1) BJP ಎದುರಿಸಲು ಒಂದಾದ ಠಾಕ್ರೆ ಬ್ರದರ್ಸ್
ರಾಜಕೀಯವಾಗಿ ದೂರವಾಗಿದ್ದ ಠಾಕ್ರೆ ಸಹೋದರರು, ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಹಾಗೂ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಅಧ್ಯಕ್ಷ ರಾಜ್ ಠಾಕ್ರೆ — ಬುಧವಾರ ತಮ್ಮ ಪುನರ್ಮಿಲನವನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಮುಂಬರುವ ಕಾರ್ಪೊರೇಷನ್ ಚುನಾವಣೆಯಲ್ಲಿ, ವಿಶೇಷವಾಗಿ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ, ಆಡಳಿತಾರೂಢ ಭಾರತೀಯ ಜನತಾ ಪಕ್ಷವನ್ನು ಒಟ್ಟಾಗಿ ಎದುರಿಸುವುದಾಗಿ ಇಬ್ಬರು ನಾಯಕರು ಸ್ಪಷ್ಟಪಡಿಸಿದ್ದಾರೆ. ಬಿಎಂಸಿ ಚುನಾವಣೆಗೆ ಮುನ್ನ ನಡೆದ ಈ ಪುನರ್ಮಿಲನವು ಮಹಾರಾಷ್ಟ್ರ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಯಾಗಿ ಪರಿಗಣಿಸಲಾಗಿದೆ. ಸದ್ಯಕ್ಕೆ ಸೀಟು ಹಂಚಿಕೆ ಕುರಿತು ಯಾವುದೇ ಅಧಿಕೃತ ಒಪ್ಪಂದ ಪ್ರಕಟಿಸಲಾಗಿಲ್ಲ. ಆದರೆ ರಾಜಕೀಯ ವಲಯಗಳಲ್ಲಿ ಹರಿದಾಡುತ್ತಿರುವ ಮಾಹಿತಿಯಂತೆ, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಸುಮಾರು 150 ಸ್ಥಾನಗಳಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ. ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವ ನಿರ್ಮಾಣ ಸೇನೆಯು ಉಳಿದ 77 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ನಿರೀಕ್ಷೆಯಿದೆ. ಬಿಎಂಸಿಯಲ್ಲಿ ಒಟ್ಟು 227 ಸ್ಥಾನಗಳಿವೆ. ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟವು ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ 288 ಸ್ಥಾನಗಳಲ್ಲಿ 207 ಸ್ಥಾನಗಳನ್ನು ಗೆದ್ದು ಬಲಿಷ್ಠ ಪ್ರದರ್ಶನ ನೀಡಿರುವ ಹಿನ್ನೆಲೆಯಲ್ಲೇ ಠಾಕ್ರೆ ಸಹೋದರರ ಪುನರ್ಮಿಲನದ ಘೋಷಣೆ ಬಂದಿದೆ.
=======================
2) ಪ್ರಿಯಾಂಕಾ ಗಾಂಧಿ ವಾದ್ರಾ ಭವಿಷ್ಯದ ಪ್ರಧಾನಿ
ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪತಿ ರಾಬರ್ಟ್ ವಾದ್ರಾ ಅವರು ಸಂದರ್ಶನವೊಂದರಲ್ಲಿ, ತಮ್ಮ ಪತ್ನಿಯ ಭವಿಷ್ಯದ ರಾಜಕೀಯ ಪಾತ್ರ ಸೇರಿದಂತೆ ಹಲವು ವಿಷಯಗಳ ಕುರಿತು ಮಾತನಾಡಿದ್ದಾರೆ. ಪ್ರಿಯಾಂಕಾ ಗಾಂಧಿಯನ್ನು ಭವಿಷ್ಯದ ಪ್ರಧಾನಿಯಾಗಿ ನೋಡಲಾಗುತ್ತಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಜನರು ಪ್ರಿಯಾಂಕಾವನ್ನು ಪ್ರೀತಿಸುತ್ತಾರೆ ಮತ್ತು ಅವಳು ಕಷ್ಟಪಟ್ಟು ಕೆಲಸ ಮಾಡುತ್ತಿರುವ ನಾಯಕಿ ಎಂದು ಹೇಳಿದ್ದಾರೆ. ಪ್ರಿಯಾಂಕಾ ತನ್ನ ಅಜ್ಜಿ ಇಂದಿರಾ ಗಾಂಧಿಯಿಂದ ಬಹಳಷ್ಟು ಕಲಿತಿದ್ದಾಳೆ. ಜನರು ಇಂದಿರಾ ಗಾಂಧಿಯನ್ನು ಅವಳಲ್ಲಿ ಕಾಣುತ್ತಾರೆ. ಆದರೆ ಅವಳಿಗೆ ತನ್ನದೇ ಆದ ಸಾಮರ್ಥ್ಯ ಮತ್ತು ನಾಯಕತ್ವ ಗುಣಗಳಿವೆ” ಎಂದು ವಾದ್ರಾ ಹೇಳಿದರು. ಜನಕೇಂದ್ರಿತ ಸಮಸ್ಯೆಗಳ ಬಗ್ಗೆ ಅವಳು ಸದಾ ಧ್ವನಿ ಎತ್ತುತ್ತಾಳೆ ಮತ್ತು ಜನರೊಂದಿಗೆ ನೇರ ಸಂಪರ್ಕ ಹೊಂದಿದ್ದಾಳೆ ಎಂದೂ ಅವರು ವಿವರಿಸಿದರು. ಇತ್ತೀಚೆಗೆ ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಅವರು ಪ್ರಿಯಾಂಕಾ ಗಾಂಧಿಯನ್ನು ಪ್ರಧಾನಿಯನ್ನಾಗಿ ಮಾಡುವ ಬಗ್ಗೆ ನೀಡಿದ ಹೇಳಿಕೆಯ ಬಳಿಕ, ಕಾಂಗ್ರೆಸ್‌ನೊಳಗೆ ನಾಯಕತ್ವ ಕುರಿತ ಹೊಸ ಚರ್ಚೆಗಳು ಆರಂಭವಾಗಿವೆ. ರಾಬರ್ಟ್ ವಾದ್ರಾ ಅವರ ಹೇಳಿಕೆಗಳು ಈ ಚರ್ಚೆಗೆ ಮತ್ತಷ್ಟು ಬಲ ನೀಡಿರುವಂತಾಗಿದೆ.
=======================
3) ಶುದ್ಧ ಗಾಳಿ ಒದಗಿಸದಿದ್ದರೆ GST ಕಡಿಮೆ ಮಾಡಿ
ನಾಗರಿಕರಿಗೆ ಶುದ್ಧ ಗಾಳಿಯನ್ನು ಒದಗಿಸಲು ಸಾಧ್ಯವಾಗದಿದ್ದರೆ, ಕನಿಷ್ಠ ಏರ್ ಪ್ಯೂರಿಫೈಯರ್‌ಗಳ ಮೇಲಿನ ಜಿಎಸ್‌ಟಿಯನ್ನು ಕಡಿಮೆ ಮಾಡಬೇಕು ಎಂದು ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದೆ. ಪ್ರಸ್ತುತ ಏರ್ ಪ್ಯೂರಿಫೈಯರ್‌ಗಳ ಮೇಲೆ ಶೇಕಡಾ 18ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ. ಏರ್ ಪ್ಯೂರಿಫೈಯರ್‌ಗಳನ್ನು ವೈದ್ಯಕೀಯ ಸಾಧನಗಳೆಂದು ಘೋಷಿಸಿ ಜಿಎಸ್‌ಟಿಯನ್ನು ಶೇಕಡಾ 5ಕ್ಕೆ ಇಳಿಸುವಂತೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯ ವೇಳೆ, ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ನೇತೃತ್ವದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು. ಈ ವಿಷಯದಲ್ಲಿ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಲಯ, ಶುದ್ಧ ಗಾಳಿ ಪ್ರತಿಯೊಬ್ಬ ನಾಗರಿಕನ ಮೂಲಭೂತ ಅಗತ್ಯ ಎಂದು ಹೇಳಿದೆ. “ಅದನ್ನು ಒದಗಿಸಲಾಗದಿದ್ದರೆ, ಕನಿಷ್ಠ ತೆರಿಗೆ ಕಡಿತಗೊಳಿಸಬೇಕು” ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ತಾತ್ಕಾಲಿಕವಾಗಿ 15 ದಿನಗಳ ಕಾಲ ತೆರಿಗೆ ವಿನಾಯಿತಿ ನೀಡುವ ಕುರಿತು ಚಿಂತನೆ ನಡೆಸುವಂತೆ ಸೂಚಿಸಿದ ಹೈಕೋರ್ಟ್, ಸರ್ಕಾರಿ ವಕೀಲರಿಗೆ ತಕ್ಷಣ ಸೂಚನೆ ಪಡೆದು ವರದಿ ಸಲ್ಲಿಸುವಂತೆ ನಿರ್ದೇಶಿಸಿದೆ.
==========================
4) ಹೈದರಾಬಾದ್ ನಲ್ಲಿ ಹೊಸ ವರ್ಷ ಸಂಭ್ರಮಕ್ಕೆ ಬ್ರೇಕ್!
ಹೊಸ ವರ್ಷದ ಆಚರಣೆಗಳ ಹಿನ್ನೆಲೆಯಲ್ಲಿ ಹೈದರಾಬಾದ್ ನಗರ ಪೊಲೀಸರು ಡಿಸೆಂಬರ್ 24ರಿಂದ ಹೊಸ ವರ್ಷದವರೆಗೆ ಕುಡಿದು ವಾಹನ ಚಲಾಯಿಸುವವರ ವಿರುದ್ಧ ವಿಶೇಷ ಜಾರಿ ಅಭಿಯಾನ ಆರಂಭಿಸಲಿದ್ದಾರೆ ಎಂದು ನಗರ ಪೊಲೀಸ್ ಕಮಿಷನರ್ ವಿ.ಸಿ. ಸಜ್ಜನಾರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಎಲ್ಲಾ ಪಬ್‌ಗಳು, ಬಾರ್‌ಗಳು ಹಾಗೂ ಮದ್ಯದಂಗಡಿಗಳನ್ನು ರಾತ್ರಿ 1 ಗಂಟೆಗೆ ಮುಚ್ಚುವಂತೆ ಸೂಚಿಸಲಾಗಿದೆ. ಪಾರ್ಟಿಗಳ ವೇಳೆ ಡ್ರಗ್ಸ್ ಪತ್ತೆಯಾದರೆ ಪಬ್ ಮಾಲೀಕರ ಮೇಲೂ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು. ಕುಡಿದು ವಾಹನ ಚಲಾಯಿಸಿ ಸಿಕ್ಕಿಬಿದ್ದವರಿಗೆ 10,000 ರೂ. ದಂಡ, ಆರು ತಿಂಗಳ ಜೈಲು ಶಿಕ್ಷೆ ಹಾಗೂ ವಾಹನ ವಶಪಡಿಸಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
========================
5) ಅರುಣಾಚಲವನ್ನು ಭಾರತದ ಭಾಗ ಎಂದಿದ್ದಕ್ಕೆ ಬಂಧನ
ಅರುಣಾಚಲ ಪ್ರದೇಶವನ್ನು ಭಾರತದ ಅವಿಭಾಜ್ಯ ಭಾಗವೆಂದು ಹೇಳಿದ್ದಕ್ಕಾಗಿ ಭಾರತೀಯ ಟ್ರಾವೆಲ್ ವ್ಲೋಗರ್ ಅನಂತ್ ಮಿತ್ತಲ್ ಅವರನ್ನು ನವೆಂಬರ್ 16ರಂದು ಚೀನಾದಲ್ಲಿ ಸುಮಾರು 15 ಗಂಟೆಗಳ ಕಾಲ ವಲಸೆ ಅಧಿಕಾರಿಗಳು ಬಂಧಿಸಿದರು. ‘ಆನ್ ರೋಡ್ ಇಂಡಿಯನ್’ ಎಂಬ ಹೆಸರಿನಿಂದ ಪರಿಚಿತರಾಗಿರುವ ಅನಂತ್, ಪ್ರವಾಸ ಮತ್ತು ಶಾಪಿಂಗ್ ಉದ್ದೇಶದಿಂದ ಚೀನಾಕ್ಕೆ ತೆರಳಿದ್ದರು.ಸಂದರ್ಶನಯೊಂದರಲ್ಲಿ ಮಾತನಾಡಿದ ಅವರು, ವಲಸೆ ತಪಾಸಣೆಯ ವೇಳೆ ಯಾವುದೇ ಕಾರಣ ತಿಳಿಸದೇ ತಮಗೆ ತಡೆ ನೀಡಲಾಗಿದ್ದು, ಕುಟುಂಬದವರನ್ನು ಅಥವಾ ರಾಯಭಾರ ಕಚೇರಿಯನ್ನು ಸಂಪರ್ಕಿಸಲು ಅವಕಾಶ ನೀಡಲಾಗಲಿಲ್ಲ ಎಂದು ಹೇಳಿದರು. ಬಂಧನ ಅವಧಿಯಲ್ಲಿ ದೈಹಿಕ ಹಿಂಸೆ ನಡೆದಿಲ್ಲವಾದರೂ, ಆಹಾರ ಮತ್ತು ನೀರನ್ನು ನೀಡಲಾಗಲಿಲ್ಲ ಎಂದು ಅವರು ಆರೋಪಿಸಿದ್ದಾರೆ. ಸುಮಾರು 15 ಗಂಟೆಗಳ ಕಾಲ ಅನಿಶ್ಚಿತತೆಯಲ್ಲೇ ಕಾಲ ಕಳೆಯಬೇಕಾಯಿತು ಎಂದು ಅನಂತ್ ಹೇಳಿದ್ದು, ಈ ಘಟನೆ ವಿದೇಶಗಳಲ್ಲಿ ಭಾರತೀಯ ನಾಗರಿಕರ ಸುರಕ್ಷತೆ ಕುರಿತು ಪ್ರಶ್ನೆಗಳನ್ನು ಎಬ್ಬಿಸಿದೆ.
===========================
6) ಮೆಟ್ರೋ ವಿಸ್ತರಣೆಗೆ ಗ್ರೀನ್ ಸಿಗ್ನಲ್
ಡೆಲ್ಲಿ ಮೆಟ್ರೋ ಐದನೇ ಹಂತದ ಯೋಜನೆಗೆ ಕೇಂದ್ರ ಸಂಪುಟ ಅನುಮೋದನೆ ಕೊಟ್ಟಿದ್ದು, 12,000 ಕೋಟಿ ರೂ ವೆಚ್ಚದಲ್ಲಿ ಮೆಟ್ರೋ ಜಾಲ ವಿಸ್ತರಣೆಯಾಗಲಿದೆ. ಕೇಂದ್ರ ಸಚಿವ ಎ ವೈಷ್ಣವ್ ಅವರು ಈ ವಿಚಾರವನ್ನು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಡೆಲ್ಲಿ ಮೆಟ್ರೋ ಫೇಸ್-5 (ಎ) ಪ್ರಾಜೆಕ್ಟ್ ಅಡಿಯಲ್ಲಿ ಮೂರು ಹೊಸ ಕಾರಿಡಾರ್ ಮೊದಲಾದವರು ನಿರ್ಮಾಣವಾಗಲಿವೆ. ಈ ಮೂರು ಕಾರಿಡಾರ್ಗಳ ಒಟ್ಟು ಉದ್ದ 16.076 ಕಿಮೀ ಆಗಿರಲಿದೆ. ಪ್ರಸ್ತಾಪವಾಗಿರುವ ಯೋಜನೆಯಲ್ಲಿ 16 ಕಿಮೀ ಜಾಲ ವಿಸ್ತರಣೆ ಆಗುವುದರ ಜೊತೆಗೆ 13 ಹೊಸ ಮೆಟ್ರೋ ಸ್ಟೇಷನ್ಗಳು ನಿರ್ಮಾಣವಾಗಲಿವೆ. ಈ ಪೈಕಿ 10 ಸುರಂಗ ನಿಲ್ದಾಣಗಳಾದರೆ, ಉಳಿದ ಮೂರು ಎಲಿವೇಟೆಡ್ ನಿಲ್ದಾಣವಾಗಲಿವೆ. ಸದ್ಯ ಡೆಲ್ಲಿ ಮೆಟ್ರೋ ಭಾರತದಲ್ಲಿರುವ ಅತಿದೊಡ್ಡ ಮೆಟ್ರೋ ಜಾಲ ಎನಿಸಿದೆ. 395 ಕಿಮೀ ಉದ್ದದ ನೆಟ್ವರ್ಕ್ ಹೊಂದಿದೆ. ಈಗ ಐದನೇ ಹಂತದ ಮೆಟ್ರೋ ಕಾಮಗಾರಿ ಪೂರ್ಣಗೊಂಡರೆ, ಇದರ ಒಟ್ಟು ಜಾಲ 400 ಕಿಮೀ ದಾಟುತ್ತದೆ. ಅಮೆರಿಕ ತನ್ನ ವಿವಿಧ ನಗರಗಳನ್ನು ಸೇರಿಸಿದರೆ ಸುಮಾರು 1,400 ಕಿಮೀ ಮೆಟ್ರೋ ಜಾಲ ಹೊಂದಿದೆ. ನಂತರದ ಸ್ಥಾನ ಭಾರತದ್ದು. ಆದರೆ, ವಿವಿಧ ನಗರಗಳಲ್ಲಿ ಮೆಟ್ರೋ ಜಾಲ ಕ್ಷಿಪ್ರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಕೆಲ ವರ್ಷಗಳಲ್ಲಿ ಭಾರತದ ಮೆಟ್ರೋ ಜಾಲ ಅಮೆರಿಕದ್ದನ್ನೂ ಮೀರಿಸುವ ಸಂಭವ ಇದೆ.
==========================
7) ಪ್ರೆಗ್ನೆಟ್ ವುಮೆನ್‌ಗೆ ಥಳಿತ-ಆರೋಪಿ ಮೆರವಣಿಗೆ
ಆಂಧ್ರಪ್ರದೇಶದ ಟಣಕಲ್ಲು ಮಂಡಲದ ಮುತ್ಯಾಲವರಿ ಪಲ್ಲಿ ಗ್ರಾಮದಲ್ಲಿ ಗರ್ಭಿಣಿ ಮಹಿಳೆಯ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದ ವ್ಯಕ್ತಿಯನ್ನು ಸತ್ಯ ಸಾಯಿ ಜಿಲ್ಲಾ ಪೊಲೀಸರು ಬಂಧಿಸಿ ಮೆರವಣಿಗೆ ನಡೆಸಿದ್ದಾರೆ. ಮಹಿಳೆಯರ ಮೇಲಿನ ದೌರ್ಜನ್ಯವನ್ನು ಸಹಿಸುವುದಿಲ್ಲ ಮತ್ತು ದೌರ್ಜನ್ಯ ಎಸಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕದಿರಿ DSP ಶಿವ ನಾರಾಯಣ ಸ್ವಾಮಿ ಹೇಳಿದ್ದಾರೆ. ಆರೋಪಿಯನ್ನು YSR ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಪಿ ಅಜಯ ದೇವ (25) ಎಂದು ಗುರುತಿಸಿದ್ದಾರೆ. YCP ಮುಖ್ಯಸ್ಥ ಜಗನ್ ಮೋಹನ್ ರೆಡ್ಡಿ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಆರೋಪಿಗಳು ಮತ್ತು ಮತ್ತೊಬ್ಬ YCP ಕಾರ್ಯಕರ್ತ ಅಂಜಿನಪ್ಪ ಪಟಾಕಿ ಸಿಡಿಸುತ್ತಿದ್ದರು, ಇದು ನೆರೆಹೊರೆಯವರನ್ನು ಕೆರಳಿಸಿತು ಎಂದು ಪೊಲೀಸರು ತಿಳಿಸಿದ್ದಾರೆ. ಆರು ತಿಂಗಳ ಗರ್ಭಿಣಿಯಾಗಿರುವ 29 ವರ್ಷದ ಪಿ. ಸಂಧ್ಯಾ ರಾಣಿ, ಶಬ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಬೇರೆಡೆಗೆ ಹೋಗಲು ಕೇಳಿಕೊಂಡಾಗ, ಅಜಯ್ ಅವರೊಂದಿಗೆ ಘರ್ಷಣೆ ನಡೆಸಿ, ಮಹಿಳೆಯ ಕುತ್ತಿಗೆ ಹಿಡಿದು ಹೊಟ್ಟೆಗೆ ಒದ್ದಿದ್ದಾನೆ. ಘಟನೆಯ ನಂತರ, ಪೊಲೀಸರು ಆರೋಪಿಯನ್ನು ಗ್ರಾಮೀಣ ಪೊಲೀಸ್ ಠಾಣೆಗೆ ಶ್ರೀ ಸತ್ಯಸಾಯಿ ಜಿಲ್ಲೆಯ ಕದಿರಿ ಪಟ್ಟಣದಲ್ಲಿ ಸಾರ್ವಜನಿಕರವಾಗಿ ಮೆರವಣಿಗೆ ಮಾಡಿಸಿದ್ದಾರೆ. ಸದ್ಯ ಆತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
=============================
8) ಡಿಜಿಟಲ್ ಅರೆಸ್ಟ್ – 9 ಕೋಟಿ ಗಾನ್
ಮುಂಬೈನ ಠಾಕೂರ್ದ್ವಾರ ಪ್ರದೇಶದ 85 ವರ್ಷದ ವ್ಯಕ್ತಿಯೊಬ್ಬರು ಪೊಲೀಸ್ ಅಧಿಕಾರಿಗಳೆಂದು ಹೇಳಿಕೊಂಡು ಸುಮಾರು 9 ಕೋಟಿ ರೂ.ಗಳನ್ನು ವಂಚಿಸಿದ್ದಾರೆ ಎಂದು ಮುಂಬೈನಿಂದ ಪ್ರಮುಖ ಸೈಬರ್ ವಂಚನೆ ವರದಿಯಾಗಿದೆ. ಹಣ ವರ್ಗಾವಣೆ ಮತ್ತು ಭಯೋತ್ಪಾದನೆಗೆ ಹಣಕಾಸು ಒದಗಿಸಲಾಗಿದೆ ಎಂದು ಸುಳ್ಳು ಆರೋಪ ಹೊರಿಸಿ, ಹಣವನ್ನು ಬಹು ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸುವಂತೆ ಒತ್ತಾಯಿಸಿದ್ದಾರೆ. ನವೆಂಬರ್ 28, 2025 ರಂದು, ಬಲಿಪಶುವಿನ ಮೊಬೈಲ್ ಫೋನ್‌ಗೆ ಕರೆ ಬಂದಿತು. ಕರೆ ಮಾಡಿದವರು ತಮ್ಮನ್ನು ನಾಸಿಕ್‌ನ ಪಂಚವಟಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ದೀಪಕ್ ಶರ್ಮಾ ಎಂದು ಪರಿಚಯಿಸಿಕೊಂದಿದ್ದಾರೆ. ತಮ್ಮ ಆಧಾರ್ ಕಾರ್ಡ್ ಬಳಸಿ ಬಲಿಪಶುವಿನ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆಯಲಾಗಿದೆ ಮತ್ತು ಈ ಖಾತೆಯನ್ನು ದೊಡ್ಡ ಪ್ರಮಾಣದ ಹಣ ವರ್ಗಾವಣೆಗೆ ಬಳಸಲಾಗುತ್ತಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಇದಲ್ಲದೆ, ಕರೆ ಮಾಡಿದವರು ಈ ಖಾತೆಯಿಂದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದಂತಹ ನಿಷೇಧಿತ ಸಂಘಟನೆಗೆ ಹಣವನ್ನು ಕಳುಹಿಸಲಾಗಿದೆ ಎಂದು ಸುಳ್ಳು ಹೇಳಿದ್ದಾರೆ.
==============================
9) ಫಾಸ್ಟ್‌ಫುಡ್ ತಿಂದು ಯುವತಿ ಸಾವು
ಉತ್ತರ ಪ್ರದೇಶದ ಅಮ್ರೋಹಾ ನಗರದ 11 ನೇ ತರಗತಿಯ ವಿದ್ಯಾರ್ಥಿನಿ ಅತಿಯಾದ ಫಾಸ್ಟ್ ಫುಡ್ ಸೇವನೆಯಿಂದ ತೀವ್ರ ಅನಾರೋಗ್ಯಕ್ಕೀಡಾಗಿ ಮೃತಪಟ್ಟಿರುವ ಘಟನೆ ನಡೆದಿದೆ. ದೆಹಲಿಯ ಏಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಹಾನಾ ಎಂಬ ವಿದ್ಯಾರ್ಥಿನಿ ಚಿಕಿತ್ಸೆ ಮಧ್ಯದಲ್ಲಿಯೇ ಮೃತಪಟ್ಟಿದ್ದಾಳೆ. ದೀರ್ಘಕಾಲದ ಅನಾರೋಗ್ಯಕರ ಆಹಾರ ಪದ್ಧತಿಯಿಂದಾಗಿ ಅಹಾನಾಳ ಆರೋಗ್ಯ ಸ್ಥಿತಿ ತೀವ್ರ ಹದಗೆಟ್ಟಿತ್ತು ಎಂದು ಏಮ್ಸ್ ವೈದ್ಯರು ತಿಳಿಸಿದ್ದಾರೆ. ವೈದ್ಯಕೀಯ ತಂಡದ ಪ್ರಕಾರ, ಆಕೆಯ ಕರುಳುಗಳು ಒಟ್ಟಿಗೆ ಅಂಟಿಕೊಂಡಿದ್ದವು. ಜೀರ್ಣಾಂಗ ವ್ಯವಸ್ಥೆಯು ಸಂಪೂರ್ಣವಾಗಿ ಹಾನಿಗೊಳಗಾಗಿತ್ತು. ಆಕೆಗೆ ಶಸ್ತ್ರಚಿಕಿತ್ಸೆ ಮಾಡಿದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ. ಅಹಾನಾ ಬಾಲ್ಯದಿಂದಲೂ ಚೌಮಿನ್, ಪಿಜ್ಜಾ ಮತ್ತು ಬರ್ಗರ್‌ಗಳಂತಹ ಫಾಸ್ಟ್ ಫುಡ್‌ಗಳನ್ನು ಇಷ್ಟಪಡುತ್ತಿದ್ದಳು. ಹೊರಗಿನ ಆಹಾರವನ್ನೇ ಹೆಚ್ಚು ಸೇವಿಸುತ್ತಿದ್ದಳು, ಮನೆಯ ಆಹಾರ ಆಕೆಗೆ ರುಚಿಸುತ್ತಿರಲಿಲ್ಲ. ಈ ಅಭ್ಯಾಸವು ಅಂತಿಮವಾಗಿ ಗಂಭೀರ ಆರೋಗ್ಯ ಸಮಸ್ಯೆಗೆ ಕಾರಣವಾಗಿದೆ.
==============================
10) ರಾಮನ ವಜ್ರ ಖಚಿತ ಚಿನ್ನದ ವಿಗ್ರಹ
ಅಯೋಧ್ಯೆಯ ರಾಮಲಲ್ಲಾ ದೇವಾಲಯ ಆವರಣ ಚಿನ್ನ, ಬೆಳ್ಳಿ, ವಜ್ರಗಳಿಂದ ಮಾಡಲಾದ ಭವ್ಯವಾದ ವಿಗ್ರಹ ಪ್ರತಿಷ್ಠಾಪನೆಗೆ ಸಾಕ್ಷಿಯಾಗಲಿದೆ. ವಜ್ರಗಳು, ಪಚ್ಚೆಗಳು ಮತ್ತು ಇತರ ಅಮೂಲ್ಯ ರತ್ನಗಳಿಂದ ಕೂಡಿದ 10 ಅಡಿ ಎತ್ತರ, 8 ಅಡಿ ಅಗಲದ ಈ ಪ್ರತಿಮೆಯನ್ನು ಕರ್ನಾಟಕದ ಭಕ್ತರೊಬ್ಬರು ದಾನ ಮಾಡಿದ್ದು ಮಂಗಳವಾರ ಸಂಜೆ ನಗರಕ್ಕೆ ತರಲಾಗಿದೆ. ದಕ್ಷಿಣ ಭಾರತದ ಸಾಂಪ್ರದಾಯಿಕ ಶಿಲ್ಪಕಲೆ ತಂತ್ರಗಳನ್ನು ಬಳಸಿ ರಚಿಸಲಾದ ಈ ಪ್ರತಿಮೆಯ ಮೌಲ್ಯ ಅಂದಾಜು 25–30 ಕೋಟಿ ರೂ. ಎನ್ನಲಾಗಿದೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸದಸ್ಯ ಡಾ. ಅನಿಲ್ ಮಿಶ್ರಾ, ದಾನಿ ಯಾರೆಂಬುದು ತಿಳಿದಿಲ್ಲ ಎಂದಿದ್ದಾರೆ. ತಿಮೆಯ ತೂಕವನ್ನು ಅಳೆಯಲಾಗುತ್ತಿದೆ, ಆದರೂ ಅದು ಸುಮಾರು ಐದು ಕ್ವಿಂಟಾಲ್‌ಗಳಷ್ಟಿದೆ. ಸಂಪೂರ್ಣ ವಿವರಗಳನ್ನು ಶೀಘ್ರದಲ್ಲೇ ಹಂಚಿಕೊಳ್ಳಲಾಗುವುದು ಎಂದು ಹೇಳಿದ್ದಾರೆ. ಡಿಸೆಂಬರ್ 29, 2025 ರಿಂದ ಜನವರಿ 2, 2026 ರವರೆಗೆ ಆಚರಿಸಲಾಗುವ ರಾಮ ಲಲ್ಲಾ ಪ್ರಾಣ ಪ್ರತಿಷ್ಠೆಯ ಎರಡನೇ ವಾರ್ಷಿಕೋತ್ಸವದ ಅಂಗವಾಗಿ ಪ್ರತಿಷ್ಠಾ ದ್ವಾದಶಿಗೆ ಸಿದ್ಧತೆಗಳು ಪ್ರಾರಂಭವಾಗಿವೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ




