1) ಕಾಂಗ್ರೆಸ್ ಸಂಬಂಧ ಕಡಿದುಕೊಳ್ಳುತ್ತಾರಾ ತರೂರ್
ತಿರುವನಂತಪುರಂ ಸಂಸದ ಶಶಿ ತರೂರ್ ಅವರ ಇತ್ತೀಚಿನ ಹೆಜ್ಜೆಯೊಂದು ಕಾಂಗ್ರೆಸ್ ಮನೆಯಲ್ಲಿ ಹೊಸ ವಿವಾದಕ್ಕೆ ಸಾಕ್ಷಿಯಾಗಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಗೌರವಾರ್ಥವಾಗಿ ರಾಷ್ಟ್ರಪತಿ ಭವನದಲ್ಲಿ ಆಯೋಜಿಸಲಾದ ಔತಣಕೂಟದಲ್ಲಿ ತರೂರ್ ಹಾಜರಾಗಿರುವುದು, ಈಗಾಗಲೇ ಉದ್ವಿಗ್ನವಾಗಿದ್ದ ಕಾಂಗ್ರೆಸ್ ಹೈಕಮಾಂಡ್–ತರೂರ್ ನಡುವಿನ ತೆರೆಮರೆಯಲ್ಲಿನ ಗುದ್ದಾಟಕ್ಕೆ ಮತ್ತೆ ಸಾಕ್ಷಿಯಾಗಿದೆ. ಈ ಕುರಿತು ಮಾತನಾಡಿದ ತರೂರ್, ಕಾಂಗ್ರೆಸ್ ತೊರೆಯುತ್ತಾರಾ ಎನ್ನುವ ಮಾತಿಗೂ ಪ್ರತಿಕ್ರಿಯಿಸಿದ್ದಾರೆ. ತರೂರ್ ಅವರನ್ನು ವರದಿಗಾರರು ಯಾವುದೇ ದೊಡ್ಡ ರಾಜಕೀಯ ಹೆಜ್ಜೆ ಮುಂದಿದೆಯಾ? ಎಂದು ಕೇಳಿದಾಗ, ಪ್ರತಿಕ್ರಿಯಿಸಿದ ತರೂರ್, ನಾನು ಕಾಂಗ್ರೆಸ್ ಸಂಸದ. ನನಗೆ ಈ ಸ್ಥಾನಕ್ಕೆ ಬರಲು ಸಾಕಷ್ಟು ಕಷ್ಟ-ನಷ್ವ ಅನುಭವಿಸಿದ್ದೇನೆ. ಬೇರೇನಾದರೂ ನಿರ್ಧಾರ ತೆಗೆದುಕೊಳ್ಳಲು ದೊಡ್ಡ ಮಟ್ಟದ ಚಿಂತನೆ ಬೇಕಾಗುತ್ತದೆ, ಎಂದು ಹೇಳಿದ್ದಾರೆ. ಇನ್ನು ತಮ್ಮ ಹಾಜರಿಯ ಹಿಂದಿನ ಕಾರಣವನ್ನೂ ವಿವರಿಸಿದ ತರೂರ್, ಊಟಕ್ಕೂ ಮೊದಲು ನಡೆದ ಸಂಭಾಷಣೆ ವೇಳೆ ತನ್ನ ಕ್ಷೇತ್ರದ ಅಭಿವೃದ್ಧಿ ವಿಷಯಗಳ ಬಗ್ಗೆ ಕೇಂದ್ರದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದೇನೆ, ಇದು ತನ್ನ ಕರ್ತವ್ಯ ಎಂದು ಹೇಳಿದ್ದಾರೆ. ಜನರಿಗೆ ಕೆಲಸ ಮಾಡುವುದು ರಾಜಕೀಯ ಜೀವನದ ಅವಿಭಾಜ್ಯ ಭಾಗ, ಎಂದಿದ್ದಾರೆ.
2) ಗೋವಾ ನೈಟ್‌ಕ್ಲಬ್ ಮ್ಯಾನೇಜರ್ ಅರೆಸ್ಟ್
ಉತ್ತರ ಗೋವಾದ ಅರ್ಪೋರಾ ನೈಟ್‌ಕ್ಲಬ್ ಅಗ್ನಿ ದುರಂತದಲ್ಲಿ 25 ಮಂದಿ ಸಜೀವ ದಹನ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಲಬ್‌ನ ಮ್ಯಾನೇಜರ್‌ನನ್ನ ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ಕ್ಲಬ್ ಮಾಲೀಕನ ವಿರುದ್ಧವೂ ಅರೆಸ್ಟ್ ವಾರಂಟ್ ಜಾರಿಗೊಳಿಸಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಅರ್ಪೋರಾ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಅಗ್ನಿ ಸುರಕ್ಷತಾ ನಿಯಮ ಪಾಲಿಸದೇ ನಿರ್ಲಕ್ಷ್ಯ ವಹಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಹೀಗಾಗಿ ಪ್ರಧಾನ ವ್ಯವಸ್ಥಾಪಕನನ್ನ ಬಂಧಿಸಲಾಗಿದ್ದು, ಮಾಲೀಕನ ವಿರುದ್ಧವೂ ವಾರಂಟ್ ಜಾರಿಗೊಳಿಸಲಾಗಿದೆ. ಇನ್ನು ಅರ್ಪೋರಾದ ನೈಟ್ ಕ್ಲಬ್ ಅಗ್ನಿ ಅವಘಡ ಕುರಿತು ಮ್ಯಾಜಿಸ್ಟ್ರೇಟ್ ತನಿಖೆಗೆ ಸಿಎಂ ಡಾ. ಪ್ರಮೋದ್ ಸಾವಂತ್ ಆದೇಶಿಸಿದ್ದಾರೆ. ದುರಂತ ನೆನೆದು ಸಂತಾಪ ಸೂಚಿಸಿರುವ ಪ್ರಧಾನಿ ಮೋದಿ ಘಟನೆಯ ಸಂಪೂರ್ಣ ವಿವರ ಪಡೆದುಕೊಂಡಿದ್ದಾರೆ. ಅಲ್ಲದೇ ಕೇಂದ್ರದಿಂದ ಪರಿಹಾರ ಸಹ ಘೋಷಣೆ ಮಾಡಿದ್ದು, ಸಾಧ್ಯವಿರುವ ಎಲ್ಲಾ ರೀತಿಯ ಸಹಾಯ ನೀಡುವುದಾಗಿ ರಾಜ್ಯ ಸರ್ಕಾರಕ್ಕೆ ಭರವಸೆ ನೀಡಿದ್ದಾರೆ ಎಂದು ಪ್ರಮೋದ್ ಸಾವಂತ್ ಹೇಳಿದ್ದಾರೆ.
3) ಬಾಬರಿ ಮಸೀದಿ ನಿರ್ಮಿಸೋದು ಅಸಾಂವಿಧಾನಿಕ ಅಲ್ಲ
ಬಾಬರಿ ಮಸೀದಿ ನಿರ್ಮಿಸೋದು ಅಸಾಂವಿಧಾನಿಕ ಅಲ್ಲ ಎಂದು ಟಿಎಂಸಿ ಉಚ್ಛಾಟಿತ ಶಾಸಕ ಹುಮಾಯುನ್ ಕಬೀರ್ ಹೇಳಿದ್ದಾರೆ. ಡಿ.6ರಂದು ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ಅಯೋಧ್ಯೆಯಲ್ಲಿರುವ ಬಾಬರಿ ಮಸೀದಿಯ ಮಾದರಿಯಲ್ಲಿ ಹೊಸ ಮಸೀದಿಗೆ ತೃಣಮೂಲ ಕಾಂಗ್ರೆಸ್‌ನ ಉಚ್ಛಾಟಿತ ಶಾಸಕ ಹುಮಾಯೂನ್ ಕಬೀರ್ ಶಿಲಾನ್ಯಾಸ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಬಾಬರಿ ಮಸೀದಿ ನಿರ್ಮಿಸೋದು ಅಸಾಂವಿಧಾನಿಕ ಅಲ್ಲ. ಪೂಜಾ ಸ್ಥಳಗಳನ್ನು ನಿರ್ಮಿಸುವುದು ಸಾಂವಿಧಾನಿಕ ಹಕ್ಕು. ಹಾಗಿದ್ದ ಮೇಲೆ ಮಸೀದಿ ನಿರ್ಮಿಸೋದ್ರಲ್ಲಿ ಅಸಂವಿಧಾನಿಕವಾದ್ದದ್ದು ಏನೂ ಇಲ್ಲ ಎಂದು ತಿಳಿಸಿದ್ದಾರೆ. 1992ರಲ್ಲಿ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿ, ಮುಸ್ಲಿಮರ ಹೃದಯದ ಮೇಲೆ ಎಂದಿಗೂ ಮಾಸದ ಗಾಯವನ್ನುಂಟು ಮಾಡಿದರು. ಆದರೆ ನಾವಿಂದು 33 ವರ್ಷಗಳ ಗಾಯಕ್ಕೆ ಈ ಮೂಲಕ ಮುಲಾಮು ಹಚ್ಚುತ್ತಿದ್ದೇವೆ. ಈ ದೇಶದಲ್ಲಿ 40 ಕೋಟಿ ಮುಸ್ಲಿಮರಿದ್ದಾರೆ. ಈ ರಾಜ್ಯದಲ್ಲಿ ನಾಲ್ಕು ಕೋಟಿ ಮುಸ್ಲಿಮರಿದ್ದಾರೆ. ನಾವು ಇಲ್ಲಿ ಒಂದೇ ಒಂದು ಮಸೀದಿಯನ್ನು ನಿರ್ಮಿಸಲು ಸಾಧ್ಯವಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
4) ವದಂತಿಗಳಿಗೆ ತೆರೆ ಎಳೆದ ಸ್ಮೃತಿ ಮಂಧಾನ
ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್ ಜೊತೆಗಿನ ಮದುವೆ ಮುಂದೂಡಿಕೆ ಕುರಿತು ಕೆಲ ದಿನಗಳಿಂದ ಹರಿದಾಡುತ್ತಿದ್ದ ನಾನಾ ವದಂತಿಗಳಿಗೆ ಟೀಂ ಇಂಡಿಯಾ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ತೆರೆ ಎಳೆದಿದ್ದಾರೆ. ಕಳೆದ ಕೆಲ ವಾರಗಳಿಂದ ನನ್ನ ಜೀವನದ ಬಗ್ಗೆ ಸಾಕಷ್ಟು ಊಹಾಪೋಹಗಳು ಹಬ್ಬಿವೆ. ಹಾಗಾಗಿ ಈ ಸಮಯದಲ್ಲಿ ನಾನು ಮಾತನಾಡುವುದು ಮುಖ್ಯ ಅಂತ ಭಾವಿಸಿ ಮಾತನಾಡ್ತಿದ್ದೇನೆ. ನಾನು ತುಂಬಾ ಖಾಸಗಿ ವ್ಯಕ್ತಿ, ಅದನ್ನ ಹಾಗೆಯೇ ಇಡಲು ಬಯಸುತ್ತೇನೆ. ಆದರೆ ಮದುವೆಯನ್ನ ರದ್ದುಗೊಳಿಸಲಾಗಿದೆ ಎಂಬುದನ್ನ ಸ್ಪಷ್ಟಪಡಿಸಬೇಕಾಗಿದೆ. ಈ ವಿಷಯವನ್ನು ಇಲ್ಲಿಗೆ ಮುಗಿಸಲು ನಾನು ಬಯಸುತ್ತೇನೆ, ನೀವೂ ಕೂಡ ಈ ವಿಷಯವನ್ನ ಇಲ್ಲಿಗೆ ಬಿಡಬೇಕೆಂದು ಮನವಿ ಮಾಡ್ತೇನೆ. ದಯವಿಟ್ಟು ಈ ಸಮಯದಲ್ಲಿ ಎರಡೂ ಕುಟುಂಬಗಳ ಗೌಪ್ಯತೆ ಗೌರವಿಸಿ. ನಮ್ಮದೇ ಹಾದಿಯಲ್ಲಿ ಮುಂದುವರಿಯಲು ನಮಗೆ ಅವಕಾಶ ಮಾಡಿಕೊಡಿ ಅಂತ ವಿನಂತಿಸಿಕೊಳ್ಳುತ್ತೇನೆ. ನಮ್ಮೆಲ್ಲರನ್ನೂ ಮತ್ತು ನನ್ನನ್ನು ಮುನ್ನಡೆಸುವ ಒಂದು ಉನ್ನತ ಉದ್ದೇಶವಿದೆ ಎಂದು ನಾನು ನಂಬುತ್ತೇನೆ. ಅದು ಯಾವಾಗಲೂ ನನ್ನ ದೇಶವನ್ನು ಉನ್ನತ ಮಟ್ಟದಲ್ಲಿ ಪ್ರತಿನಿಧಿಸುತ್ತಿದೆ. ಸಾಧ್ಯವಾದಷ್ಟು ಕಾಲ ಭಾರತಕ್ಕಾಗಿ ಆಟವಾಡುವುದನ್ನ ಮತ್ತು ಟ್ರೋಫಿಗಳನ್ನು ಗೆಲ್ಲುವುದನ್ನು ಮುಂದುವರಿಸಬೇಕೆಂದು ನಾನು ಭಾವಿಸುತ್ತೇನೆ. ಅದರ ಕಡೆಗೆಯೇ ನನ್ನ ಗಮನ ಶಾಶ್ವತವಾಗಿರುತ್ತದೆ. ನಿಮ್ಮೆಲ್ಲರ ಬೆಂಬಲಕ್ಕೆ ಧನ್ಯವಾದಗಳು. ಇದು ಮುಂದುವರಿಯುವ ಸಮಯ ಅಂತ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
5) ವರಾಹ ಲಕ್ಷ್ಮಿನರಸಿಂಹಸ್ವಾಮಿ ದೇಗುಲಕ್ಕೆ ಕೊಹ್ಲಿ ಭೇಟಿ
ಆಂಧ್ರಪ್ರದೇಶದ ವಿಶಾಖಪಟ್ಟಣಕ್ಕೆ ಭೇಟಿ ನೀಡಿದ್ದ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಹಾಗೂ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಅವರು ಶ್ರೀ ವರಾಹ ಲಕ್ಷ್ಮಿನರಸಿಂಹಸ್ವಾಮಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕೊಹ್ಲಿ ಮತ್ತು ವಾಷಿಂಗ್ಟನ್ ಸುಂದರ್ ಅವರು ದೇವರ ದರ್ಶನಕ್ಕೂ ಮುನ್ನ ಸಾಂಪ್ರದಾಯಿಕ ಕಪ್ಪಸ್ತಂಭಂ ಅಲಿಂಗನಂ (ಪವಿತ್ರ ಸ್ತಂಭವನ್ನು ಅಪ್ಪಿಕೊಳ್ಳುವುದು) ಆಚರಣೆಯಲ್ಲಿ ಭಾಗವಹಿಸಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದೇವರ ದರ್ಶನ ಪಡೆದ ಬಳಿಕ ಕೊಹ್ಲಿ ಮತ್ತು ವಾಷಿಂಗ್ಟನ್ ಸುಂದರ್ ಅವರಿಗೆ ವೇದಾಶೀರ್ವಚನ ನೀಡಲಾಯಿತು. ಆನಂತರ ಅವರು ತೀರ್ಥ ಪ್ರಸಾದ ಸ್ವೀಕರಿಸಿದರು ಎಂದು ಅವರು ವಿವರಿಸಿದ್ದಾರೆ. ಇದೇ ವೇಳೆ ಟೀಮ್ ಇಂಡಿಯಾ ಆಟಗಾರರಿಗೆ ದೇವಾಲಯದ ಶೇಷ ವಸ್ತ್ರವನ್ನು ನೀಡಿ ಸನ್ಮಾನಿಸಲಾಯಿತು ಎಂದು ಅವರು ಹೇಳಿದ್ದಾರೆ. ಡಿಸೆಂಬರ್ 6ರಂದು ವಿಶಾಖಪಟ್ಟಣದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ ನಾಯಕತ್ವದ ಟೀಮ್ ಇಂಡಿಯಾ ಒಂಬತ್ತು ವಿಕೆಟ್ ಅಂತರದಿಂದ ಗೆಲುವು ಸಾಧಿಸಿತ್ತು. ಇದರೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಭಾರತ 2-1 ಅಂತರದಿಂದ ಗೆದ್ದುಕೊಂಡಿತ್ತು.
6) ನ್ಯಾಯ ಕೊಡಿಸಲು ಮೋದಿಗೆ ಪಾಕ್ ಮಹಿಳೆ ಮನವಿ
ಪಾಕಿಸ್ತಾನಿ ಮಹಿಳೆಯೊಬ್ಬರು , ತಮ್ಮ ಪತಿ ಕರಾಚಿಯಲ್ಲಿ ತನ್ನನ್ನು ಕೈಬಿಟ್ಟು ದೆಹಲಿಯಲ್ಲಿ ರಹಸ್ಯವಾಗಿ ಎರಡನೇ ಮದುವೆಗೆ ಸಿದ್ಧತೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೇ, ನನಗೆ ನ್ಯಾಯ ಕೊಡಿಸಿ ಎಂದು ಪ್ರಧಾನಿ ಮೋದಿ ಅವರಿಗೆ ಮನವಿ ಮಾಡಿದ್ದಾರೆ. ನಿಕಿತಾ ನಾಗ್ದೇವ್ ಹೆಸರಿನ ಮಹಿಳೆ, ಪ್ರಧಾನಿ ನರೇಂದ್ರ ಮೋದಿಯವರಿಂದ ನ್ಯಾಯ ಕೋರಿ ಸೋಷಿಯಲ್ ಮೀಡಿಯಾದಲ್ಲಿ ವೀಡಿಯೋ ಹಂಚಿಕೊಂಡಿದ್ದಾರೆ. ಕರಾಚಿ ನಿವಾಸಿ ನಿಕಿತಾ, ದೀರ್ಘಾವಧಿಯ ವೀಸಾದ ಮೇಲೆ ಇಂದೋರ್‌ನಲ್ಲಿ ವಾಸಿಸುತ್ತಿದ್ದ ಪಾಕಿಸ್ತಾನಿ ಮೂಲದ ವ್ಯಕ್ತಿ ವಿಕ್ರಮ್ ನಾಗ್ದೇವ್ ಅವರನ್ನು 2020ರ ಜನವರಿ 26 ರಂದು ಕರಾಚಿಯಲ್ಲಿ ಹಿಂದೂ ಪದ್ಧತಿಗಳ ಪ್ರಕಾರ ವಿವಾಹವಾಗಿದರು. ಒಂದು ತಿಂಗಳ ನಂತರ, ವಿಕ್ರಮ್ ಭಾರತಕ್ಕೆ ಬಂದರು. ಅಲ್ಲಿಂದಾಚೆಗೆ ನನ್ನ ಜೀವನವೇ ಹಾಳಾಗಿದೆ ಎಂದು ನಿಕಿತಾ ಆರೋಪಿದ್ದಾರೆ. ಭಾರತಕ್ಕೆ ಬರಲು ಸಾಕಷ್ಟು ಬಾರಿ ಪ್ರಯತ್ನಿಸಿದೆ. 2020 ರಲ್ಲಿ ವೀಸಾ ವಿಚಾರಕ್ಕಾಗಿ ನನ್ನನ್ನು ಅಟ್ಟಾರಿ ಗಡಿಯಲ್ಲೇ ತಡೆದು ಪಾಕಿಸ್ತಾನಕ್ಕೆ ವಾಪಸ್ ಕಳುಹಿಸಲಾಯಿತು. ಅಂದಿನಿಂದ, ನನ್ನನ್ನು ಭಾರತಕ್ಕೆ ಕರೆಸಿಕೊಳ್ಳುವಂತೆ ವಿಕ್ರಮ್‌ಗೆ ಮನವಿ ಮಾಡುತ್ತಿದ್ದೇನೆ. ಆದರೆ, ಪ್ರತಿ ಬಾರಿಯೂ ಆತ ನಿರಾಕರಿಸುತ್ತಲೇ ಇದ್ದಾನೆ ಎಂದು ವೀಡಿಯೋದಲ್ಲಿ ಭಾವನಾತ್ಮಕವಾಗಿ ಮಹಿಳೆ ಮಾತನಾಡಿದ್ದಾರೆ.
7) SIR ಕರ್ತವ್ಯದಲ್ಲಿದ್ದ ಶಿಕ್ಷಕ ರಕ್ತಸ್ರಾವದಿಂದ ಸಾವು
9 ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ, ಬೂತ್ ಹಂತದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳ ಮೇಲೆ ತೀವ್ರ ಒತ್ತಡ ಹಾಗೂ ಆತಂಕ ಸೃಷ್ಟಿಸುತ್ತಿರುವ ಬಗ್ಗೆ ವರದಿಗಳು ಬೆಳಕಿಗೆ ಬರುತ್ತಲೇ ಇವೆ. ಇದಕ್ಕೆ ಉತ್ತರ ಪ್ರದೇಶದಲ್ಲಿ ನಡೆದಿರುವ ಘಟನೆ ಮತ್ತೊಂದು ತಾಜಾ ಉದಾಹರಣೆಯಾಗಿದೆ. ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕರ್ತವ್ಯಕ್ಕೆ ಬೂತ್ ಮಟ್ಟದ ಅಧಿಕಾರಿಯಾಗಿ ನಿಯೋಜಿಸಿದ್ದ ಜೀವಶಾಸ್ತ್ರ ಶಿಕ್ಷಕ ಮಿದುಳಿನ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾರೆ. ಮೋದಿ ವಿಜ್ಞಾನ ಮತ್ತು ವಾಣಿಜ್ಯ ಅಂತರ ಕಾಲೇಜಿನ ಶಿಕ್ಷಕ ಲಾಲ್ ಮೋಹನ್ ಸಿಂಗ್ (58) ಮೃತ ದುರ್ದೈವಿ. ಉತ್ತರ ಪ್ರದೇಶದ ಮೋದಿ ನಗರದಲ್ಲಿರುವ ತಮ್ಮ ನೆಹರು ನಿವಾಸದಲ್ಲಿ ಮಿದುಳಿನ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾಡಳಿತದ ಅಧಿಕಾರಿಗಳು ತಿಳಿಸಿದ್ದಾರೆ.
8) ಇಂಡಿಗೊ 400 ವಿಮಾನಗಳ ಹಾರಾಟ ರದ್ದು
ಸತತ ಆರನೇ ದಿನವಾದ ಭಾನುವಾರವೂ ಇಂಡಿಗೊ ಏರ್‌ಲೈನ್ಸ್ ಗೆ ಸೇರಿದ ವಿಮಾನಗಳ ಹಾರಾಟದಲ್ಲಿ ಅಡಚಣೆ ಮುಂದುವರಿದಿದೆ. ದೆಹಲಿ, ಕೋಲ್ಕತ್ತ, ಹೈದರಾಬಾದ್ ಸೇರಿದಂತೆ ದೇಶದಾದ್ಯಂತ ಹಲವು ವಿಮಾನ ನಿಲ್ದಾಣಗಳಲ್ಲಿ 400ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದಾಗಿದ್ದು, ಪ್ರಯಾಣಿಕರು ತೊಂದರೆ ಅನುಭವಿಸಿದ್ದಾರೆ ಎಂದು ವರದಿಯಾಗಿದೆ. ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಬೇಕಿದ್ದ ಮತ್ತು ಇಲ್ಲಿಂದ ಹೊರಡಬೇಕಿದ್ದ ಒಟ್ಟು 109 ಇಂಡಿಗೊ ವಿಮಾನಗಳು ರದ್ದಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತೆಲಂಗಾಣದ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡಬೇಕಿದ್ದ ಮತ್ತು ಆಗಮಿಸಬೇಕಿದ್ದ ಒಟ್ಟು 115 ಇಂಡಿಗೊ ವಿಮಾನಗಳು ರದ್ದಾಗಿವೆ ಎಂದೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕೋಲ್ಕತ್ತದಲ್ಲಿ 76, ಪುಣೆಯಲ್ಲಿ 25, ಅಹಮದಾಬಾದ್‌ನಲ್ಲಿ 20, ಅಗರ್ತಲಾ ವಿಮಾನ ನಿಲ್ದಾಣದಲ್ಲಿ 6 ಇಂಡಿಗೊ ವಿಮಾನಗಳ ಹಾರಾಟ ರದ್ದಾಗಿದೆ ಎಂದು ಮೂಲಗಳು ತಿಳಿಸಿವೆ. ಇಂದು ಒಟ್ಟಾರೆ ಶೇಕಡ 33ರಷ್ಟು ಇಂಡಿಗೊ ವಿಮಾನಗಳ ಹಾರಾಟ ರದ್ದಾಗಿದೆ.
9) CM ಅಭ್ಯರ್ಥಿ ಮಾಡಿದ್ರೆ ಸಿಧು ರಾಜಕೀಯಕ್ಕೆ ಮರಳುತ್ತಾರೆ
ನವಜೋತ್ ಸಿಂಗ್ ಸಿಧು ಅವರನ್ನು ಪಂಜಾಬ್ ಕಾಂಗ್ರೆಸ್‌ನ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿದರೆ ಸಕ್ರಿಯ ರಾಜಕಾರಣಕ್ಕೆ ಮರಳುತ್ತಾರೆ ಎಂದು ಅವರ ಪತ್ನಿಯೂ ಆಗಿರುವ ಪಕ್ಷದ ನಾಯಕಿ ನವಜೋತ್ ಕೌರ್ ಸಿಧು ಹೇಳಿದ್ದಾರೆ. ಯಾವ ಪಕ್ಷಕ್ಕೂ ಕೊಡಲು ನಮ್ಮಲ್ಲಿ ಹಣ ಇಲ್ಲ. ಆದರೆ ಪಂಜಾಬ್ ಅನ್ನು ‘ಸುವರ್ಣ ರಾಜ್ಯ’ವನ್ನಾಗಿ ಪರಿವರ್ತಿಸುತ್ತೇವೆ ಎಂದು ಹೇಳಿದ್ದಾರೆ. ನಾವು ಯಾವತ್ತೂ ಪಂಜಾವ್ ಹಾಗೂ ಪಂಜಾಬಿತನದ ಬಗ್ಗೆ ಮಾತನಾಡುತ್ತೇವೆ. ಆದರೆ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತುಕೊಳ್ಳಲು ₹ 500 ಕೋಟಿ ನೀಡಲು ನಮ್ಮಲ್ಲಿ ಹಣವಿಲ್ಲ’ ಎಂದು ಅವರು ಶನಿವಾರ ಮಾಧ್ಯಮದವರೊಂದಿಗೆ ಹೇಳಿದ್ದಾರೆ. ರಾಜ್ಯದ ಕಾನೂನು ಸುವ್ಯವಸ್ಥೆ ಸೇರಿ ಹಲವು ವಿಷಯಗಳ ಬಗ್ಗೆ ಚರ್ಚಿಸಲು ರಾಜ್ಯಪಾಲ ಗುಲಾಬ್ ಚಂದ್ ಕಟಿಯಾರ್ ಅವರನ್ನು ಭೇಟಿಯಾದ ಬಳಿಕ ಹೀಗೆ ಹೇಳಿದ್ದಾರೆ. ಯಾರಾದರೂ ಹಣಕ್ಕೆ ಬೇಡಿಕೆ ಇಟ್ಟಿದ್ದಾರಾ ಎನ್ನುವ ಪ್ರಶ್ನೆಗೆ ‘ಇಲ್ಲ’ ಎಂದು ಉತ್ತರಿಸಿದ ಅವರು, ‘ಯಾರಾದರೂ ₹ 500 ಕೋಟಿಯ ಸೂಟ್‌ಕೇಸ್ ಕೊಟ್ಟರೆ ಅವರು ಸಿಎಂ ಆಗುತ್ತಾರೆ’ ಎಂದು ಹೇಳಿದ್ದಾರೆ.
10) ಪೋಷಕರಿಂದಲೇ ಮಗನ ಬರ್ಬರ ಹತ್ಯೆ
ಮನೆಯಲ್ಲಿ ಹಲವು ವಿಚಾರಗಳಿಗಾಗಿ ಭಿನ್ನಾಭಿಪ್ರಾಯ ಮೂಡಿತ್ತು. ಸಿಮ್ರಂಜಂಗ್ ಸಿಂಗ್ ಎಂಬುವವರ ಪತ್ನಿ ನವಪ್ರೀತ್ ಕೌರ್ ಬೇಸರಗೊಂಡು ತವರು ಮನೆಗೆ ಹೋಗಿದ್ದರು. ಇದೆಲ್ಲಾ ಕೋಪ, ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಮನೆಯ ಸೊಸೆಯನ್ನು ವಾಪಸ್ ಕರೆದುಕೊಂಡು ಬನ್ನಿ ಎಂದು ಕೇಳಿದ್ದಕ್ಕೆ ಪೋಷಕರೇ ಮಗನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಪಂಜಾಬ್ನ ಅಮೃತಸರದಲ್ಲಿ ನಡೆದಿದೆ. ಸಿಮ್ರಂಜಂಗ್ ಸಿಂಗ್ ತನ್ನ ಪತ್ನಿ ನವಪ್ರೀತ್ ಕೌರ್ ಮತ್ತು ಅವರ ಎರಡು ವರ್ಷದ ಮಗನನ್ನು ಮನೆಗೆ ಕರೆತರಲು ಪ್ರಯತ್ನಿಸುತ್ತಿದ್ದರು. ನವಪ್ರೀತ್ ಸ್ವಲ್ಪ ಸಮಯದಿಂದ ತನ್ನ ಹೆತ್ತವರೊಂದಿಗೆ ವಾಸವಾಗಿದ್ದರು. ಮನೆಯಲ್ಲಿ ಆಗಾಗ ಜಗಳಗಳು ನಡೆಯುತ್ತಿದ್ದರಿಂದ ಮನೆ ಬಿಟ್ಟು ಹೋಗಬೇಕಾದ ಅನಿವಾರ್ಯತೆ ಎದುರಾಗಿತ್ತು ಎಂದು ಮಹಿಳೆ ತಿಳಿಸಿದ್ದಾರೆ. ನವಪ್ರೀತ್ ಅವರ ಅತ್ತೆ-ಮಾವನಿಗೆ ಆಕೆ ಮನೆಗೆ ವಾಪಸಾಗುವುದು ಇಷ್ಟವಿರಲಿಲ್ಲ. ಮಗನಿಗೆ ಮರು ಮದುವೆ ಮಾಡಲು ನಿರ್ಧರಿಸಿದ್ದರು. ಇದು ಎರಡು ಕುಟುಂಬಗಳ ನಡುವೆ ದೀರ್ಘಕಾಲದ ಉದ್ವಿಗ್ನತೆಗೆ ಕಾರಣವಾಗಿತ್ತು. ಭಾನುವಾರ ಬೆಳಗ್ಗೆ ಸಿಮ್ರಂಜಾಂಗ್ ತನ್ನ ಹೆಂಡತಿ ಮತ್ತೆ ಮನೆಗೆ ಬರಬೇಕೆಂದು ಒತ್ತಾಯಿಸಿದಾಗ ಈ ಘಟನೆ ನಡೆದಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ




