1. ಪ್ರಿಯಾಂಕ್ ವಿರುದ್ಧ ಪೋಸ್ಟರ್ ಅಭಿಯಾನ .13 ಬಿಜೆಪಿ ನಾಯಕರ ವಿರುದ್ಧ FIR
ಗುತ್ತಿಗೆದಾರ ಸಚಿನ್ ಪಾಂಚಾಲ್ ಆತ್ಮಹತ್ಯೆ ಪ್ರಕರಣದಲ್ಲಿ ರಾಜಕೀಯ ಜಟಾಪಟಿ ಜೋರಾಗಿದೆ. ಇದೇ ವಿಚಾರವಾಗಿ ಬಿಜೆಪಿ-ಕಾಂಗ್ರೆಸ್ ಮಧ್ಯೆ ಆರೋಪ ಪ್ರತ್ಯಾರೋಪಳು ಜೋರಾಗಿವೆ. ಈ ಮಧ್ಯೆ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಪೋಸ್ಟರ್ ಅಂಟಿಸಿದ 13 ಬಿಜೆಪಿ ನಾಯಕರ ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ನಾಯಕರು ನಿನ್ನೆ ಬೆಳಗ್ಗೆ ರೇಸ್ ಕೋರ್ಸ್ ರಸ್ತೆಯ ಸಾರ್ವಜನಿಕ ಶೌಚಾಲಯದ ಗೋಡೆಗೆ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಿ, ಸೂಸೈಡ್ ಹಾಗೂ ಸುಫಾರಿ ಭಾಗ್ಯ ನೀಡಿದ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ ಎಂಬ ಪೋಸ್ಟರ್ ಅಂಟಿಸಿದ್ದರು. ಆ ಮೂಲಕ ಬೆಂಗಳೂರು ನಗರದ ಸೌಂದರ್ಯಕ್ಕೂ ಧಕ್ಕೆ ತರುವಂತೆ ಅಂಟಿಸುತ್ತಿದ್ದು ಕಂಡುಬಂದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.ಈ ಹಿನ್ನಲೆ ಅಕ್ರಮವಾಗಿ ರಸ್ತೆಯಲ್ಲಿ ಗುಂಪು ಸೇರಿ ಸಾರ್ವಜನಿಕರಿಗೆ ಅಡ್ಡಿ ನೀಡಿದ ಆರೋಪದ ಮೇಲೆ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಧಾನಪರಿಷತ್ ಸದಸ್ಯರಾದ ಸಿ.ಟಿ.ರವಿ, ಎನ್.ರವಿಕುಮಾರ್ ಸೇರಿ ಒಟ್ಟು 13 ಬಿಜೆಪಿ ನಾಯಕರ ವಿರುದ್ಧ ಪಿಎಸ್ಐ ಶಶಿಧರ ವಣ್ಣೂರ ದೂರು ಆಧರಿಸಿ ಎಫ್ಐಆರ್ ದಾಖಲಿಸಲಾಗಿದ್ದು, ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.ಇನ್ನು ಗುತ್ತಿಗೆದಾರನ ಆತ್ಮಹತ್ಯೆ ವಿಚಾರವಾಗಿ ಬಿಜೆಪಿ ನಾಯಕರು ಉರಿದುರಿದು ಬೀಳುತ್ತಿದ್ದಾರೆ. ನಾವು ದಾಖಲೆ ತೋರಿಸಿದರೂ ಪ್ರಿಯಾಂಕ್ಗೆ ಅದು ದಾಖಲೆ ಅಲ್ಲ ಅಂತಾ ಛಲವಾದಿ ನಾರಾಯಣ ಸ್ವಾಮಿ ಕಿಡಿಕಾರಿದ್ದಾರೆ. ಕಲ್ಬುರ್ಗಿ ರಿಪಬ್ಲಿಕ್, ಬೆಳಗಾವಿ ರಿಪಬ್ಲಿಕ್, ಕನಕಪುರ ರಿಪಬ್ಲಿಕ್ ಅಂತಾ ಒಂದೊಂದು ಜಿಲ್ಲೆಯನ್ನು ಒಂದೊಂದು ರಿಪಬ್ಲಿಕ್ ಮಾಡಿಕೊಂಡುಬಿಟ್ಟಿದ್ದಾರೆ ಅಂತಾ ಸಿ.ಟಿ ರವಿ ಹರಿಹಾಯ್ದಿದ್ದಾರೆ.ಇನ್ನು ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿಯಲ್ಲಿ ವಿಶ್ವಕರ್ಮ ಸಮಾಜದಿಂದ ಬೃಹತ್ ಪ್ರತಿಭಟನೆ ಮಾಡಲಾಗಿದೆ. ಪ್ರತಿಭಟನೆಯಲ್ಲಿ ಹಲವು ಸ್ವಾಮೀಜಿಗಳು ಭಾಗಿಯಾಗಿದ್ದರು.
2.ಸಿ.ಟಿ ರವಿ ಅವಹೇಳನಕಾರಿ ಪದ ಬಳಕೆ ಆರೋಪ, ಸಿಐಡಿ ತನಿಖಾ ವರದಿ ಬಂದ ಬಳಿಕ ಕ್ರಮ!
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಬಿಜೆಪಿ ಶಾಸಕ ಸಿ.ಟಿ ರವಿ ಅವಹೇಳನಕಾರಿ ಪದ ಬಳಕೆ ಆರೋಪದ ಕೇಸ್ ಸಿಓಡಿಗೆ ನೀಡಲಾಗಿದೆ. ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಅಂತ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.ವಿಧಾನಸೌಧದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ ರಾಜ್ಯಪಾಲರಿಗೆ ಸಿಟಿ ರವಿ ದೂರು ಕೊಟ್ಟಿರೋ ವಿಚಾರಚಾಗಿ ಪ್ರತಿಕ್ರಿಯಿಸಿದರು. ಸಿ.ಟಿ ರವಿ ರಾಜ್ಯಪಾಲರಿಗೆ ದೂರು ಕೊಡಲಿ. ಆ ಕೇಸನ್ನು CODಗೆ ಕೊಟ್ಟಿದ್ದೇವೆ. ಸಿ.ಟಿ ರವಿ ಅವಾಚ್ಯ ಪದ ಬಳಕೆ ಮಾಡಿದ್ದಾರಾ? ಇಲ್ಲವಾ? ಎಂಬುದು FSL ವರದಿ ಬರಲಿ, ಆಗ ಸತ್ಯಾಸತ್ಯತೆ ತಿಳಿಯಲಿದೆ ಎಂದಿದ್ದಾರೆ. ಮಹಿಳೆಗೆ ಅವಮಾನ ಆಗೋ ರೀತಿ ಮಾತಾಡಿದ್ದಾರೆ ಅನ್ನೋದು ಆರೋಪ. ಆರೋಪದ ಆಧಾರದಲ್ಲಿ ಸಿಟಿ ರವಿ ಮೇಲೆ FIR ದಾಖಲಾಗಿದೆ. COD ತನಿಖೆಗೆ ಆದೇಶ ಮಾಡಲಾಗಿದೆ ವರದಿ ಬರಲಿ ನೋಡೋಣ ಎಂದಿದ್ದಾರೆ.
3.ದಿ.ಮನಮೋಹನ್ ಸಿಂಗ್‌ಗೆ ಭಾರತ ರತ್ನ ಕೊಡಿ,ಕಾಂಗ್ರೆಸ್ ನಾಯಕರಿಂದ ಒತ್ತಾಯ
ಮಾಜಿ ಪ್ರಧಾನಿ ದಿವಂಗತ ಮನಮೋಹನ್ ಸಿಂಗ್ ನಿಧನ ಬಳಿಕ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕು ಎನ್ನುವ ಒತ್ತಡ ಹೆಚ್ಚುತ್ತಿದೆ. ಭಾರತ ರತ್ನ ನೀಡುವಂತೆ ಒತ್ತಾಯಿಸಿ ತೆಲಂಗಾಣ ಸರ್ಕಾರ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಿ ಕೇಂದ್ರಕ್ಕೆ ಒತ್ತಡ ಹಾಕಿದ ಬೆನ್ನಲ್ಲೇ ಈ ಚರ್ಚೆ ಮುನ್ನಲೆಗೆ ಬಂದಿದೆ.ಮನಮೋಹನ್ ಸಿಂಗ್ ಅವರು ನಮ್ಮ ದೇಶದ ಮಹಾನ್ ನಾಯಕರಾಗಿದ್ದು, ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕು. ಕೇಂದ್ರ ಸರ್ಕಾರ ತೆಲಂಗಾಣ ವಿಧಾನಸಭೆ ನಿರ್ಣಯವನ್ನು ಅಂಗೀಕರಿಸುವಂತೆ ನಾನು ಕೇಂದ್ರವನ್ನು ಒತ್ತಾಯಿಸುತ್ತೇನೆ ಎಂದು ರಾಜ್ಯಸಭೆಯ ಕಾಂಗ್ರೆಸ್ ಉಪನಾಯಕ ಪ್ರಮೋದ್ ತಿವಾರಿ ಒತ್ತಾಯಿಸಿದ್ದಾರೆ. ಶಿಕ್ಷಣದ ಹಕ್ಕು, ಮಾಹಿತಿ ಹಕ್ಕು, ನರೇಗಾ ಮುಂತಾದ ಕಾರಣಗಳಿಗಾಗಿ ಮನಮೋಹನ್ ಸಿಂಗ್‌ಗೆ ಭಾರತ ರತ್ನ ನೀಡಬೇಕೆಂದು ತೆಲಂಗಾಣ ವಿಧಾನಸಭೆ ಒತ್ತಾಯಿಸಿದ್ದು ಸರಿಯಾಗಿದೆ ಎಂದು ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಶುಭರಂಶ್ ಕುಮಾರ್ ರೈ ಹೇಳಿದ್ದಾರೆ. ದೇಶದ ಅತ್ಯುನ್ನತ ಗೌರವ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲಾ ಅವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಸಿಎಂ ರೇವಂತ್ ರೆಡ್ಡಿ, ವಿಧಾನಸಭೆಯಲ್ಲಿ ನಿರ್ಣಯಗಳನ್ನು ಅಂಗೀಕರಿಸುವ ಬದಲು ಅವರು ಸೋನಿಯಾ ಗಾಂಧಿಯನ್ನು ಕೇಳಬೇಕು ಎಂದು ಟೀಕಿಸಿದ್ದಾರೆ. ಮನಮೋಹನ್ ಸಿಂಗ್ ಅವರು ಕಳೆದ ವಾರ 92ನೇ ವಯಸ್ಸಿನಲ್ಲಿ ನಿಧನರಾದರು ಮತ್ತು ನಿಗಮಬೋಧ ಘಾಟ್‌ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಲಾಗಿತ್ತು.
4. ಕೇಜ್ರಿವಾಲ್‌ಗೆ ಬಿಜೆಪಿ ತಿರುಗೇಟು,ದೆಹಲಿ ಜನರಲ್ಲಿ ಕ್ಷಮೆಯಾಚಿಸಿ
ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ , ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಪತ್ರ ಬರೆದಿದ್ದು, ಆರ್‌ಎಸ್‌ಎಸ್ ಸೇರಿದಂತೆ ಬಿಜೆಪಿ ಕಾರ್ಯಗಳಿಗೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ಅಲ್ಲದೆ ಬಿಜೆಪಿ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತಿದೆ ಎಂದು ಆರೋಪಿಸಿದ್ದಾರೆ. ಪತ್ರದಲ್ಲಿ, ಕೇಜ್ರಿವಾಲ್ ಅವರು ಬಿಜೆಪಿಯ ನಡವಳಿಕೆ ಮತ್ತು ಪ್ರಜಾಪ್ರಭುತ್ವದ ಮೇಲೆ ಅದರ ಪ್ರಭಾವಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಬಗ್ಗೆ ಆರ್ ಎಸ್ಎಸ್ ನಿಂದ ಸ್ಪಷ್ಟೀಕರಣ ಕೋರಿದ್ದಾರೆ. ಈ ಹಿಂದೆ ಬಿಜೆಪಿ ಮಾಡಿದ ತಪ್ಪುಗಳನ್ನು ಆರ್‌ಎಸ್‌ಎಸ್ ಬೆಂಬಲಿಸುತ್ತದೆಯೇ? ಚುನಾವಣೆ ಗೆಲ್ಲಲು ಬಿಜೆಪಿ ಅಡ್ಡದಾರಿ ಹಿಡಿಯುತ್ತಿದ್ದು, ಇದನ್ನು ನೀವು ಬೆಂಬಲಿಸುತ್ತೀರಾ? ಎಂದು ಕೇಜ್ರಿವಾಲ್ ಮೋಹನ್ ಭಾಗವತ್ ಅವರನ್ನು ಪ್ರಶ್ನಿಸಿದ್ದಾರೆ. ಈ ಪತ್ರಕ್ಕೆ ಬಿಜೆಪಿಯ ವೀರೇಂದ್ರ ಸಚ್‌ದೇವ ಅವರು ತೀಕ್ಷ್ಣವಾಗಿಯೇ ಪ್ರತಿಕ್ರಿಯಿಸಿದ್ದು, ಕೇಜ್ರಿವಾಲ್‌ಗೆ ಮೋಹನ್ ಭಾಗವತ್ ಅವರೊಂದಿಗೆ ಮಾತನಾಡಲು ಯಾವುದೇ ಸ್ಥಾನಮಾನ ಅಥವಾ ಹುದ್ದೆಯಲ್ಲಿ ಇಲ್ಲ ಎಂದು ಹೇಳಿದ್ದಾರೆ. “ಆರ್ ಎಸ್ಎಸ್ ಮುಖ್ಯಸ್ಥರೊಂದಿಗೆ ಮಾತನಾಡಲು ನಿಮಗೆ ಯಾವುದೇ ಸ್ಥಾನಮಾನ ಇಲ್ಲ. ಅವರ ಹೆಸರನ್ನು ತೆಗೆದುಕೊಳ್ಳುವುದನ್ನು ಬಿಟ್ಟುಬಿಡಿ. ವಿಷಯಾಂತರ ಮಾಡಬೇಡಿ. ನೀವು ಲೂಟಿ ಮಾಡಲು ಹೇಗೆ ಕೆಲಸ ಮಾಡಿದ್ದೀರಿ ಎಂದು ಜನತೆಗೆ ಹೇಳಿ ಮತ್ತು ಅದಕ್ಕಾಗಿ ದೆಹಲಿ ಜನರಲ್ಲಿ ಕ್ಷಮೆಯಾಚಿಸಿ ಎಂದು ದೆಹಲಿ ಬಿಜೆಪಿ ಮುಖ್ಯಸ್ಥ ಸಚ್‌ದೇವ ಅವರು ಎಎನ್‌ಐಗೆ ತಿಳಿಸಿದ್ದಾರೆ. ಎಎಪಿ ಸಂಚಾಲಕ ಕೇಜ್ರಿವಾಲ್ ಅವರು ಕೆನಡಾದಲ್ಲಿ “ಭಯೋತ್ಪಾದಕರಿಂದ” ಹಣ ಪಡೆದಿದ್ದಾರೆ ಎಂದು ದೆಹಲಿ ಬಿಜೆಪಿ ಅಧ್ಯಕ್ಷರು ಆರೋಪಿಸಿದ್ದಾರೆ.
5. ಸ್ಟಾಲಿನ್ ಸರ್ಕಾರಕ್ಕೆ ರೇ*ಪ್ ಕೇಸ್ ಬಿಸಿ,ಅಣ್ಣಾಮಲೈ ನೇತೃತ್ವದಲ್ಲಿ ಹೊಸ ಹೋರಾಟ
ಅಣ್ಣಾ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ನಡೆದ ವಿದ್ಯಾರ್ಥಿನಿ ಮೇಲಿನ ಲೈಂಗಿಕ ದೌರ್ಜನ್ಯವನ್ನು ಖಂಡಿಸಿ, ಸಂತ್ರಸ್ತೆಗೆ ನ್ಯಾಯ ಕೊಡಿಸುವ ಸಲುವಾಗಿ ಪಕ್ಷದ ಮಹಿಳಾ ಘಟಕದ ನೇತೃತ್ವದಲ್ಲಿ ‘ನ್ಯಾಯ ರ್‍ಯಾಲಿ’ ನಡೆಯಲಿದೆ’ ಎಂದು ತಮಿಳುನಾಡಿನ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ. ಅಣ್ಣಾಮಲೈ ಹೇಳಿದ್ದಾರೆ.‘ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಿಗಳು ಡಿಎಂಕೆ ಪಕ್ಷದ ಸದಸ್ಯರಾಗಿದ್ದು, ಸತ್ಯವನ್ನು ಮರೆಮಾಚುವ ಯತ್ನ ನಡೆಯುತ್ತಿದೆ’ ಅಂತ ಅಣ್ಣಾಮಲೈ ಎಕ್ಸ್‌ನಲ್ಲಿ ಆರೋಪಿಸಿದ್ದಾರೆ. ಮಹಿಳೆಯರ ಮೇಲಿನ ದೌರ್ಜನ್ಯವನ್ನು ಖಂಡಿಸಿ ಜನವರಿ 3ರಂದು ಉಮಾರತಿ ರಾಜನ್ ಅವರ ನೇತೃತ್ವದಲ್ಲಿ ಮಧುರೈನಿಂದ ಚೆನ್ನೈವರೆಗೆ ನ್ಯಾಯ ರ್‍ಯಾಲಿ ನಡೆಯಲಿದೆ. ರ್‍ಯಾಲಿ ಪೂರ್ಣಗೊಂಡ ನಂತರ ಮಹಿಳಾ ಘಟಕದ ಬೇಡಿಕೆಗಳ ಕುರಿತು ರಾಜ್ಯಪಾಲರಿಗೆ ಜ್ಞಾಪಕ ಪತ್ರವನ್ನು ಸಲ್ಲಿಸಲು ನಿರ್ಧರಿಸಲಾಗಿದೆ’ ಅಂತ ಮಾಹಿತಿ ನೀಡಿದ್ದಾರೆ.ಡಿಸೆಂಬರ್ 23ರಂದು ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ 19 ವರ್ಷದ ವಿದ್ಯಾರ್ಥಿನಿಯ ಮೇಲೆ ವ್ಯಕ್ತಿಗಳಿಬ್ಬರು ಲೈಂಗಿಕ ದೌರ್ಜನ್ಯ ನಡೆಸಿದ್ದು, ಆಕೆಯ ಸ್ನೇಹಿತನ ಮೇಲೂ ಹಲ್ಲೆ ನಡೆಸಿದ್ದರು. ಪ್ರಕರಣ ಸಂಬಂಧ ಇದುವರೆಗೆ ಒಬ್ಬನನ್ನು ಬಂಧಿಸಲಾಗಿದೆ.ಇದರ ನಡುವೆ ಆರೋಪಿಗಳು ಡಿಎಂಕೆ ಸದಸ್ಯರು ಬಿಜೆಪಿ ಆರೋಪವನ್ನು ಪಕ್ಷ ಅಲ್ಲಗೆಳೆದಿದೆ.
6. ಐಶ್ವರ್ಯಗೌಡಗೆ ಜಾಮೀನು, ರಾತ್ರಿಯೇ ಜೈಲಿಂದ ರಿಲೀಸ್
ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಶಾಪ್‌ನಲ್ಲಿ 14 ಕೆಜಿ 600 ಗ್ರಾಂನಷ್ಟು ಚಿನ್ನಾಭರಣ ಖರೀದಿಸಿ ವಂಚಿಸಿ ಅರೆಸ್ಟ್ ಆಗಿದ್ದ ಐಶ್ವರ್ಯಗೌಡ ಹಾಗೂ ಆಕೆಯ ಪತಿ ಹರೀಶ್ ಗೌಡಗೆ ಹೈಕೋರ್ಟ್ ಜಾಮೀನು ನೀಡಿದೆ.ವಂಚನೆ ಕೇಸ್‌ನಲ್ಲಿ ಚಂದ್ರಾ ಲೇಔಟ್ ಪೊಲೀಸರು ಆರೋಪಿಗಳನ್ನು ವಿಚಾರಣೆಗಾಗಿ ಕಸ್ಟಡಿಗೆ ಪಡೆದಿದ್ದರು. ಹೈಕೋರ್ಟ್ ಜಾಮೀನು ನೀಡಿದ ಹಿನ್ನೆಲೆ ಆರೋಪಿಗಳನ್ನು ಮಂಗಳವಾರ ರಾತ್ರಿಯೇ ಪೊಲೀಸ್ ಕಸ್ಟಡಿಯಿಂದ ಬಿಡುಗಡೆ ಮಾಡಲಾಗಿದೆ.ಆರೋಪಿ ಐಶ್ವರ್ಯ ಕಾಂಗ್ರೆಸ್ ಮಾಜಿ ಸಂಸದ ಡಿ.ಕೆ ಸುರೇಶ್ ಸಹೋದರಿ ಅಂತ ಹೇಳಿಕೊಂಡು 14.600 ಕೆಜಿಯಷ್ಟು ಚಿನ್ನಾಭರಣ ಖರೀದಿಸಿ ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರಕರಣದಲ್ಲಿ ಆರೋಪಿಗಳಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ 9ನೇ ಎಸಿಎಂಎಂ ಕೋರ್ಟ್ ಆದೇಶಿಸಿತ್ತು. ಅಲ್ಲಿಂದ ಪೊಲೀಸರು ಇಬ್ಬರು ಆರೋಪಿಗಳನ್ನು ಕಸ್ಟಡಿಗೆ ಪಡೆದಿದ್ದರು. ಇನ್ನು ಐಶ್ವರ್ಯ ಗೌಡ ಕಳೆದ ಜನವರಿಯಿಂದ ಇಲ್ಲಿಯವರೆಗೂ ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಶಾಪ್‌ನಲ್ಲಿ 14 ಕೆಜಿ 600 ಗ್ರಾಂನಷ್ಟು ಚಿನ್ನಾಭರಣ ಖರೀದಿಸಿದ್ದಳು. ಹಣ ಕೊಡದೇ ಇದ್ದಾಗ, ಡಿಕೆ ಸುರೇಶ್ ಕಡೆಯಿಂದ ಮಾಲೀಕರಿಗೆ ಕರೆ ಮಾಡಿಸೋದಾಗಿ ಬೆದರಿಕೆ ಹಾಕಿದ್ದರು. ಈ ವೇಳೆ ಸಿನಿಮಾ ನಟ ಧರ್ಮೇಂದ್ರ ಎಂಬುವವರಿಂದ ಐಶ್ವರ್ಯಗೌಡ ಕರೆ ಮಾಡಿಸಿ, ಬೆದರಿಕೆ ಹಾಕಿದ್ದಾರೆ ಅನ್ನೋ ಆರೋಪವೂ ಕೇಳಿಬಂದಿದೆ.
7. 232 ಕೆಜಿ ಮಾದಕ ವಸ್ತು ಕಳ್ಳಸಾಗಾಣಿಕೆ ಕೇಸ್, 8 ಪಾಕ್ ಪ್ರಜೆಗಳಿಗೆ 20 ವರ್ಷ ಜೈಲು
ಗುಜರಾತ್ ಕರಾವಳಿಯಲ್ಲಿ 7 ಕೋಟಿ ರೂ. ಮೌಲ್ಯದ 232 ಕೆಜಿ ತೂಕದ ಮಾದಕ ವಸ್ತು ಸಾಗಾಣಿಕೆ ವೇಳೆ ಸಿಕ್ಕಿಬಿದ್ದಿದ್ದ 8 ಪಾಕಿಸ್ತಾನಿ ಪ್ರಜೆಗಳಿಗೆ ಮುಂಬೈನ ವಿಶೇಷ ನ್ಯಾಯಾಲಯ ಬುಧವಾರ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಅಲ್ಲದೇ ನ್ಯಾಯಾಲಯವು ಅಪರಾಧಿಗಳಿಗೆ ತಲಾ 2 ಲಕ್ಷ ರೂ. ದಂಡ ವಿಧಿಸಿದೆ.ಮಾದಕ ವಸ್ತು ವಿರೋಧಿ ಕಾನೂನಿನಡಿಯಲ್ಲಿ 8 ವ್ಯಕ್ತಿಗಳನ್ನು ದೋಷಿ ಎಂದು ಎನ್‌ಡಿಪಿಎಸ್ ಕಾಯ್ದೆ ಪ್ರಕರಣಗಳ ವಿಶೇಷ ನ್ಯಾಯಾಧೀಶ ಶಶಿಕಾಂತ್ ಬಂಗಾರ್ ಅವರಿದ್ದ ಏಕಸದಸ್ಯ ಪೀಠ ಈ ತೀರ್ಪು ನೀಡಿದೆ.2015ರಲ್ಲಿ ಗುಜರಾತ್ ಕರಾವಳಿಯಲ್ಲಿ 6.96 ಕೋಟಿ ರೂ. ಮೌಲ್ಯದ 232 ಕೆ.ಜಿ ಹೆರಾಯಿನ್ ಸಾಗಿಸುತ್ತಿದ್ದ ಬೋಟ್‌ನಿಂದ ಭಾರತೀಯ ಕೋಸ್ಟ್ ಗಾರ್ಡ್ ಸಿಬ್ಬಂದಿ 8 ಮಂದಿಯನ್ನು ಬಂಧಿಸಿದ್ದರು. ಅಲ್ಲದೇ ದೋಣಿಯಲ್ಲಿದ್ದ 11 ಬ್ಯಾರಲ್‌ಗಳು, 20 ಪ್ಲಾಸ್ಟಿಕ್ ಪೌಚ್‌ಗಳಲ್ಲಿದ್ದ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿತ್ತು. ಪರೀಕ್ಷೆ ವೇಳೆ ಹೆರಾಯಿನ್ ಎಂದು ತಿಳಿದು ಬಂದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಪರಾಧಿಗಳು ಮೂರು ಸ್ಯಾಟ್‌ಲೈಟ್ ಫೋನ್‌ಗಳು ಮತ್ತು ಇತರ ಎಲೆಕ್ಟ್ರಾನಿಕ್ ಸಾಧನಗಳ ಜೊತೆಗೆ ಜಿಪಿಎಸ್ ನ್ಯಾವಿಗೇಷನ್ ಚಾರ್ಟ್‌ಗಳನ್ನು ಹೊಂದಿದ್ದರು. ಅವರನ್ನು ಬಂಧಿಸಿದ ಬಳಿಕ ದಕ್ಷಿಣ ಮುಂಬೈನ ಯೆಲ್ಲೋ ಗೇಟ್ ಪೊಲೀಸರಿಗೆ ಹಸ್ತಾಂತರಿಸಲಾಗಿತ್ತು.
8. ವರ್ಷದ ಆರಂಭದಲ್ಲೇ ಬಿಗ್ ಶಾಕ್ ,ಟಿಕೆಟ್ ದರ ಏರಿಕೆಯಾಗುತ್ತಾ?
ಹೊಸ ವರ್ಷದ ಸಂಭ್ರಮದಲ್ಲಿರುವ ಜನತೆಗೆ ಸಾರಿಗೆ ಇಲಾಖೆ ಶಾಕ್ ನೀಡುವ ಸೂಚನೆ ಸಿಕ್ಕಿದೆ. ಹೊಸ ವರ್ಷದ ಆರಂಭದ ತಿಂಗಳಲ್ಲೇ ಬಸ್ ಟಿಕೆಟ್ ದರ ಏರಿಕೆಯಾಗುವ ಸಾಧ್ಯತೆ ಇದೆ.ಪೆಟ್ರೋಲ್-ಡೀಸೆಲ್ ದರ ಹಾಗೂ ಬಿಡಿ ಭಾಗಗಳ ದರ ಏರಿಕೆಯಾಗಿದೆ. ಅದರೆ, ಕಳೆದ ನಾಲ್ಕೈದು ವರ್ಷದಿಂದ ಟಿಕೆಟ್ ದರ ಏರಿಕೆ ಮಾಡಿಲ್ಲ. ಇಂಧನ ದರ ನಾಲ್ಕೈದು ವರ್ಷದಲ್ಲಿ ಏರಿಕೆಯಾಗುತ್ತಲೇ ಬಂದಿದೆ. ಅದಕ್ಕೆ ಅನುಗುಣವಾಗಿ ಟಿಕೆಟ್ ದರ ಏರಿಕೆಗೆ ನಾಲ್ಕೂ ನಿಗಮಗಳು ಮನವಿ ಮಾಡಿದ್ದವು.ಈ ಹಿಂದೆ 25% ಟಿಕೆಟ್ ದರ ಏರಿಕೆಗೆ ನಿಗಮಗಳು ಮನವಿ ಮಾಡಿದ್ದವು. 25 % ಅಲ್ಲದಿದ್ದರೂ, ಅದರ ಅರ್ಧದಷ್ಟು ಏರಿಕೆಯಾಗುವ ಸಾಧ್ಯತೆ ಇದೆ.ಸಂಕ್ರಾಂತಿ ನಂತರ ಟಿಕೆಟ್ ದರದ ಬಗ್ಗೆ ಸರ್ಕಾರ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಸಿಎಂ ಜೊತೆ ಸಾರಿಗೆ ನೌಕರರ ಸಂಘಟನೆಗಳ ಸಭೆಯಲ್ಲಿ ಪ್ರಸ್ತಾಪವಾಗಬಹುದು ಎನ್ನಲಾಗಿದೆ.
9.ವರ್ಷದ ಮೊದಲ ದಿನವೇ ಗುಡ್ನ್ಯೂಸ್, ಸಿಲಿಂಡರ್ ಬೆಲೆಯಲ್ಲಿ ಇಳಿಕೆ
ಹೊಸ ವರ್ಷದ ಮೊದಲ ದಿನವೇ ಗ್ರಾಹಕರಿಗೆ ಗುಡ್ನ್ಯೂಸ್ ಸಿಕ್ಕಿದೆ. LPG ಗ್ಯಾಸ್ ಸಿಲಿಂಡರ್ ರಿಫಿಲ್ ಮತ್ತಷ್ಟು ಅಗ್ಗವಾಗಿದೆ. ಸರ್ಕಾರಿ ತೈಲ ಕಂಪನಿಗಳು ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಇಳಿಕೆ ಮಾಡಲು ನಿರ್ಧರಿಸಿದ್ದು, ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರ ಜಾರಿಯಲ್ಲಿದೆ. ಪ್ರತಿ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ 14.50 ರೂಪಾಯಿ ಇಳಿಕೆ ಆಗಿದೆ. ದೆಹಲಿಯಲ್ಲಿ ಎಲ್‌ಪಿಜಿ ಸಿಲಿಂಡರ್‌ನ ಹೊಸ ಬೆಲೆ 1818.50 ರೂಪಾಯಿಯಿಂದ 1804 ರೂಪಾಯಿಗೆ ಇಳಿಕೆ ಆಗಿದೆ. ತೈಲ ಮಾರುಕಟ್ಟೆ ಕಂಪನಿಗಳು ಪ್ರತಿ ತಿಂಗಳ ಮೊದಲನೇ ದಿನದಂದು ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಪರಿಶೀಲಿಸಿ ಹೊಸ ಬೆಲೆ ಪ್ರಕಟಿಸುತ್ತವೆ.ಹೊಸ ವರ್ಷದಂದು ತಮ್ಮ ಗ್ರಾಹಕರಿಗೆ 19 ಕೆಜಿ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಕಡಿಮೆ ಮಾಡಲು ನಿರ್ಧರಿಸಿವೆ. ಕೋಲ್ಕತ್ತಾದಲ್ಲಿ 1911 ರೂಪಾಯಿಗೆ ಇಳಿಕೆ ಆಗಿದೆ. ಈ ಮುಂಚೆ 1927 ರೂಪಾಯಿ ಪಾವತಿ ಮಾಡಬೇಕಾಗಿತ್ತು. ಮುಂಬೈನಲ್ಲಿ ಸಿಲಿಂಡರ್ ಬೆಲೆ 1756 ರೂಪಾಯಿಗೆ ಇಳಿಕೆ ಆಗಿದೆ. ಚೆನ್ನೈನಲ್ಲಿ ಇವತ್ತಿನಿಂದ 19 ಕೆಜಿ ಸಿಲಿಂಡರ್ಗೆ 1966 ರೂಪಾಯಿ ಪಾವತಿ ಮಾಡಬೇಕಾಗುತ್ತದೆ.