1) ಅಮೆರಿಕಾ ಜೊತೆ ಕೀನ್ಯಾ ಆರೋಗ್ಯ ಒಪ್ಪಂದ
ಕೀನ್ಯಾ ಮತ್ತು ಅಮೆರಿಕಾ ಸರ್ಕಾರಗಳು ಐತಿಹಾಸಿಕ 5 ವರ್ಷದ ಆರೋಗ್ಯ ಒಪ್ಪಂದಕ್ಕೆ ಸಹಿ ಹಾಕಿವೆ. ಡೊನಾಲ್ಡ್ ಟ್ರಂಪ್ ಆಡಳಿತವು ವಿದೇಶಿ ನೆರವು ಕಾರ್ಯಕ್ರಮಗಳನ್ನು ಮರುಪರಿಶೀಲಿಸಿದ ಬಳಿಕ ಹೊರಬಂದ ಮೊದಲ ದೊಡ್ಡ ಒಪ್ಪಂದ ಇದಾಗಿದೆ. ಒಟ್ಟು $2.5 ಬಿಲ್ಲಿಯನ್ ಮೌಲ್ಯದ ಈ ಒಪ್ಪಂದವು ಕೀನ್ಯಾದಲ್ಲಿ ಸಾಂಕ್ರಾಮಿಕ ರೋಗಗಳ ವಿರುದ್ಧ ಹೋರಾಡುವ ಗುರಿಯನ್ನು ಹೊಂದಿದ್ದು, ಮುಂದಿನ ದಿನಗಳಲ್ಲಿ ಇತರ ಆಫ್ರಿಕಾ ರಾಷ್ಟ್ರಗಳಲ್ಲಿಯೂ ಇದೇ ಮಾದರಿಯ ಒಪ್ಪಂದ ಮಾಡುವ ನಿರೀಕ್ಷೆಯಿದೆ.
ಸರ್ಕಾರ–ಸರ್ಕಾರ ಒಪ್ಪಂದವಾಗಿರುವುದರಿಂದ ಪಾರದರ್ಶಕತೆ ಮತ್ತು ಹೊಣೆಗಾರಿಕೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಆದರೆ ಈ ಒಪ್ಪಂದದಡಿ ಅಮೆರಿಕಾ “ನೈಜ-ಸಮಯದ ಆರೋಗ್ಯ ಡೇಟಾ”ಗೆ ಪ್ರವೇಶ ಪಡೆಯಲಿದೆ ಎಂಬ ಆತಂಕ ಕೀನ್ಯಾದಲ್ಲಿ ವ್ಯಕ್ತವಾಗಿದೆ. ಆರೋಗ್ಯ ಸಚಿವ ಅಡೆನ್ ಡುಯಾಲೆ ಈ ಭಯಗಳನ್ನು ತಳ್ಳಿ ಹಾಕುತ್ತಾ, “ಗುರುತಿಸಲಾಗದ, ಒಟ್ಟುಗೂಡಿದ ಡೇಟಾ ಮಾತ್ರ ಹಂಚಿಕೊಳ್ಳಲಾಗುತ್ತದೆ. ವೈಯಕ್ತಿಕ ರೋಗಿಯ ಮಾಹಿತಿಗೆ ಪ್ರವೇಶ ಇಲ್ಲ” ಎಂದು ಸ್ಪಷ್ಟಪಡಿಸಿದರು.
ಅಮೆರಿಕಾ ಅಧ್ಯಕ್ಷ ಟ್ರಂಪ್ ಜನವರಿಯಲ್ಲಿ ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ವಿದೇಶಿ ನೆರವರ್ತನೆಗಳನ್ನು ತಾತ್ಕಾಲಿಕ ನಿಲ್ಲಿಸಿದ್ದರು. ನಂತರ USAID ಖರ್ಚು ಕಡಿತ ಮತ್ತು ಸಹಾಯಧನ ಕಡಿತದಿಂದ ಅನೇಕ ಬಡ ರಾಷ್ಟ್ರಗಳಲ್ಲಿ ಅವಶ್ಯಕ ಔಷಧಿಗಳ ಲಭ್ಯತೆ ತೀವ್ರವಾಗಿ ಕುಸಿತ ಕಂಡಿದೆ. ಸೆಪ್ಟೆಂಬರ್‌ನಲ್ಲಿ ಟ್ರಂಪ್ ಆಡಳಿತ “ಅಮೆರಿಕಾ ಫಸ್ಟ್ ಗ್ಲೋಬಲ್ ಹೆಲ್ತ್ ಸ್ಟ್ರಾಟಜಿ” ಅನ್ನು ಪರಿಚಯಿಸಿದ್ದು, ಹೊಸ ಸಹಾಯ ನೀತಿಗಳು US ಹಿತಾಸಕ್ತಿಗಳನ್ನು ಮುನ್ನಡೆಸುವಂತೆ ವಿನ್ಯಾಸಗೊಳಿಸಲಾಗಿದೆ.
2) ರಕ್ಷಣಾ ಪಡೆಗಳ ಮುಖ್ಯಸ್ಥರಾಗಿ ಮುನಿರ್ ನೇಮಕ
ಪಾಕಿಸ್ತಾನದ ಮಿಲಿಟರಿ ನಾಯಕತ್ವದಲ್ಲಿ ಮಹತ್ವದ ಬದಲಾವಣೆ ನಡೆದಿದೆ. ಶೆಹಬಾಜ್ ಷರೀಫ್ ಸರ್ಕಾರವು ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರನ್ನು ದೇಶದ ಮೊದಲ ರಕ್ಷಣಾ ಪಡೆಗಳ ಮುಖ್ಯಸ್ಥ ಆಗಿ ನೇಮಕ ಮಾಡಲು ಅನುಮೋದನೆ ನೀಡಿದೆ.
ಈ ವರ್ಷದ ಆರಂಭದಲ್ಲಿ ಫೀಲ್ಡ್ ಮಾರ್ಷಲ್ ಹುದ್ದೆಗೆ ಬಡ್ತಿ ಪಡೆದಿದ್ದ ಮುನೀರ್, ಈಗ ಸೇನಾ ಮುಖ್ಯಸ್ಥ ಮತ್ತು CDF ಎಂಬ ಎರಡು ಅತ್ಯುನ್ನತ ಹುದ್ದೆಗಳನ್ನು ಏಕಕಾಲದಲ್ಲಿ ನಿರ್ವಹಿಸುವ ಮೊದಲ ಅಧಿಕಾರಿ ಆಗಿ ಇತಿಹಾಸ ನಿರ್ಮಿಸಿದ್ದಾರೆ ಎಂದು ರಾಷ್ಟ್ರಪತಿ ಕಚೇರಿ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಪ್ರಧಾನಿ ಶೆಹಬಾಜ್ ಷರೀಫ್ ಕಳುಹಿಸಿದ ಶಿಫಾರಸು ಬಳಿಕ, ರಾಷ್ಟ್ರಪತಿ ಆಸಿಫ್ ಅಲಿ ಜರ್ದಾರಿ ಅವರು ಐದು ವರ್ಷಗಳ ಅವಧಿಗೆ ಮುನೀರ್ ಅವರ ನೇಮಕಕ್ಕೆ ಅಂತಿಮ ಒಪ್ಪಿಗೆ ನೀಡಿದ್ದಾರೆ.
ಫೀಲ್ಡ್ ಮಾರ್ಷಲ್ ಸೈಯದ್ ಅಸಿಮ್ ಮುನೀರ್ ಅವರನ್ನು ಐದು ವರ್ಷದ ಅವಧಿಗೆ ರಕ್ಷಣಾ ಪಡೆಗಳ ಮುಖ್ಯಸ್ಥರಾಗಿ ನೇಮಕ ಮಾಡಲು ಪ್ರಧಾನಿ ಸಲ್ಲಿಸಿದ ಸಾರಾಂಶವನ್ನು ರಾಷ್ಟ್ರಪತಿ ಅನುಮೋದಿಸಿದ್ದಾರೆ. ಸರ್ಕಾರದ ಮೂಲಗಳ ಮಾಹಿತಿ ಪ್ರಕಾರ, ಈ ಹೊಸ ಹುದ್ದೆಯ ಸೃಷ್ಟಿ ಪಾಕಿಸ್ತಾನದ ಸೈನಿಕ ರಚನೆಗೆ ಮಹತ್ವದ ಪುನರ್ ವಿನ್ಯಾಸವಾಗಿದ್ದು, ರಕ್ಷಣಾ ವ್ಯವಸ್ಥೆಯ ಅತ್ಯುನ್ನತ ಮಟ್ಟದಲ್ಲಿ ಕಮಾಂಡ್ ಏಕೀಕರಣವನ್ನು ಬಲಪಡಿಸುತ್ತದೆ.
ಇದೇ ವೇಳೆ, ವಾಯುಪಡೆಯ ಮುಖ್ಯಸ್ಥ ಎರ್ ಚೀಫ್ ಮಾರ್ಷಲ್ ಜಹೀರ್ ಅಹ್ಮದ್ ಬಾಬರ್ ಸಿಧು ಅವರ ಸೇವಾವಧಿಯನ್ನು ಇನ್ನೂ ಎರಡು ವರ್ಷಗಳವರೆಗೆ ವಿಸ್ತರಿಸಲು ಪ್ರಧಾನಿಯವರು ಅನುಮೋದನೆ ನೀಡಿದ್ದಾರೆ. ಅವರ ಪ್ರಸ್ತುತ ಐದು ವರ್ಷದ ಅವಧಿ ಮಾರ್ಚ್ 2026ರಲ್ಲಿ ಮುಗಿದ ನಂತರ ಈ ವಿಸ್ತರಣೆ ಜಾರಿಗೆ ಬರಲಿದೆ.
3) ಇಸ್ರೇಲ್‌ಗೆ ಹೊಸ ಮುಖ್ಯಸ್ಥರ ನೇಮಕ!
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಮೊಸಾದ್‌ನ ಮುಂದಿನ ಮುಖ್ಯಸ್ಥರಾಗಿ ಮೇಜರ್ ಜನರಲ್ ರೋಮನ್ ಗೋಫ್ಮನ್ ಅವರನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಪ್ರಸ್ತುತ ಮಿಲಿಟರಿ ಕಾರ್ಯದರ್ಶಿಯಾಗಿರುವ ಗೋಫ್ಮನ್, ಡೇವಿಡ್ ಬಾರ್ನಿಯಾ ಅವರ ಅವಧಿ ಜೂನ್ 2026ರಲ್ಲಿ ಮುಗಿದ ನಂತರ ಅಧಿಕಾರ ವಹಿಸಲಿದ್ದಾರೆ.
1976ರಲ್ಲಿ ಬೆಲಾರಸ್‌ನಲ್ಲಿ ಜನಿಸಿದ ಗೋಫ್ಮನ್, 14 ನೇ ವಯಸ್ಸಿನಲ್ಲಿ ಇಸ್ರೇಲ್‌ಗೆ ವಲಸೆ ಹೋದರು. 1995ರಲ್ಲಿ ಸೇನೆಗೆ ಸೇರಿ ದೀರ್ಘ ಸೈನಿಕ ಸೇವೆ ಸಲ್ಲಿಸಿದ ಅವರು, ಗಾಜಾ ಯುದ್ಧದ ವೇಳೆ ಸ್ಡೆರೋಟ್‌ನಲ್ಲಿ ನಡೆದ ಉಗ್ರರ ಘರ್ಷಣೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು.
