1.ಕುಸುಮಾ ವಿರುದ್ದ ಮುನಿರತ್ನ ವಾಗ್ದಾಳಿ . ದೇವರ ಮೇಲೆ ಪ್ರಮಾಣ ಮಾಡಲಿ
ತಮ್ಮ ವಿರುದ್ಧ ಸುಳ್ಳು ಅತ್ಯಾಚಾರ ದೂರು ದಾಖಲಿಸಿರುವ ಹಿಂದೆ ರಾಜರಾಜೇಶ್ವರಿ ನಗರ ಕಾಂಗ್ರೆಸ್‌ನ ಪರಾಜಿತೆ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಅವರ ಕೈವಾಡ ಇದೆ ಅಂತಶಾಸಕ ಮುನಿರತ್ನ ವಾಗ್ದಾಳಿ ನಡೆಸಿದರು. ಬೆಂಗಳೂರಿನಲ್ಲಿ ಮಾತನಾಡಿದ ಶಾಸಕರು, ನನ್ನ ವಿರುದ್ಧ ಸುಳ್ಳು ರೇಪ್‌ಕೇಸ್ ಹಾಕಲಾಗಿದೆ. ನಾನು ಆದಿಚುಂಚನಗಿರಿಯ ಕಾಲ ಭೈರವ ದೇಗುಲಕ್ಕೆ ಬರ್ತೇನೆ. ಕುಸುಮಾ ಅವರೂ ಬರಲಿ. ರೇಪ್ ಕೇಸ್ ಕೊಟ್ಟವರು ಅವರಿಗೆ ಪರಿಚಯವೇ ಇಲ್ಲ ಅಂತಾ ದೇವರ ಎದುರೇ ಪ್ರಮಾಣ ಮಾಡಿ ಹೇಳಿಬಿಡಲಿ ಅಂತ ಮುನಿರತ್ನ ಸವಾಲು ಹಾಕಿದ್ರು. ನೀವು ಬುದ್ದಿವಂತರು, ವಿದ್ಯಾವಂತರು ಕೆಳಮಟ್ಟದ ರಾಜಕಾರಣ ಮಾಡಬೇಡಿ. ಕ್ಷೇತ್ರದಲ್ಲಿ ಕೆಲಸ ಮಾಡಲು ಸಹಾಯ ಮಾಡಿ, ಅಪಪ್ರಚಾರ ಮಾಡಬೇಡಿ ಅಂತ ಕಿಡಿಕಾರಿದರು. ಒಬ್ಬ ಶಾಸಕ ಕ್ಷೇತ್ರದಲ್ಲಿ ಬರಬಾರದು ಅಂತ ಮಾತನಾಡುತ್ತಿರುವುದು ಇದೇ ಮೊದಲು. ಪ್ರಕರಣ ಕೋರ್ಟ್‌ನಲ್ಲಿ ತೀರ್ಮಾನವಾಗುತ್ತೆ. ಅದಕ್ಕೆ ನಾವು ಬದ್ಧವಾಗಿರಬೇಕು. ಡಿಕೆ ಶಿವಕುಮಾರ್ ತಿಹಾರ್ ಜೈಲಿನಲ್ಲಿ ಇದ್ದವರು. ಅವರು ಅವರ ಕ್ಷೇತ್ರಕ್ಕೆ ಹೋಗುತ್ತಿದ್ದಾರೆ. ನನ್ನ ಕೇಸ್ ಕೋರ್ಟ್‌ನಲ್ಲಿದೆ. ಕ್ಷೇತ್ರಕ್ಕೆ ಹೋಗುವಹಾಗಿಲ್ಲ ಅಂದ್ರೆ ಹೇಗೆ? ಅಂತ ಪ್ರಶ್ನೆ ಮಾಡಿದರು.
2. ಮೋದಿಗೆ ಪತ್ರ ಬರೆದ ಸ್ನೇಹಮಯಿ ಕೃಷ್ಣ. ರಕ್ಷಣೆ ನೀಡುವಂತೆ ಮೋದಿಗೆ ಮನವಿ
ತನಗೆ ಮತ್ತು ತನ್ನ ಕುಟುಂಬಕ್ಕೆ ರಕ್ಷಣೆ ನೀಡುವಂತೆ ಮುಡಾ ಹಗರಣದ ದೂರುದಾರ ಸ್ನೇಹಮಯಿ ಕೃಷ್ಣ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಗೆ ಪತ್ರ ಬರೆದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಭ್ರಷ್ಟಾಚಾರ ಕುರಿತು ಹೋರಾಟ ಮಾಡುತ್ತಿದ್ದೇನೆ. ಹೀಗಾಗಿ, ನನಗೆ ಮತ್ತು ನನ್ನ ಕುಟುಂಬಕ್ಕೆ ಭದ್ರತೆ ನೀಡುವಂತೆ ಮೈಸೂರು ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದೆ. ಗನ್ ಮ್ಯಾನ್ ನೀಡುವಂತೆ ಕೇಳಿದ್ದೆ. ಆದರೆ, ಯಾವ ಭದ್ರತೆಯನ್ನು ನೀಡಿಲ್ಲ ಎಂದು ಸ್ನೇಹಮಯಿ ಕೃಷ್ಣ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಮಗೆ ಮತ್ತು ತಮ್ಮ ಕುಟುಂಬಕ್ಕೆ ರಕ್ಷಣೆ ಕೋರಿ ಪತ್ರದ ಮೂಲಕ ಪ್ರಧಾನಿ ಮೋದಿಯವರಿಗೆ ಮನವಿ ಸಲ್ಲಿಸಿದ್ದಾರೆ .
3. ಮಾಜಿ ಪ್ರಧಾನಿ ಮನಮೋಹನ ಸಿಂಗ್ ನಿಧನ , ಸಂಶೋಧನಾ ಕೇಂದ್ರ ಸ್ಥಾಪನೆ ಡಿಕೆಶಿ ಆಗ್ರಹ
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶರಾಗಿದ್ದು, ನಾಳೆ ಅವರ ಅಂತ್ಯಕ್ರಿಯೆ ನೆರವೇರಲಿದೆ. ಮನಮೋಹನ್ ಸಿಂಗ್ ಗೌರವಾರ್ಥ ರಾಜ್ಯದ ಡಿಸಿಎಂ ಡಿಕೆ ಶಿ ಅವರು ಹೊಸ ಯೋಜನೆ ಜಾರಿಗೆ ತರಲು ಮುಂದಾಗಿದ್ದಾರೆ. ದೇಶದ ಬೆಳವಣಿಗೆಗಾಗಿ ಅವ್ರ ಸುಧಾರಣೆಗಳ ಬಗ್ಗೆ ಎಲ್ಲ ವಿದ್ಯಾರ್ಥಿಗಳು ಕಲಿಯಲು ನೆರವಾಗಬೇಕು. ಹೀಗಾಗಿ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸಂಶೋಧನೆ ಮತ್ತು ಅಧ್ಯಯನ ಕೇಂದ್ರವನ್ನು ಪ್ರಾರಂಭಿಸುವುದಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ಮನಮೋಹನ್ ಸಿಂಗ್ ದೇಶಕ್ಕೆ ನೀಡಿರುವ ಕೊಡುಗೆಯನ್ನು ಎಂದಿಗೂ ಬದಲಾಯಿಸಲು ಸಾಧ್ಯವಿಲ್ಲ ಎಂದರು. ಹಣೆಬರಹ ನಮ್ಮ ಕೈಯಲ್ಲಿಲ್ಲ. ಆದರೆ, ಮನಮೋಹನ್ ಸಿಂಗ್ ಅವರು ಇನ್ನಿಲ್ಲವಾದರೂ ಅವರು ಜೀವಂತವಾಗಿದ್ದಾರೆ ಎಂದು ಹೇಳಲು ನಾನು ಹೆಮ್ಮೆಪಡುತ್ತೇನೆ. ದೇಶಕ್ಕೆ ಅವರು ನೀಡಿರುವ ಕೊಡುಗೆಗಳನ್ನು ಬದಲಾಯಿಸಲಾಗುವುದಿಲ್ಲ. ದೇಶದ ಬೆಳವಣಿಗೆಗಾಗಿ ಅವರು ರಚಿಸಿದ ಸುಧಾರಣೆಗಳ ಬಗ್ಗೆ ಕಲಿಯಲು ಎಲ್ಲ ವಿದ್ಯಾರ್ಥಿಗಳಿಗೆ ನೆರವಾಗುವಂತೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ನಾವು ಸಂಶೋಧನೆ ಮತ್ತು ಅಧ್ಯಯನ ಕೇಂದ್ರವನ್ನು ಪ್ರಾರಂಭಿಸಲಿದ್ದೇವೆ’ ಎಂದು ಅವರು ಹೇಳಿದರು. ಇನ್ನು ಮನಮೋಹನ್ ಸಿಂಗ್ ಒಬ್ಬ ಮಹಾನ್ ನಾಯಕ ಎಂದು ಮಾಜಿ ಪ್ರಧಾನಿ, ಜೆಡಿಎಸ್ ನಾಯಕ ಎಚ್‌ಡಿ ದೇವೇಗೌಡ ಹೇಳಿದ್ದಾರೆ.
4. ವಕ್ಫ್ ಭೂಮಿ ವಿವಾದ, ಕರ್ನಾಟಕಕ್ಕೆ ಮಾಹಿತಿ ಕೇಳಿದ JPC
ವಕ್ಫ್ ಬೋರ್ಡ್ ಆಸ್ತಿ ವಿವಾದ ಕರ್ನಾಟಕದಲ್ಲಿ ಸಾಕಷ್ಟು ಸದ್ದು ಮಾಡಿದೆ. ವಕ್ಫ್ ಮಸೂದೆ ಪರಿಶೀಲಿಸುತ್ತಿರುವ ಜಂಟಿ ಸಂಸದೀಯ ಸಮಿತಿಗೆ ಕರ್ನಾಟಕದ ಅಧಿಕಾರಿಗಳು ಗುರುವಾರ ಮಾಹಿತಿ ನೀಡಿದರು. ಕರ್ನಾಟಕ ನೀಡಿದ ಮಾಹಿತಿಗೆ ಸಮಿತಿ ತೀವ್ರ ಅಸಮಾಧಾನ ವ್ಯಕ್ತಪಡಿಸಿ, 15 ದಿನಗಳಲ್ಲಿ ವಿವರವಾದ ಉತ್ತರ ನೀಡುವಂತೆ ತಾಕೀತು ಮಾಡಿತು. ವಕ್ಫ್ ಮಂಡಳಿಗಳು ಹಕ್ಕು ಸಾಧಿಸಿರುವ ಆಸ್ತಿಗಳು ಮತ್ತು ಸರ್ಕಾರ ಅಥವಾ ಸರ್ಕಾರಿ ಸಂಸ್ಥೆಗಳ ಅಧಿಕೃತ ಸ್ವಾಧೀನದಲ್ಲಿರುವ ವಕ್ಫ್ ಆಸ್ತಿಗಳ ವಿವರ ಸಲ್ಲಿಸುವಂತೆ ವಿವಿಧ ರಾಜ್ಯಗಳಿಗೆ ಜೆಪಿಸಿ ಸೂಚಿಸಿತ್ತು. ಜಿಪಿಸಿ ಅಧ್ಯಕ್ಷ ಜಗದಂಬಿಕಾ ಪಾಲ್ ನೇತೃತ್ವದ ಸಮಿತಿಯು ಕರ್ನಾಟಕದ ಅಭಿಪ್ರಾಯವನ್ನು ಆಲಿಸಿತು. ರಾಜ್ಯ ವಕ್ಫ್ ಮಂಡಳಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಿಲಾನಿ ನೇತೃತ್ವದ ಅಧಿಕಾರಿಗಳ ತಂಡವು ಮಾಹಿತಿ ನೀಡಿದರು. ಆದರೆ, ಕರ್ನಾಟಕದ ನಿಯೋಗ ನೀಡಿದ ಮಾಹಿತಿ ತೃಪ್ತಿಕರವಾಗಿಲ್ಲ. ಪ್ರತಿಕ್ರಿಯೆಯನ್ನು ಒದಗಿಸಲು 15 ದಿನಗಳ ಕಾಲಾವಕಾಶ ನೀಡಿದ್ದೇವೆ ಮತ್ತು ಅಗತ್ಯವಿದ್ದರೆ ಮತ್ತೆ ಕರೆಯುತ್ತೇವೆ ಎಂದು ಜಗದಂಬಿಕಾ ಪಾಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ ಅಂತ ವರದಿಯಾಗಿದೆ.
5. ಮತ್ತೆ ಬಿಜೆಪಿಯ ರೆಬಲ್ಸ್ ಪ್ರವಾಸ, ವಿಜಯೇಂದ್ರ vs ಯತ್ನಾಳ್ ಟೀಂ
ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಬಂಧನ ಪ್ರಕರಣ ರಾಜ್ಯದಲ್ಲಿ ಕೋಲಾಹಲ ಎಬ್ಬಿಸಿತ್ತು.ಸದ್ಯ ಬಿಜೆಪಿ ಮತ್ತೆ ಹಳೇ ಹಾದಿ ಹಿಡಿದಿದ್ದು, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದ ರೆಬಲ್ಸ್ ಟೀಂ ಗುರುವಾರ ಮತ್ತೆ ಸಭೆ ನಡೆಸಿದೆ. ಮಾಜಿ ಶಾಸಕ ಕುಮಾರ ಬಂಗಾರಪ್ಪ ನಿವಾಸದಲ್ಲಿ ಸಭೆ ನಡೆಸಿದ ಈ ತಂಡ ಜನವರಿ ಮೊದಲನೇ ವಾರದಿಂದ ಹಳೇ ಮೈಸೂರು ಭಾಗದಲ್ಲಿ ವಕ್ಫ್ ಪ್ರವಾಸ ನಡೆಸುವ ಬಗ್ಗೆ ಚರ್ಚೆ ನಡೆಸಿದೆ. ಯತ್ನಾಳ್, ಅರವಿಂದ ಲಿಂಬಾವಳಿ, ರಮೇಶ್ ಜಾರಕಿಹೊಳಿ, ಕುಮಾರ ಬಂಗಾರಪ್ಪ, ಎನ್.ಆರ್. ಸಂತೋಷ್ ಸೇರಿ ಹಲವರು ಈ ಸಭೆಯಲ್ಲಿ ಭಾಗವಹಿಸಿದ್ದು, ಮುಂದಿನ ಕಾರ್ಯತಂತ್ರದ ಬಗ್ಗೆ ಚರ್ಚಿಸಿದ್ದಾರೆ. ಸಭೆ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಅರವಿಂದ ಲಿಂಬಾವಳಿ, ಈಗಾಗಲೇ ನಾವು ಮೊದಲ ಸುತ್ತಿನ ವಕ್ಫ್ ಹೋರಾಟ ಪೂರ್ಣಗೊಳಿಸಿದ್ದೇವೆ. ಕರ್ನಾಟಕದ ಅಧಿಕಾರಿಗಳನ್ನು ಗುರುವಾರ ಜೆಪಿಸಿ ವಿವರಣೆ ಪಡೆಯುವುದಕ್ಕಾಗಿ ಕರೆದಿತ್ತು. ನನಗೆ, ಪ್ರತಾಪಸಿಂಹ, ಕುಮಾರ ಬಂಗಾರಪ್ಪ ಅವರಿಂದ ಇನ್ನೂ ಹೆಚ್ಚಿನ ಮಾಹಿತಿಯನ್ನು ಜೆಪಿಸಿ ಕೇಳಿದೆ. ಆ ಹಿನ್ನೆಲೆಯಲ್ಲಿ ಚರ್ಚೆ ಮಾಡಲು ಇವತ್ತು ಸಭೆ ಸೇರಿದ್ದೆವು ಅಂತ ಹೇಳಿದರು. ಜನವರಿ ಮೊದಲ ವಾರದಲ್ಲಿ ದಿಲ್ಲಿಗೆ ಹೋಗಿ ಮಾಹಿತಿ ಕೊಡುವ ಕೆಲಸ ಮಾಡುತ್ತೇವೆ. ಸದನದಲ್ಲಿ ಸರಕಾರ ಕೊಟ್ಟ ಉತ್ತರದಿಂದ ನಮಗೆ ನಿರಾಸೆ ಆಗಿದೆ. ಇದು ಮುಸ್ಲಿಮರ ಪರವಾಗಿರುವ ಸರಕಾರ. ದಿಲ್ಲಿಗೆ ಹೋಗಿ ಬಂದ ಅನಂತರವೇ ಜನವರಿಯಲ್ಲಿ ನಮ್ಮ 2ನೇ ಹಂತದ ಪ್ರವಾಸ ಪ್ರಾರಂಭಿಸುತ್ತೇವೆ. ಇನ್ನೂ ಪ್ರವಾಸದ ದಿನಾಂಕ ನಿಗದಿ ಮಾಡಿಲ್ಲ. ಹಳೇ ಮೈಸೂರು ಭಾಗದ ರೈತರಿಂದ ನಾವು ಈ ಬಾರಿ ಮಾಹಿತಿ ಪಡೆದುಕೊಳ್ಳುತ್ತೇವೆ ಅಂತ ವಿವರಿಸಿದರು.ಇಂದು ನಾವು ನಡೆಸಿರುವುದು ಪ್ರತ್ಯೇಕ ಸಭೆಯಲ್ಲ, ಭಿನ್ನಮತವೂ ಅಲ್ಲ. ನಾವು ವಕ್ಫ್ ವಿಚಾರದ ಬಗ್ಗೆ ಚರ್ಚೆ ನಡೆಸಿದ್ದೇವೆ. ನಮ್ಮ ಸಭೆಯ ಬಗ್ಗೆ ಮಾಜಿ ಶಾಸಕರು ಏನಾದರೂ ಹೇಳಿಕೊಳ್ಳಲಿ, ನಾವು ವಕ್ಫ್ ಹೋರಾಟ ನಿಲ್ಲಿಸುವುದಿಲ್ಲ. ನಮ್ಮ ಮಟ್ಟದಲ್ಲಿ ಜನಪರ ಹೋರಾಟ ಮಾಡುತ್ತಿದ್ದೇವೆ ಲಿಂಬಾವಳಿ ಹೇಳಿದರು.
6. ಅಣ್ಣಾಮಲೈ ಮಹಾ ಶಪಥ, DMK ಕಿತ್ತೊಗೆಯುವರೆಗೆ ಚಪ್ಪಲಿ ಧರಿಸಲ್ಲ
ಡಿಎಂಕೆ ಆಡಳಿತದಲ್ಲಿ ತಮಿಳುನಾಡಿನಲ್ಲಿ ಕಾನೂನು, ಸುವ್ಯವಸ್ಥೆ ಹದಗೆಟ್ಟಿದೆ. ರಾಜ್ಯದಲ್ಲಿ ಡಿಎಂಕೆ ಪಕ್ಷವನ್ನು ಅಧಿಕಾರದಿಂದ ಕಿತ್ತೊಗೆಯುವವರೆಗೂ ಚಪ್ಪಲಿ ಧರಿಸುವುದಿಲ್ಲ ಅಂತ ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ ಶಪಥ ಮಾಡಿದ್ದಾರೆ. ಇನ್ನು ‘ಅಣ್ಣಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ಕಿರುಕುಳ ನಡೆದಿರುವುದನ್ನು ಖಂಡಿಸಿ ಪ್ರತಿಭಟನೆಯ ಭಾಗವಾಗಿ ಶುಕ್ರವಾರ ತಮ್ಮ ನಿವಾಸದ ಮುಂದೆ ಆರು ಬಾರಿ ಛಡಿಯೇಟು ಹೊಡೆದುಕೊಳ್ಳುತ್ತೇನೆ’ ಎಂದಿದ್ರು. ಇನ್ನು ಕೊಯಮತ್ತೂರಿನಲ್ಲಿ ಶನಿವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ಡಿಎಂಕೆಯನ್ನು ಅಧಿಕಾರದಿಂದ ಕಿತ್ತೊಗೆಯಲು ಇದೇ ಡಿ.26ರಿಂದ 48 ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸುತ್ತೇನೆ. ಈ ಕೆಲಸ ನೆರವೇರಿಸಲು ಹೆಚ್ಚಿನ ಶಕ್ತಿ ನೀಡಲಿ ಅಂತ ರಾಜ್ಯದಲ್ಲಿ ಆರು ಮುರುಗ ದೇವಾಲಯಗಳಿಗೂ ಭೇಟಿ ನೀಡುತ್ತೇನೆ’ ಎಂದರು.
7. ಅಬ್ದುಲ್ ರಹಮಾನ್ ಮಕ್ಕಿ ಸಾ*ವು ,ಜೀವ ಬಿಟ್ಟ ಮುಂಬೈ ದಾಳಿಕೋರ!
ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಸೋದರ ಮಾವ ಮತ್ತು ನಿಷೇಧಿತ ಜಮಾತ್-ಉದ್-ದವಾ ಉಪ ಮುಖ್ಯಸ್ಥ ಹಫೀಜ್ ಅಬ್ದುಲ್ ರಹಮಾನ್ ಮಕ್ಕಿ ಲಾಹೋರ್‌ನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಕಳೆದ ಕೆಲವು ದಿನಗಳಿಂದ ಮಧುಮೇಹ, ಅನಾರೋಗ್ಯದಿಂದ ಬಳಲುತ್ತಿದ್ದ ಅಬ್ದುಲ್ ರಹಮಾನ್ ಮಕ್ಕಿ ಲಾಹೋರ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಇಂದು (ಡಿ.27) ಮುಂಜಾನೆ ಮಕ್ಕಿ ಹೃದಯಾಘಾತದಿಂದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ. ಭಯೋತ್ಪಾದನಾ ಕೃತ್ಯಗಳಿಗೆ ಹಣಕಾಸಿನ ನೆರವು ಒದಗಿಸುತ್ತಿದ್ದ ಈತನಿಗೆ 2020 ರಲ್ಲಿ ಭಯೋತ್ಪಾದನೆ ನಿಗ್ರಹ ನ್ಯಾಯಾಲಯವು ಆರು ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು. 2023 ರಲ್ಲಿ ಮಕ್ಕಿಯನ್ನು ವಿಶ್ವಸಂಸ್ಥೆಯು ಜಾಗತಿಕ ಭಯೋತ್ಪಾದಕ ಘೋಷಿಸಿ ಆತನ ಸ್ವತ್ತುಗಳ ಜಪ್ತಿ ಮಾಡಿ ಪ್ರಯಾಣ ನಿಷೇಧ ಹೇರಿತ್ತು.
8.ರಾಜ್ಯದೆಲ್ಲೆ ಡಿಸೆಂಬರ್ ಮಳೆ ಅಬ್ಬರ! 21 ಜಿಲ್ಲೆಗಳಲ್ಲಿ ಇನ್ನೂ 5 ದಿನ ಮಳೆ
ಬೆಂಗಳೂರು ಸೇರಿ ಕರ್ನಾಟಕದ 21 ಜಿಲ್ಲೆಗಳಲ್ಲಿ ಭಾರಿ ಮಳೆ ಆಗ್ತಿದೆ. ಮುಂದಿನ ಐದು ದಿನಗಳ ಕಾಲ ಬೆಂಗಳೂರಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ರಾಜ್ಯದ ದಕ್ಷಿಣ ಒಳಭಾಗದಲ್ಲೂ ಭಾರಿ ಮಳೆಯಾಗಲಿದೆ . ಬಂಗಾಳ ಕೊಲ್ಲಿಯ ನೈರುತ್ಯ ಭಾಗದಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮಳೆ ಆಗ್ತಿದೆ. ಬೆಂಗಳೂರಲ್ಲಂತೂ ಬೆಳಿಗ್ಗೆಯಿಂದಲೆ ಜಿಟಿ ಜಿಟಿ ಮಳೆ ಆಗ್ತಾನೇ ಇದೆ. ಇಡೀ ನಗರದಾದ್ಯಂತ ಮೋಡ ಮುಸುಕಿದ್ದು ಸೂರ್ಯನ ದರ್ಶನವೇ ಆಗಿಲ್ಲ. ಜೊತೆಗೆ ಚಳಿಯ ವಾತಾವರಣ ಇದೆ. ಬೆಂಗಳೂರು ಸೇರಿದಂತೆ ರಾಮನಗರ, ಮಂಡ್ಯ ಮೈಸೂರು, ತುಮಕೂರು, ಚಿತ್ರದುರ್ಗ, ಕರಾವಳಿ ಪ್ರದೇಶಗಳು ಮತ್ತು ಉತ್ತರ ಒಳನಾಡಿನಲ್ಲಿ ಹಗುರ ಮಳೆಯಾಗಲಿದೆ ಎಂದು ರಾಜ್ಯ ಹವಮಾನ ಇಲಾಖೆ ಎಚ್ಚರಿಕೆ ನೀಡಿದೆ.
9. ಲೈಂಗಿಕ ಕಿರುಕುಳ ಆರೋಪ, ಕಿರುತೆರೆ ನಟ ಚರಿತ್ ಬಾಳಪ್ಪ ಬಂಧನ
ಲೈಂಗಿಕ ಕಿರುಕುಳ ಆರೋಪದ ಮೇಲೆ ಕಿರುತೆರೆ ನಟ ಚರಿತ್ ಬಾಳಪ್ಪ ಎಂಬುವವರನ್ನು ಆರ್ಆರ್ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.ಕನ್ನಡದಲ್ಲಿ ‘ಮುದ್ದುಲಕ್ಷ್ಮಿ’ ಸೇರಿದಂತೆ ಕೆಲವು ಸೀರಿಯಲ್ನಲ್ಲಿ, ತೆಲುಗಿನಲ್ಲೂ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಗೆಳತಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಚರಿತ್ ಬಾಳಪ್ಪ ಮೇಲಿದೆ. ಪ್ರೀತಿಸುವ ನಾಟಕವಾಡಿ ದೈಹಿಕ ಸಂಪರ್ಕಕ್ಕೆ ಒತ್ತಾಯ ಮಾಡಿದ್ದಾರೆ ಎಂದು ಯುವತಿಯೊಬ್ಬರು ಆರೋಪ ಮಾಡಿದ್ದಾರೆ. ಯುವತಿ ವಾಸ ಮಾಡುತ್ತಿದ್ದ ಮನೆಗೆ ಸಹಚರರ ಜೊತೆ ನುಗ್ಗಿದ ಚರಿತ್ ಕಿರುಕುಳ ನೀಡಿದ್ದಾರೆ. ಅಷ್ಟೇ ಅಲ್ಲದೆ ಯುವತಿ ಬಳಿ ಹಣಕ್ಕೆ ಬೇಡಿಕೆ ಇಟ್ಟಿರುವ ಆರೋಪ ಇದೆ. ಹಣ ಕೊಡದಿದ್ದರೆ ಆಕೆಯ ಖಾಸಗಿ ಫೋಟೋ, ವಿಡಿಯೋ ಹರಿಬಿಡುವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಚರಿತ್ ವಿರುದ್ಧ ಲೈಂಗಿಕ ದೌರ್ಜನ್ಯ, ಹಲ್ಲೆ, ಕೊಲೆ ಬೆದರಿಕೆ ಆರೋಪದ ಮೇಲೆ ಬಂಧಿಸಲಾಗಿದೆ. ಚರಿತ್ ಗೆ ಈಗಾಗಲೇ ಮದುವೆಯಾಗಿ ವಿಚ್ಛೇದನ ಕೂಡ ಆಗಿದೆ. ಡಿವೋರ್ಸ್ ನಂತರವೂ ಮಾಜಿ ಪತ್ನಿ ಜೊತೆ ಕಿರಿಕ್ ಮಾಡಿಕೊಂಡ ಆರೋಪದ ಮೇಲೆ ಕಳೆದ ಜೂನ್ ತಿಂಗಳಲ್ಲಿ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
10 ಹೊಸ ವರ್ಷದ ಸಂಭ್ರಮಾಚರಣೆ, ನಮ್ಮ ಮೆಟ್ರೋ ಸೇವೆ ಅವಧಿ ವಿಸ್ತರಣೆ
ಹೊಸ ವರ್ಷದ ಪಾರ್ಟಿ ಮೂಡ್‌ನಲ್ಲಿರುವವರಿಗೆ ‘ನಮ್ಮ ಮೆಟ್ರೋ’ ಗುಡ್ ನ್ಯೂಸ್ ಕೊಟ್ಟಿದೆ. 2024 ಕಳೆದ 2025ರ ಹೊಸ ವರ್ಷಕ್ಕೆ ಕಾಲಿಡಲು ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಈ ವೇಳೆ ಬೆಂಗಳೂರಿನ ಹಲವೆಡೆ ಸಂಭ್ರಮಾಚರಣೆಗಳು ನಡೆಯುತ್ತವೆ. ಅದರಲ್ಲೂ ಬ್ರಿಗೇಡ್ ರೋಡ್ನಲ್ಲಿ ಹೊಸ ವರ್ಷದ ಆಚರಣೆಗೆ ಜನಜಾತ್ರೆಯೇ ತುಂಬಿರುತ್ತದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್ಸಿಎಲ್) ಪ್ರಯಾಣಿಕರ ಅನುಕೂಲಕ್ಕಾಗಿ ಡಿಸೆಂಬರ್ 31 ರ ಮಧ್ಯರಾತ್ರಿಯಿಂದ ಮಧ್ಯರಾತ್ರಿ 2:15 ರವರೆಗೆ ಮೆಟ್ರೋ ಸೇವೆ ಅವಧಿ ವಿಸ್ತರಿಸಲಾಗಿದೆ.ರಾತ್ರಿ ಇಡೀ ಪಾರ್ಟಿ ಮಾಡಿ ಮನೆ ಸೇರಿಕೊಳ್ಳಲು ಪ್ರಯಾಣಿಕರ ಅನುಕೂಲಕ್ಕಾಗಿ ಸೇವೆ ಅವಧಿ ವಿಸ್ತರಿಸಿ ಬೆಂಗಳೂರು ಮೆಟ್ರೋ ರೈಲು ನಿಗಮ ಪ್ರಕಟಣೆ ಹೊರಡಿಸಿದೆ. ಹೊಸ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಡಿಸೆಂಬರ್ 31ರ ರಾತ್ರಿ 11ರಿಂದ 10 ನಿಮಿಷಕ್ಕೊಂದು ರೈಲು ಸೇವೆ ಇರಲಿದ್ದು, ಜನವರಿ 1ರಂದು ಮುಂಜಾನೆ 2 ಗಂಟೆಗೆ ಎಲ್ಲ ಮೆಟ್ರೋ ಟರ್ಮಿನಲ್ನಿಂದ ಕೊನೆ ರೈಲು ಹೊರಡಲಿದೆ. ಆದ್ರೆ, ಮೆಜೆಸ್ಟಿಕ್ನಿಂದ ಮುಂಜಾನೆ 2.40ಕ್ಕೆ ಕೊನೆ ರೈಲು ಸಂಚರಿಸಲಿದೆ ಎಂದು ಬಿಎಂಆರ್ಸಿಎಲ್ ಮಾಹಿತಿ ನೀಡಿದೆ.
=============================