1) ಕೇರಳದಲ್ಲಿ ಸಿದ್ದರಾಮಯ್ಯ ಅಹಿಂದ ಪಾಲಿಟಿಕ್ಸ್
ಚುನಾವಣೆ ಹತ್ತಿರ ಬರ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಗರಿಗೆದರೋದು ಸಾಮಾನ್ಯ. ವೋಟ್ ಬ್ಯಾಂಕ್ ಒಗ್ಗೂಡಿಸಲು ನಾಯಕರು ನಾನಾ ರಣತಂತ್ರ ರೂಪಿಸುತ್ತಾರೆ. ‘ಅಹಿಂದ ಮತ ಬ್ಯಾಂಕ್’ ಅನ್ನೋದು ಪ್ರತಿ ರಾಜ್ಯಗಳ ಚುನಾವಣೆಯಲ್ಲೂ ಬಹುಮುಖ್ಯ ಪಾತ್ರವಹಿಸುತ್ತೆ. ಮುಂದಿನ ವರ್ಷ ಕೇರಳದಲ್ಲಿ ವಿಧಾನಸಭೆ ಚುನಾವಣೆ ಹಿನ್ನೆಲೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಕಣ್ಣು ಸಿಎಂ ಖುರ್ಚಿ ಮೇಲಿದೆ. ಅಹಿಂದ ಮತ ಸೆಳೆಯಲು ಕೆಸಿವಿ ಮಾಸ್ಟರ್ ಪ್ಲಾನ್ ಮಾಡಿದ್ದು, ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರನ್ನ ಕೇರಳಕ್ಕೆ ಕರೆತರ್ತಿದ್ದಾರೆ. ಕರ್ನಾಟಕದಲ್ಲಿ ಸಿಎಂ ಕುರ್ಚಿ ಕದನ ಮತ್ತೆ ಕಿಚ್ಚು ಹಚ್ಚಿದೆ. ಡಿಕೆ ಶಿವಕುಮಾರ್ ಬಣದ ವಿರುದ್ಧ ಅಹಿಂದ ಸಮಾವೇಶದ ಮೂಲಕ ಶಕ್ತಿ ಪ್ರದರ್ಶನ ಮಾಡಲು ಸಿಎಂ ಸಿದ್ದರಾಮಯ್ಯ ಪ್ಲಾನ್ ಮಾಡಿದ್ದಾರೆ. ಇದರ ನಡುವೆ ಕೇರಳ ಅಹಿಂದ ಸಮಾವೇಶಕ್ಕೂ ಕರ್ನಾಟಕ ಅಹಿಂದ ನಾಯಕ ಸಿದ್ದರಾಮಯ್ಯ ಮುಖ್ಯ ಅತಿಥಿಗಳಾಗಿ ತೆರಳಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಕೇರಳದಲ್ಲಿ ಬೃಹತ್ ಅಹಿಂದ ಸಮಾವೇಶ ನಡೆಸಲು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಮುಂದಾಗಿದ್ದಾರೆ. ಈ ಸಮಾವೇಶಕ್ಕೆ ಸಿಎಂ ಸಿದ್ದರಾಮಯ್ಯ ಅವರನ್ನ ಕೆಸಿ ವೇಣುಗೋಪಾಲ್ ಅವರೇ ಖುದ್ದಾಗಿ ಆಹ್ವಾನ ನೀಡಿದ್ದಾರೆ ಎಂದು ತಿಳಿದು ಬಂದಿದೆ.
====================
2) ದುಬೈನಲ್ಲಿ ಮೋದಿ ಕನ್ನಡ ಪಾಠಶಾಲೆಗೆ ಶ್ಲಾಘನೆ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ ನ 129 ನೇ ಸಂಚಿಕೆಯಲ್ಲಿ 2025 ರ ಸಾಲಿನಲ್ಲಿ ಭಾರತ ವಿವಿಧ ಕ್ಷೇತ್ರಗಳಲ್ಲಿ ಸಾಧಿಸಿದ ಐತಿಹಾಸಿಕ ಮೈಲಿಗಲ್ಲುಗಳನ್ನು ಶ್ಲಾಘಿಸಿದರು. “2025 ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡುವಂತಹ ಅನೇಕ ಕ್ಷಣಗಳನ್ನು ನಮಗೆ ನೀಡಿದೆ,” ಎಂದು ಅವರು ಬಣ್ಣಿಸಿದರು. ಈ ವರ್ಷ ನಡೆದ ‘ಆಪರೇಷನ್ ಸಿಂದೂರ್’ ಪ್ರತಿ ಭಾರತೀಯನ ಹೆಮ್ಮೆಯ ಸಂಕೇತವಾಗಿದೆ. ಇಂದಿನ ಭಾರತವು ತನ್ನ ಭದ್ರತೆಯ ವಿಷಯದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂಬುದನ್ನು ಜಗತ್ತು ಕಂಡಿದೆ. ತಮ್ಮ ಭಾಷಣದಲ್ಲಿ ಪ್ರಧಾನಿಯವರು ದುಬೈನಲ್ಲಿ ನೆಲೆಸಿರುವ ಕನ್ನಡಿಗರ ಮಾತೃಭಾಷಾ ಪ್ರೇಮವನ್ನು ವಿಶೇಷವಾಗಿ ಉಲ್ಲೇಖಿಸಿದರು. “ದುಬೈನಲ್ಲಿ ವಾಸಿಸುವ ಕನ್ನಡ ಕುಟುಂಬಗಳು ತಮ್ಮ ಮಕ್ಕಳು ತಂತ್ರಜ್ಞಾನದ ಜಗತ್ತಿನಲ್ಲಿ ಬೆಳೆಯುತ್ತಿದ್ದರೂ, ತಮ್ಮ ಭಾಷೆಯಿಂದ ದೂರವಾಗುತ್ತಿದ್ದಾರೆಯೇ? ಎಂದು ಯೋಚಿಸಿದರು. ಈ ಆಲೋಚನೆಯಿಂದ ಹುಟ್ಟಿದ್ದೇ ‘ಕನ್ನಡ ಪಾಠಶಾಲೆ’. ಇಲ್ಲಿ ಮಕ್ಕಳಿಗೆ ಕನ್ನಡ ಓದಲು, ಬರೆಯಲು ಮತ್ತು ಮಾತನಾಡಲು ಕಲಿಸಲಾಗುತ್ತಿದೆ. ಇಂದು ಸಾವಿರಕ್ಕೂ ಹೆಚ್ಚು ಮಕ್ಕಳು ಇದರೊಂದಿಗೆ ತೊಡಗಿಕೊಂಡಿದ್ದಾರೆ ಎಂದು ಹೇಳಿದರು.
====================
3) ಕೊನೆಗೂ ತಪ್ಪೊಪ್ಪಿಕೊಂಡ ಪಾಕ್
ಈ ವರ್ಷದ ಮೇ ತಿಂಗಳಲ್ಲಿ ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತ ನಡೆಸಿದ ಕಾರ್ಯತಂತ್ರದ ಮತ್ತು ನಿಖರವಾದ ದಾಳಿಗಳ ಪರಿಣಾಮವನ್ನು ಪಾಕಿಸ್ತಾನ ಸರ್ಕಾರ ಸಾರ್ವಜನಿಕವಾಗಿ ಒಪ್ಪಿಕೊಂಡಿದೆ. ಏಪ್ರಿಲ್ನಲ್ಲಿ ಪಹಲ್ಗಾಮ್ನಲ್ಲಿ ನಡೆದ 26 ಭಾರತೀಯರ ಸಾವಿಗೆ ಪ್ರತಿಕ್ರಿಯೆಯಾಗಿ ಭಾರತ ಆಪರೇಷನ್ ಸಿಂಧೂರ್ ನಡೆಸಿದ ಹಲವು ತಿಂಗಳ ನಂತರ ಪಾಕಿಸ್ತಾನ ಈ ವಿಷಯವನ್ನು ಒಪ್ಪಿಕೊಂಡಿದೆ. ನೂರ್ ಖಾನ್ ವಾಯುನೆಲೆಗೆ ಹಾನಿಯನ್ನು ಪಾಕಿಸ್ತಾನ ಒಪ್ಪಿಕೊಂಡಿದೆ. ರಾವಲ್ಪಿಂಡಿಯ ಚಕ್ಲಾಲಾ ಪ್ರದೇಶದ ನೂರ್ ಖಾನ್ ವಾಯುನೆಲೆಯ ಮೇಲೆ ಭಾರತೀಯ ಡ್ರೋನ್ಗಳು ದಾಳಿ ನಡೆಸಿವೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ದಾರ್ ದೃಢಪಡಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಇಶಾಕ್ ದಾರ್, ಭಾರತದ ದಾಳಿಯು ಪಾಕಿಸ್ತಾನದ ಮಿಲಿಟರಿ ನೆಲೆಗೆ ಮತ್ತು ಅಲ್ಲಿ ನೆಲೆಸಿದ್ದ ಗಾಯಗೊಂಡ ಸಿಬ್ಬಂದಿಗೆ ಹಾನಿಯನ್ನುಂಟುಮಾಡಿದೆ ಎಂದು ಹೇಳಿದ್ದಾರೆ. ಇಶಾಕ್ ದಾರ್ ಅವರ ಪ್ರಕಾರ, ಭಾರತವು ಅಲ್ಪಾವಧಿಯಲ್ಲಿ ಪಾಕಿಸ್ತಾನದ ಪ್ರದೇಶಕ್ಕೆ ಹೆಚ್ಚಿನ ಸಂಖ್ಯೆಯ ಡ್ರೋನ್ಗಳ ದಾಳಿ ಮಾಡಿತ್ತು. 36 ಗಂಟೆಗಳ ಒಳಗೆ 80ಕ್ಕೂ ಹೆಚ್ಚು ಭಾರತದ ಡ್ರೋನ್ಗಳು ಗಡಿಯನ್ನು ದಾಟಿತ್ತು ಎಂದು ಅವರು ಹೇಳಿದ್ದಾರೆ.
===================
4) ಕದಂಬ ನೌಕಾನೆಲೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ಕಾರವಾರ ನೌಕಾ ನೆಲೆಯಲ್ಲಿ ಭಾರತೀಯ ನೌಕಾಪಡೆಯ ಸ್ಥಳೀಯ ಕಲ್ವರಿ ವರ್ಗದ ಜಲಾಂತರ್ಗಾಮಿ ಐಎನ್ಎಸ್ ವಾಘಶೀರ್ನಲ್ಲಿ ನೌಕಾಯಾನ ಮಾಡಿದರು. ಈ ಸಂಬಂಧ ರಾಷ್ಟ್ರಪತಿಗಳ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದ್ದು, ‘ರಾಷ್ಟ್ರಪತಿಗಳು ಪಶ್ಚಿಮ ಸಮುದ್ರ ತೀರದಲ್ಲಿ ಹಾರಾಟ ನಡೆಸುತ್ತಿದ್ದಾರೆ. ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ. ತ್ರಿಪಾಠಿ ಅವರು ಸಶಸ್ತ್ರ ಪಡೆಗಳ ಸುಪ್ರೀಂ ಕಮಾಂಡರ್ ಅವರೊಂದಿಗೆ ಇದ್ದಾರೆ’ ಎಕ್ಸ್ನಲ್ಲಿ ಪೋಸ್ಟ್ ಮಾಡಲಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕಲ್ವರಿ-ವರ್ಗದ ಜಲಾಂತರ್ಗಾಮಿ ನೌಕೆಯಲ್ಲಿ ನಡೆಸಿದ ಈ ಚೊಚ್ಚಲ ಹಾರಾಟವು, ಎಪಿಜೆ ಅಬ್ದುಲ್ ಕಲಾಂ ನಂತರ ಭಾರತೀಯ ರಾಷ್ಟ್ರಪತಿಗಳು ಕೈಗೊಂಡ ಎರಡನೇ ಹಾರಾಟವಾಗಿದೆ. ಆರನೇ P75 ಕಲ್ವರಿ-ವರ್ಗದ ಜಲಾಂತರ್ಗಾಮಿ ಐಎನ್ಎಸ್ ವಾಘಶೀರ್ ಅನ್ನು ಜನವರಿ 15, 2025 ರಂದು ಭಾರತೀಯ ನೌಕಾಪಡೆಗೆ ಅಧಿಕೃತವಾಗಿ ನಿಯೋಜಿಸಲಾಯಿತು. ಇದನ್ನು ಭಾರತೀಯ ಶಿಪ್ಯಾರ್ಡ್ ಮಜಗಾಂವ್ ಡಾಕ್ ಶಿಪ್ಬಿಲ್ಡರ್ಸ್ ಲಿಮಿಟೆಡ್ ನಿರ್ಮಿಸಿದೆ.
====================
5) ‘ಗೋಡ್ಸೆ ಸಂಘಟನೆಯಿಂದ ಕಲಿಯಲು ಏನೂ ಇಲ್ಲ’
ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಅವರು ಬಿಜೆಪಿ ಮತ್ತು ಆರ್ಎಸ್ಎಸ್ ಸಂಘಟನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವುದು ಪಕ್ಷದಲ್ಲಿ ಭಿನ್ನಮತಕ್ಕೆ ಕಾರಣವಾಗಿದೆ. ಈ ಹೇಳಿಕೆಗಳು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ನಡುವಿನ ಒಗ್ಗಟ್ಟಿನ ಬಗ್ಗೆ ಪ್ರಶ್ನೆಗಳನ್ನು ಎತ್ತಿವೆ. ದಿಗ್ವಿಜಯ ಸಿಂಗ್ ಅವರು ಎಕ್ಸ್ನಲ್ಲಿ, ಬಿಜೆಪಿ – ಆರ್ಎಸ್ಎಸ್ ಸಂಘಟನೆಗಳು ತಮ್ಮ ಕಾರ್ಯಕರ್ತರನ್ನು ಮುಖ್ಯಮಂತ್ರಿ ಮತ್ತು ಪ್ರಧಾನ ಮಂತ್ರಿಯಂತಹ ಉನ್ನತ ಹುದ್ದೆಗಳಿಗೆ ಬೆಳೆಸುವ ಸಾಮರ್ಥ್ಯವನ್ನು ಹೊಗಳಿದ್ದರು ಇದಕ್ಕೆ ಕಾಂಗ್ರೆಸ್ ತಿರುಗೇಟು ಕೊಟ್ಟಿದೆ. ಕಾಂಗ್ರೆಸ್ ವಕ್ತಾರ ಪವನ್ ಖೇರಾ ಅವರು ದಿಗ್ವಿಜಯ ಸಿಂಗ್ ಅವರ ಹೇಳಿಕೆಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ಆರ್ಎಸ್ಎಸ್ನಿಂದ ಕಲಿಯಲು ಏನೂ ಇಲ್ಲ. ಗೋಡ್ಸೆಗೆ ಹೆಸರುವಾಸಿಯಾದ ಸಂಘಟನೆಯು, ಗಾಂಧಿಯಿಂದ ಸ್ಥಾಪಿತವಾದ ಸಂಘಟನೆಗೆ ಏನು ಕಲಿಸಬಹುದು? ಎಂದು ಅವರು ಪ್ರಶ್ನಿಸಿದರು. ಇದು ಕಾಂಗ್ರೆಸ್ ಪಕ್ಷದೊಳಗಿನ ಭಿನ್ನಾಭಿಪ್ರಾಯವನ್ನು ಮತ್ತಷ್ಟು ಎತ್ತಿ ತೋರಿಸಿದೆ.
====================
6) 2026 ಚುನಾವಣೆ TMC ಲೋಗೋ ಬಿಡುಗಡೆ
ಪಶ್ಚಿಮ ಬಂಗಾಳದಲ್ಲಿ 2026 ರ ವಿಧಾನಸಭಾ ಚುನಾವಣೆಗೆ ಸಿದ್ಧತೆ ಆರಂಭವಾಗಿದ್ದು, ಆಡಳಿತಾರೂಢ ಟಿಎಂಸಿ ಪಕ್ಷವು ಹೊಸ ಘೋಷಣೆ ಮತ್ತು ಲೋಗೋವನ್ನು ಬಿಡುಗಡೆ ಮಾಡಿದೆ. “ಜೊತೋಯ್ ಕರೋ ಹಮ್ಲಾ, ಆಬಾರ್ ಜಿತ್ಬೆ ಬಾಂಗ್ಲಾ” (ನೀವು ಎಷ್ಟೇ ದಾಳಿ ಮಾಡಿದರೂ, ಮತ್ತೆ ಬಂಗಾಳ ಗೆಲ್ಲುತ್ತದೆ) ಎಂಬುದು ಪಕ್ಷದ ಹೊಸ ಘೋಷಣೆಯಾಗಿದೆ. ಇದು ಬಿಜೆಪಿ ಪಕ್ಷವನ್ನು ಗುರಿಯಾಗಿಸಿಕೊಂಡು ಹೇಳಿದ ಮಾತು ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಪಕ್ಷವು ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ಘೋಷಣೆಯ ಜೊತೆಗೆ, ಜನಸಮೂಹ ಘೋಷಣೆ ಮಾಡುತ್ತಿರುವ ಚಿತ್ರವಿರುವ ಹೊಸ ‘ಲೋಗೋ’ವನ್ನು ಹಂಚಿಕೊಂಡಿದೆ. 2021 ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ, ಟಿಎಂಸಿ ಪಕ್ಷವು ಬಿಜೆಪಿಯನ್ನು ‘ಹೊರಗಿನವರು’ ಎಂದು ಕರೆದಿತ್ತು. ಅದೇ ರೀತಿಯಲ್ಲಿ, ಈ ಬಾರಿಯೂ ಟಿಎಂಸಿ, ಬಿಜೆಪಿಯನ್ನು ‘ಬಾಂಗ್ಲಾ-ವಿರೋಧಿ ಜಮೀನ್ದಾರರು’ ಎಂದು ಟೀಕಿಸಿದೆ. “ಈ ಭೂಮಿಯ ಜನರನ್ನು ಶೋಷಿಸಿ, ಅವಮಾನಿಸಿ, ಬೆದರಿಸಿ, ಹಿಂಸಿಸಿದ ಬಾಂಗ್ಲಾ-ವಿರೋಧಿ ಜಮೀನ್ದಾರರ ವಿರುದ್ಧ ಬಂಗಾಳಿಗರ ಸಾಮೂಹಿಕ ಅಸಮಾಧಾನವನ್ನು ಸೆರೆಹಿಡಿಯುವ ಲೋಗೋ ಇದು” ಎಂದು ಪಕ್ಷವು ಟ್ವೀಟ್ ಮಾಡಿದೆ.
===================
7) ‘ಜನ ನಾಯಗನ್’ ನನ್ನ ಕೊನೆಯ ಸಿನಿಮಾʼ
ನಟ ಮತ್ತು ತಮಿಳಗ ವೆಟ್ರಿ ಕಳಗಂ ಮುಖ್ಯಸ್ಥ ದಳಪತಿ ವಿಜಯ್ ನಟನೆಗೆ ನಿವೃತ್ತಿ ಘೋಷಿಸಿದ್ದಾರೆ. ತಮ್ಮ ಕೊನೆಯ ಚಿತ್ರ ‘ಜನ ನಾಯಗನ್’ನ ಅದ್ಧೂರಿ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಈ ಘೋಷಣೆ ಮಾಡಿದ್ದು ಈಗ ಸಂಪೂರ್ಣವಾಗಿ ರಾಜಕೀಯದತ್ತ ಗಮನ ಹರಿಸುವುದಾಗಿ ಹೇಳಿದರು. ನಾನು ಈಗ ಚಲನಚಿತ್ರಗಳಿಂದ ದೂರ ಸರಿದು ಸಂಪೂರ್ಣವಾಗಿ ರಾಜಕೀಯದತ್ತ ಗಮನ ಹರಿಸುತ್ತೇನೆ. ನನಗೆ ಒಂದೇ ಒಂದು ಮುಖ್ಯ ವಿಷಯವೆಂದರೇ ಜನರು ಚಿತ್ರಮಂದಿರಗಳಿಗೆ ಬಂದು ನನ್ನ ಪರವಾಗಿ ನಿಲ್ಲುತ್ತಾರೆ. ಅದಕ್ಕಾಗಿಯೇ ನಾನು ಮುಂದಿನ 30-33 ವರ್ಷಗಳ ಕಾಲ ಅವರ ಪರವಾಗಿ ನಿಲ್ಲಲು ಸಿದ್ಧನಿದ್ದೇನೆ. ಈ ಅಭಿಮಾನಿಗಳಿಗಾಗಿಯೇ ನಾನು ಸಿನೆಮಾದಿಂದ ದೂರ ಸರಿಯುತ್ತಿದ್ದೇನೆ ಎಂದು ಹೇಳಿದರು. 2024ರ ಫೆಬ್ರವರಿ 2ರಂದು ವಿಜಯ್ ತಮ್ಮ ರಾಜಕೀಯ ಪಕ್ಷವಾದ ತಮಿಳಗ ವೆಟ್ರಿ ಕಳಗಂ ರಚನೆಯನ್ನು ಘೋಷಿಸಿದರು. ಆ ಸಮಯದಲ್ಲಿ, ಅವರು ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದರು. ವಿಜಯ್ ತಮ್ಮ ಕೊನೆಯ ಚಿತ್ರ ಜನ ನಾಯಗನ್ ಚಿತ್ರದ ದಳಪತಿ ಕಚಾರಿ ಹಾಡಿಗೆ ನೃತ್ಯ ಮಾಡಿದರು.
====================
8) ಮರಾಠಿ ಬರಲ್ಲ ಅಂತಾ ಮಗಳನ್ನೇ ಕೊಂದ ತಾಯಿ!
ಮಹಾರಾಷ್ಟ್ರದಲ್ಲಿ ಭಾಷಾ ವಿವಾದ ಹೊಸ ಆಯಾಮ ಪಡೆದುಕೊಳ್ಳುತ್ತಿದ್ದು, ಸರಿಯಾಗಿ ಮರಾಠಿ ಮಾತನಾಡಲು ಬರುವುದಿಲ್ಲ ಎಂಬ ಕಾರಣಕ್ಕೆ ಮಹಿಳೆಯೊಬ್ಬರು ತನ್ನ ಆರು ವರ್ಷದ ಮಗಳ ಕತ್ತು ಹಿಸುಕಿ ಕೊಂದಿರುವ ಅಮಾನವೀಯ ಘಟನೆ ನಡೆದಿದೆ. ಸುದೀರ್ಘ ವಿಚಾರಣೆಯ ನಂತರ ಮಹಿಳೆ ಪೊಲೀಸರಿಗೆ ನೀಡಿದ ಕಾರಣ ಇದೇ ಆಗಿದ್ದರೂ, ತನಗೆ ಮಗ ಇಲ್ಲದೆ, ಮಗಳಿದ್ದ ಬಗ್ಗೆ ಎಂಬ ಅತೃಪ್ತಿ ಇತ್ತು. ಇನ್ನಿತರ ಮಾನಸಿಕ ಸಮಸ್ಯೆಗಳಿಗಾಗಿ ಚಿಕಿತ್ಸೆ ಪಡೆಯುತ್ತಿದ್ದಾಗಿ ಅವರು ಹೇಳಿಕೊಂಡಿದ್ದಾರೆ. ನವಿ ಮುಂಬೈನ ಕಲಾಂಬೋಲಿಯಲ್ಲಿ ವಾಸಿಸುವ 30 ವರ್ಷದ ಮಹಿಳೆ ಹೃದಯಾಘಾತದಿಂದ ಮಗಳು ಸಾವನ್ನಪ್ಪಿದ್ದಾಳೆ ಎಂದು ಕಟ್ಟುಕಥೆ ಕಟ್ಟಲು ಯೋಜಿಸಿದ್ದಳು. ಆದರೆ, ಪೊಲೀಸ್ ಅಧಿಕಾರಿಯೊಬ್ಬರು ಇದನ್ನು ವಿಫಲಗೊಳಿಸಿದ್ದು, ಸಾವಿಗೆ ನಿಜವಾದ ಕಾರಣವನ್ನು ಪತ್ತೆಹಚ್ಚಿದ್ದಾರೆ. ಬಾಲಕಿಗೆ ಚಿಕ್ಕ ವಯಸ್ಸಿನಿಂದಲೂ ಮರಾಠಿ ಮಾತನಾಡಲು ಕಷ್ಟವಾಗುತ್ತಿತ್ತು. ಮರಾಠಿ ಬದಲಿಗೆ ಹೆಚ್ಚಾಗಿ ಹಿಂದಿ ಮಾತನಾಡುತ್ತಿದ್ದಳು. ಇದು ತಾಯಿಯ ಕೋಪಕ್ಕೆ ಕಾರಣವಾಯಿತು. ನನಗೆ ಅಂತಹ ಮಗು ಬೇಡ; ಅವಳು ಸರಿಯಾಗಿ ಮಾತನಾಡುವುದಿಲ್ಲ ಎಂದು ಗಂಡನಿಗೆ ಪದೇ ಪದೇ ಹೇಳಿದ್ದರು.ಗಂಡು ಮಗು ಬಯಸಿದ್ದ ಮಹಿಳೆಗೆ ಹೆಣ್ಣು ಮಗುವಾದಾಗ ಆತೃಪ್ತಿ ಹೊಂದಿದ್ದಳು. ಅಲ್ಲದೇ ಆಕೆ ಮಾನಸಿಕ ಸಮಸ್ಯೆಗಳಿಂದ ನರಳುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದಳು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
====================
9) ದಿಗ್ವಿಜಯ್ ಅಭಿಪ್ರಾಯ ಬೆಂಬಲಿಸಿದ ಶಶಿ ತರೂರ್
ನಮ್ಮ ಸಂಘಟನೆಯನ್ನು ಬಲಪಡಿಸಬೇಕೆಂದು ನಾನೂ ಬಯಸುತ್ತೇನೆ, ಅದರಲ್ಲಿ ಯಾವುದೇ ಸಂದೇಹವಿಲ್ಲ ಎನ್ನುವ ಮೂಲಕ ತಮ್ಮ ಪಕ್ಷದ ಸಹೋದ್ಯೋಗಿ ದಿಗ್ವಿಜಯ ಸಿಂಗ್ ಅವರ ಅಭಿಪ್ರಾಯವನ್ನು ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ಬೆಂಬಲಿಸಿದ್ದಾರೆ. ಭಾನುವಾರ ಇಲ್ಲಿನ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ನಡೆದ 140ನೇ ಸಂಸ್ಥಾಪನಾ ದಿನಾಚರಣೆಯ ಸಂದರ್ಭದಲ್ಲಿ ತರೂರ್ ಅವರು ದಿಗ್ವಿಜಯ್ ಸಿಂಗ್ ಪಕ್ಕದಲ್ಲಿಯೇ ಕುಳಿತಿದ್ದರು. ಸಿಂಗ್ ಪಕ್ಕದಲ್ಲಿ ಕುಳಿತಿದ್ದಾಗ ಇಬ್ಬರೂ ಅಭಿಪ್ರಾಯದ ಕುರಿತು ಚರ್ಚಿಸಿದ್ದೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ನಾವು ಪರಸ್ಪರ ಮಾತನಾಡುತ್ತಲೇ ಇರುತ್ತೇವೆ, ನಾವು ಸ್ನೇಹಿತರು ಮತ್ತು ಪರಸ್ಪರ ಮಾತನಾಡುತ್ತೇವೆ’ ಎಂದು ಹೇಳಿದ್ದಾರೆ. “ಇಂದು ಕಾಂಗ್ರೆಸ್ಸಿನ 140ನೇ ಸಂಸ್ಥಾಪನಾ ದಿನ. ಇದು ಪಕ್ಷಕ್ಕೆ ಬಹಳ ಮುಖ್ಯವಾದ ಘಟನೆಯಾಗಿದೆ. ಇದು ನಮ್ಮ ಗಮನಾರ್ಹ ಇತಿಹಾಸ ಮತ್ತು ಪಕ್ಷವು ರಾಷ್ಟ್ರಕ್ಕೆ ನೀಡಿದ ಕೊಡುಗೆಗಳನ್ನು ನಾವು ಹಿಂತಿರುಗಿ ನೋಡುವ ದಿನವಾಗಿದೆ” ಎಂದು ಅವರು ತಿಳಿಸಿದ್ದಾರೆ.
=======================
10) ಶಾರ್ಟ್ಸ್ ಹಾಕುವಂತಿಲ್ಲ, ಫೋನ್ ಬಳಸುವಂತಿಲ್ಲ
ಅಪ್ರಾಪ್ತ ವಯಸ್ಕರು ಶಾರ್ಟ್ಸ್ ಧರಿಸುವುದನ್ನು ಸ್ಮಾರ್ಟ್ ಫೋನ್ ಬಳಸುವುದನ್ನು ಉತ್ತರಪ್ರದೇಶದ ಗ್ರಾಮ ಪಂಚಾಯತ್ ವೊಂದರ ವ್ಯಾಪ್ತಿಯಲ್ಲಿ ನಿಷೇಧಿಸಲಾಗಿದೆ. ಇದು ಈಗ ದೇಶಾದ್ಯಂತ ಸುದ್ದಿ ಮಾಡಿದೆ ಮಾತ್ರವಲ್ಲ ಸಾಕಷ್ಟು ಮಂದಿಯಿಂದ ಈ ಕ್ರಮಕ್ಕೆ ಶ್ಲಾಘನೆ ಕೂಡ ವ್ಯಕ್ತವಾಗಿದೆ. ಉತ್ತರ ಪ್ರದೇಶದ ಬಾಗ್ಪತ್ ಜಿಲ್ಲೆಯ ಖಾಪ್ ಪಂಚಾಯತ್ ಸಾಮಾಜಿಕ ಮೌಲ್ಯಗಳು ಮತ್ತು ಶಿಸ್ತಿನ ಬಗ್ಗೆ ಕಳವಳ ವ್ಯಕ್ತಪಡಿಸಿ ಮಕ್ಕಳು ಸಾರ್ವಜನಿಕ ಸ್ಥಳಗಳಲ್ಲಿ ಸ್ಮಾರ್ಟ್ಫೋನ್ ಬಳಸುವುದು, ಶಾರ್ಟ್ಸ್ ಗಳನ್ನೂ ಧರಿಸುವುದನ್ನು ನಿಷೇಧಿಸಿದೆ. ಥಂಬಾ ಪಟ್ಟಿ ಮೆಹರ್ ದೇಶ್ಖಾಪ್ನ ಸಭೆಯಲ್ಲಿ ಶನಿವಾರ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ಖಾಪ್ ನಾಯಕರು, ಸಾರ್ವಜನಿಕ ಸ್ಥಳಗಳಲ್ಲಿ ಹುಡುಗರು ಕುರ್ತಾ, ಪೈಜಾಮಾ ಮತ್ತು ಹುಡುಗಿಯರು ಸಲ್ವಾರ್, ಕುರ್ತಾ ಧರಿಸಲು ಸಲಹೆ ನೀಡಿದ್ದಾರೆ. ಯಾವುದೇ ಕಾರಣಕ್ಕೆ ಅರ್ಧ ಪ್ಯಾಂಟ್ ಗಳನ್ನು ಧರಿಸುವಂತಿಲ್ಲ. ಇದು ಸಾಮಾಜಿಕ ರೂಢಿಗಳಿಗೆ ವಿರುದ್ಧವಾಗಿದ್ದು, ಸಮಾಜದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ತಿಳಿಸಿದ್ದಾರೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ




