1) ಲೋಕಸಭೆಯಲ್ಲಿ ಮೋದಿ ವಂದೇ ಮಾತರಂ ಮಂತ್ರ
ಲೋಕಸಭೆಯಲ್ಲಿ ಸೋಮವಾರ ವಂದೇ ಮಾತರಂನ 150ನೇ ವಾರ್ಷಿಕೋತ್ಸವದ ಕುರಿತು ಚರ್ಚೆಯನ್ನು ಪ್ರಧಾನಿ ಮೋದಿ ಆರಂಭಿಸಿದರು. ತಮ್ಮ ಒಂದು ಗಂಟೆಯ ಭಾಷಣದಲ್ಲಿ, “ವಂದೇ ಮಾತರಂ ಬ್ರಿಟಿಷರಿಗೆ ಸೂಕ್ತ ಉತ್ತರವಾಗಿತ್ತು; ಈ ಘೋಷಣೆ ಇಂದಿಗೂ ನಮಗೆ ಸ್ಫೂರ್ತಿ ನೀಡುತ್ತಿದೆ. ಸ್ವಾತಂತ್ರ್ಯದ ಸಮಯದಲ್ಲಿ ಮಹಾತ್ಮ ಗಾಂಧಿಯವರು ಕೂಡ ಇದನ್ನು ಇಷ್ಟಪಟ್ಟಿದ್ದರು. ಅವರು ಈ ಹಾಡನ್ನು ರಾಷ್ಟ್ರಗೀತೆಯಾಗಿ ನೋಡಿದರು ಎಂದು ಹೇಳಿದರು. ಈ ಹಾಡು ತಮಗೆ ಅಪಾರ ಶಕ್ತಿ ನೀಡುತ್ತದೆ ಎಂದು ಪ್ರಧಾನಿ ಹೇಳಿದರು. ಹಾಗಿದ್ದಲ್ಲಿ ಕಳೆದ ದಶಕಗಳಲ್ಲಿ ಈ ಗೀತೆ ಅನ್ಯಾಯ ಅನುಭವಿಸಿದ್ದು ಏಕೆ? ವಂದೇ ಮಾತರಂಗೆ ಏಕೆ ದ್ರೋಹ ಬಗೆದರು? ಪೂಜ್ಯ ಬಾಪು ಅವರ ಭಾವನೆಗಳನ್ನು ಸಹ ಮೀರಿಸಿದ್ದ ಆ ಶಕ್ತಿ ಯಾವುದು? ಎಂದು ಲೋಕಸಭೆಯಲ್ಲಿ ಪ್ರಶ್ನೆ ಮಾಡಿದರು. ಒಂದು ಗಂಟೆಯ ಭಾಷಣದಲ್ಲಿ ಪ್ರಧಾನಿ ಮೋದಿ, ವಂದೇ ಮಾತರಂ ಶಬ್ದವನ್ನು 121 ಬಾರಿ, ದೇಶ 50 ಬಾರಿ, ಭಾರತ 35 ಬಾರಿ, ಬ್ರಿಟಿಷರನ್ನು 34 ಬಾರಿ, ಬಂಗಾಳವನ್ನು 17 ಬಾರಿ ಮತ್ತು ಕಾಂಗ್ರೆಸ್ ಅನ್ನು 13 ಬಾರಿ ಉಲ್ಲೇಖಿಸಿದ್ದಾರೆ.
=====================================
2) ಇತಿಹಾಸ ತಿರುಚಲು ಪಿಎಂ ಯತ್ನ – ಗೌರವ್ ಗೊಗೊಯ್
ಲೋಕಸಭೆಯಲ್ಲಿ ‘ವಂದೇ ಮಾತರಂ’ ಗೀತೆ ಕುರಿತ ಚರ್ಚೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣವು ‘ಇತಿಹಾಸವನ್ನು ಪುನಃ ಬರೆಯುವ’ ಮತ್ತು ಅದಕ್ಕೆ ‘ರಾಜಕೀಯ ಬಣ್ಣ’ ಬಳಿಯುವ ಉದ್ದೇಶವನ್ನು ಹೊಂದಿತ್ತು. ಬಿಜೆಪಿ ಎಷ್ಟೇ ಪ್ರಯತ್ನಿಸಿದರೂ, ಜವಾಹರಲಾಲ್ ನೆಹರು ಅವರ ಕೊಡುಗೆಗಳ ಮೇಲೆ ಒಂದೇ ಒಂದು ಕಪ್ಪು ಚುಕ್ಕಿ ಇಡಲು ಸಾಧ್ಯವಾಗುವುದಿಲ್ಲ ಎಂದು ಕಾಂಗ್ರೆಸ್ ಹೇಳಿದೆ. ವಂದೇ ಮಾತರಂ’ ಗೀತೆಗೆ ಅರ್ಹವಾದ ಪ್ರಾಮುಖ್ಯತೆ ಮತ್ತು ರಾಷ್ಟ್ರೀಯ ಗೀತೆಯ ಸ್ಥಾನಮಾನವನ್ನು ನೀಡಿದ್ದು ಕಾಂಗ್ರೆಸ್ ಎಂದು ವಿರೋಧ ಪಕ್ಷ ಹೇಳಿದೆ. ಲೋಕಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ಉಪನಾಯಕ ಗೌರವ್ ಗೊಗೊಯ್, ಯಾವುದೇ ವಿಷಯದ ಬಗ್ಗೆ ಮಾತನಾಡುವಾಗಲೆಲ್ಲ ಭಾರತದ ಮೊದಲ ಪ್ರಧಾನಿ ನೆಹರು ಮತ್ತು ಕಾಂಗ್ರೆಸ್ ಅನ್ನು ಉಲ್ಲೇಖಿಸುವುದು ಪ್ರಧಾನಿಯವರ ಅಭ್ಯಾಸವಾಗಿದೆ. ಆಪರೇಷನ್ ಸಿಂಧೂರ ಕುರಿತ ಚರ್ಚೆಯ ಸಮಯದಲ್ಲಿ ಅವರು ನೆಹರು ಅವರ ಹೆಸರನ್ನು 14 ಬಾರಿ ಮತ್ತು ಕಾಂಗ್ರೆಸ್ ಹೆಸರನ್ನು 50 ಬಾರಿ ಬಳಸಿದ್ದಾರೆ. ಸಂವಿಧಾನದ 75ನೇ ವಾರ್ಷಿಕೋತ್ಸವದ ಚರ್ಚೆಯ ಸಮಯದಲ್ಲಿ, ನೆಹರು ಅವರ ಹೆಸರನ್ನು 10 ಬಾರಿ ಮತ್ತು ಕಾಂಗ್ರೆಸ್ ಹೆಸರನ್ನು 26 ಬಾರಿ ಬಳಸಲಾಗಿದೆ’ ಎಂದು ಹೇಳಿದರು.
=================================
3) 7ನೇ ದಿನವೂ ನೂರಾರು ವಿಮಾನಗಳು ರದ್ದು!
ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋದ ಸಂಚಾರ ವ್ಯತ್ಯಯ, ವಿಮಾನ ವಿಳಂಬ ಸಮಸ್ಯೆ ಮುಂದುವರೆದಿದೆ. ಇಂದು ಬೆಂಗಳೂರಿನಲ್ಲಿ 127 ಸೇರಿದಂತೆ ದೇಶಾದ್ಯಂತ 450ಕ್ಕೂ ಹೆಚ್ಚು ವಿಮಾನಗಳ ಹಾರಾಟ ಸ್ಥಗಿತಗೊಂಡಿದೆ. ಭಾರತ ಹಿಂದೆಂದೂ ಕಂಡು ಕೇಳರಿಯದ ಪ್ರಮಾಣದಲ್ಲಿ ವಿಮಾನ ಹಾರಾಟಗಳ ಬಿಕ್ಕಟ್ಟು ಸತತ ಏಳನೇ ದಿನಕ್ಕೆ ಕಾಲಿಟ್ಟಿದೆ. ಕಳೆದ ಒಂದು ವಾರದಿಂದ ದೇಶಾದ್ಯಂತ ಇಂಡಿಗೋ ವಿಮಾನಗಳ ಹಾರಾಟ ಹಾಗೂ ಸಂಚಾರದಲ್ಲಿ ವ್ಯತ್ಯಯ ಉಂಟಾಗುತ್ತಿದ್ದು, ಸೋಮವಾರ (ಡಿ.8) ಬೆಳಿಗ್ಗೆ 10:30ರ ವೇಳೆಗೆ ದೇಶಾದ್ಯಂತ 456 ವಿಮಾನಗಳ ಹಾರಾಟ ರದ್ದಾಗಿದೆ. ದೆಹಲಿ ವಿಮಾನ ನಿಲ್ದಾಣದಲ್ಲಿ ನಿರ್ಗಮನ ಹಾಗೂ ಆಗಮನ ಸೇರಿ ಒಟ್ಟು 134 ವಿಮಾನಗಳು, ಬೆಂಗಳೂರಿನಲ್ಲಿ 127, ಚೆನ್ನೈನಲ್ಲಿ 71, ಹೈದರಾಬಾದ್ನಲ್ಲಿ 77, ಜಮ್ಮುವಿನಲ್ಲಿ 20, ಅಹಮದಾಬಾದ್ನಲ್ಲಿ 20 ಮತ್ತು ವೈಜಾಗ್ನಲ್ಲಿ 7, ಮುಂಬೈ, ಕೋಲ್ಕತ್ತಾ ಸೇರಿದಂತೆ ಇತರ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ. ಬೆಂಗಳೂರಿನಿಂದ ದೆಹಲಿ, ಲಕ್ನೋ, ಮುಂಬೈ, ಹೈದರಾಬಾದ್, ಭುವನೇಶ್ವರ, ರಾಯಪುರ, ಪಾಟ್ನಾ, ಅಮೃತಸರ್ಗೆ ಸಂಚರಿಸಬೇಕಿದ್ದ ವಿಮಾನಗಳು ಕ್ಯಾನ್ಸಲ್ ಆಗಿದ್ದು, ವಿಮಾನಗಳ ರದ್ಧತಿ ಬಗ್ಗೆ ಇಂಡಿಗೋ 5 ಗಂಟೆ ಮುಂಚಿತವಾಗಿ ಮಾಹಿತಿ ನೀಡಿದ ಹಿನ್ನೆಲೆ ಪ್ರಯಾಣಿಕರು ಏರ್ಪೋರ್ಟ್ಗೆ ಬಂದಿಲ್ಲ.
====================================
4) ಇಂಡಿಗೋ ಬಿಕ್ಕಟ್ಟಿಗೆ ಕಾರಣವೇನು ಗೊತ್ತಾ?
ಭಾರತದ ಅತಿದೊಡ್ಡ ಏರ್ಲೈನ್ಸ್ ಸಂಸ್ಥೆ ಎನಿಸಿರುವ ಮತ್ತು ಜಾಗತಿಕವಾಗಿಯೂ ದೈತ್ಯ ಏರ್ಲೈನ್ ಕಂಪನಿಗಳಲ್ಲಿ ಒಂದೆನಿಸಿರುವ ಇಂಡಿಗೋ ಏರ್ಲೈನ್ಸ್ ಕಳೆದ ಕೆಲ ದಿನಗಳಿಂದ ವಿಲವಿಲ ಒದ್ದಾಡುತ್ತಿದೆ. ದಿನವೂ ನೂರಾರು ಫ್ಲೈಟ್ಗಳು ರದ್ದಾಗುತ್ತಿವೆ. ಫ್ಲೈಟ್ ತಪ್ಪಿರುವ ಸಾವಿರಾರು ಪ್ರಯಾಣಿಕರು ಹಿಡಿಶಾಪ ಹಾಕುತ್ತಿದ್ದಾರೆ. ಸರ್ಕಾರ ಕೂಡ ತನಿಖೆ ನಡೆಸತೊಡಗಿದೆ. ಉಗುರಿನಲ್ಲಿ ಹೋಗಬೇಕಾದ ಸಮಸ್ಯೆಗೆ ಕೊಡಲಿ ಎತ್ತಬೇಕಾದ ಸ್ಥಿತಿ ಬಂತೆಂದು ಹಲವು ಹೇಳತೊಡಗಿದ್ದಾರೆ. ಅಷ್ಟಕ್ಕೂ ಇಂಡಿಗೋ ಏರ್ಲೈನ್ಸ್ನ ಬಿಕ್ಕಟ್ಟಿಗೆ ಕಾರಣಗಳೇನು?ಎನ್ನುವುದನ್ನು ನೋಡುವದಾದರೆ, ಪೈಲಟ್ಗಳ ಲಭ್ಯತೆ ಇಲ್ಲದೇ ಹೋಗಿದ್ದು ಇಂಡಿಗೋ ಫ್ಲೈಟ್ಗಳು ಸ್ಥಗಿತಗೊಳ್ಳಲು ಪ್ರಮುಖ ಕಾರಣ? ಪೈಲಟ್ಗಳ ಕೊರತೆ ಯಾಕೆ ಎದುರಾಯಿತು? ಇದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವಾದ ಡಿಜಿಸಿಎ ಇತ್ತೀಚೆಗೆ ಹೊರಡಿಸಿದ ಕೆಲ ನಿಯಮಗಳೇ ಕಾರಣ. ಕಡಿಮೆ ಸಂಖ್ಯೆಯ ಪೈಲಟ್ಗಗಳನ್ನು ಹೊಂದಿದ್ದ ಇಂಡಿಗೋ ಸಂಸ್ಥೆಯ ನೆತ್ತಿ ಮೇಲೆ ಮೊದಲೇ ಅಪಾಯದ ಕತ್ತಿ ತೂಗುತ್ತಿತ್ತು. ಈಗ ಎಫ್ಡಿಟಿಎಲ್ ನಿಯಮಗಳನ್ನು ಜಾರಿಗೆ ತರಲು ಹೊರಟಾಗ ಇಡೀ ವ್ಯವಸ್ಥೆಯ ಬುಡವೇ ಅಲುಗಾಡಗೊಡಗಿತು. ಪೈಲಟ್ಗಳಿಗೆ ಹೆಚ್ಚು ವಿಶ್ರಾಂತಿ ಅವಧಿ ಕೊಡಬೇಕಿದ್ದರಿಂದ ಸಾಕಷ್ಟು ಫ್ಲೈಟ್ಗಳಿಗೆ ಪೈಲಟ್ಗಳೇ ಇಲ್ಲದಂತಾಯಿತು. ಹೀಗಾಗಿ, ನಾಲ್ಕೈದು ದಿನದಲ್ಲೇ ಸಾವಿರಕ್ಕೂ ಹೆಚ್ಚು ಫ್ಲೈಟ್ಗಳು ರದ್ದಾಗಿವೆ.
===================================
5) ಬಾಲಿವುಡ್ ನಿರ್ದೇಶಕ ಪತ್ನಿ, ಅರೆಸ್ಟ್!
ಬಾಲಿವುಡ್ ಹಿರಿಯ ನಿರ್ದೇಶಕ ವಿಕ್ರಂ ಭಟ್ ಅರೆಸ್ಟ್ ಆಗಿದ್ದಾರೆ. ಅಷ್ಟೇ ಅಲ್ಲ, ಅವರ ಪತ್ನಿ ಶ್ವೇತಾಂಬರಿ ಭಟ್ ಕೂಡ ಅರೆಸ್ಟ್ ಅಗಿದ್ದಾರೆ. ಬರೋಬ್ಬರಿ ಮೂವತ್ತು ವರ್ಷಗಳ ಕಾಲ ಮಾಡಿರುವ ಸಾಧನೆ ಇದೀಗ ಮಣ್ಣುಪಾಲು ಆಗಿದೆ. ಇದೀಗ ಈ ಸಾಲಿಗೆ ಬಾಲಿವುಡ್ನ ಪ್ರಖ್ಯಾತ ನಿರ್ದೇಶಕ ವಿಕ್ರಮ್ ಭಟ್ ಕೂಡ ಸೇರಿಕೊಂಡಿದ್ದು ಭಾರೀ ದುರಂತ ಎನ್ನಬಹುದು. ಬರೋಬ್ಬರಿ 30 ಕೋಟಿ ವಂಚನೆ ಪ್ರಕರಣ ವಿಕ್ರಮ್ ಭಟ್ ವಿರುದ್ಧ ದಾಖಲಾಗಿದೆ. ಉದಯಪುರದ ಇಂದಿರಾ ಗ್ರೂಫ್ ಆಫ್ ಕಂಪನಿಯ ಮಾಲೀಕ ಡಾ. ಅಜಯ್ ಮುರ್ದಿಯಾ ಅವರು ವಿಕ್ರಮ್ ಭಟ್ ವಿರುದ್ಧ ದೂರು ಸಲ್ಲಿಸಿದ್ದಾರೆ. ಡಾ ಅಜಯ್ ಮುರ್ದಿಯಾ ಇಹಲೋಕ ತ್ಯಜಿಸಿದ ತಮ್ಮ ಪತ್ನಿಯ ಜೀವನಾಧಾರಿತ ಚಿತ್ರವನ್ನು ಮಾಡಬೇಕೆಂದು ಅಂದುಕೊಂಡಿದ್ದರು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆ ಮಾಡಲು ವಿಕ್ರಂ ಭಟ್ ಅವರನ್ನು ಮುಂಬೈನ ವೃಂದಾವನ ಸ್ಟುಡಿಯೋದಲ್ಲಿ ಭೇಟಿಯಾಗಿದ್ದರು. ಈ ಮಾತುಕತೆ ಸಮಯದಲ್ಲಿ 200 ಕೋಟಿ ರೂ. ಲಾಭದ ಆಸೆ ತೋರಿಸಿದ್ದ ವಿಕ್ರಂ ಭಟ್ ಅವರು ಡಾ.ಅಜಯ್ ಮುರ್ದಿಯಾ ಅವರಿಂದ 30 ಕೋಟಿ ಹಣವನ್ನು ಪಡೆದಿದ್ದರು. ಆದರೆ ಭರವಸೆ ಕೇವಲ ಭರವಸೆಯಾಗಿಯಷ್ಟೇ ಉಳಿಯಿತೇ ಹೊರತೂ ಸಿನಿಮಾ ಆಗಲೇ ಇಲ್ಲ. ಇನ್ನು ವಿಕ್ರಂ ಭಟ್ ಅವರನ್ನು ಸದ್ಯ ರಾಜಸ್ಥಾನದ ಪೊಲೀಸರು ಮುಂಬೈಗೆ ಬಂದು ಬಂಧಿಸಿದ್ದಾರೆ. ಮುಂಬೈನ ವೆರ್ಸೋವಾ, ಅಂಧೇರಿ ಪಶ್ಚಿಮದಲ್ಲಿ ಸಂಬಂಧಿಕರ ಮನೆಯಲ್ಲಿದ್ದ ವಿಕ್ರಮ್ ಭಟ್ ಅವರನ್ನು ವಶಕ್ಕೆ ಪಡೆದಿದ್ದಾರೆ. ಅವರ ಪತ್ನಿ ಶ್ವೇತಾಂಬರಿ ಭಟ್ ಅವರನ್ನು ಕೂಡ ಪೊಲೀಸರು ಬಂಧಿಸಿದ್ದು ಟ್ರಾನ್ಸಿಟ್ ರಿಮಾಂಡ್ ಪಡೆದ ನಂತರ ಉದಯಪುರಕ್ಕೆ ಕರೆದೊಯ್ದಿದ್ದಾರೆ.
===================================
6) ರೇ*ಪ್ ಕೇಸ್ನಲ್ಲಿ ನಟ ದಿಲೀಪ್ ಖುಲಾಸೆ
ಮಲಯಾಳಂ ಚಲನಚಿತ್ರೋದ್ಯಮವನ್ನು ಬೆಚ್ಚಿಬೀಳಿಸಿದ ಖ್ಯಾತ ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಮಲಯಾಳಂ ನಟ ದಿಲೀಪ್ ಅವರನ್ನು ಕೇರಳ ಕೋರ್ಟ್ ಖುಲಾಸೆಗೊಳಿಸಿದ್ದು, ಪ್ರಮುಖ ಆರೋಪಿ ಪಲ್ಸರ್ ಸುನಿ ಸೇರಿದಂತೆ ಆರು ಆರೋಪಿಗಳು ದೋಷಿ ಎಂದು ಸೋಮವಾರ ತೀರ್ಪು ಪ್ರಕಟಿಸಿದೆ. ಇದಾದ ನಂತರ ಮಾತನಾಡಿರುವ ನಟ ದಿಲೀಪ್, ಸಮಾಜದಲ್ಲಿ ನನ್ನ ಕೆರಿಯರ್ ಹಾಗೂ ಜೀವನ ನಾಶಮಾಡಲೆಂದೇ ನನ್ನ ವಿರುದ್ಧ ಸಂಚು ರೂಪಿಸಲಾಗಿತ್ತು ಎಂದು ಹೇಳಿದ್ದಾರೆ. ಈ ಕೇಸಲ್ಲಿ ಕ್ರಿಮಿನಲ್ ಗೂಢಾಲೋಚನೆಯಿದೆ, ಇದನ್ನು ತನಿಖೆ ಮಾಡಬೇಕು ಎಂದು ಮಂಜು ವಾರಿಯರ್ ಹೇಳಿದ ಹೇಳಿಕದ ಬಳಿಕ ನನ್ನ ವಿರುದ್ಧ ಸಂಚು ಶುರುವಾಯಿತು. ಅಂದು ಇದ್ದ ಹಿರಿಯ ಮಹಿಳಾ ಪೊಲೀಸ್ ಅಧಿಕಾರಿ ಹಾಗೂ ಪೊಲೀಸರು ಸೇರಿ ನನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸಿದರು. ಇದಕ್ಕಾಗಿ ಪ್ರಮುಖ ಆರೋಪಿಯನ್ನೂ, ಸಹ ಆರೋಪಿಗಳನ್ನೂ ಪೊಲೀಸರು ಹಿಡಿದರು. ಪೊಲೀಸರು ಕೆಲ ಮಾಧ್ಯಮಗಳ ಜೊತೆ ಸೇರಿ ಸುಳ್ಳು ಕತೆ ಸೃಷ್ಟಿಸಿದರು ಎಂದು ದೂರಿದರು. ಆ ಕತೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರಪಡಿಸಿದರು. ಪೊಲೀಸರ ಕಟ್ಟುಕತೆ ಬಯಲಾಗಿದೆ. ನನ್ನನ್ನು ಈ ಕೇಸಲ್ಲಿ ಆರೋಪಿಯಾಗಿಸಿದ್ದೇ ನಿಜವಾದ ಸಂಚು ಎಂದು ಹೇಳಿದ್ದಾರೆ.
======================================
7) ನಕ್ಸಲ್ ನಾಯಕ ಸೇರಿ 11 ಮಂದಿ ಶರಣು
ಕುಖ್ಯಾತ ನಕ್ಸಲ್ ಕಮಾಂಡರ್ ಮತ್ತು ಕೇಂದ್ರ ಸಮಿತಿ ಸದಸ್ಯ ರಾಮಧೇರ್ ಮಜ್ಜಿ ಪೊಲೀಸರ ಮುಂದೆ ಶರಣಾಗಿದ್ದಾನೆ. ಈತನನ್ನು ಇತ್ತೀಚೆಗೆ ಎನ್ಕೌಂಟರ್ನಲ್ಲಿ ಹತ್ಯೆಯಾದ ಹಿದ್ಮಾಗೆ ಸಮಾನವೆಂದು ಪರಿಗಣಿಸಲಾಗಿದೆ. ಮಜ್ಜಿ ತಲೆಗೆ 1 ಕೋಟಿ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ಛತ್ತೀಸ್ಗಢ ಬಕರ್ ಕಟ್ಟಾದ ಪೊಲೀಸ್ ಠಾಣೆಯಲ್ಲಿ ಮಜ್ಜಿ ಶರಣಾಗಿದ್ದಾನೆ. ಮಜ್ಜಿ ಜೊತೆಗೆ ಚಂದು ಉಸೆಂಡಿ, ಲಲಿತಾ, ಜಾನಕಿ, ಪ್ರೇಮ್, ರಾಮಸಿಂಗ್ ದಾದಾ, ಸುಕೇಶ್ ಪೊಟ್ಟಮ್, ಲಕ್ಷ್ಮಿ, ಶೀಲಾ, ಸಾಗರ್, ಕವಿತಾ ಮತ್ತು ಯೋಗಿತಾ ಎಂಬ ನಕ್ಸಲರು ಸಹ ಶರಣಾಗಿದ್ದಾರೆ. ಇವರ ಶರಣಾಗತಿಯೊಂದಿಗೆ, ಮಹಾರಾಷ್ಟ್ರ, ಮಧ್ಯಪ್ರದೇಶ, ಛತ್ತೀಸ್ಗಢ ವಲಯಗಳು ನಕ್ಸಲ್ ಮುಕ್ತವಾಗುತ್ತಿದೆ ಎಂದು ವರದಿಯಾಗಿದೆ. ಬಾಲಘಾಟ್ನಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಅವರ ಮುಂದೆ ನಾಲ್ವರು ಮಹಿಳೆಯರು ಸೇರಿದಂತೆ ಹತ್ತು ನಕ್ಸಲರು ಶರಣಾದರು. ಅವರಿಗೆ ಸಂವಿಧಾನದ ಪ್ರತಿಯನ್ನು ನೀಡುವ ಮೂಲಕ ಮುಖ್ಯವಾಹಿನಿಗೆ ಬರಮಾಡಿಕೊಳ್ಳಲಾಯಿತು. ಈ ವೇಳೆ ಶರಣಾದ ನಕ್ಸಲರು ತಮ್ಮ ಶಸ್ತ್ರಾಸ್ತ್ರಗಳನ್ನು ಹಸ್ತಾಂತರಿಸಿದರು.
===================================
8) ಕಾಶ್ಮೀರದಲ್ಲಿ ಉಗ್ರರ ಅಡಗು ತಾಣ ಪತ್ತೆ
ಜಮ್ಮು ಮತ್ತು ಕಾಶ್ಮೀರದ ಭಲಾರಾ ಅರಣ್ಯ ಪ್ರದೇಶದಲ್ಲಿ ಪೊಲೀಸರ ವಿಶೇಷ ಕಾರ್ಯಾಚರಣೆ ತಂಡ ನಡೆಸಿದ ವಿಶೇಷ ಕಾರ್ಯಾಚರಣೆ ವೇಳೆ ಉಗ್ರರ ಅಡಗು ತಾಣ ಪತ್ತೆಯಾಗಿದೆ. ಗುಪ್ತಚರ ಮಾಹಿತಿಯ ಮೇರೆಗೆ ಎಸ್ಎಸ್ಪಿ ದೋಡಾ ಸಂದೀಪ್ ಮೆಹ್ತಾ ಅವರ ಮೇಲ್ವಿಚಾರಣೆಯಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ಜಮ್ಮು ಮತ್ತು ಕಾಶ್ಮೀರ ಪೊಲೀಸರ ಎಸ್ಒಜಿ ತಂಡವು ಅರಣ್ಯ ಪ್ರದೇಶದಲ್ಲಿ ಭಾನುವಾರ (ಡಿ.7) ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಈ ವೇಳೆ ಉಗ್ರರ ಅಡಗು ತಾಣ ಪತ್ತೆಯಾಗಿದ್ದು, ಒಂದು ಎಸ್ಎಲ್ಆರ್ ರೈಫಲ್, ಎರಡು ಮ್ಯಾಗಜೀನ್ಗಳು ಮತ್ತು 22 ಸುತ್ತಿನ ಸಜೀವ ಗುಂಡುಗಳು ಪತ್ತೆಯಾಗಿವೆ. ಈ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳ ವಶಪಡಿಸಿಕೊಂಡಿರುವುದು ಈ ಪ್ರದೇಶದಲ್ಲಿ ಭದ್ರತೆಯನ್ನು ಬಲಪಡಿಸಿದೆ. ಈ ಮೂಲಕ ರಾಷ್ಟ್ರವಿರೋಧಿ ಶಕ್ತಿಗಳ ಸಂಭಾವ್ಯ ದಾಳಿಯನ್ನು ತಡೆಯುವ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ. ಈ ಕಾರ್ಯಾಚರಣೆಯು ದೋಡಾ ಜಿಲ್ಲೆಯಲ್ಲಿ ಶಾಂತಿ, ಸ್ಥಿರತೆ ಮತ್ತು ಸಾರ್ವಜನಿಕ ಸುರಕ್ಷತೆಯನ್ನು ಕಾಪಾಡುವ ಜಮ್ಮು ಮತ್ತು ಕಾಶ್ಮೀರ ಪೊಲೀಸರ ಅಚಲ ಬದ್ಧತೆಯನ್ನು ಮತ್ತೊಮ್ಮೆ ಎತ್ತಿ ತೋರಿಸುತ್ತದೆ ಎಂದು ಪ್ರಕಟಣೆ ತಿಳಿಸಿದೆ.
===================================
9) 600 ಅಡಿ ಕಂದಕಕ್ಕೆ ಬಿದ್ದ ಕಾರು, 6 ಬಲಿ
ಮಹಾರಾಷ್ಟ್ರದಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಕಾರೊಂದು ಕಂದಕಕ್ಕೆ ಉರುಳಿ ಕನಿಷ್ಠ 6 ಮಂದಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಭಾನುವಾರ ನಾಸಿಕ್ನ ಕಲ್ವಾನ್ ತಾಲ್ಲೂಕಿನ ಸಪ್ತಶ್ರಿಂಗ್ ಗರ್ ಘಾಟ್ನಲ್ಲಿ ಣೇಶ್ ಪಾಯಿಂಟ್ ಬಳಿ ಘಟನೆ ಸಂಜೆ 4 ಗಂಟೆಗೆ ಈ ಘಟನೆ ನಡೆದಿದ್ದು, ಕಾರು 600 ಅಡಿ ಆಳದ ಕಂದಕಕ್ಕೆ ಬಿದ್ದು ಅದರಲ್ಲಿದ್ದ ಆರು ಜನರು ಸಾವನ್ನಪ್ಪಿದ್ದಾರೆ. ಮೃತರೆಲ್ಲರೂ ನಿಫಾದ್ ತಾಲ್ಲೂಕಿನ ಪಿಂಪಾಲ್ಗಾಂವ್ ಬಸ್ವಂತ್ನವರು ಎಂದು ಅಧಿಕಾರಿ ತಿಳಿಸಿದ್ದಾರೆ. ತೀರ್ಥಯಾತ್ರೆ ಮುಗಿಸಿಕೊಂಡು ಹಿಂತಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿದ್ದು, ಮೂಲಗಳ ಪ್ರಕಾರ ಇನ್ನೋವಾ ಕಾರಿನಲ್ಲಿ ಪೂಜ್ಯ ಸಪ್ತಶೃಂಗಿ ದೇವಿ ದೇವಸ್ಥಾನಕ್ಕೆ ತೀರ್ಥಯಾತ್ರೆ ಹೋಗಿ ವಾಪಸ್ ಆಗುತ್ತಿದ್ದಾಗ ಕಾರು ಕಂದಕಕ್ಕೆ ಉರುಳಿದೆ. ಅಪಘಾತದ ಸಂದರ್ಭದಲ್ಲಿ ಕಾರಿನಲ್ಲಿ ಒಟ್ಟು 7ಮಂದಿ ಪ್ರಯಾಣಿಕರಿದ್ದರು ಎನ್ನಲಾಗಿದ್ದು, ಈ ಪೈಕಿ 6 ಮಂದಿ ಸಾವನ್ನಪ್ಪಿದ್ದಾರೆ.. ಇನ್ನು ಈ ಅಪಘಾತದಲ್ಲಿ ಜೀವಹಾನಿಯಾಗಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ‘ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರೊಂದಿಗೆ ನನ್ನ ಆಲೋಚನೆಗಳು ಇವೆ. ಗಾಯಾಳುಗಳು ಬೇಗ ಚೇತರಿಸಿಕೊಳ್ಳಲಿ ಎಂದು ನಾನು ಪ್ರಾರ್ಥಿಸುತ್ತೇನೆ” ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
===============================
10) ಅಮೆರಿಕಾದ ಬಂದು ಸೋದರಳಿಯನ ಉಸಿರು ನಿಲ್ಲಿಸಿದ!
ಅಮೆರಿಕದಿಂದ ಭಾರತಕ್ಕೆ ಬಂದು ಸೋದರಳಿಯನನ್ನು ಕೊಲೆ ಮಾಡಿ, ಪಾಸ್ಪೋರ್ಟ್, ನಗದು ತೆಗೆದುಕೊಂಡು ಪರಾರಿಯಾಗಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಪಂಜಾಬ್ ಪೊಲೀಸರು ಬಂಧಿಸಿದ್ದಾರೆ. ಪಂಜಾಬ್ನ ಮೋಗಾ ಜಿಲ್ಲೆಯಲ್ಲಿ ಕೇವಲ ಒಂದು ತಿಂಗಳ ಹಿಂದೆ ಕ್ಯಾಲಿಫೋರ್ನಿಯಾದಿಂದ ಹಿಂದಿರುಗಿದ್ದ ಅನಿವಾಸಿ ಭಾರತೀಯನೊಬ್ಬ ತನ್ನ ಸೋದರಳಿಯನನ್ನು ಗುಂಡಿಕ್ಕಿ ಕೊಂದಿದ್ದಾನೆ ಎಂದು ಆರೋಪಿಸಲಾಗಿದೆ, ಕೃಷಿ ಭೂಮಿಯ ಮೇಲಿನ ಕೌಟುಂಬಿಕ ಕಲಹ ಹಿಂಸಾಚಾರದಲ್ಲಿ ಅಂತ್ಯ ಕಂಡಿತ್ತು. ಆರೋಪಿ 70 ವರ್ಷದ ಬಹದ್ದೂರ್ ಸಿಂಗ್, ಪಾಸ್ಪೋರ್ಟ್ ಮತ್ತು ನಗದು ತೆಗೆದುಕೊಂಡು ದೇಶ ಬಿಟ್ಟು ಪರಾರಿಯಾಗುವ ಕೆಲವೇ ನಿಮಿಷಗಳ ಮೊದಲು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ದಶಕಗಳಿಂದ ಅಮೆರಿಕದಲ್ಲಿ ತನ್ನ ಐದು ಮಕ್ಕಳೊಂದಿಗೆ ವಾಸಿಸುತ್ತಿರುವ ಬಹದ್ದೂರ್ ಸಿಂಗ್, ನಿಹಾಲ್ ಸಿಂಗ್ ವಾಲಾದ ಮಾಸ್ಸಿಕೆ ಗ್ರಾಮದಲ್ಲಿ ಜಂಟಿಯಾಗಿ ಹೊಂದಿದ್ದ ಸುಮಾರು 30 ಎಕರೆ ಕೃಷಿಭೂಮಿಯ ಬಗ್ಗೆ ತಮ್ಮ ಸೋದರಳಿಯ ನವದೀಪ್ ಸಿಂಗ್ ಜೊತೆ ದೀರ್ಘಕಾಲದ ವಿವಾದವನ್ನು ಹೊಂದಿದ್ದರು. ನವದೀಪ್ ಮತ್ತು ಅವರ ಪತ್ನಿ ಗುರುಪ್ರೀತ್ ಕೌರ್ ವಿವಾದಿತ ಹೊಲಕ್ಕೆ ಬಂದಿದ್ದರು. ಅಲ್ಲಿ ಬಹದ್ದೂರ್ ಸಿಂಗ್ ಮತ್ತು ಅವರ ಪತ್ನಿ ಜೋಗಿಂದರ್ ಕೌರ್ ಆಗಲೇ ಭೂಮಿಯನ್ನು ಉಳುಮೆ ಮಾಡುತ್ತಿದ್ದರು. ಆಗ ಜಗಳ ಶುರುವಾಗಿತ್ತು. ಬಹದ್ದೂರ್ ಸಿಂಗ್ ತನ್ನ ಪರವಾನಗಿ ಪಡೆದ ರಿವಾಲ್ವರ್ ಅನ್ನು ಹೊರತೆಗೆದು ಹತ್ತಿರದಿಂದ ಗುಂಡು ಹಾರಿಸಿದಾಗ ಅದು ನವದೀಪ್ ತಲೆಗೆ ಗುಂಡು ತಗುಲಿತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. 30 ವರ್ಷದ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ




