1) ಲೋಕಸಭೆಯಲ್ಲಿ “ವಂದೇ ಮಾತರಂ” ಕಿಚ್ಚು
ಪಶ್ಚಿಮ ಬಂಗಾಳ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ವಂದೇ ಮಾತರಂ ಬಗ್ಗೆ ಚರ್ಚೆ ಮಾಡಲಾಗುತ್ತಿದೆ ಎಂಬ ಪ್ರಿಯಾಂಕಾ ಗಾಂಧಿಯ ಆರೋಪಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವ ಅಮಿತ್ ಶಾ, ವಂದೇ ಮಾತರಂ ರಾಜಕೀಯಕ್ಕೆ ಸೀಮಿತವಲ್ಲ ಎಂದು ಸ್ಪಷ್ಟಪಡಿಸಿದರು. ವಂದೇ ಮಾತರಂ 150 ವರ್ಷ ಪೂರೈಸುತ್ತಿರುವ ಸಂದರ್ಭದಲ್ಲಿ ಈ ಚರ್ಚೆ ಅಗತ್ಯವಿದೆ ಎಂದು ಹೇಳಿದರು. ಇದನ್ನು ಬಂಗಾಳ ಚುನಾವಣೆಗೂ ಜೋಡಿಸುವುದು ದುರದೃಷ್ಟಕರ ಎಂದು ಶಾ ಟೀಕಿಸಿದರು. ವಂದೇ ಮಾತರಂ ಬಂಗಾಳಕ್ಕೆ ಮಾತ್ರವಲ್ಲ, ದೇಶದ ಪ್ರತಿಯೊಬ್ಬರ ಭಾವನೆಗೂ ಸಂಬಂಧಿಸಿದೆ ಮತ್ತು ಗಡಿಯಲ್ಲಿರುವ ಜವಾನರಿಗೂ ಇದು ಪ್ರೇರಣೆಯ ಶಕ್ತಿಯಾಗಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಮಲ್ಲಿಕಾರ್ಜುನ ಖರ್ಗೆ, ವಂದೇ ಮಾತರಂನ್ನು ರಾಷ್ಟ್ರ ಚಳವಳಿಗೆ ಕಾಂಗ್ರೆಸ್ವೇ ತಂದಿದೆ ಎಂದು ನೆನಪಿಸಿದರು. ನೆಹರೂಜಿಯನ್ನು ಟಾರ್ಗೆಟ್ ಮಾಡುವುದು ರಾಜಕೀಯದ ನಾಟಕ ಮಾತ್ರ ಎಂದರು. ಸರ್ಕಾರ ಜನರ ನೈಜ ಸಮಸ್ಯೆಗಳಿಂದ ಗಮನವನ್ನು ತಿರುಗಿಸಲು ಈ ವಿಷಯವನ್ನು ಎತ್ತುತ್ತಿದೆ ಎಂದು ಖರ್ಗೆ ಆರೋಪಿಸಿದರು.
===============================
2) ಪುದುಚೇರಿಯಲ್ಲಿ ದಳಪತಿ ವಿಜಯ್ ಹವಾ
ಕರೂರಿನಲ್ಲಿ ಕಾಲ್ತುಳಿತ ಪ್ರಕರಣದಲ್ಲಿ 41 ಜನರು ಪ್ರಾಣ ಕಳೆದುಕೊಂಡ ಘಟನೆ ನಡೆದು ಎರಡೂವರೆ ತಿಂಗಳ ನಂತರ ನಟ ಮತ್ತು ಟಿವಿಕೆ ಮುಖ್ಯಸ್ಥ ವಿಜಯ್ ಅವರು ಚುನಾವಣಾ ಪ್ರಚಾರದ ಅಖಾಡಕ್ಕೆ ಇಳಿದಿದ್ದಾರೆ. ಡಿ.9ರ ಮಂಗಳವಾರ ಪುದುಚೇರಿಯಲ್ಲಿ ತಮ್ಮ ಮೊದಲ ಬೃಹತ್ ರ್ಯಾಲಿಯನ್ನು ನಡೆಸಿ, ಡಿಎಂಕೆ ಸರ್ಕಾರ ಹಾಗೂ ಕೇಂದ್ರದ ವಿರುದ್ಧ ಟೀಕಾ ಪ್ರಹಾರ ಮಾಡಿದರು. ಪುದುಚೇರಿ ಸರ್ಕಾರ ಪಕ್ಷಪಾತವಿಲ್ಲದೆ ನಮಗೆ ಭದ್ರತೆ ನೀಡಿದೆ. ತಮಿಳುನಾಡಿನ ಡಿಎಂಕೆ ಸರ್ಕಾರ ಇದನ್ನು ನೋಡಿ ಕಲಿಯಬೇಕು.ಎಂದು ಪುದುಚೇರಿ ಮುಖ್ಯಮಂತ್ರಿ ಎನ್. ರಂಗಸ್ವಾಮಿ ಅವರ ಆಡಳಿತವನ್ನು ವಿಜಯ್ ಹಾಡಿ ಹೊಗಳಿದರು. ಮುಂದುರೆದು, ಡಿಎಂಕೆ ಸರ್ಕಾರ ಈಗ ಬುದ್ಧಿ ಕಲಿಯುವುದಿಲ್ಲ, 2026ರ ಚುನಾವಣೆಯಲ್ಲಿ ಜನರೇ ಅವರಿಗೆ ಪಾಠ ಕಲಿಸುತ್ತಾರೆ. ವಿಜಯ್ ತಮಿಳುನಾಡಲ್ಲಿ ಮಾತ್ರ ಮಾತನಾಡುತ್ತಾರೆ ಎಂದು ಭಾವಿಸಬೇಡಿ. ನಾನು ಪುದುಚೇರಿ ಪರವಾಗಿಯೂ ಇದ್ದೇನೆ ಎಂದು ಅಬ್ಬರಿಸಿದರು. ತಮಿಳುನಾಡಿನಂತೆಯೇ ಪುದುಚೇರಿಯಲ್ಲೂ ತಮ್ಮ ಪಕ್ಷದ ಧ್ವಜವನ್ನು ಹಾರಿಸಲಾಗುವುದು ಎಂದು ಘೋಷಿಸಿದರು.
================================
3) ಸಾವಿರಾರು ರಸಗೊಬ್ಬರಗಳ ಲೈಸೆನ್ಸ್ ರದ್ದು!
ಕಾಳಸಂತೆ, ಕಾಳಧನ ಹಾಗೂ ಗುಣಮಟ್ಟವಿಲ್ಲದ ವಸ್ತುಗಳನ್ನು ವಿತರಿಸಿದ್ದಕ್ಕಾಗಿ ರಸಗೊಬ್ಬರ ಸಂಸ್ಥೆಗಳ 5,371 ಪರವಾನಗಿಗಳನ್ನು ಸರ್ಕಾರ ರದ್ದುಗೊಳಿಸಿದೆ ಎಂದು, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಜಗತ್ ಪ್ರಕಾಶ್ ನಡ್ಡಾ ಮಂಗಳವಾರ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ. ಬಿಜೆಪಿ ಸದಸ್ಯ ಕಿರಣ್ ಚೌಧರಿ ಕೇಳಿದ ಪ್ರಶ್ನೆಗೆ ಉತ್ತರವಾಗಿ, ಶ್ರೀ ನಡ್ಡಾ, ರಾಜ್ಯಗಳಿಗೆ ದುಷ್ಕೃತ್ಯಗಳ ಮೇಲೆ ಕ್ರಮ ಕೈಗೊಳ್ಳಲು ಅಧಿಕಾರವಿದ್ದರೂ, ಕೇಂದ್ರವು 1955 ರ ಅಗತ್ಯ ಸರಕುಗಳ ಕಾಯಿದೆ ಮತ್ತು ರಸಗೊಬ್ಬರ ನಿಯಂತ್ರಣ ಆದೇಶದ ಅಡಿಯಲ್ಲಿ ತಿರುವು, ಸಂಗ್ರಹಣೆ ಮತ್ತು ಅಧಿಕ ಬೆಲೆಯಂತಹ ದುಷ್ಕೃತ್ಯಗಳನ್ನು ಪರಿಶೀಲಿಸಲು ಕ್ರಮ ತೆಗೆದುಕೊಳ್ಳುತ್ತದೆ. ಏಪ್ರಿಲ್ 1 ರಿಂದ ನವೆಂಬರ್ 28 ರವರೆಗೆ 5,058 ಷೋಕಾಸ್ ನೋಟಿಸ್ಗಳು