2024ರಲ್ಲಿ ನೆತನ್ಯಾಹು ಅವರ ಕಚೇರಿಗೆ ಮಿಲಿಟರಿ ಕಾರ್ಯದರ್ಶಿಯಾಗಿ ಸೇರಿದ ನಂತರ, ಅವರ ರಾಜಕೀಯ ಹಾಗೂ ಭದ್ರತಾ ವಲಯದ ಪ್ರಭಾವ ಹೆಚ್ಚಾಯಿತು. ಗುಪ್ತಚರ ಸಂಸ್ಥೆಯಲ್ಲಿ ನೇರ ಅನುಭವವಿಲ್ಲದ ಕಾರಣ ಟೀಕೆಗಳು ಇದ್ದರೂ, ನೆತನ್ಯಾಹು ಅವರ ಕಚೇರಿ ಗೋಫ್ಮನ್ ಅವರನ್ನು “ಅತ್ಯಂತ ಅರ್ಹ ಮತ್ತು ಭರವಸೆಯ ಅಧಿಕಾರಿ” ಎಂದು ಸಮರ್ಥಿಸಿದೆ.
ಮೋಸಾದ್ ಅಕ್ಟೋಬರ್ 7ರ ಗುಪ್ತಚರ ವೈಫಲ್ಯಕ್ಕೆ ನೇರ ಜವಾಬ್ದಾರಿಯಲ್ಲದಿದ್ದರೂ, 2024ರಲ್ಲಿ ಹಿಜ್ಬೊಲ್ಲಾದ ಪ್ರಮುಖ ನಾಯಕರ ವಿರುದ್ಧದ ದಾಳಿಗಳಲ್ಲೂ, ಇಸ್ರೇಲ್–ಇರಾನ್ 12 ದಿನಗಳ ಘರ್ಷಣೆಯಲ್ಲೂ ಮಹತ್ತರ ಪಾತ್ರವಹಿಸಿತ್ತು. ಹೆಸರು ಪ್ರಕಟವಾದ ಬಳಿಕ, ಗೋಫ್ಮನ್ ಅವರ ನಾಯಕತ್ವದಲ್ಲಿ ಮೊಸಾದ್ ಯಾವ ರೀತಿಯ ತಂತ್ರಜ್ಞಾನ ಮತ್ತು ಭದ್ರತಾ ಬದಲಾವಣೆಗಳನ್ನು ತರುವುದು ಎಂಬ ಕುತೂಹಲ ಇಸ್ರೇಲ್ ರಾಜಕೀಯ ಹಾಗೂ ಭದ್ರತಾ ವಲಯದಲ್ಲಿ ಹೆಚ್ಚಾಗಿದೆ.
4) ಹಮಾಸ್ ವಿರೋಧಿ ನಾಯಕನ ಹ*ತ್ಯೆ
ಗಾಜಾದಲ್ಲಿ ಹಮಾಸ್ ವಿರೋಧಿ ಪ್ಯಾಲೇಸ್ತಿನಿಯನ್ ಸೇನಾ ನಾಯಕ ಯಾಸರ್ ಅಬು ಶಬಾಬ್ ಕೊಲ್ಲಲ್ಪಟ್ಟಿದ್ದಾರೆ. ಅವರು ರಾಫಾ ಸಮೀಪ ಕಾರ್ಯನಿರ್ವಹಿಸುತ್ತಿದ್ದ ಜನಪ್ರಿಯ ಪಡೆಗಳ ಮುಖ್ಯಸ್ಥರಾಗಿದ್ದು, ಹಮಾಸ್‌ಗೆ ಎದುರಾಳಿಯಾಗಿದ್ದ ಪ್ರಮುಖ ಮಿಲಿಟಿಯಾ ನಾಯಕರಲ್ಲಿ ಒಬ್ಬರು.
ಅಬು ಶಬಾಬ್ ಅಬು ಸೆನಿಮಾ ಕುಟುಂಬದ ಕಲಹವನ್ನು ಪರಿಹರಿಸಲು ಹೋದಾಗ ಗುಂಡೇಟಿಗೆ ಗುರಿಯಾದರೆಂದು ಅವರ ಗುಂಪು ಹೇಳಿದೆ. ಹಮಾಸ್ ಅವರನ್ನು “ಇಸ್ರೇಲ್‌ಗೆ ಸಹಕರಿಸಿದ ದ್ರೋಹಿ” ಎಂದು ಕೊಂದಿದ್ದಾರೆ ಎಂಬ ವರದಿಗಳನ್ನು ಅವರು ತಳ್ಳಿಹಾಕಿದರೂ, ತಾರಾಬಿನ್ ಬುಡಕಟ್ಟು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಅಬು ಶಬಾಬ್ “ಪ್ರತಿರೋಧದ ಕೈಯಲ್ಲಿ ಮೃತಪಟ್ಟಿದ್ದಾರೆ ಎಂದು ನೇರವಾಗಿ ಆರೋಪಿಸಲಾಗಿದೆ. ಕೆಲವು ಮೂಲಗಳು ಇದನ್ನು ಗಾಜಾದ ಒಳಗಿನ ಶಕ್ತಿಪೈಪೋಟಿಯಾಗಿಯೂ ನೋಡುತ್ತಿವೆ.
ಗಂಭೀರವಾಗಿ ಗಾಯಗೊಂಡ ಅವರನ್ನು ಇಸ್ರೇಲಿನ ಬೀರ್‌ಶೆಬಾದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂಬ ವರದಿ ಬಂದಿದ್ದರೂ, ಆಸ್ಪತ್ರೆ ತನ್ನ ಆರೈಕೆಯಲ್ಲಿ ಅವರು ಮೃತಪಟ್ಟಿಲ್ಲವೆಂದು ಸ್ಪಷ್ಟಪಡಿಸಿದೆ. ಜನಪ್ರಿಯ ಪಡೆಗಳನ್ನು ಗಾಜಾದಲ್ಲಿ ಮಾನವೀಯ ನೆರವು ಟ್ರಕ್‌ಗಳ ಲೂಟಿಗೆ ಮತ್ತು ಕೆಲ ಸದಸ್ಯರಿಗೆ ಐಸಿಸ್ ಸಂಪರ್ಕಗಳಿದ್ದವು ಎಂಬ ವಿವಾದಕ್ಕೂ ಒಳಗಾಗಿತ್ತು, ಆದರೆ ಮಿಲಿಟಿಯಾ ಎಲ್ಲಾ ಆರೋಪಗಳನ್ನು ನಿರಾಕರಿಸಿದೆ.
ಇಸ್ರೇಲ್–ಹಮಾಸ್ ಕದನ ವಿರಾಮದ ನಡುವೆ, ಅಬು ಶಬಾಬ್ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಗಾಜಾ ಶಾಂತಿ ಯೋಜನೆಯ ಎರಡನೇ ಹಂತದಲ್ಲಿ ಸ್ಥಾನಕ್ಕಾಗಿ ಜಗಳವಾಡುತ್ತಿದ್ದ ಹಮಾಸ್ ವಿರೋಧಿ ನಾಯಕರಲ್ಲೊಬ್ಬರಾಗಿದ್ದರು. ಯೋಜನೆಯಲ್ಲಿ ಮಧ್ಯಂತರ ಆಡಳಿತ, ಅಂತರಾಷ್ಟ್ರೀಯ ಪಡೆ ನಿಯೋಜನೆ ಮತ್ತು ಹಮಾಸ್‌ನ ನಿರಸ್ತ್ರೀಕರಣ ಸೇರಿವೆ. 2023ರ ಅಕ್ಟೋಬರ್ 7ರಿಂದ ಪ್ರಾರಂಭವಾದ ಯುದ್ಧದಲ್ಲಿ ಗಾಜಾದಲ್ಲಿ ಈಗಾಗಲೇ 70,120 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ಹಮಾಸ್ ಆರೋಗ್ಯ ಇಲಾಖೆ ತಿಳಿಸಿದೆ.
5) ಸ್ಯಾಮ್‌ಸಂಗ್, ಎಸ್‌ಕೆ ಗ್ರೂಪ್ ಜೊತೆ ಸ್ಟಾರ್‌ಗೇಟ್
OpenAI ಯ ಮಹತ್ವಾಕಾಂಕ್ಷೆಯ ಸ್ಟಾರ್‌ಗೇಟ್ AI ಪ್ರಾಜೆಕ್ಟ್ ಈಗ ದಕ್ಷಿಣ ಕೊರಿಯಾದಲ್ಲಿ ವೇಗವಾಗಿ ಮುಂದುವರಿಯುತ್ತಿದೆ. Samsung ಮತ್ತು SK Group OpenAI ಜೊತೆ ಕೈಜೋಡಿಸಿ, ಭವಿಷ್ಯದ AI ಮೂಲಸೌಕರ್ಯ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ ಎಂದು ’Pulse Korea’ ವರದಿ ಮಾಡಿದೆ.
ಸ್ಟಾರ್‌ಗೇಟ್ ಉಪಕ್ರಮದ ಗುರಿ — ಮುಂದಿನ ಪೀಳಿಗೆಯ ಭಾರೀ AI ಡೇಟಾ ಸೆಂಟರ್‌ಗಳನ್ನು ನಿರ್ಮಿಸುವುದು. OpenAI ಈಗ ಕೊರಿಯಾದಲ್ಲಿ ಎರಡು ಸ್ಟಾರ್‌ಗೇಟ್ ಪ್ರಾಜೆಕ್ಟ್‌ಗಳನ್ನು ನಡೆಸುತ್ತಿದೆ ಎಂದು OpenAI ಕೊರಿಯಾ GM ಕಿಮ್ ಕ್ಯೋಂಗ್-ಹೂನ್ ಹೇಳಿದ್ದಾರೆ. ಈ ವಾರ ಸ್ಟಾರ್‌ಗೇಟ್ ತಂಡ ಸಿಯೋಲ್‌ಗೆ ಭೇಟಿ ನೀಡಿ Samsung ಮತ್ತು SK ಅಧಿಕಾರಿಗಳನ್ನು ಭೇಟಿ ಮಾಡಿದೆ.
ಅಮೆರಿಕಾದಲ್ಲಿ USD 500 ಶತಕೋಟಿ ಮೌಲ್ಯದ 10-ಗಿಗಾವಾಟ್ AI ಡೇಟಾ ಸೆಂಟರ್ ನಿರ್ಮಾಣ ಚರ್ಚೆಯಲ್ಲಿದ್ದು, ಇಂತಹದೇ ಕೇಂದ್ರಗಳು ದಕ್ಷಿಣ ಕೊರಿಯಾದಲ್ಲೂ ನಿರ್ಮಾಣವಾಗಲಿವೆ. Samsung Electronics ಸ್ಟಾರ್‌ಗೇಟ್‌ಗೆ ಅಗತ್ಯವಿರುವ ಮೆಮೊರಿ ಚಿಪ್‌ಗಳನ್ನು, ಮತ್ತು Samsung SDS ಡೇಟಾ ಸೆಂಟರ್‌ಗಳ ವಿನ್ಯಾಸ–ನಿರ್ಮಾಣ–ನಿರ್ವಹಣೆಯನ್ನು ನೋಡಿಕೊಳ್ಳಲಿದೆ.
SK Group ಭಾಗದಲ್ಲಿ, SK Hynix OpenAI ಗೆ HBM ಮೆಮೊರಿ ಪೂರೈಸಲು ಒಪ್ಪಂದ ಮಾಡಿಕೊಂಡಿದೆ. ಜೊತೆಗೆ SK Telecom ಕೊರಿಯಾದ ನೈಋತ್ಯದಲ್ಲಿ ವಿಶೇಷ OpenAI ಡೇಟಾ ಸೆಂಟರ್ ನಿರ್ಮಿಸಲು ಯೋಜನೆ ಆರಂಭಿಸಿದೆ. ವಿಶ್ವದಾದ್ಯಂತ 10 ಲಕ್ಷಕ್ಕೂ ಹೆಚ್ಚು ವ್ಯವಹಾರಗಳು OpenAI ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿವೆ. ಇದು ಕೊರಿಯಾದ AI ಪರಿವರ್ತನೆಗೂ ಮಹತ್ತರ ಎಂದು ಕಿಮ್ ಹೇಳಿದ್ದಾರೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

