ ಹಾಗೂ ಪ್ರತಿಪಕ್ಷಗಳು ಪ್ರತಿಭಟನೆ ನಡೆಸಿದವು. ಕಾಂಗ್ರೆಸ್ ಪಕ್ಷ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದೆ ಎಂದು ಆರೋಪಿಸಿ ಆಡಳಿತಾರೂಢ ಬಿಜೆಪಿ ಸಂಸದರು ಸಂಸತ್ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಸಂಸತ್ತಿನ ಒಳಗಡೆ ವಿಪಕ್ಷ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಪ್ರತಿಪಕ್ಷಗಳು ಅಂಬೇಡ್ಕರ್ ಕುರಿತ ಹೇಳಿಕೆಗಾಗಿ ಅಮಿತ್ ಶಾ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಅಂತ ಆಗ್ರಹಿಸಿದ್ದಾರೆ.
4. ರಾಹುಲ್ ವಿಚಾರವಾಗಿ ಖರ್ಗೆ ಸ್ಪಷ್ಟನೆ ,ನಾನು ಯಾರನ್ನೇ ತಳ್ಳೋಕಾಗುತ್ತಾ?
ಅಂಬೇಡ್ಕರ್ ವಿಚಾರವಾಗಿ ಸಂಸತ್‌ನ ಹೊರಗೆ ಹಾಗೂ ಒಳಗೆ ಪ್ರತಿಭಟನೆಗಳು ನಡೆಯುತ್ತಿವೆ. ಕಾಂಗ್ರೆಸ್ ಮತ್ತು ಬಿಜೆಪಿ ಸಂಸದರ ನಡುವೆ ಸಂಘರ್ಷಗಳು ನಡೆಯುತ್ತಿವೆ. ಸಂಸತ್‌ನಲ್ಲಿ ತಳ್ಳಾಟ ನೂಕಾಟ ನಡೆದಿದ್ದು, ಒಬ್ಬರಿಗೊಬ್ಬರು ಆರೋಪಗಳನ್ನು ಮಾಡುತ್ತಿದ್ದಾರೆ. ಈ ನಡುವೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಅಂಬೇಡ್ಕರ್ ಮತ್ತು ಕಾಂಗ್ರೆಸ್ ಬಗ್ಗೆ ಅಮಿತ್ ಶಾ ಹಾಗೂ ಬಿಜೆಪಿ ನಾಯಕರು ಮಾಡಿರುವ ಆರೋಪಗಳು, ಹೇಳಿಕೆಗಳೆಲ್ಲವೂ ಸುಳ್ಳು ಎಂದರು. ಅಂಬೇಡ್ಕರ್ ಬರೆದಿದ್ದ ಪತ್ರದ ಬಗ್ಗೆ ಪ್ರಸ್ತಾಪಿಸಿ, ಅಲಿಪುರದಲ್ಲಿ ಇದ್ದ ಅಂಬೇಡ್ಕರ್ ಅವರು ತಮ್ಮ ಸ್ನೇಹಿತನಿಗೆ ಪತ್ರ ಬರೆದಿದ್ದರು. 1952ರಲ್ಲಿ ಚುನಾವಣೆ ಹೇಗೆ ಆಯಿತು ಅದರ ಬಗ್ಗೆ ಪತ್ರದಲ್ಲಿ ಬರೆದಿದ್ದರು ಅಂತ ತಿಳಿಸಿದರು. ಸದನದಲ್ಲಿ ಗಡಬಡ ಆಗಬಾರದು. ಸದನದ ಗೌರವವನ್ನು ಹಾಳು ಮಾಡಬಾರದು. ಕಲಾಪಗಳಿಗೆ ನಾವು ಅಡ್ಡಿ ಪಡಿಸಲಿಲ್ಲ ಹಾಗೂ ನಾವು ಹೊರಗೆ ಪ್ರತಿಭಟನೆ ನಡೆಸಿದವು. ಅದಾನಿಯವರ ವಿಚಾರಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದವು. ”ಅಂಬೇಡ್ಕರ್ ಅವರ ಪ್ರತಿಮೆಯ ಸ್ಥಳದಿಂದ ಹೊರಟೆವು ಶಾಂತ ರೀತಿಯಲ್ಲಿ ನಾವು ಸಾಲಾಗಿ ಹೊರಟಿದ್ದೆವು. ಆದರೆ, ಅವರಿಗೆ ಏನು ಅನಿಸಿತೋ ಗೊತ್ತಿಲ್ಲ. ನಮ್ಮನ್ನು ಹೋಗುವುದನ್ನು ತಡೆದರು. ಬಾಗಿಲ ಬಳಿಯೇ ನಮ್ಮನ್ನು ತಡೆದರು. ಅಲ್ಲಿದ್ದ ಸಂಸದರು ಬಲ ಪ್ರಯೋಗ ಮಾಡಿದರು. ಸಂಸತ್‌ನ ಒಳಗೆ ಹೋಗದಂತೆ ತಡೆದರು. ನನ್ನನ್ನೂ ಕೂಡ ತಳ್ಳಿದರು. ನಾನು ಯಾರನ್ನೂ ತಳ್ಳಲಿಲ್ಲ. ಆದರೆ, ನಾವೇ ಸಂಸದರನ್ನು ದೂಡಿದೆವು ಎಂದು ಆರೋಪಿಸಿದ್ದಾರೆ. ನಮ್ಮೊಂದಿಗೆ ಹೆಚ್ಚಿನವರು ಮಹಿಳಾ ಸದಸ್ಯರು ಇದ್ದರು. ಪ್ರಿಯಾಂಕಾ ಗಾಂಧಿಯವರು ಹೋರಾಟದ ನೇತೃತ್ವ ವಹಿಸಿದ್ದರು. ಇದನ್ನು ನಾವು ಇಷ್ಟಕ್ಕೇ ಬಿಡುವುದಿಲ್ಲ. ಹೋರಾಟ ದೇಶದಾದ್ಯಂತ ನಡೆಸುತ್ತೇವೆ” ಅಂತ ಹೇಳಿದರು. ಅಂಬೇಡ್ಕರ್ ಬಗ್ಗೆ ರಾಜ್ಯಸಭೆಯಲ್ಲಿ ಮಾತನಾಡಿದ್ದ ಅಮಿತ್ ಶಾ, ‘ಅಂಬೇಡ್ಕರ್ ಹೆಸರನ್ನು ಅಷ್ಟು ಬಾರಿ ಹೇಳುವ ಬದಲು ದೇವರ ಜಪ ಮಾಡಿದ್ದರೆ ಸ್ವರ್ಗ ಸಿಗುತ್ತಿತ್ತು ಎಂದು ಹೇಳುತ್ತಾರೆ’ ಎಂದು ಹೇಳಿಕೆ ಕೊಟ್ಟಿದ್ದರು. ಅದನ್ನು ವಿರೋಧಿಸಿ ನಾವು ಹೋರಾಟ ನಡೆಸಿದೆವು, ಅವರನ್ನು ಸಚಿವ ಸ್ಥಾನದಿಂದ ತೆಗೆಯುವಂತೆ ಪ್ರಧಾನಿಯವರಿಗೆ ಒತ್ತಾಯಿಸಿದೆವು. ಆದರೆ, ಮೋದಿಯವರು ಅದನ್ನು ಮಾಡೋದಿಲ್ಲ ಅನ್ನೋದು ಗೊತ್ತಿದೆ. ನಾವು ಸಂಸತ್ ಆವರಣದಲ್ಲಿ ಪ್ರತಿಭಟನೆ ನಡೆಸಿದೆವು ಅಂದಿದ್ದಾರೆ.
5. 87 ನೇ ಕನ್ನಡ ಸಾಹಿತ್ಯ ಸಮ್ಮೇಳನ. ಮಂಡ್ಯದಲ್ಲಿ 2 ದಿನ ಶಾಲಾ- ಕಾಲೇಜು ರಜೆ
ಈ ಬಾರಿ ಸಕ್ಕರಿನಗರಿ ಮಂಡ್ಯದಲ್ಲಿ ಮೂವತ್ತು ವರ್ಷಗಳ ಬಳಿಕ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಈ ನುಡಿಜಾತ್ರೆಯನ್ನು ಸಾಕಷ್ಟು ಅರ್ಥಪೂರ್ಣವಾಗಿ ಹಾಗೂ ಅದ್ದೂರಿಯಾಗಿ ಆಚರಣೆ ಮಾಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಹಿನ್ನೆಲೆ ಜಿಲ್ಲೆಯ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪಿಯು ಕಾಲೇಜುಗಳಿಗೆ ಡಿ.20 ಮತ್ತು 21ರಂದು ರಜೆ ಘೋಷಿಸಿ ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ್ ಬುಧವಾರ ಆದೇಶ ಹೊರಡಿಸಿದ್ದಾರೆ. ಡಿ.20ರಿಂದ 22ರವರೆಗೂ 3 ದಿನ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಈ ಹಿನ್ನಲೆ ಗಣ್ಯರು ಮತ್ತು ನೊಂದಾಯಿತ ಪ್ರತಿನಿಧಿಗಳು ಮಂಡ್ಯಕ್ಕೆ ಆಗಮಿಸಲಿದ್ದಾರೆ. ಅವರಿಗೆ ಜಿಲ್ಲೆಯ ಎಲ್ಲ ಶಾಲಾ, ಕಾಲೇಜುಗಳಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗುತ್ತೆ. ಅಲ್ಲದೇ ನಾಡು-ನುಡಿ ಬಗ್ಗೆ ಅಭಿಮಾನ ಮೂಡಿಸುವ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಉಪನ್ಯಾಸಕರು ಭಾಗಿಯಾಗಬೇಕು. ಆ ನಿಟ್ಟಿನಲ್ಲಿ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿಗೆ ಡಿ.20, 21 ಎರಡು ದಿನ ರಜೆ ಘೋಷಣೆ ಮಾಡಲಾಗಿದೆ. ಇನ್ನು ಮೈಸೂರು, ಬೆಂಗಳೂರಿನ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಪ್ರತಿ 30 ನಿಮಿಷಕ್ಕೆ ಒಂದರಂತೆ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ.ಡಿಸೆಂಬರ್ 20 ರಂದು ಬೆಳಿಗ್ಗೆ 6 ಗಂಟೆಗೆ ಧ್ವಜಾರೋಹಣ ನೆರವೇರಲಿದೆ. 7 ಗಂಟೆಗೆ ವಿಶ್ವೇಶ್ವರಯ್ಯ ಪ್ರತಿಮೆಯಿಂದ ಮೆರವಣಿಗೆ ಪ್ರಾರಂಭವಾಗಲಿದೆ. ಸಮ್ಮೇಳನಾರ್ಧಯಕ್ಷ ಗೊರು ಚನ್ನಬಸಪ್ಪರನ್ನು ಮೆರವಣಿಗೆ, ಪೂರ್ಣ ಕುಂಭ ಸ್ವಾಗತದ ಮೂಲಕ ಕರೆತರಲಾಗುತ್ತದೆ. ಬೆಳಿಗ್ಗೆ 11 ಗಂಟೆಗೆ ವೇದಿಕೆ ಕಾರ್ಯಕ್ರಮ ಪ್ರಾರಂಭವಾಗಲಿದೆ. ಸಿಎಂ ಸಿದ್ದರಾಮಯ್ಯ ಸೇರಿದಂತೆ ಸಚಿವರು, ಸ್ಪೀಕರ್, ಕವಿಗಳು ಭಾಗವಹಿಸಲಿದ್ದಾರೆ. ಅಮೇರಿಕಾದ ಅಕ್ಕ ಸಮ್ಮೇಳನ ಅಯೋಜಕ ಅಮರನಾಥ್ ಈ ಬಾರಿ ಸಮ್ಮೇಳನದಲ್ಲಿ ಭಾಗಿಯಾಗುತ್ತಿದ್ದಾರೆ.