Sunday, December 22, 2024

Latest Posts

TOP NEWS : ಇಂದಿನ ಪ್ರಮುಖ ಸುದ್ದಿಗಳು – 21/ 12/2024

- Advertisement -

1.ನೆಲಮಂಗಲದಲ್ಲಿ ಭೀಕರ ಅಪಘಾತ!.ಉದ್ಯಮಿ ಸೇರಿ 6 ಜನ ಸ್ಥಳದಲ್ಲೇ ಸಾವು

ನೆಲಮಂಗಲ ಸಮೀಪ ಇಂದು ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಒಂದೇ ಕುಟುಂಬದ 6 ಜನ ಮೃತಪಟ್ಟಿದ್ದಾರೆ. ತುಮಕೂರು -ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ತಾಳೆಕೆರೆ ಎಂಬಲ್ಲಿ ಈ ಅಪಘಾತ ಆಗಿದೆ. ಕಾರಿನ ಮೇಲೆ ಕಂಟೇನರ್ ಲಾರಿ ಬಿದ್ದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಮಕ್ಕಳು ಸೇರಿದಂತೆ 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನು ಕಂಟೇನರ್‌ ಕಾರಿನ ಮೇಲೆ ಬಿದ್ದ ಪರಿಣಾಮ, ಕಾರು ಸಂಪೂರ್ಣ ಅಪ್ಪಚ್ಚಿಯಾಗಿತ್ತು. ಇದರಿಂದ ಕಾರು ಹೊರತೆಗೆಯಲು ಪೊಲೀಸರು ಹರಸಾಹಸಪಟ್ಟರು. ಹೆವಿ ಲೋಡ್ ಇರುವ ಕಂಟೇನರ್‌ ಮೇಲೆತ್ತಲು ಲಾರಿ ಬೆಲ್ಟ್‌, ಚೈನ್‌ಗಳನ್ನ ತರಿಸಲಾಗಿತ್ತು. ಕೊನೆಗೆ ಹರಸಾಹಸ ಪಟ್ಟು ಮೂರು ಕ್ರೇನ್‌ಗಳ ಸಹಾಯದಿಂದ ಕಂಟೇನರ್‌ ಮೇಲೆತ್ತಿ ಕಾರನ್ನು ಹೊರತೆಗೆದರು. ಇನ್ನು ಸಾವಿಗೀಡಾದವ್ರು ಮೂಲತಃ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಮೊರಬಗಿ ಮೂಲದವರಾದ ಚಂದ್ರಮ್ ಬೆಂಗಳೂರಿನ ಹೆಚ್‌ಎಸ್‌ಆರ್‌ ಲೇಔಟ್‌ನಲ್ಲಿ ವಾಸವಿದ್ದರು. ಐಎಎಸ್​​ಟಿ ಸಾಫ್ಟ್‌ವೇರ್‌ ಕಂಪನಿ ಮಾಲೀಕರಾಗಿದ್ದರು. ತಂದೆಗೆ ಹುಷಾರಿಲ್ಲ ಅಂತ ಕುಟುಂಬ ಸಮೇತ ವಿಜಯಪುರಕ್ಕೆ ಐಷಾರಾಮಿ ವೋಲ್ವೋ ಕಾರಿನಲ್ಲಿ ಹೊರಟಿದ್ದರು. ಬೆಂಗಳೂರಿನ ನೆಲಮಂಗಲ ತಾಲೂಕಿನ ತಾಳೆಕೆರೆ ಬಳಿ ಪಕ್ಕದ ರಸ್ತೆಯಿಂದ ಏಕಾಏಕಿ ಮೇಲೆರಗಿ ಬಂದ ಲಾರಿ ಚಂದ್ರಮ್ ಕುಟುಂಬ ಪ್ರಯಾಣಿಸ್ತಿದ್ದ ಕಾರಿನ ಮೇಲೆ ಬಿದ್ದಿತ್ತು. ಲಾರಿ ಬಿದ್ದ ರಭಸಕ್ಕೆ ಕಾರು ಅಪ್ಪಚ್ಚಿಯಾಗಿತ್ತು. ಕಾರಿನಲ್ಲಿದ್ದ 6 ಜೀವಗಳು ಕ್ಷಣಮಾತ್ರದಲ್ಲಿ ಉಸಿರು ಚೆಲ್ಲಿವೆ. ಸಾವಿಗೀಡಾದವರನ್ನು ಚಂದ್ರ ಯಾಗಪ್ಪ ಗೋಳ್ (48), ಗೌರಾಬಾಯಿ (42), ದೀಕ್ಷಾ (12), ಜಾನ್ (16), ವಿಜಯಲಕ್ಷ್ಮಿ (36), ಆರ್ಯ (6) ಅಂತ ಗುರುತಿಸಲಾಗಿದೆ. ಇವರು ಕೆಲವು ತಿಂಗಳ ಹಿಂದಷ್ಟೇ ದುಬಾರಿ ವೋಲ್ವೋ ಕಾರನ್ನು ಖರೀದಿಸಿದ್ದರು. ಇದೀಗ ಅದೇ ಕಾರಿನಲ್ಲಿ ಸಾವಿಗೀಡಾದ ದುರಂತ ಘಟನೆ ನಡೆದಿದೆ.

2. ಮಂಡ್ಯದಲ್ಲಿ ರಸ್ತೆ ಅಪಘಾತ .3 ವಿದ್ಯಾರ್ಥಿಗಳು ಸಾವು, ಓರ್ವ ಗಂಭೀರ

ಮಂಡ್ಯದ ಬೋಸೇಗೌಡನದೊಡ್ಡಿ ಬಳಿ ರಾಷ್ಟ್ರೀಯ ಹೆದ್ದಾರಿ 209ರಲ್ಲಿ ಭೀಕರ ಅಪಘಾತ ಸಂಭವಿಸಿದೆ. ಅಪಘಾತದಿಂದಾಗಿ ಸ್ಥಳದಲ್ಲೇ ಮೂವರು ವಿದ್ಯಾರ್ಥಿಗಳು ಮೃತಪಟ್ಟಿದ್ದು ಓರ್ವನಿಗೆ ಗಂಭೀರ ಗಾಯವಾಗಿದೆ. ಇನ್ನು ಸಾವಿಗೀಡಾದವ್ರು ಬೆಂಗಳೂರಿನ ಪ್ರಣವ್ , ಆಕಾಶ್, ಆದರ್ಶ್ ಅಂತ ಹೇಳಲಾಗ್ತಿದೆ. ಮತ್ತೊರ್ವ ವಿದ್ಯಾರ್ಥಿ ಪೃಥ್ವಿ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರಗೆ ದಾಖಲಿಸಲಾಗಿದೆ. ಇನ್ನು ವಿದ್ಯಾರ್ಥಿಗಳು ಬೆಂಗಳೂರಿನಿಂದ ಮೈಸೂರು ಜಿಲ್ಲೆಯ ತಲಕಾಡು ಪ್ರವಾಸಕ್ಕೆ ತೆರಳುತ್ತಿದ್ದರು ಎನ್ನಲಾಗ್ತಿದೆ. ರಾಷ್ಟ್ರೀಯ ಹೆದ್ದಾರಿ 209 ರಲ್ಲಿ ಕೆಎಸ್​ಆರ್​ಟಿಸಿ ಬಸ್​ ಓವರ್​​​ಟೇಕ್ ಮಾಡಿ ಎದುರಿಗೆ ಬರುತ್ತಿದ್ದ ಲಾರಿಗೆ ಗುದ್ದಿದ್ದಾರೆ. ಪರಿಣಾಮ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಓರ್ವನಿಗೆ ಗಾಯವಾಗಿದ್ದು, ಸ್ಥಿತಿ ಗಂಭೀರವಾಗಿದೆ. ಮಳವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

3. ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿ .ತಿರುಪತಿ ಬದಲು ಸೇರಿದ್ದು ಸಾವಿನ ಮನೆಗೆ !

ಬೈಕ್ ಗೆ ಲಾರಿ ಡಿಕ್ಕಿಯಾಗಿ ಇಬ್ಬರು ಮಹಿಳೆಯರು ಸಾವನ್ನಪ್ಪಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಓರ್ವಯುವತಿಯ ಸ್ಥತಿ ಗಂಭೀರವಾಗಿದೆ. ಮಹದೇಶ್ವರಪುರ ಬಳಿಯ ಮೈಸೂರು-ಜೇವರ್ಗಿ ಹೆದ್ದಾರಿಯಲ್ಲಿ ಘಟನೆ ನಡೆದಿದ್ದು. ನೀಲನಹಳ್ಳಿಯ 19 ವರ್ಷದ ಸಂಧ್ಯಾ ಮತ್ತು 35 ವರ್ಷದ ಶಿಲ್ಪ ಮೃತರಾಗಿದ್ದಾರೆ, ಮತ್ತೊಬ್ಬ ಯುವತಿಯ ಸ್ಥಿತಿ ಗಂಭೀರವಾಗಿದ್ದು. ಶೈಲಜಾ ಸ್ಥಿತಿ ಗಂಭೀರವಾಗಿದೆ ಎನ್ನಲಾಗ್ತಿದೆ. ಅಂದಹಾಗೆ ಶಿಲ್ಪ ಮತ್ತು ಶೈಲಜಾ ತಿರುಪತಿಗೆ ಹೋಗಲು ಬಸ್​ ನಿಲ್ದಾಣಕ್ಕೆ ತೆರಳುತ್ತಿದ್ದರು. ಈ ವೇಳೆ ಸಂಧ್ಯಾಳ ಬಳಿಯಲ್ಲಿ ಡ್ರಾಫ್​ ಕೇಳಿದ್ದಾರೆ. ಡ್ರಾಪ್​ ನೀಡಲು ಬೈಕ್​ ಹತ್ತಿಸಿಕೊಂಡ ಮಹಿಳೆ ಬಸ್​ ನಿಲ್ದಾಣಕ್ಕೆ ತೆರಳುವ ಮಾರ್ಗಮಧ್ಯದಲ್ಲಿ ಅಪಘಾತ ಸಂಭವಿಸಿದ್ದು. ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಪರಾರಿಯಾಗಿದೆ. ಘಟನೆ ಸಂಬಂಧ ಮೇಲುಕೋಟೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

4. ಜಾಮೀನು ಬಳಿಕ ಸಿ.ಟಿ ರವಿ ಸುದ್ದಿಗೋಷ್ಠಿ .ನನ್ನ ಕೊಲೆಗೆ ಸಂಚು ರೂಪಿಸಿದ್ರು

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಕೆ ಆರೋಪದ ಮೇಲೆ ವಿಧಾನ ಪರಿಷತ್ ಸದಸ್ಯ ಸಿ ಟಿ ರವಿಯವರ ಬಂಧನವಾಗಿ ಕೋರ್ಟ್ ಆದೇಶದಂತೆ ಬಿಡುಗಡೆ ಕೂಡ ಆಗಿದೆ.ಪ್ರಕರಣ ಸಂಬಂಧ ಅಂದು ನಡೆದ ಘಟನೆಯೇನು, ಪೊಲೀಸರು ಗುರುವಾರ ಸಂಜೆ ತಮ್ಮನ್ನು ಬಂಧಿಸಿ ನಿನ್ನೆ ಬೆಳಗಿನ ಜಾವದವರೆಗೆ ಏನೇನು ಮಾಡಿದರು ಅನ್ನೋದನ್ನ ಇಂದು ಸುದ್ದಿಗೋಷ್ಠಿಯಲ್ಲಿ ಸ್ವತಃ ಸಿ ಟಿ ರವಿ ಎಳೆಎಳೆಯಾಗಿ ಬಿಚ್ಚಿಟ್ಟರು. ಗುರುವಾರ ಸಂಜೆ ಬೆಳಗಾವಿ ಸುವರ್ಣಸೌಧದಲ್ಲಿ ಚಳಿಗಾಲ ಅಧಿವೇಶನ ಮುಗಿದ ಮೇಲೆ ಅಂಬೇಡ್ಕರ್ ವಿಚಾರವಾಗಿ ಪ್ರತಿಭಟನೆ ನಡೆಯುತ್ತಿದ್ದ ವೇಳೆ ಪೊಲೀಸರು ಬಂದು ನನ್ನನ್ನು ಪ್ರತ್ಯೇಕವಾಗಿ ಬಂಧಿಸಿದರು. ಬಂಧನ ಬಳಿಕ ಖಾನಾಪುರ ಠಾಣೆಗೆ ಕರೆದೊಯ್ದಿದ್ದರು. ಅಲ್ಲಿಂದ, ಪೊಲೀಸರು ರಾತ್ರಿವಿಡೀ ಸವದತ್ತಿ, ರಾಮದುರ್ಗ, ನಂದಗಡ, ಕಿತ್ತೂರು ಸೇರಿದಂತೆ ಸುಮಾರು 420 ಕಿಮೀ ಬಾಗಲಕೋಟೆ, ಧಾರವಾಡ, ಬೆಳಗಾವಿ ಜಿಲ್ಲೆಗಳಲ್ಲಿ ಸುತ್ತಾಡಿಸಿದ್ದಾರೆ. ರಾತ್ರಿಯಿಡೀ ನನ್ನನ್ನು ಕಾರಿನಲ್ಲಿ ಕೂರಿಸಿಕೊಂಡು ಸುತ್ತಾಡುವಾಗ ಪೊಲೀಸರಿಗೆ ಕರೆಗಳು ಬರುತ್ತಿದ್ದು, ಆದೇಶಗಳನ್ನು ನೀಡಲಾಗುತ್ತಿತ್ತು, ಪೊಲೀಸರಿಗೆ ನಾನು ಪದೇ ಪದೇ ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದೀರಿ ಎಂದು ಕೇಳಿದರೆ ಸರಿಯಾಗಿ ಉತ್ತರ ಕೊಡುತ್ತಿರಲಿಲ್ಲ. ಏನೋ ಪಿಸುಪಿಸು ಮಾತನಾಡುತ್ತಿದ್ದರು. ನನ್ನ ತಲೆಗೆ ಪೆಟ್ಟಾಗಿದ್ದರಿಂದ ತಲೆ ಸುತ್ತು ಬಂದಂತೆ, ವಾಂತಿ ಬಂದಂತೆ ಆಗುತ್ತಿತ್ತು.ಪೊಲೀಸರಿಗೆ ಆಗಾಗ ಕರೆಗಳು ಬರುತ್ತಿತ್ತು. ಯಾರೋ ಮೇಲಿನ ಅಧಿಕಾರಿಗಳು ಅಥವಾ ಪ್ರಭಾವಿ ವ್ಯಕ್ತಿಗಳು ಕರೆ ಮಾಡಿ ಆದೇಶ ಮಾಡುತ್ತಿದ್ದರು. ನನಗೆ ಕೇಳಿಸಬಾರದು ಅಂತ ದೂರ ಹೋಗಿ ಮಾತನಾಡುತ್ತಿದ್ದರು ಅಂತ ಸಿ ಟಿ ರವಿ ಆರೋಪ ಮಾಡಿದ್ದಾರೆ. ನನ್ನ ಕೊಲೆಗೆ ಸಂಚು ರೂಪಿಸಿದ್ದರೇ?: ರಾತ್ರಿ ಹೊತ್ತಿನಲ್ಲಿ ಪೊಲೀಸರು ನನಗೆ ಮಾಹಿತಿ ನೀಡದೆ ಸುತ್ತಾಡಿಸಿದ್ದಾರೆ, ಕೇಳಿದರೆ ಸರಿಯಾಗಿ ಉತ್ತರ ನೀಡುತ್ತಿರಲಿಲ್ಲ. ಮನೆಯಿಂದ ನನ್ನ ಪತ್ನಿ ಫೋನ್ ಮಾಡಿದರೆ ನಾನು ಲೈವ್ ಲೊಕೇಶನ್ ಹಾಕಿದ್ದೆ, ನಂತರ ಸ್ವಲ್ಪ ದೂರ ಹೋದ ಮೇಲೆ ಮೊಬೈಲ್ ಸಂಪರ್ಕ ಕಡಿತಗೊಂಡಿತು. ನಮ್ಮ ವಾಹನ ಹಿಂದೆ ನನ್ನ ಪಿ.ಎ ಸಿಬ್ಬಂದಿಯ ವಾಹನವನ್ನು ಸ್ವಲ್ಪ ದೂರ ಹೋದ ಮೇಲೆ ಬ್ಯಾರಿಕೇಡ್ ಹಾಕಿ ತಡೆದರು. ಅಂದರೆ ನನ್ನ ಕೊಲೆಗೆ ಸಂಚು ರೂಪಿಸಿದ್ದರೇ ಎಂಬ ಸಂದೇಹ ಬರುತ್ತಿದೆ ಎಂದರು. ಇದಕ್ಕೂ ಮುನ್ನ ಮೊನ್ನೆ ಗುರುವಾರ ಅಪರಾಹ್ನ ಸದನದಲ್ಲಿ ಸಭಾಪತಿಯವರು ಸದನವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿ ರಾಷ್ಟ್ರಗೀತೆಯನ್ನು ಹಾಡಿ ಎಲ್ಲರೂ ಹೊರಬಂದಾಗ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ನಜೀರ್ ಅಹ್ಮದ್ ಮತ್ತು ಚನ್ನರಾಜ್ ಹಟ್ಟಿಹೊಳಿ ಮೊದಲಾದವರು ನನ್ನ ಮೇಲೆ ಮಾತಿನ ಪ್ರಹಾರ ನಡೆಸಿ, ನಿನ್ನ ಕತೆಯನ್ನು ಮುಗಿಸಿ ಬಿಡುತ್ತೇವೆ ಅಂತ ಏರಿಬಂದರು, ನಾನು ಮಾರ್ಷಲ್ ಗಳ ರಕ್ಷಣೆಯಲ್ಲಿ ಸಭಾಪತಿಗಳ ಕೊಠಡಿಗೆ ಹೋದೆ ಎಂದರು. ನಾನು ವಿದ್ಯಾರ್ಥಿ ದೆಸೆಯಿಂದಲೇ ಸಾರ್ವಜನಿಕ ಜೀವನಕ್ಕೆ ಬಂದವನು. ಅಧಿಕಾರ ರಾಜಕಾರಣಕ್ಕೆ ಬಂದು 20 ವರ್ಷವಾಗಿದೆ. ಅಧಿಕಾರದ ದುರ್ಬಳಕೆ ಹೇಗೆ ಮಾಡಬೇಕೆಂದು ಕಾಂಗ್ರೆಸ್ ನವರಿಂದ ಕಲಿಯಬೇಕು. ಈ ಘಟನೆಯ ಸತ್ಯಾಸತ್ಯತೆ ಹೊರಬರಬೇಕಿದ್ದರೆ ಪೊಲೀಸರ ವಾಕಿಟಾಕಿ ಮತ್ತು ಖಾಸಗಿ ಫೋನ್ ಗಳನ್ನು ತಪಾಸಣೆ ಮಾಡಬೇಕು. ನಾನು ಎಲ್ಲೆಲ್ಲಿ ಓಡಾಡಿದೆ ಎಂಬುದು ಸಿಡಿಆರ್ ನ ನ್ಯಾಯಾಂಗ ತನಿಖೆ ನಡೆಸಬೇಕು ಅಂತ ಒತ್ತಾಯಿಸಿದರು. ವಿಧಾನ ಮಂಡಲದ ಒಳಗೆ ವಿಷುವಲ್ಸ್, ವಾಯ್ಸ್ ರೆಕಾರ್ಡಿಂಗ್ ಮತ್ತು ಸ್ಟೆನೊ ಅವರು ಅಸಂವಿಧಾನಿಕ ಶಬ್ದವನ್ನು ಸಭಾಧ್ಯಕ್ಷರ ಗಮನಕ್ಕೆ ತಂದು ಕಡತದಿಂದ ಹೊರತೆಗೆಯುತ್ತಾರೆ. ಅವಹೇಳನಕಾರಿಯಾಗಿ ಮಾತನಾಡಿದ್ದರೆ ಕ್ರಮ ತೆಗೆದುಕೊಳ್ಳುತ್ತಾರೆ, ಕ್ರಿಮಿನಲ್ ಪ್ರಕರಣವಾಗಿದ್ದರೆ ಸಂಬಂಧಪಟ್ಟವರಿಗೆ ಕ್ರಮ ತೆಗೆದುಕೊಳ್ಳಲು ಸೂಚಿಸುವ ಅಧಿಕಾರ ಸಹ ಸಭಾಧ್ಯಕ್ಷರಿಗೆ, ಸಭಾಪತಿಗಳಿಗೆ ಇರುತ್ತದೆ. ಕಾನೂನುಗಳನ್ನು ಕೈ ತೆಗೆದುಕೊಳ್ಳುವ ಅಧಿಕಾರ ಮಂತ್ರಿಗಳಿಗೆ ಕೊಟ್ಟಿಲ್ಲ. ಸದನದಲ್ಲಿ ದಾಖಲಾಗಿರುವ ಆಡಿಯೊ, ವಿಡಿಯೊ ಪರಿಶೀಲಿಸಿ ನನ್ನ ತಪ್ಪಿದ್ದರೆ ನನಗೆ ಶಿಕ್ಷೆಯಾಗಲಿ, ಅವರದ್ದು ತಪ್ಪಿದ್ದರೆ ಅವರಿಗೆ ಶಿಕ್ಷೆಯಾಗಲಿ ಅಂತ ಸಿ ಟಿ ರವಿ ಒತ್ತಾಯಿಸಿದರು.

5. ಹೀನ ಮಾತುಗಳೇ ನಮ್ಮ ಸಂಸ್ಕೃತಿ! .ಬಿಜೆಪಿ ವಿರುದ್ಧ ಡಿಕೆಶಿ ವಾಗ್ದಾಳಿ

ಮಹಿಳೆಯರಿಗೆ ಅಪಮಾನ, ಹೀನ ಮಾತುಗಳೇ ನಮ್ಮ ಸಂಸ್ಕೃತಿ ಅಂತ ಬಿಜೆಪಿ ಒಪ್ಪಿಕೊಳ್ಳಲಿ. ನಾವು ತಕರಾರು ಮಾಡುವುದಿಲ್ಲ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶನಿವಾರ ಪ್ರತಿಕ್ರಿಯೆ ನೀಡಿದರು. ಸಿ.ಟಿ. ರವಿ ಕೇವಲ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಬಗ್ಗೆ ಮಾತ್ರ ಮಾತನಾಡಿಲ್ಲ. ಸಿದ್ದರಾಮಯ್ಯ ಅವರ ಬಗ್ಗೆಯೂ ಹೀನ ಮಾತು ಆಡಿದ್ದಾರೆ. ಸದನದಲ್ಲಿ ನಿತ್ಯ ಸುಮಂಗಲಿ ಎಂದು ಪದ ಬಳಕೆ ಮಾಡಿದ್ದಾರೆ. ರವಿ ಅವರ ಮಾತುಗಳು ಸರಿಯೋ ತಪ್ಪೋ ಎಂದು ಬಿಜೆಪಿ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಲಿ” ಎಂದು ತಿಳಿಸಿದರು. ಚಿಕ್ಕಮಗಳೂರು ಜನ ಎಂದರೆ ಸುಸಂಸ್ಕೃತ ಜನ. ಅಂತಹವರ ನಡುವಿನಿಂದ ಇಂತಹ ವ್ಯಕ್ತಿ ಬಂದಿರುವುದು ದುರಂತ” ಎಂದರು. ನಮ್ಮ ಪಕ್ಷದ ಯಾವುದೇ ನಾಯಕರು ಈ ರೀತಿ ಮಾತನಾಡಿದ್ದರೆ ನಾನು ಖಂಡಿಸುತ್ತಿದ್ದೆ. ಆದರೆ ಬಿಜೆಪಿ ನಾಯಕರು ತಮ್ಮ ಪಕ್ಷದ ನಾಯಕರ ರಕ್ಷಣೆಗೆ ನಿಂತಿದ್ದಾರೆ. ಮುನಿರತ್ನ ಪ್ರಕರಣ ಇದೇ ಆರ್.ಅಶೋಕ್ ಏನು ಹೇಳಿದ್ದರು? ಎಫ್ ಎಸ್ ಎಲ್ ವರದಿಯಲ್ಲಿ ಸತ್ಯಾಂಶ ಬಂದ ನಂತರ ಪಕ್ಷದಿಂದ ಹೊರಹಾಕುವುದಾಗಿ ಹೇಳಿದ್ದರು. ಈ ಪ್ರಕರಣದಲ್ಲಿ ಅವರು ಒಂದು ಭಾಗವಾಗಿದ್ದರೂ ಆತನನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಇದೇ ಅವರ ನಾಯಕತ್ವ. ಅವರ ಮುತ್ತು ರತ್ನಗಳನ್ನು ಅವರೇ ಇಟ್ಟುಕೊಳ್ಳಲಿ” ಅಂತ ಕಿಡಿಕಾರಿದರು. ಸಿ. ಟಿ. ರವಿ ಅವರನ್ನು ರಾತ್ರಿಯಿಡೀ ಪೊಲೀಸರು ಸುತ್ತಾಡಿಸಿದರು ಎಂದು ನಿಮ್ಮ ವಿರುದ್ಧ ಬೆಟ್ಟು ಮಾಡಿ ತೋರುತ್ತಿದ್ದಾರೆ ಎಂದು ಕೇಳಿದಾಗ, “ಈ ವಿಚಾರದಲ್ಲಿ ನೀವುಂಟು, ಪೊಲೀಸ್ ಉಂಟು. ಅವರ ಮನೆಯಲ್ಲಿ ಏನಾದರೂ ನಾನೇ ಕಾರಣ. ಅವರ ಪಕ್ಷದಲ್ಲಿ ಏನಾದರೂ ನಾನೇ ಕಾರಣ. ಹೊರಗಡೆ ಏನಾದರೂ ನಾನೇ ಕಾರಣ. ನನ್ನ ಸ್ಮರಿಸದಿದ್ದರೆ ಅವರಿಗೆ ನಿದ್ದೆ ಬರುವುದಿಲ್ಲ” ಅಂತ ತಿಳಿಸಿದರು. ನಿಂದನಾತ್ಮಕ ಮಾತು ಆಡಿಯಾಗಿದೆ ಈಗ ಸರ್ಕಾರ ಹೇಗೆ ನ್ಯಾಯ ಕೊಡಿಸಲಿದೆ ಎಂದು ಕೇಳಿದಾಗ, “ಆತ್ಮಸಾಕ್ಷಿಯೇ ನ್ಯಾಯ ನೀಡುತ್ತದೆ” ಎಂದು ತಿಳಿಸಿದರು. ಇದಕ್ಕೆಲ್ಲ ಕೊನೆಯಾಡುತ್ತೇವೆ ಎಂಬ ಸಿ.ಟಿ ರವಿ ಹೇಳಿಕೆ ಬಗ್ಗೆ ಕೇಳಿದಾಗ, “ಇಂತಹ ಲೆಕ್ಕ ಚುಕ್ತಾಗಳನ್ನು ಬಹಳ ನೋಡಿದ್ದೇವೆ. ಬಹಳ ಸಂತೋಷ. ಅವರೊಬ್ಬರೇ ಲೆಕ್ಕ ಚುಕ್ತಾ ಮಾಡುತ್ತಾರ? ಎಲ್ಲರೂ ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಲೆಕ್ಕ ಚುಕ್ತಾ ಮಾಡುತ್ತಾರೆ” ಅಂತ ತಿರುಗೇಟು ನೀಡಿದರು. ಮಾನಹಾನಿಕರ ಪದ ಬಳಕೆ ವಿಚಾರ ಚರ್ಚೆಗೆ ಬದಲು ಬೇರೆ ತಿರುವು ಪಡೆಯಿತಾ ಎಂದು ಕೇಳಿದಾಗ, “ಬಿಜೆಪಿಯವರು ತಮ್ಮ ಹೇಳಿಕೆ ಮುಚ್ಚಿಕೊಳ್ಳಲು ಪೊಲೀಸರ ಮೇಲೆ ಆರೋಪ ಮಾಡುತ್ತಿದ್ದಾರೆ. ಇವರ ಆಡಳಿತದಲ್ಲಿ ಪೊಲೀಸರನ್ನು ಹೇಗೆ ಬಳಸಿಕೊಂಡಿದ್ದರು?” ಅಂತ ಮಾರ್ಮಿಕವಾಗಿ ಹೇಳಿದರು.

 

 

6. ಸಿ.ಟಿ ರವಿ ವಿರುದ್ಧ ಪರಮೇಶ್ವರ್ ವಾಗ್ದಾಳಿ . ಬಂಧನ ಮಾಡದಿದ್ರೆ ಸಮಸ್ಯೆಯಾಗ್ತಿತ್ತು

ಸಿಟಿ ರವಿ ಅವರನ್ನು ಬಂಧನಕ್ಕೊಳಪಡಿಸಿರದಿದ್ದಿದ್ದರೆ ಮತ್ತಷ್ಟಪ ದೊಡ್ಡ ಸಮಸ್ಯೆಯಾಗುತ್ತಿತ್ತು ಅಂತ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣ ಕೋರ್ಟ್ನಲ್ಲಿರುವುದರಿಂದ ಯಾವ ವಿಚಾರಗಳನ್ನು ಅದರ ಬಗ್ಗೆ ಚರ್ಚೆ ಮಾಡುವುದು ಸರಿಯಲ್ಲ. ಯಾವುದೇ ಪ್ರಶ್ನೆಗೂ ಉತ್ತರಿಸುವುದಿಲ್ಲ. ಪ್ರಕರಣದಲ್ಲಿ ಪೊಲೀಸರು ಸರಿಯಾಗಿ ನಡೆದುಕೊಂಡಿದ್ದೇವೆ ಎಂಬ ವಾದ ಇರುತ್ತದೆ. ಪ್ರಕರಣ ಕೋರ್ಟ್ನಲ್ಲಿರುವುದರಿಂದ ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ಅವರು ತೀರ್ಮಾನ ಮಾಡುತ್ತಾರೆ ಅಂತ ಅಂದ್ರು. ಬೇರೆಬೇರೆ ರೀತಿಯಲ್ಲಿ ಮಾಹಿತಿ ಕೇಳುವ ಸಂದರ್ಭದಲ್ಲಿ, ಇವರನ್ನು ಕೇಳದೆ ಜಡ್ಜ್ಮೆಂಟ್ ಆಗಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಅದರ ಬಗ್ಗೆ ಟೀಕೆ ಮಾಡಲು ಆಗಲ್ಲ. ಸಭಾಪತಿಗಳು ದಾಖಲೆಗಳಿಲ್ಲ ಎಂದು ಹೇಳಿರುವುದು ನನಗೆ ಗೊತ್ತಿಲ್ಲ. ಕೆಲವರು ಸದನ ಮುಗಿದ ಬಳಿಕ ಘಟನೆ ನಡೆಯಿತು ಎಂದು ಹೇಳುತ್ತಿದ್ದಾರೆ. ಆದ್ದರಿಂದ ಸಭಾಪತಿಗಳಿಗೆ ಇದರಲ್ಲಿ ಏನು ಹೇಳುವುದಕ್ಕೆ ಆಗಲ್ಲ ಎಂದು ಕೆಲವರು ವಿಶ್ಲೇಷಣೆ ಮಾಡುತ್ತಾರೆ. ಇನ್ನು ಕೆಲವರು ಸದನ ನಡೀತಾ ಇತ್ತು ಎಂದು ವಿಶ್ಲೇಷಣೆ ಮಾಡಿದ್ದಾರೆ. ಅದನ್ನೆಲ್ಲ ಈಗ ನಾನು ಮಾತನಾಡಲು ಹೋಗಲ್ಲ ಅಂದ್ರು.

7.ಸಿ.ಟಿ ರವಿ ಅಶ್ಲೀಲ ಪದ ಬಳಕೆ ಆರೋಪ. ತನಿಖೆಗೆ ರಾಜ್ಯ ಮಹಿಳಾ ಆಯೋಗ ಮನವಿ

ವಿಧಾನ ಪರಿಷತ್ ಅಧಿವೇಶನ ಸಂದರ್ಭದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಸಿ.ಟಿ ರವಿ ಅವಾಚ್ಯ ಪದ ಬಳಕೆ ಮಾಡಿರೋ ಆರೋಪ ದಿನಕ್ಕೊಂದು ತಿರುವು ಪಡೀತಾ ಇದೆ. ಇದೀಗ ಈ ಆರೋಪದ ಹಿನ್ನೆಲೆಯಲ್ಲಿ, ಬಿಜೆಪಿ ಎಂಎಲ್‌ಸಿ ವಿರುದ್ಧ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ರಾಜ್ಯ ಮಹಿಳಾ ಆಯೋಗ ಆಗ್ರಹಿಸಿದೆ. ಈ ಕುರಿತು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಪತ್ರ ಬರೆದಿರುವ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ. ಇನ್ನು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ಅಸಭ್ಯ ಮತ್ತು ಅಸಂವಿಧಾನಿಕ ಪದ ಬಳಕೆ ಮಾಡಿ ಅವಹೇಳನ ಮಾಡಿರುವುದು ವರದಿಯಾಗಿದೆ. ಹೆಣ್ಣು ಮಕ್ಕಳ ಬಗ್ಗೆ ಅಪಾರ ಕಾಳಜಿ, ಗೌರವ ಹೊಂದಿರಬೇಕಾದ ಜಾವಾಬ್ದಾರಿ ಸ್ಥಾನದಲ್ಲಿ ಇರುವ ವ್ಯಕ್ತಿಯೇ ಸದನದಲ್ಲಿ ಮಹಿಳಾ ಮಂತ್ರಿಯೊಬ್ಬರನ್ನು ಅತೀ ಕೀಳು ಮಟ್ಟದಲ್ಲಿ ಅಸಂವಿಧಾನಿಕ ಪದ ಬಳಕೆ ಮಾಡಿದ್ದರೆ, ಅದು ನಾಡಿನ ಇಡೀ ಹೆಣ್ಣು ಕುಲಕ್ಕೆ ಹಾಗೂ ಅವರ ಭಾವನೆಗಳಿಗೆ ಮಾಡಿದ ಅಪಮಾನ.ಈ ನಿಟ್ಟಿನಲ್ಲಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಉನ್ನತ ಮಟ್ಟದ ತನಿಖೆಯನ್ನು ನಡೆಸಬೇಕು ಅಂತ ಮನವಿ ಪತ್ರದಲ್ಲಿ ಉಲ್ಲೇಖ ಮಾಡಿಲಾಗಿದೆ.

8.ಅಂಬೇಡ್ಕರ್ ಕುರಿತು ವಿವಾದಾತ್ಮಕ ಹೇಳಿಕೆ. ಅಮಿತ್ ಶಾ ವಿರುದ್ಧ ಪ್ರಿಯಾಂಕ್ ಖರ್ಗೆ ಕಿಡಿ

ಡಾ. ಬಿ ಆರ್ ಅಂಬೇಡ್ಕರ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಸಚಿವ ಪ್ರಿಯಾಂಕ್ ಖರ್ಗೆ ಅವರು, “ಅವರಿಗೆ ಹುಚ್ಚು ನಾಯಿ ಕಚ್ಚಿದೆ” ಅಂತ ಕಿಡಿ ಕಾರಿದ್ದಾರೆ. ಇಂದು ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರು, ದೇವರ ಹೆಸರು ಸಾವಿರ ಬಾರಿ ಜಪಿಸಿದರೆ ಏಳು ಜನ್ಮದಲ್ಲಿಯೂ ಸ್ವರ್ಗ ಪ್ರಾಪ್ತಿಯಾಗುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಅಂಬೇಡ್ಕರ್ ಅವರ ಹೆಸರು‌ ಹೇಳಿದರೆ ಈ ಜನ್ಮದಲ್ಲಿಯೇ ಸ್ವಾಭಿಮಾನದ ಬದುಕು ಸಿಗುತ್ತದೆ ಅಂತ ಹೇಳಿದರು. ಏನ್ ಸಮಸ್ಯೆ ಅಂದ್ರೆ ಇವರ ಆಲೋಚನೆಯಲ್ಲಿ ಅಂಬೇಡ್ಕರ್ ಇಲ್ಲ. ಸಾಮಾಜಿಕ ಸಮಾನತೆ ಇಲ್ಲ. ಅಂಬೇಡ್ಕರ್ ಮತ್ತು ಬಸವ ತತ್ವಗಳು ಹೆಚ್ಚಾದಷ್ಟು ಆರ್‌ಎಸ್‌ಎಸ್ ಸಿದ್ಧಾಂತಗಳು ಕಡಿಮೆಯಾಗುತ್ತವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಪ್ರಿಯಾಂಕ್ ಖರ್ಗೆ ತರಾಟೆಗೆ ತೆಗೆದುಕೊಂಡರು. ಇದೇ ವೇಳೆ ಸಿ.ಟಿ. ರವಿ ಅವರನ್ನು ಹೈಕೋರ್ಟ್ ಬಿಡುಗಡೆಗೊಳಿಸಿರುವ ಬಗ್ಗೆ ಬಿಜೆಪಿಯವರು ಸತ್ಯಕ್ಕೆ ಜಯ, ಕಾಂಗ್ರೆಸ್ ಗೆ ಮುಖಭಂಗ ಎಂದು ಹೇಳುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಖರ್ಗೆ, ಮುಖಭಂಗ ಯಾಕಾಗುತ್ತದೆ? ಎಫ್ ಎಸ್ ಎಲ್ ವರದಿ ಬರಲಿ ಆಮೇಲೆ ನೋಡೋಣ. ಕಾನೂನು ಕೇವಲ ಬಿಜೆಪಿಯವರಿಗೆ ಮಾತ್ರ ಗೊತ್ತಿಲ್ಲ ನಮಗೂ ಗೊತ್ತಿದೆ ಅಂತ ತಿರುಗೇಟು ನೀಡಿದರು.

9.ಕಂಗೊಳಿಸ್ತಿರೋ ಸಕ್ಕರೆನಾಡು .ದಸರಾ ಮಾದರಿ ದೀಪಾಲಂಕಾರ

ಮಂಡ್ಯ ಅಂದ್ರೆ ಸಕ್ಕರೆಯ ನಾಡು, ಅಥಿತಿಗಳಿಗೆ ಅಕ್ಕರೆಯ ಬೀಡು. 30 ವರ್ಷಗಳ ಬಳಿಕ ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಆ ಮೂಲಕ ಕನ್ನಡದ ಕಂಪು ಸೂಸಲು ನಗರ ಸಜ್ಜಾಗಿದೆ. ಹೀಗಾಗಿ ತಳಿರು ತೋರಣ, ದೀಪಾಲಂಕಾರಗಳಿಂದ ಇಡೀ ನಗರವೇ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಹೌದು.., ವಿಶಾಲವಾಗಿ ಚಾಚಿಕೊಂಡಿರುವ ಹೆದ್ದಾರಿ ಇಕ್ಕೆಲದಲ್ಲಿ ಸಾಹಿತಿ- ಕವಿಗಳ ಘೋಷ ವಾಕ್ಯಗಳು, ಕನ್ನಡ ಬಾವುಟ, ಕಬ್ಬಿನ ಜಲ್ಲೆ-ಬಾಳೆ ಕಂದು- ಮಾವಿನ ಸೊಪ್ಪಿನಿಂದ ನಿರ್ಮಿಸಿದ ಹಸಿರು ತೋರಣಗಳು ಮಂಡ್ಯ ನಗರಕ್ಕೆ ನಾಡಿನ ವಿವಿಧ ಭಾಗಗಳಿಂದ ಆಗಮಿಸುತ್ತಿರುವ ಸಾಹಿತ್ಯಾಸಕ್ತರನ್ನು ಸ್ವಾಗತಿಸುತ್ತಿವೆ. ಅಲ್ಲದೇ ಮನೆ ಮನೆಗೆ ಕನ್ನಡ ಬಾವುಟಗಳನ್ನು ಹಾಕಲಾಗಿದ್ದು, ನುಡಿಜಾತ್ರೆಗೆ ಮಂಡ್ಯ ನಗರ ಹಬ್ಬದ ರೀತಿ ಸಜ್ಜಾಗಿದೆ. ನಗರದ 25 ಸಾವಿರಕ್ಕೂ ಹೆಚ್ಚು ಮನೆಗಳ ಮೇಲೆ ಕನ್ನಡ ಬಾವುಟ ರಾರಾಜಿಸುತ್ತಿದೆ. ಇನ್ನು, ದಸರಾದ ವಿಶೇಷ ದೀಪಾಲಂಕಾರದ ಮಾದರಿಯಲ್ಲಿ ಚೆಸ್ಕಾಂ ವತಿಯಿಂದ ನಗರದ ರಸ್ತೆಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಸಮ್ಮೇಳನ ನಡೆಯುವ ಮೂರು ದಿನವೂ ದೀಪಾಲಂಕಾರ ಇರಲಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್ ಎಂ.ವಿಶ್ವೇಶ್ವರಯ್ಯ ಕಲಾಕೃತಿ, ಜ್ಞಾನಪೀಠ ಪುರಸ್ಕೃತರ ಭಾವಚಿತ್ರಗಳು ದೀಪಾಲಂಕಾರದ ಪ್ರಮುಖ ಆಕರ್ಷಣೆಯಾಗಿವೆ. ಅಲ್ಲದೇ ನಗರದ ಪ್ರಮುಖ ರಸ್ತೆಗಳು ಹಾಗೂ ವೃತ್ತಗಳಲ್ಲಿ ವಿಶೇಷ ಕಲಾಕೃತಿಗಳ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಇದು ನಗರ ವಾಸಿಗಳ ಮಚ್ಚುಗೆಗೆ ಪಾತ್ರವಾಗಿದೆ.

- Advertisement -

Latest Posts

Don't Miss