1) ಶಾಮನೂರು ಶಿವಶಂಕರಪ್ಪ ನಿಧನಕ್ಕೆ ಸಂತಾಪ
ಇಂದು ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ, ಶಾಮನೂರು ಶಿವಶಂಕರಪ್ಪ ಅವರಿಗೆ ಸಂತಾಪ ಸೂಚಿಸಲಾಯಿತು. ಬಳಿಕ ಉಭಯ ಸದನಗಳ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಲಾಗಿದೆ. ಸಂತಾಪ ಸೂಚನೆ ನಿರ್ಣಯ ಮಂಡಿಸಿ ಮಾತನಾಡಿದ ಸ್ವೀಕರ್ ಯು.ಟಿ.ಖಾದರ್, ಎಷ್ಟೇ ಜಟಿಲವಾದ ಸಮಸ್ಯೆಯಿದ್ರೂ, ತಾಳ್ಮೆಯಿಂದ ನಿಭಾಯಿಸುವ ಗುಣ ಶಾಮನೂರು ಅವರಲ್ಲಿತ್ತು. ಅವರ ಜೀವನವೇ ಒಂದು ಸಂದೇಶ ಎಂದು ಬಣ್ಣಿಸಿದರು. ಬಳಿಕ ಸಿಎಂ ಸಿದ್ದರಾಮಯ್ಯ ಮಾತನಾಡಿ, ಶಾಮನೂರು ನಿಧನದಿಂದ ಜನಪರ ನಾಯಕನನ್ನು ಕಳೆದುಕೊಂಡಂತಾಗಿದೆ. ಅವರು ದೊಡ್ಡ ಕುಟುಂಬ ಹಾಗೂ ಲಕ್ಷಾಂತರ ಅಭಿಮಾನಿಗಳನ್ನು ಅಗಲಿದ್ದು, ಭಗವಂತ ಅವರೆಲ್ಲರಿಗೂ ದುಃಖ ಭರಿಸುವ ಶಕ್ತಿಯನ್ನು ನೀಡಲಿ ಹಾಗೂ ಮೃತರ ಆತ್ಮಕ್ಕೆ ಚಿರಶಾಂತಿ ನೀಡಲಿ ಪ್ರಾರ್ಥಿಸುತ್ತೇನೆ ಎಂದರು. ಬಳಿಕ ಕಲಾಪ ಮುಂದೂಡಲಾಯ್ತು.
2) ಸಿದ್ದಗಂಗಾ ಮಠದಿಂದ 100 ವಿಭೂತಿ ಗಟ್ಟಿ
ದಾವಣಗೆರೆಯಲ್ಲಿ ಹಿರಿಯ ರಾಜಕಾರಣಿ ಶಾಮನೂರು ಶಿವಶಂಕರಪ್ಪ ಅವರ ಅಂತ್ಯಕ್ರಿಯ ನೆರವೇರಿದೆ. ಬೆಂಗಳೂರಿನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಶಿವಶಂಕರಪ್ಪ ಅವರು, ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ರು. ದಾವಣಗೆರೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ನಗರದಲ್ಲಿ ಶಾಮನೂರು ಅವರ ಪಾರ್ಥಿವ ಶರೀರದ ಮೆರವಣಿಗೆ ಮಾಡಲಾಯ್ತು. ಬಳಿಕ ಕಲ್ಲೇಶ್ವರ ಮಿಲ್ನಲ್ಲಿ ಅಂತ್ಯಸಂಸ್ಕಾರ ನಡೆಸಲಾಯ್ತು. ಶಾಮನೂರು ಶಿವಶಂಕರಪ್ಪ ಅವರ ಅಂತ್ಯಕ್ರಿಯೆಗೆ, ಸಿದ್ದಗಂಗಾ ಮಠದಿಂದ ಸುಮಾರು 100 ವಿಶೇಷ ವಿಭೂತಿ ಗಟ್ಟಿಯನ್ನು ರವಾನಿಸಲಾಗಿದೆ. ಮಠಾಧ್ಯಕ್ಷ ಸಿದ್ದಲಿಂಗಾ ಸ್ವಾಮಿಜಿಗಳು ತಮ್ಮ ವಾಹನದಲ್ಲೇ ದಾವಣಗೆರೆಗೆ ತೆಗೆದುಕೊಂಡು ಹೋಗಿದ್ದಾರೆ.
3) 1 ವಾರಗಳ ಕಾಲ ಅಧಿವೇಶನ ವಿಸ್ತರಿಸಿ..
ಉತ್ತರ ಕರ್ನಾಟಕದ ಸಮಸ್ಯೆ, ಕಾನೂನು ಸುವ್ಯವಸ್ಥೆಯಲ್ಲಿ ಲೋಪ ಸೇರಿದಂತೆ, ಹಲವಾರು ವಿಷಯಗಳ ಬಗ್ಗೆ ಇನ್ನೂ ದೀರ್ಘ ಚರ್ಚೆ ಆಗಬೇಕಿದೆ. ಹೀಗಾಗಿ ಅಧಿವೇಶನವನ್ನು ಇನ್ನೂ ಒಂದು ವಾರ ವಿಸ್ತರಿಸಬೇಕೆಂದು ಪ್ರತಿಪಕ್ಷ ನಾಯಕ ಆರ್.ಅಶೋಕ್, ಸ್ಪೀಕರ್ ಯು.ಟಿ.ಖಾದರ್ಗೆ ಪತ್ರ ಬರೆದಿದ್ದಾರೆ. ಬೆಳಗಾವಿಯಲ್ಲಿ ಡಿಸೆಂಬರ್ 8ರಿಂದ 19ರವರೆಗೆ ಅಧಿವೇಶನ ನಡೆಸಲು ತೀರ್ಮಾನಿಸಲಾಗಿತ್ತು. ಕಾರಣಾಂತರಗಳಿಂದ 2 ದಿನ ಮೊಟಕುಗೊಂಡಿದೆ. ರಾಜ್ಯದ ಜ್ವಲಂತ ಸಮಸ್ಯೆಗಳ ಚರ್ಚೆಯಾಗಬೇಕಿದೆ. ಈ ಹಿನ್ನೆಲೆಯಲ್ಲಿ ಅಧಿವೇಶವನ್ನು 1 ವಾರ ವಿಸ್ತರಿಸಬೇಕೆಂದು ಅವರು ಮನವಿ ಮಾಡಿದ್ದಾರೆ. ಪಡಿತರ ಚೀಟಿಯ ವಿಚಾರದಲ್ಲಿ ಸರ್ಕಾರ ನಿರ್ಲಕ್ಷ್ಯ ತೋರಿದೆ. ಕರ್ನಾಟಕದಾದ್ಯಂತ ಪಡಿತರ ಚೀಟಿಗಾಗಿ ಸಲ್ಲಿಸಿರುವ 3.22 ಲಕ್ಷಕ್ಕೂ ಅಧಿಕ ಅರ್ಜಿಗಳು ಬಾಕಿ ಉಳಿದಿವೆ. ಅವುಗಳಲ್ಲಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳು ಮತ್ತು ಬೆಂಗಳೂರಿನಿಂದ ಅಧಿಕ ಅರ್ಜಿಗಳು ಸಲ್ಲಿಕೆಯಾಗಿವೆ. ಇಂತಹ ಗಂಭೀರ ಸಮಸ್ಯೆಗಳ ಬಗ್ಗೆ ಚರ್ಚೆಯಾಗಿ ಪರಿಹಾರ ಕಂಡುಕೊಳ್ಳಬೇಕಿದೆ. ಆದ್ದರಿಂದ ಅಧಿವೇಶನವನ್ನು ಒಂದು ವಾರ ವಿಸ್ತರಿಸುವ ಬಗ್ಗೆ ಕೂಡಲೇ ತೀರ್ಮಾನ ಕೈಗೊಳ್ಳಬೇಕು ಎಂದು ಆರ್. ಅಶೋಕ್ ಮನವಿ ಮಾಡಿದ್ದಾರೆ.
4) ಡಿ. 24ಕ್ಕೆ ಇಬ್ರಾಹಿಂ ಹೊಸ ಪಕ್ಷ ಅಸ್ತಿತ್ವಕ್ಕೆ
ಪಕ್ಷ ವಿರೋಧಿ ಚಟುವಟಿಕೆ ಕಾರಣಕ್ಕೆ ಜೆಡಿಎಸ್ನಿಂದ ಉಚ್ಛಾಟನೆಗೊಂಡಿದ್ದ ಸಿ.ಎಂ.ಇಬ್ರಾಹಿಂ, ಜನವರಿ 24ರಂದು ರಾಜ್ಯದಲ್ಲಿ ಹೊಸ ಪ್ರಾದೇಶಿಕ ಪಕ್ಷ ಅಸ್ತಿತ್ವಕ್ಕೆ ಬರಲಿದೆ ಎಂದು ಘೋಷಿಸಿದ್ದಾರೆ. ಕಲಬುರಗಿಯಲ್ಲಿ ನಡೆದ ನವ ಕರ್ನಾಟಕ ಆಂದೋಲನದ ಸಭೆ ಬಳಿಕ ಮಾತನಾಡಿದ್ದಾರೆ. ಸಮಾನ ಮನಸ್ಕರೊಂದಿಗೆ ಚರ್ಚೆ ನಡೆಸಿ ಶೀಘ್ರದಲ್ಲೇ ಪಕ್ಷದ ಚಿಹ್ನೆಯನ್ನು ನಿರ್ಧರಿಸಲಾಗುವುದು. ಹೊಸ ಪಕ್ಷವು ಬಸವಣ್ಣ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಅವರ ಆದರ್ಶಗಳನ್ನು ಅನುಸರಿಸಲಿದೆ ಎಂದು ತಿಳಿಸಿದ್ದಾರೆ.
5) ಡಿಸಿ, ಆರ್ಟಿಒ ಕಚೇರಿಗೆ ಬಾಂಬ್ ಬೆದರಿಕೆ!
ರಾಜ್ಯದೆಲ್ಲೆಡೆ ಕ್ರಿಸ್ಮಸ್ ಹಾಗೂ ಹೊಸ ವರ್ಷದ ಆಚರಣೆಗೆ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗ್ತಿದೆ. ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು, ಪೊಲೀಸ್ ಇಲಾಖೆ ಕೂಡ ಫುಲ್ ಅಲರ್ಟ್ ಆಗಿದೆ. ಇದರ ನಡುವೆ ಬಾಂಬ್ ಬೆದರಿಕೆ ಸಂದೇಶಗಳು ಭಯ ಹುಟ್ಟಿಸುವಂತೆ ಮಾಡಿವೆ. ಒಂದೇ ದಿನ ಮಂಗಳೂರು ಹಾಗೂ ಗದಗ ಜಿಲ್ಲೆಗಳಿಗೆ ಬಾಂಬ್ ಬೆದರಿಕೆ ಇಮೇಲ್ ಬಂದಿದೆ.
ಗದಗ ಜಿಲ್ಲಾಡಳಿತದ ಕಚೇರಿಗೂ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು, ಐದು ಬಾಂಬ್ ಇಟ್ಟಿರುವುದಾಗಿ ಹೇಳಲಾಗಿದೆ. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಬಾಂಬ್ ಸ್ಕ್ವಾಡ್, ಶ್ವಾನ ದಳ, ASC ಟೀಮ್, ಜಿಲ್ಲಾಡಳಿತ ಭವನದ ಮೂಲೆ ಮೂಲೆಯಲ್ಲೂ ಶೋಧಿಸಿದ್ದಾರೆ. ಸುಮಾರು 2 ಗಂಟೆಗಳ ಕಾಲ ಪರಿಶೀಲನೆ ಮಾಡಲಾಗಿದೆ. ಇನ್ನು, ಮಂಗಳೂರಿನ ಆರ್.ಟಿ.ಓ ಕಚೇರಿಯ ಅಧಿಕೃತ ಇಮೇಲ್ ಖಾತೆಗೆ ಬಾಂಬ್ ಬೆದರಿಕೆ ಸಂದೇಶ ಬಂದಿದೆ.
6) ಪರಪ್ಪನ ಅಗ್ರಹಾರದಲ್ಲಿ DGP ಅಲೋಕ್ ರೌಂಡ್ಸ್
ಬಂದಿಖಾನೆ ಡಿಜಿಪಿಯಾಗಿ ನೇಮಕದ ಬಳಿಕ ಮೊದಲ ಬಾರಿಗೆ ಪರಪ್ಪನ ಅಗ್ರಹಾರ ಜೈಲಿಗೆ ಡಿಜಿಪಿ ಅಲೋಕ್ ಕುಮಾರ್ ಭೇಟಿ ನೀಡಿದ್ದಾರೆ. ಜೈಲಿನ ಚೆಕ್ ಪೋಸ್ಟ್ ಬಳಿ ಸಿಬ್ಬಂದಿಯಿಂದ ಮಾಹಿತಿ ಪಡೆದ ಡಿಜಿಪಿ, ಅಧಿಕಾರಿಗಳ ಜೊತೆ ಸೆಂಟ್ರಲ್ ಜೈಲಿನ ಸುತ್ತಮುತ್ತ ಓಡಾಡಿ ಪರಿಶೀಲನೆ ನಡೆಸಿದ್ದಾರೆ. ಜೈಲಿನ ಪ್ರತಿ ಬ್ಯಾರಕ್ ವಿಸಿಟ್ ಮಾಡಿರುವ ಅಲೋಕ್ ಕುಮಾರ್, ಕೈದಿಗಳ ಬಳಿಯೂ ಮಾಹಿತಿ ಕಲೆ ಹಾಕಿದ್ದಾರೆ. ಊಟ, ತಿಂಡಿ, ಶೌಚಾಲಯ ವ್ಯವಸ್ಥೆ ಬಗ್ಗೆ ಕೈದಿಗಳಿಗೆ ಡಿಜಿಪಿ ಪ್ರಶ್ನೆ ಕೇಳಿದ್ದು, ಮೊಬೈಲ್ ಬಳಕೆ ಮಾಡುತ್ತಿದ್ರೆ ಸಿಬ್ಬಂದಿ ವಶಕ್ಕೆ ನೀಡುವಂತೆ ತಾಕೀತು ಮಾಡಿದ್ದಾರೆ. ಕಳ್ಳಾಟ ಆಡಿದ್ರೆ ಕಠಿಣ ಕ್ರಮ ಎದುರಿಸಲು ಸಜ್ಜಾಗಿ ಎಂದು ಎಚ್ಚರಿಕೆ ನೀಡಿದ್ದಾರೆ. ಗಾಂಜಾ, ಬಿಡಿ ಸಿಗರೇಟ್ ಇನ್ಮೇಲೆ ಸಿಗಲ್ಲ. ಎಲ್ಲಾ ಬಂದ್ ಆಗಬೇಕು ಎಂದು ಅಧಿಕಾರಿಗಳಿಗೂ ಸೂಚನೆ ನೀಡಿದ್ದಾರೆ. ಇನ್ನು, ಅಡುಗೆ ಮನೆ, ಆಸ್ಪತ್ರೆ, ಬೇಕರಿಗೂ ಭೇಟಿ ನೀಡಿ ಪರಿಶೀಲಿಸಿದ್ದಾರೆ. ವೈದ್ಯರು ಚಿಕಿತ್ಸೆ ಮಾತ್ರ ಕೊಡಬೇಕು. ಮನೆಯ ಸಿಬ್ಬಂದಿಯ ಅಡಿಷನಲ್ ಆ್ಯಕ್ಟಿವಿಟಿ ಬಂದ್ ಆಗಬೇಕು. ಅದನ್ನು ಬಿಟ್ಟು ಮೊಬೈಲ್, ಗಾಂಜಾ ಸಾಗಾಣೆ ಮಾಡಿದ್ರೆ ಕ್ರಮ ಕೈಗೊಳ್ಳಲಾಗುತ್ತೆ ಎಂದು ವಾರ್ನ್ ಮಾಡಿದ್ದಾರೆ.
7) ಕೈದಿಗಳ ಬಳಿ ಮೊಬೈಲ್ ಬಂದಿದ್ದೇಗೆ..?
ಇನ್ನು, ಉತ್ತರ ಕನ್ನಡ ಜಿಲ್ಲೆಯ ಕಾರವಾರ ಜೈಲಿನಲ್ಲಿ ಅಕ್ರಮವಾಗಿ ಕೈದಿಗಳು ಮೊಬೈಲ್ ಇಟ್ಟುಕೊಂಡಿರುವುದು ತಪಾಸಣೆ ವೇಳೆ ಬೆಳಕಿಗೆ ಬಂದಿದೆ. ಕಾರವಾರ ಜಿಲ್ಲಾ ಕಾರಾಗೃಹದಲ್ಲಿ ಮತ್ತಷ್ಟು ಮೊಬೈಲ್ಗಳು ಕೈದಿಗಳ ಬಳಿ ಸಿಕ್ಕಿವೆ. ಪ್ರಭಾರ ಜೈಲು ಅಧೀಕ್ಷಕ ಮಲ್ಲಿಕಾರ್ಜುನ ಕೊಣ್ಣೂರು ಅವರು, ಜೈಲಿನಲ್ಲಿ ತಪಾಸಣೆ ನಡೆಸಿದಾಗ, 7 ಮೊಬೈಲ್ ಸೇರಿ ಇನ್ನೂ ಹಲವು ನಿಷೇಧಿತ ವಸ್ತುಗಳು ಕಂಡುಬಂದಿವೆ. ಜೈಲಿನಲ್ಲಿ ಒಂದೇ ವಾರದಲ್ಲಿ ಎರಡು ಬಾರಿ ಗಲಾಟೆ ನಡೆದಿತ್ತು. ಮಾದಕ ಪದಾರ್ಥ ಕೊಡಲಿಲ್ಲ ಎಂಬ ಕಾರಣಕ್ಕೆ ಗಲಾಟೆ ಮಾಡಿದ್ದರು. ಜೈಲರ್ ಹಾಗೂ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದರು. ಕಂಪ್ಯೂಟರ್, ಟಿವಿ ಒಡೆದು ಹಾಕಿದ್ದರು. ಈ ಹಿನ್ನೆಲೆ ಜೈಲು ಅಧಿಕಾರಿಗಳು ಬ್ಯಾರಕ್ಗಳನ್ನು ಕೂಲಂಕುಶವಾಗಿ ಪರಿಶೀಲಿಸಿದಾಗ ನಿಷೇಧಿತ ವಸ್ತುಗಳು ಪತ್ತೆಯಾಗಿವೆ. ಘಟನೆ ಸಂಬಂಧ ಶಹರ ಠಾಣೆಯಲ್ಲಿ ಜೈಲರ್ ದೂರು ದಾಖಲಿಸಿದ್ದಾರೆ.
8) ವಿದ್ಯಾರ್ಥಿಗಳ ಸಂಘದ ಮನವಿಗೆ “ಹೈ” ಸಿಗ್ನಲ್
ರಾಜ್ಯದಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಧಾರವಾಡದಲ್ಲಿ ಬೃಹತ್ ಪ್ರತಿಭಟನೆ ನಡೆದಿತ್ತು. ಸಾವಿರಾರು ಮಂದಿ ಧರಣಿಗೆ ಅವಕಾಶ ನೀಡದ ಪೊಲೀಸರ ಕ್ರಮ ಪ್ರಶ್ನಿಸಿ, ಅಖಿಲ ಕರ್ನಾಟಕ ವಿದ್ಯಾರ್ಥಿಗಳ ಸಂಘ, ಹೈಕೋರ್ಟ್ ಪೀಠಕ್ಕೆ ಅರ್ಜಿ ಸಲ್ಲಿಸಿದ್ರು. ಇದೀಗ ಅರ್ಜಿ ಇತ್ಯರ್ಥಗೊಂಡಿದ್ದು, ಮನವಿ ಪರಿಗಣಿಸಲು ಹೈಕೋರ್ಟ್ ಪೀಠ ಸೂಚಿಸಿದೆ. ಸಿಎಂ ಭೇಟಿಗೆ ಅನುಮತಿ ಕೊಡಿಸುವಂತೆ, ಹೈಕೋರ್ಟ್ ಮೊರೆ ಹೋಗಿದ್ದ ಅಖಿಲ ಕರ್ನಾಟಕ ವಿದ್ಯಾರ್ಥಿಗಳ ಸಂಘಕ್ಕೆ, ಕೊನೆಗೂ ಗುಡ್ನ್ಯೂಸ್ ಸಿಕ್ಕಿದೆ. ಸಿಎಂ ಭೇಟಿಗೆ ಅವಕಾಶ ಕೊಡಿಸುವಂತೆ ನ್ಯಾ.ನಾಗಪ್ರಸನ್ನ ಅವರ ಪೀಠ ನಿರ್ದೇಶನ ನೀಡಿದ್ದು, ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಸಂಪರ್ಕಿಸಲು ಅರ್ಜಿದಾರರಿಗೆ ಸೂಚನೆ ನೀಡಿದೆ.
9) ಗ್ರಾಮೀಣ ವಿದ್ಯಾರ್ಥಿಗಳಿಗೆ ಉಚಿತ CET ತರಬೇತಿ
ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಕನಸನ್ನು ನನಸು ಮಾಡಲೆಂದೇ, ಎಸ್.ಬಿ. ಚಾರಿಟೇಬಲ್ ಟ್ರಸ್ಟ್, ಉಚಿತ ಸಿಇಟಿ ಹಾಗೂ ನೀಟ್ ತರಬೇತಿ ಕೈಗೊಂಡಿದೆ. ಕಳೆದ ಹಲವಾರು ವರ್ಷಗಳಿಂದ ತರಬೇತಿ ನೀಡುತ್ತಿದ್ದು, ಬಡ ಮಕ್ಕಳು ತಮ್ಮ ಭವಿಷ್ಯ ರೂಪಿಸಿಕೊಂಡಿದ್ದಾರೆ. ಮತ್ತು ಉನ್ನತ ವ್ಯಾಸಂಗಕ್ಕೆ ಅನುಕೂಲವಾಗಿದೆ ಎಂದು ಶಾಸಕ ಸುರೇಶ್ ಬಾಬು ಹೇಳಿದ್ದಾರೆ.
ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯ, ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ರು. ಗ್ರಾಮೀಣ ಭಾಗದ ಮಕ್ಕಳಿಗೆ ಸಿಇಟಿ, ನೀಟ್ ತರಬೇತಿಗಳನ್ನ,
ಅತ್ಯುತ್ತಮ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಕೊಡಿಸಲಾಗುತ್ತಿದೆ. ಪಠ್ಯ ಪುಸ್ತಕ, ಪೂರಕ ಸಾಮಗ್ರಿಗಳನ್ನೂ ಪೂರೈಸಲಾಗುತ್ತಿದೆ ಎಂದು ಹೇಳಿದ್ರು.
10) ಉತ್ತರ ಕರ್ನಾಟಕದ 9 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್
ರಾಜ್ಯದಲ್ಲಿ ತಾಪಮಾನದಲ್ಲಿ ಭಾರೀ ಏರಿಳಿತವಾಗ್ತಿದ್ದು, ಮಳೆ ಮುಗಿದ ಬಳಿಕ ಚಳಿಯ ಆರ್ಭಟ ಹೆಚ್ಚಾಗಿದೆ. ಉತ್ತರ ಕರ್ನಾಟಕದ 9 ಜಿಲ್ಲೆಗೆ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಕಲಬುರಗಿ, ಬೀದರ್, ವಿಜಯಪುರ, ಬೆಳಗಾವಿ, ಬಾಗಲಕೋಟೆ, ಹಾವೇರಿ, ಯಾದಗಿರಿ, ಧಾರವಾಡ, ಕೊಪ್ಪಳ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳು ಕಾಲ ಶೀತಗಾಳಿ ಬೀಸಲಿದೆ. ಜನರು ಆದಷ್ಟು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ. ವಿಜಯಪುರ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಅತಿ ಕಡಿಮೆ ತಾಪಮಾನ ದಾಖಲಾಗಿದೆ. ಕಳೆದ 10 ವರ್ಷಗಳಲ್ಲಿ ತಾಪಮಾನ ಕನಿಷ್ಠ ಮಟ್ಟ ತಲುಪಿದೆ. 2023ರಲ್ಲಿ ವಿಜಯಪುರದಲ್ಲಿ 6.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಈಗ 7 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, 6ಕ್ಕೆ ಕುಸಿಯುವ ಸಾಧ್ಯತೆ ಇದೆಯಂತೆ.