ಬ್ಲಾಕ್ ಮಾರ್ಕೆಟಿಂಗ್ನಲ್ಲಿವೆ, 442 ಪ್ರಕರಣಗಳಲ್ಲಿ ಎಫ್ಐಆರ್ಗಳನ್ನು ದಾಖಲಿಸಲಾಗಿದೆ ಮತ್ತು 3,732 ಪರವಾನಗಿಗಳನ್ನು ರದ್ದುಗೊಳಿಸಲಾಗಿದೆ ಎಂದು ನಾವು ನಿಮಗೆ ಹೇಳಲು ಬಯಸುತ್ತೇವೆ ಎಂದು ಶ್ರೀ ನಡ್ಡಾ ಹೇಳಿದರು. ಕೇಂದ್ರವು ಪ್ರತಿ ರಾಜ್ಯಕ್ಕೂ ರಸಗೊಬ್ಬರಗಳನ್ನು ಪೂರೈಸಿದೆ ಮತ್ತು ಇಂಟಿಗ್ರೇಟೆಡ್ ಫರ್ಟಿಲೈಸರ್ ಮಾನಿಟರಿಂಗ್ ಸಿಸ್ಟಮ್ ಮೂಲಕ ಸರಬರಾಜುಗಳನ್ನು ನೈಜ ಸಮಯದಲ್ಲಿ ಮೇಲ್ವಿಚಾರಣೆ ಮಾಡಲಾಗುತ್ತದೆ ಎಂದು ಸಚಿವರು ಹೇಳಿದರು.
====================================
4) ಅಸ್ಸಾಂನಲ್ಲೇಕೆ SIR ಇಲ್ಲ? ECಗೆ ಸುಪ್ರೀಂ ಪ್ರಶ್ನೆ
ಅಸ್ಸಾಂನಲ್ಲಿ ಅಕ್ರಮ ವಲಸೆ ಮತ್ತು ಮತದಾರರ ಪಟ್ಟಿಗಳ ತೀವ್ರ ಪರಿಷ್ಕರಣೆ ಕುರಿತು ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮುಂದಿನ ವಾರ ವಿಚಾರಣೆ ನಡೆಸಲಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠವು, ಅಸ್ಸಾಂನಲ್ಲಿ ಕೇವಲ “ವಿಶೇಷ ಪರಿಷ್ಕರಣೆ” ಮೂಲಕವೇ ಮತದಾರರ ಪಟ್ಟಿಯನ್ನು ತಿದ್ದುಪಡಿ ಮಾಡುವುದೇನು ಎಂಬ ಪ್ರಶ್ನೆಯನ್ನು ಎತ್ತಿದೆ. ಅರ್ಜಿದಾರ ಮೃಣಾಲ್ ಕುಮಾರ್ ಚೌಧರಿ, 1997ರಲ್ಲಿ ರಾಜ್ಯದಲ್ಲಿ 40–50 ಲಕ್ಷ ಅಕ್ರಮ ವಲಸಿಗರಿದ್ದರು ಎಂದು ಮಾಜಿ ಗವರ್ನರ್ ಎಸ್.ಕೆ. ಸಿನ್ಹಾ ಮತ್ತು ಮಾಜಿ ಗೃಹ ಸಚಿವ ಇಂದ್ರಜಿತ್ ಗುಪ್ತಾ ನೀಡಿದ್ದ ವರದಿಯನ್ನು ಉಲ್ಲೇಖಿಸಿದ್ದಾರೆ. ಆರೋಪದ ಪ್ರಕಾರ, ಅಕ್ರಮ ವಲಸಿಗರ ಹೆಸರುಗಳು ಮತದಾರರ ಪಟ್ಟಿಗೆ ಸೇರಿರುವುದು ಅಸ್ಸಾಂನ ಜನಸಾಂಖ್ಯಿಕ ಸಮತೋಲನ ಹಾಗೂ ರಾಜಕೀಯ ಪರಿಸ್ಥಿತಿಗೆ ಹೊಡೆತ ಉಂಟುಮಾಡಬಹುದು. ಎಸ್ಐಆರ್ ನಡೆಸದಿದ್ದರೆ ಮುಂಬರುವ ಚುನಾವಣೆಯಲ್ಲೂ ಅವರು ಮತದಾನ ಹಕ್ಕು ಪಡೆಯುವ ಸಾಧ್ಯತೆ ಇದೆ ಎಂದು ಅರ್ಜಿ ಹೇಳಿದೆ.
=============================
5) ನಮೋ ಕ್ಷಮೆಯಾಚನೆಗೆ ದೀದಿ ಪಟ್ಟು
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯರನ್ನು “ಬಂಕಿಮ್ ದಾ” ಎಂದು ಉಲ್ಲೇಖಿಸಿರುವುದು ಶ್ರೇಷ್ಠ ಸಾಹಿತ್ಯಿಕ ವ್ಯಕ್ತಿತ್ವದ ಅವಮಾನ ಎಂದು ಆರೋಪಿಸಿ ರಾಷ್ಟ್ರದ ಕ್ಷಮೆಯಾಚನೆ ಬೇಡಿದರು. ಕೂಚ್ ಬೆಹಾರ್ ರ್ಯಾಲಿಯಲ್ಲಿ ಮಾತನಾಡಿದ ಅವರು, ವಂದೇ ಮಾತರಂ ಗೀತೆಯ 150 ವರ್ಷದ ಚರ್ಚೆಯ ವೇಳೆ ಲೋಕಸಭೆಯಲ್ಲಿ ಸಂಭವಿಸಿದ ಈ ಉಲ್ಲೇಖ ಬಂಗಾಳದ ಸಂಸ್ಕೃತಿಗೆ ಅವಮಾನಕಾರಿಯಾಗಿದೆ ಎಂದು ಹೇಳಿದರು. ಟಿಎಂಸಿ ಸಂಸದ ಸೌಗತ ರಾಯ್ ಕೂಡ ‘ಬಂಕಿಮ್ ಬಾಬು’ ಎಂದು ಕರೆಯಬೇಕೆಂದು ಸೂಚಿಸಿದ್ದರು, ಇದಕ್ಕೆ ಮೋದಿ ಒಪ್ಪಿಕೊಂಡಿದ್ದರು. ಬಿಜೆಪಿಯನ್ನು ಗುರಿಯಾಗಿಸಿದ ಬ್ಯಾನರ್ಜಿ, ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಬಂಗಾಳದ ಸಂಸ್ಕೃತಿ ಮತ್ತು ಪರಂಪರೆಯ ಮೇಲೆ ದಾಳಿ ನಡೆಯುತ್ತದೆ ಎಂದು ಆರೋಪಿಸಿದರು. ಎಸ್ಐಆರ್ ಬಳಿಕ ಅಂತಿಮ ಮತದಾರರ ಪಟ್ಟಿ ಪ್ರಕಟವಾದ ತಕ್ಷಣವೇ ವಿಧಾನಸಭೆ ಚುನಾವಣೆ ಘೋಷಣೆಯ ಸಾಧ್ಯತೆ ಇದೆ ಎಂದೂ ಅವರು ಹೇಳಿದರು.
==========================
6) ಸೋನಿಯಾ ಗಾಂಧಿಗೆ ಕೋರ್ಟ್ ನೋಟಿಸ್
ಹಿರಿಯ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಭಾರತೀಯ ಪೌರತ್ವ ಪಡೆಯುವ ಮೂರು ವರ್ಷಗಳ ಮೊದಲು 1980ರ ವೋಟರ್ ಲಿಸ್ಟ್ನಲ್ಲಿ ತಮ್ಮ ಹೆಸರನ್ನು ಸೇರಿಸಿದ್ದಕ್ಕಾಗಿ ಅವರ ವಿರುದ್ಧ ಎಫ್ಐಆರ್ಗೆ ಆದೇಶಿಸಲು ಮ್ಯಾಜಿಸ್ಟೀರಿಯಲ್ ನ್ಯಾಯಾಲಯ ನಿರಾಕರಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ಕುರಿತು ದೆಹಲಿ ನ್ಯಾಯಾಲಯ ಮಂಗಳವಾರ ನೋಟಿಸ್ ಜಾರಿ ಮಾಡಿದೆ. ಲೈವ್ ಲಾ ವರದಿಯ ಪ್ರಕಾರ, ಅರ್ಜಿಯಲ್ಲಿ ನಕಲಿ ದಾಖಲೆಗಳನ್ನು ಬಳಸಲಾಗಿದೆ ಎಂದು ಆರೋಪಿಸಲಾಗಿದೆ. ಕ್ರಿಮಿನಲ್ ಪರಿಷ್ಕರಣಾ ಅರ್ಜಿಯ ಕುರಿತು ಹಿರಿಯ ವಕೀಲ ಪವನ್ ನಾರಂಗ್ ಅವರ ಪ್ರಾಥಮಿಕ ಸಲ್ಲಿಕೆಗಳನ್ನು ಆಲಿಸಿದ ವಿಶೇಷ ನ್ಯಾಯಾಧೀಶ (ಪಿಸಿ ಕಾಯ್ದೆ) ವಿಶಾಲ್ ಗೋಗ್ನೆ, ಸೋನಿಯಾ ಗಾಂಧಿ ಮತ್ತು ದೆಹಲಿ ಪೊಲೀಸರ ಪ್ರತಿಕ್ರಿಯೆ ಪಡೆಯುವುದು ಸೂಕ್ತವೆಂದು ಪರಿಗಣಿಸಿದ್ದಾರೆ. ನ್ಯಾಯಾಲಯವು ಈ ಪ್ರಕರಣದ ವಿಚಾರಣೆಯನ್ನು 2026ರ ಜನವರಿ 6ಕ್ಕೆ ಮುಂದೂಡಿದೆ. ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (ACMM) ವೈಭವ್ ಚೌರಾಸಿಯಾ ಅವರ ಸೆಪ್ಟೆಂಬರ್ 11 ರ ಆದೇಶವನ್ನು ಪ್ರಶ್ನಿಸಿ ವಿಕಾಸ್ ತ್ರಿಪಾಠಿ ಅವರು ಕ್ರಿಮಿನಲ್ ಪರಿಷ್ಕರಣಾ ಅರ್ಜಿಯನ್ನು ಸಲ್ಲಿಸಿದ್ದಾರೆ.
=============================
7) ಅನಿಲ್ ಅಂಬಾನಿ ಪುತ್ರನ ವಿರುದ್ಧ ವಂಚನೆ ಕೇಸ್!
ಉದ್ಯಮಿ ಮುಕೇಶ್ ಅಂಬಾನಿ ಸಹೋದರ ಅನಿಲ್ ಅಂಬಾನಿ ಸಂಕಷ್ಟಗಳು ಹೆಚ್ಚಾಗುತ್ತಿದೆ. ಸಾವಿರಾರು ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಅನಿಲ್ ಅಂಬಾನಿ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಈ ಹೋರಾಟದ ನಡುವೆ ಇದೀಗ ಅನಿಲ್ ಅಂಬಾನಿ ಪುತ್ರ ಜೈ ಅನ್ಮೋಲ್ ಅನಿಲ್ ಅಂಬಾನಿಗೂ ಸಂಕಷ್ಟ ಎದುರಾಗಿದೆ. ಜೈ ಅನ್ಮೋಲ್ ವಿರುದ್ಧ ಸಿಬಿಐ 228 ಕೋಟಿ ರೂಪಾಯಿ ವಂಚನೆ ಪ್ರಕರಣ ದಾಖಲಿಸಿದೆ. ಹಲವು ಬ್ಯಾಂಕ್ಗಳು ಅನಿಲ್ ಅಂಬಾನಿ ಸೇರಿದಂತೆ ಇಬ್ಬರು ವಿರುದ್ದ ದೂರು ನೀಡಿದೆ. ಇದರ ಪರಿಣಾಮ ಪ್ರಕರಣ ಗಂಭೀರ ಸ್ವರೂಪ ಪಡದುಕೊಂಡಿದೆ. ಯೂನಿಯನ್ ಬ್ಯಾಂಕ್ ನೆರವು ಬಳಸಿಕೊಂಡು ರಿಲಯನ್ಸ್ ಹೋಮ್ ಫಿನಾನ್ಸ್ ಲಿಮಿಟೆಡ್ (RHFL) ನೂರಾರು ಕೋಟಿ ರೂಪಾಯಿ ವಂಚನೆ ಮಾಡಿದೆ ಎಂದು ಆಂಧ್ರ ಬ್ಯಾಂಕ್ ದೂರು ನೀಡಿದೆ. RHFL ನಿರ್ದೇಶಕರಾಗಿದ್ದ ಅನಿಲ್ ಅಂಬಾನಿ ಪುತ್ರ ಜೈ ಅನ್ಮೋಲ್, ರವೀಂದ್ರ ಶರದ್ ಸುಧಾಕರ್ ವಿರುದ್ದ ದೂರು ದಾಖಲಾಗಿದೆ. ಆಂಧ್ರ ಬ್ಯಾಂಕ್ ನೀಡಿರುವ ದೂರಿನ ಪ್ರಕಾರ, RHFL ಕಂಪನಿ 450 ಕೋಟಿ ರೂಪಾಯಿ ಸಾಲ ಪಡೆದಿತ್ತು. ಉದ್ಯಮದ ಕಾರಣದಿಂದ ಈ ಸಾಲವನ್ನು ಮುಂಬೈನ ಆಂಧ್ರ ಬ್ಯಾಂಕ್ ಎಸ್ಸಿಎಫ್ ಶಾಖೆಯಿಂದ ಪಡೆದಿತ್ತು. ಬಳಿಕ ಕಂಪನಿ ಸಾಲ ಮರುಪಾವತಿಸಲು ಹಿಂದೇಟು ಹಾಕಿತ್ತು. ಹಲವು ಬಾರಿ ನೋಟಿಸ್ ಬಳಿಕ ಕಂಪನಿ ದಿವಾಳಿ ಎಂದು ತೋರಿಸಿತ್ತು. ಹೀಗಾಗಿ 2019 ಸೆಪ್ಟೆಂಬರ್ 30 ರಂದು RHFL ಕಂಪನಿ ಎನ್ಪಿಎ ಲಿಸ್ಟ್ಗೆ ಸೇರಿಸಲಾಗಿತ್ತು.
===============================
8) ಏರ್ಪೋರ್ಟ್ಗೆ ಬಾಂಬ್ ಬೆದರಿಕೆ ಕರೆ
ಹೈದರಾಬಾದ್ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ, ಯುಎಸ್ಗೆ ಹೊರಡುವ ವಿಮಾನಕ್ಕೆ ಬಂದ ಹೊಸ ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಭದ್ರತೆಯನ್ನು ಕಟ್ಟುಬದ್ದಗೊಳಿಸಲಾಯಿತು, ಇದು 48 ಗಂಟೆಗಳಲ್ಲೇ ಎರಡನೇ ಘಟನೆ. “ಜಾಸ್ಪರ್” ಎಂಬ ಹೆಸರಿನಲ್ಲಿ ಯುಎಸ್ನಿಂದ ಕಳುಹಿಸಿದ ಇಮೇಲ್ನಲ್ಲಿ ನಿರ್ದಿಷ್ಟ ವಿಮಾನದಲ್ಲಿ ಬಾಂಬ್ ಅಳವಡಿಸಲಾಗಿದೆ ಮತ್ತು ಅದನ್ನು ನಿಷ್ಕ್ರಿಯಗೊಳಿಸಲು $1 ಮಿಲಿಯನ್ ಸುಲಿಗೆ ಬೇಡಿಕೆಯಿದೆ ಎಂದು ಹೇಳಲಾಗಿದೆ. CISF ಮತ್ತು ಭದ್ರತಾ ತಂಡಗಳು ವಿಮಾನ ನಿಲ್ದಾಣದ ಟರ್ಮಿನಲ್, ಸರಕು ಪ್ರದೇಶ, ಪಾರ್ಕಿಂಗ್ ಮತ್ತು ಅಂತರಾಷ್ಟ್ರೀಯ ವಿಮಾನಗಳಲ್ಲಿ ವ್ಯಾಪಕ ಶೋಧ ನಡೆಸಿ ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಹಚ್ಚಲಿಲ್ಲ. ಇದೇ ವೇಳೆ, ರಾಜ್ಯಪಾಲರ ಲೋಕ ಭವನ ಮತ್ತು ಮುಖ್ಯಮಂತ್ರಿಗಳ ಕಚೇರಿಗೂ ಇದೇ ರೀತಿಯ ಬೆದರಿಕೆ ಇಮೇಲ್ಗಳು ಬಂದಿದ್ದು, ನಗರದಲ್ಲಿ ಹೆಚ್ಚಿನ ಎಚ್ಚರಿಕೆ ಜಾರಿಯಾಗಿದೆ. ಪೊಲೀಸರು ಪ್ರಕರಣ ದಾಖಲಿಸಿ, ಸೈಬರ್ ತಂಡಗಳು ಇಮೇಲ್ ಮೂಲವನ್ನು ಪತ್ತೆಹಚ್ಚಲು ತನಿಖೆ ನಡೆಸುತ್ತಿವೆ. ಡಿಸೆಂಬರ್ 7 ರಂದು ಮೂರು ಅಂತರಾಷ್ಟ್ರೀಯ ವಿಮಾನಗಳಿಗೆ ಬಂದ ನಕಲಿ ಬೆದರಿಕೆಗಳ ನಂತರ ಇದು ಮತ್ತೊಂದು ಘಟನೆ.
====================================
9) ನೈಟ್ಕ್ಲಬ್ ಬೆಂಕಿ ದುರಂತ, ಬ್ಲ್ಯೂ ಕಾರ್ನರ್ ನೋಟಿಸ್
ಶನಿವಾರ ತಡರಾತ್ರಿ 25 ಜೀವಗಳನ್ನು ಬಲಿತೆಗೆದುಕೊಂಡ ಗೋವಾ ನೈಟ್ಕ್ಲಬ್ ಬೆಂಕಿ ಅವಘಡಕ್ಕೆ ಸಂಬಂಧಿಸಿದಂತೆ ಬಿರ್ಚ್ ಬೈ ರೋಮಿಯೋ ಲೇನ್ ನೈಟ್ಕ್ಲಬ್ ಮಾಲೀಕರಾದ ಸೌರವ್ ಲುಥ್ರಾ ಮತ್ತು ಗೌರವ್ ಲುಥ್ರಾ ವಿರುದ್ಧ ಇಂಟರ್ಪೋಲ್ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಿದೆ. ಹಾಗೇ, ಲುಥ್ರಾ ಸಹೋದರರ ನೈಟ್ಕ್ಲಬ್ ನೆಲಸಮಗೊಳಿಸಲು ಸರ್ಕಾರ ಆದೇಶಿಸಿದೆ. ಡಿಸೆಂಬರ್ 7ರ ಬೆಳಿಗ್ಗೆ ಲುಥ್ರಾ ಸಹೋದರರು ದೇಶವನ್ನು ತೊರೆದು ಫುಕೆಟ್ಗೆ ವಿಮಾನದಲ್ಲಿ ಪರಾರಿಯಾಗಿದ್ದರು. ಪೊಲೀಸರ ಹೇಳಿಕೆಯ ಪ್ರಕಾರ, ಉತ್ತರ ಗೋವಾದ ಅರ್ಪೋರಾ ಗ್ರಾಮದಲ್ಲಿರುವ ಬಿರ್ಚ್ ಬೈ ರೋಮಿಯೋ ಲೇನ್ ನೈಟ್ಕ್ಲಬ್ನ ಮಾಲೀಕರು ಡಿಸೆಂಬರ್ 7ರಂದು ಬೆಳಿಗ್ಗೆ 5.30ಕ್ಕೆ ಇಂಡಿಗೋ ಏರ್ಲೈನ್ಸ್ ವಿಮಾನದಲ್ಲಿ ಫುಕೆಟ್ಗೆ ಪಲಾಯನ ಮಾಡಿದರು. ಗೋವಾ ನೈಟ್ಕ್ಲಬ್ ಬೆಂಕಿ ಅವಘಡದ ತನಿಖೆಯ ಭಾಗವಾಗಿ, ಪೊಲೀಸರು ಅವರ ವಿರುದ್ಧ ಲುಕ್ಔಟ್ ನೋಟಿಸ್ ಅನ್ನು ಸಹ ಹೊರಡಿಸಿದ್ದಾರೆ. ಈ ನೋಟಿಸ್ ದೆಹಲಿಯ ಜಿಟಿಬಿ ನಗರದಲ್ಲಿರುವ ಅವರ ನಿವಾಸವನ್ನು ತಲುಪಿದೆ. ಆದರೆ ಮನೆಗೆ ಬೀಗ ಹಾಕಲಾಗಿತ್ತು. ಈ ಮಧ್ಯೆ ಗೋವಾ ಪೊಲೀಸರು ಲುಥ್ರಾ ಸಹೋದರರು ಮತ್ತು ಅವರ ಸಹಚರರನ್ನು ಪತ್ತೆಹಚ್ಚಲು ದೆಹಲಿಯಲ್ಲಿ ದಾಳಿಗಳನ್ನು ತೀವ್ರಗೊಳಿಸಿದ್ದಾರೆ.
==================================
10) ಕಾಂಗ್ರೆಸ್ನಿಂದ ಸಿಧು ಪತ್ನಿ ನವಜೋತ್ ಸಸ್ಪೆಂಡ್
ಕ್ರಿಕೆಟಿಗ-ರಾಜಕಾರಣಿ, ಪಂಜಾಬ್ ಕಾಂಗ್ರೆಸ್ ಮಾಜಿ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರ ಪತ್ನಿ ನವಜೋತ್ ಕೌರ್ ಸಿಧು ಸಿಎಂ ಸ್ಥಾನಕ್ಕೆ “500 ಕೋಟಿ ರೂ.ಗಳ ಸೂಟ್ಕೇಸ್” ನೀಡಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿ ಕಾಂಗ್ರೆಸ್ ಹೈಕಮಾಂಡ್ಗೆ ಮುಜುಗರ ತಂದಿದ್ದರು. ಅವರ ವಿವಾದಾತ್ಮಕ ಹೇಳಿಕೆಯ ಬಳಿಕ ಕಾಂಗ್ರೆಸ್ ಪಕ್ಷ ಅವರನ್ನು ಅಮಾನತುಗೊಳಿಸಿದೆ. 500 ಕೋಟಿ ರೂ. ಸೂಟ್ಕೇಸ್ ನೀಡುವವರು ಮುಖ್ಯಮಂತ್ರಿಯಾಗುತ್ತಾರೆ ಎಂಬ ಅವರ ಹೇಳಿಕೆಯಿಂದ ನವಜೋತ್ ಕೌರ್ ಭಾರಿ ವಿವಾದಕ್ಕೀಡಾಗಿದ್ದರು. ಇದರಿಂದ ಕಾಂಗ್ರೆಸ್ ವಿರುದ್ಧ ಬಿಜೆಪಿ ತೀವ್ರ ಆರೋಪಗಳನ್ನು ಮಾಡಿತ್ತು. ಆಮ್ ಆದ್ಮಿ ಪಕ್ಷ ಕೂಡ ಕಾಂಗ್ರೆಸ್ ವಿರುದ್ಧ ಈ ಹೇಳಿಕೆಯನ್ನು ದಾಳವಾಗಿಸಿಕೊಂಡಿತ್ತು. ತನ್ನ ಹೇಳಿಕೆ ವಿವಾದಕ್ಕೀಡಾಗುತ್ತಿದ್ದಂತೆ ಸ್ಪಷ್ಟನೆ ನೀಡಿದ್ದ ಕಾಂಗ್ರೆಸ್ ನಾಯಕಿಯೂ ಆಗಿರುವ ನವಜೋತ್ ಕೌರ್, ನಮ್ಮ ಕಾಂಗ್ರೆಸ್ ಪಕ್ಷವು ನಮ್ಮಿಂದ ಎಂದಿಗೂ ಏನನ್ನೂ ಬೇಡಿಕೆ ಇಟ್ಟಿಲ್ಲ. ಬೇರೆ ಪಕ್ಷದಿಂದ ನಮಗೆ ಸಿಎಂ ಸ್ಥಾನದ ಆಮಿಷವಿದೆಯೇ ಎಂದು ಕೇಳಿದಾಗ ನಾನು ಸಿಎಂ ಹುದ್ದೆಗೆ ನೀಡಲು ನಮ್ಮಲ್ಲಿ 500 ಕೋಟಿ ರೂ. ಹಣವಿಲ್ಲ ಎಂದು ಹೇಳಿದ್ದೆ. ನಮ್ಮ ಪಕ್ಷದ ಬಗ್ಗೆ ನಾನು ಮಾತಾಡಿಲ್ಲ, ಬೇರೆ ಪಕ್ಷಕ್ಕೆ ಆ ಮಾತು ಹೇಳಿದ್ದೆ ಎಂದು ಸ್ಪಷ್ಟನೆ ನೀಡಿದ್ದರು.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ




