1.ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನ, ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣ
ಬೆಳಗಾವಿಯಲ್ಲಿ ಮಹಾತ್ಮ ಗಾಂಧಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಆರಂಭವಾಗಿದೆ. ದೇಶದ ವಿವಿಧೆಡೆಗಳಿಂದ ಕಾಂಗ್ರೆಸ್ ನಾಯಕರು ಆಗಮಿಸಿದ್ದಾರೆ. ಇದೇ ವೇಳೆ, ಬೆಳಗಾವಿಯ ವೀರಸೌಧದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಗಾಂಧೀಜಿ ಪ್ರತಿಮೆ ಅನಾವರಣಗೊಳಿಸಿದರು. ನಂತರ ಕಾಂಗ್ರೆಸ್ ನಾಯಕರು ಗಾಂಧಿ ಪ್ರತಿಮೆ ಎದುರು ಫೋಟೊ ತೆಗೆಸಿಕೊಂಡರು. ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಖಾದಿ ಉತ್ಸವಕ್ಕೆ ಚಾಲನೆ ನೀಡಿದರು. ಇನ್ನು ಬೆಳಗಾವಿ ನಗರದ ಸರ್ದಾರ್ ಮೈದಾನದಲ್ಲಿ ರಾಜ್ಯ ಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತು ಪ್ರದರ್ಶನ ನಡೆಯಿತು. ಅಲ್ಲದೇ ಮಹಿಳಾ ಸ್ವಸಹಾಯ ಸಂಘಗಳ ಉತ್ಪನ್ನಗಳ ವಸ್ತು ಪ್ರದರ್ಶನ ನಡೆಯಿತು. ಈ ವೇಳೆ ಸಿಎಂಗೆ ಡಿಸಿಎಂ ಡಿಕೆ ಶಿವಕುಮಾರ್ ಸೇರಿ ಹಲವು ಸಚಿವರ ಸಾಥ್ ನೀಡಿದ್ರು.
2. ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನ ,ಕಾಂಗ್ರೆಸ್ ಬ್ಯಾನರ್ ನಲ್ಲಿ ಕಾಶ್ಮೀರ ಇಲ್ಲ
1924ರಲ್ಲಿ ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ಅಖಿಲ ಭಾರತ ಕಾಂಗ್ರೆಸ್ ಮಹಾ ಅಧಿವೇಶನ ನಡೆದಿತ್ತು. ಆ ಅಧಿವೇಶನ ನಡೆದು ನೂರು ವರ್ಷಗಳು ತುಂಬಿದೆ. ಹೀಗಾಗಿ ರಾಜ್ಯ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷ ವಿಜೃಂಭಣೆಯಿಂದ ಆಚರಿಸ್ತಿದೆ. ಬೆಳಗಾವಿ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಇದರ ಬೆನ್ನಲ್ಲೆ ಬೆಳಗಾವಿಯಲ್ಲಿ ಕಟ್ಟಿರುವ ಕೆಲವು ಬ್ಯಾನರ್ಗಳಲ್ಲಿ ಭಾರತದ ನಕಾಶೆಯನ್ನು ತಿರುಚಿರುವುದು ಕಂಡುಬಂದಿದ್ದು. ಈ ಕಾಂಗ್ರೆಸ್ ಅಧಿವೇಶನದಲ್ಲಿ ಗಣ್ಯರನ್ನ ಸ್ವಾಗತಿಸಲು ಫ್ಲೆಕ್ಸ್, ಬ್ಯಾನರ್ಗಳನ್ನ ಅಳವಡಿಸಲಾಗಿದೆ. ಆದ್ರೆ ಇದೇ ಬ್ಯಾನರ್ಗಳು ಇದೀಗ ವಿವಾದಕ್ಕೆ ಕಾರಣ ಆಗಿದೆ. ಬೆಳಗಾವಿ ನಗರದೆಲ್ಲೆಡೆ ಕಟ್ಟಿರೋ ಬ್ಯಾನರ್ಗಳಲ್ಲಿ ಭಾರತದ ಭೂಪಟವನ್ನೇ ತಿರುಚಲಾಗಿದೆ. ಭಾರತದ ಮ್ಯಾಪ್ನಲ್ಲಿ ಕಾಶ್ಮೀರವನ್ನೇ ಸರಿಯಾಗಿ ಚಿತ್ರಿಸಿಲ್ಲ.. ಪಾಕ್ ಆಕ್ರಮಿತ ಕಾಶ್ಮೀರ ಭಾಗವನ್ನ ಭಾರತದ ನಕಾಶೆಗೆ ಸೇರಿಸಿಲ್ಲ.. ಭಾರತದ ಭೂಪಟದಲ್ಲಿ ಕಾಶ್ಮೀರವನ್ನೇ ಕತ್ತರಿಸಿರೋದು ಇದೀಗ ವಿವಾದಕ್ಕೆ ಕಾರಣ ಆಗಿದೆ
3. ಕಾಂಗ್ರೆಸ್ ಬ್ಯಾನರ್ನಲ್ಲಿ ಕಾಶ್ಮೀರ ನಾಪತ್ತೆ,ಕೈ ವಿರುದ್ಧ ಬಿಜೆಪಿ ವಾಗ್ದಾಳಿ
ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಆರಂಭವಾಗಿದೆ. ಇನ್ನು ಈ ನಡುವೆ ಬೆಳಗಾವಿಯಲ್ಲಿ ಕಟ್ಟಿರುವ ಕೆಲವು ಬ್ಯಾನರ್ಗಳಲ್ಲಿ ಭಾರತದ ನಕಾಶೆಯನ್ನು ತಿರುಚಲಾಗಿದೆ. ಸದ್ಯ ಇದು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು ಈ ಬಗ್ಗೆ ದೇಶ, ರಾಜ್ಯದಲ್ಲಿರುವುದು ಅಸಲಿ ಕಾಂಗ್ರೆಸ್ ಪಕ್ಷವಲ್ಲ ಇದು ನಕಲಿ ಕಾಂಗ್ರೆಸ್ ಪಕ್ಷ ಅಂತ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಟೀಕಿಸಿದ್ದಾರೆ. ಅಂದಹಾಗೆ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ನಡೆಸಿದೆ. ಅಲ್ಲಿ ಬಿ.ವೈ ವಿಜಯೇಂದ್ರ ಮಾತನಾಡಿ, ಮಹಾತ್ಮ ಗಾಂಧೀಜಿ ಮತ್ತು ಡಾ. ಅಂಬೇಡ್ಕರ್ ಅವರ ತತ್ವಗಳನ್ನು ಗಾಳಿಗೆ ತೂರಿದ ಪಕ್ಷ ಕಾಂಗ್ರೆಸ್ ಎಂದ ಅವರು, ಗಾಂಧೀಜಿ ಮತ್ತು ಅಂಬೇಡ್ಕರರ ಹೆಸರು ಹೇಳುವ ನೈತಿಕತೆ, ಯೋಗ್ಯತೆ ಕಾಂಗ್ರೆಸ್ಸಿಗರಿಗೆ ಇಲ್ಲ ಎಂದು ಆಕ್ಷೇಪಿಸಿದರು. ಕಾಂಗ್ರೆಸ್ ಪಕ್ಷದವರಿಗೆ ಈ ದೇಶದ ಬಗ್ಗೆ, ಅಖಂಡತೆ, ಸಮಗ್ರತೆ ಬಗ್ಗೆ ಬದ್ಧತೆ ಇಲ್ಲ. ದೇಶ ಒಡೆಯುವ ಕೆಲಸವನ್ನು ಕಾಂಗ್ರೆಸ್ಸಿಗರೇ ಮಾಡಿದ್ದಾರೆ ಎಂದು ಹೇಳಿದರು. ಬಾಬಾ ಸಾಹೇಬರಿಗೆ ಸಂಬಂಧಿಸಿದ 5 ಪ್ರಮುಖ ಸ್ಥಳಗಳನ್ನು ಪ್ರಧಾನಿ ನರೇಂದ್ರ ಮೋದಿಜೀ ಅವರು ಪಂಚತೀರ್ಥಗಳನ್ನಾಗಿ ಅಭಿವೃದ್ಧಿ ಪಡಿಸಿದ್ದಾರೆ ಎಂದು ವಿವರಿಸಿದರು.ಕಾಂಗ್ರೆಸ್ ಪಕ್ಷವು ರಾಜ್ಯದ ಜನರ ಕೋಟಿಗಟ್ಟಲೆ ತೆರಿಗೆ ಹಣವನ್ನು ಬಳಸಿಕೊಂಡು ಬೆಳಗಾವಿಯಲ್ಲಿ ಮಹಾಧಿವೇಶನ ಮಾಡಲು ಹೊರಟಿರುವುದು ಸರಿಯಲ್ಲ ಎಂದು ತಿಳಿಸಿದರು. ನಕಲಿ ಕಾಂಗ್ರೆಸ್ಸಿನ ಈ ನೀತಿಯ ವಿರುದ್ಧ ಬೆಳಗಾವಿಯಲ್ಲಿ ಕಾಂಗ್ರೆಸ್ ಮಹಾಧಿವೇಶನವನ್ನು ವಿರೋಧಿಸಿ ನಾಳೆ ಬೆಳಿಗ್ಗೆ 10.30ಕ್ಕೆ ವಿಧಾನಸೌಧದ ಮಹಾತ್ಮ ಗಾಂಧಿ ಪ್ರತಿಮೆ ಮುಂದೆ ಧರಣಿ ನಡೆಸಲಿದ್ದೇವೆ. ವಿಧಾನಸಭೆ- ವಿಧಾನಪರಿಷತ್ತಿನ ಸದಸ್ಯರು ಇದರಲ್ಲಿ ಭಾಗವಹಿಸ್ತಾರೆ ಅಂತ ಅಂದಿದ್ದಾರೆ. ಈ ವೇಳೆ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
4. ಅಧಿವೇಶನಕ್ಕೆ ಸೋನಿಯಾ ಗಾಂಧಿ ಗೈರು,ಪತ್ರದ ಮೂಲಕ ಮಹತ್ವದ ಕರೆ
ಬೆಳಗಾವಿಯಲ್ಲಿ ಕಾಂಗ್ರೆಸ್ನದ್ದೆ ಕಲರವ ನಡೆಯತ್ತಿದೆ. 1924ರಲ್ಲಿ ಬೆಳಗಾವಿಯಲ್ಲಿ ಮಹಾತ್ಮಾ ಗಾಂಧಿಜೀ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ಸಂಭ್ರಮದಲ್ಲಿದೆ. ಹೀಗಾಗಿ ಬೆಳಗಾವಿಯಲ್ಲಿ ಇಂದಿನಿಂದ ಎರಡು ದಿನಗಳ ಕಾಲ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮಕ್ಕೆ ಸೋನಿಯಾ ಗಾಂಧಿ ಗೈರಾಗಿದ್ದು, ಈ ಸಂಬಂಧ ಪತ್ರ ಬರೆದಿರುವ ಅವರು ಕಾರ್ಯಕ್ರಮಕ್ಕೆ ಗೈರಾಗಿರುವ ಕಾರಣಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ. ಐತಿಹಾಸಿಕ ಕಾರ್ಯಕ್ರಮದಲ್ಲಿ ನಿಮ್ಮೊಂದಿಗಿರಲು ಸಾಧ್ಯವಾಗುತ್ತಿಲ್ಲ. ಕಾರ್ಯಕ್ರಮಕ್ಕೆ ಗೈರಾಗಿರುವ ಕಾರಣಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ. 39ನೇ ಅಧಿವೇಶನ ನಡೆದ ಸ್ಥಳದಲ್ಲೇ ನೀವೆಲ್ಲಾ ಸಮಾವೇಶಗೊಂಡಿರುವುದು ಸೂಕ್ತವಾಗಿದೆ. ಗಾಂಧೀಜಿ ಇದೇ ಸ್ಥಳದಲ್ಲಿ ಅಧ್ಯಕ್ಷರಾಗಿರುವುದಕ್ಕೆ ನಮ್ಮ ಪಕ್ಷಕ್ಕೆ ಹಾಗೂ ಸ್ವಾತಂತ್ರ್ಯ ಚಳವಳಿಗೆ ಮಹತ್ವದ ತಿರುವು ನೀಡಿದೆ. ದೆಹಲಿಯಲ್ಲಿ ಅಧಿಕಾರದಲ್ಲಿ ಇರುವವರಿಂದ ಗಾಂಧೀಜಿ ತತ್ವ ಸಿದ್ಧಾಂತಗಳಿಗೆ ಬೆದರಿಕೆ ಇದೆ. ಅಧಿಕಾರದಲ್ಲಿರುವ ಸಂಘಟನೆಗಳು ಎಂದೂ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಲಿಲ್ಲ.. ಅಲ್ಲದೇ ಮಹಾತ್ಮ ಗಾಂಧೀಜಿ ಅವರನ್ನ ಕಟುವಾಗಿ ವಿರೋಧಿಸಿದವರು, ಗಾಂಧೀಜಿ ಹತ್ಯೆ ಮಾಡಿದವರನ್ನ ಸಂಭ್ರಮಿಸಿದವರು ಅಂದಿದ್ದಾರೆ. ಅಲ್ಲದೇ ಸಾಮೂಹಿಕವಾಗಿ ಪಕ್ಷ ಸಂಘಟನೆ ಮಾಡೋಣ ಅಂತಲೂ ಕರೆ ನೀಡಿದ್ದಾರೆ.
5.ಕಾಂಗ್ರೆಸ್ ಕಾರ್ಯಕ್ರಮಕ್ಕೆ ಹೆಚ್‌ಡಿಕೆ ಟೀಕೆ, ಕಟೌಟ್‌ಗಳಲ್ಲಿ ಗಾಂಧೀಜಿ ಫೋಟೋ ಕಂಡಿಲ್ಲ
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧಿವೇಶನದ ಅಧ್ಯಕ್ಷತೆಯನ್ನು ಮಹಾತ್ಮ ಗಾಂಧೀಜಿ ವಹಿಸಿದ್ದು ಒಂದು ಭಾರಿ ಮಾತ್ರ. ಅದು ಕೂಡ ಬೆಳಗಾವಿಯಲ್ಲಿ 1924 ರಲ್ಲಿ ನಡೆದಿದ್ದ ಸಮಾವೇಶದಲ್ಲಿ.ಈ ಹಿನ್ನೆಲೆಯಲ್ಲಿ ಆ ಕಾರ್ಯಕ್ರಮದ ಸವಿ ನೆನಪಿಗಾಗಿ ಕಾಂಗ್ರೆಸ್ ಗಾಂಧಿ ಶತಮಾನೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ. ಸದ್ಯ ಈ ಕಾರ್ಯಕ್ರಮದ ಕುರಿತು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಅವರು ವ್ಯಂಗ್ಯವಾಡಿದ್ದಾರೆ. ಬೆಳಗಾವಿಯಲ್ಲಿ ಕಾಂಗ್ರೆಸ್‌ನಿಂದ ಗಾಂಧಿ ಶತಮಾನೋತ್ಸವ ಕಾರ್ಯಕ್ರಮದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು ಕೇಂದ್ರ ಸಚಿವ ಕುಮಾರಸ್ವಾಮಿ ಅವರು, ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿ ಗಾಂಧೀಜಿ ಶತಮಾನೋತ್ಸವ ಕಾರ್ಯಕ್ರಮ ಮಾಡ್ತಿದೆ. ಕಟೌಟ್‌ಗಳಲ್ಲಿ ಗಾಂಧೀಜಿ ಫೋಟೋ ನೋಡಲಿಲ್ಲ, ನಕಲಿ ಗಾಂಧಿಗಳ ಫೋಟೋ ಆಕಾಶದೆತ್ತರಕ್ಕೆ ಹಾಕಿದ್ದಾರೆ. ಗಾಂಧೀಜಿ ಹೆಸರಲ್ಲಿ ಕಾರ್ಯಕ್ರಮ ಮಾಡಲು ನನ್ನ ತಕರಾರಿಲ್ಲ. ಸಂಘಟಿತ ಹೋರಾಟದ ಮೂಲಕ ಸ್ವತಂತ್ರಕ್ಕಾಗಿ ಹೋರಾಡಿದ್ರು, ಇಂದು ಗಾಂಧೀಜಿ ರಾಮರಾಜ್ಯದ ಪರಿಕಲ್ಪನೆ ರಾಜ್ಯದಲ್ಲಿದ್ಯ? ಅಂತ ಪ್ರಶ್ನಿಸಿದರು.
6. ರಾಜ್ಯದಲ್ಲಿ ಇನ್ನೊಬ್ಬ ಗುತ್ತಿಗೆದಾರ ಆತ್ಮಹತ್ಯೆ, ಪ್ರಿಯಾಂಕ್ ಖರ್ಗೆ ಆಪ್ತನಿಂದ ಕೊಲೆ ಬೆದರಿಕೆ
ರಾಜ್ಯದಲ್ಲಿ ಗುತ್ತಿಗೆದಾರರ ಆತ್ಮಹತ್ಯೆ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿಯೇ ನಡೆಯುತ್ತಿವೆ. ಈ ನಡುವೆ ಬೀದರ್‌ನಲ್ಲಿ ಸಚಿನ್ ಎಂಬ ಗುತ್ತಿಗೆದಾರ ಅತ್ಮಹತ್ಯೆಗೆ ಶರಣಾಗಿದ್ದಾರೆ. ಇವರು 27 ಪುಟಗಳ ಡೆತ್ ನೋಟ್ ಬರೆದಿಟ್ಟು ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರ ತಲೆ ಹಾಗೂ ದೇಹ ಬೇರೆ ಬೇರೆಯಾಗಿದ್ದು, ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು ಮೃತ ಸಚಿನ್, ಡೆತ್ ನೋಟ್‌ನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಆಪ್ತನ ಹೆಸರು ಈ ಪ್ರಕರಣದಲ್ಲಿ ತಳಕು ಹಾಕಿಕೊಂಡಿದೆ. ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರು ಎಂಬುವವರು 15 ಲಕ್ಷಕ್ಕೂ ಅಧಿಕ ಹಣ ತೆಗೆದುಕೊಂಡು ಟೆಂಡರ್ ನೀಡದೆ ವಂಚನೆ ಮಾಡಿದ್ದು, ಮಾತ್ರವಲ್ಲದೆ ಮೃತ ಸಚಿನ್ ಅವರಿಂದ ಇನ್ನೂ 1 ಕೋಟಿ ಹಣ ನೀಡುವಂತೆ ಒತ್ತಡ ಹೇರಿದ್ದರು ಎನ್ನಲಾಗಿದೆ. ಮಾತ್ರವಲ್ಲ ರಾಜು ಕಪನೂರು ಸೇರಿ ಇನ್ನೂ ನಾಲ್ವರು ಸೇರಿಕೊಂಡು ಕೊಲೆ ಬೆದರಿಕೆ ಹಾಕಿದ್ದರು ಎಂದು 7 ಪುಟಗಳ ವಿಸ್ತಾರವಾದ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ನಡುವೆ ರೈಲ್ವೇ ಹಳಿಯ ಬಳಿ ಮೃತ ಸಚಿನ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಸಾವಿಗೆ ಕಾರಣರಾದವರು ಸ್ಥಳಕ್ಕೆ ಬರಬೇಕೆಂದು ಸಂಬಂಧಿಕರು ಒತ್ತಾಯ ಮಾಡಿದ್ದಾರೆ. ಆದ್ರೆ, ಸಂಬಂಧಿಕ ವಿರೋಧದ ನಡುವೆಯೇ ಪೊಲೀಸರು ಮೃತ ಸಚಿನ್ ಅವರ ಮೃತದೇಹವನ್ನು ಬ್ರಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಹಣ ಪಡೆದಿದ್ದು ಮಾತ್ರವಲ್ಲದೆ ಅವರಿಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಡೆತ್ ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ.
7. ಸಾರಿಗೆ ನೌಕರರು ಮುಷ್ಕರ, ಡಿ.30ರೊಳಗೆ ಸಮಸ್ಯೆ ಬಗೆಹರಿಸಿ
ಕರ್ನಾಟಕದಲ್ಲಿ ಸಾರಿಗೆ ನೌಕರರು ಮುಷ್ಕರ ನಡೆಸುವುದಾಗಿ ಘೋಷಣೆ ಮಾಡಿದ್ದಾರೆ. ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಡಿಸೆಂಬರ್ 31ರಿಂದ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲು ತೀರ್ಮಾನಿಸಿದ್ದಾರೆ. ಈಗಾಗಲೇ ಬೆಳಗಾವಿ ಅಧಿವೇಶನದ ಸಮಯದಲ್ಲಿಯೇ ಮುಷ್ಕರ ನಡೆಸುವುದರ ಕುರಿತ ಸರ್ಕಾರಕ್ಕೆ ನೋಟಿಸ್ ನೀಡಿದ್ದರು. ಸದ್ಯ, ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿಸೆಂಬರ್ 31 ರಿಂದ ರಾಜ್ಯದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಮುಷ್ಕರಕ್ಕೆ ಕರೆ ನೀಡಲಾಗಿದ್ದು, ಸಾರ್ವಜನರು ಮತ್ತೊಮ್ಮೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುವ ನಿರೀಕ್ಷೆ ಇದೆ. ಡಿಸೆಂಬರ್ 31ರಿಂದ ರಾಜ್ಯದಲ್ಲಿ ಮತ್ತೆ ಬಸ್ ಸ್ಥಗಿತಗೊಳ್ಳಲಿವೆ. ಕರ್ನಾಟಕದ ನಾಲ್ಕು ಸಾರಿಗೆ ನಿಗಮದ ಜಂಟಿ ಕ್ರಿಯಾ ಸಮಿತಿಯಿಂದ ಅನಿರ್ಧಿಷ್ಠಾವಧಿ ಮುಷ್ಕರಕ್ಕೆ ಕರೆ ನೀಡಿವೆ. ಬಾಕಿಯಿರುವ 38 ತಿಂಗಳ ಹೆಚ್ಚಳದ ವೇತನ ನೀಡಬೇಕು ಅಂತ ಆಗ್ರಹಿಸಿದ್ದಾರೆ. ಇನ್ನು ಸಾರಿಗೆ ನೌಕರರು ಮುಷ್ಕರಕ್ಕೆ ನಿರ್ಧರಿಸುವ ಬೆನ್ನಲ್ಲೆ, ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ನಿವೃತ್ತ ಸಿಬ್ಬಂದಿಗೆ ನೀಡಬೇಕಾದ ಬಾಕಿ ಉಪಧನ ಮತ್ತು ಗಳಿಕೆ ರಜೆ ನಗದೀಕರಣ ಪಾವತಿಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಆದೇಶವನ್ನು ಹೊರಡಿಸಿದ್ದಾರೆ.
8.ದರ ಪರಿಷ್ಕರಣೆ,ಹೆಚ್ಚುವರಿ ಹಾಲು ಕಡಿತ,5 ರೂ. ಬೆಲೆ ಏರಿಕೆ ಸುಳಿವು ನೀಡಿದ KMF
ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿ ಕರ್ನಾಟಕ ಹಾಲು ಒಕ್ಕೂಟ ಸುದ್ದಿಯಲ್ಲಿದೆ. ಇದೀಗ ಮತ್ತೆ ನಂದಿನಿ ಹಾಲಿನ ದರ ಪರಿಷ್ಕರಣೆಗೆ ಮುಂದಾಗಿದ್ದು, ಹೊಸ ವರ್ಷದಿಂದ ಪ್ರತೀ ಲೀಟರ್ ಹಾಲಿನ ದರದಲ್ಲಿ 5 ರೂಪಾಯಿ ಏರಿಕೆ ಮಾಡಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಆರು ತಿಂಗಳ ಹಿಂದೆಯಷ್ಟೇ ಕರ್ನಾಟಕದಲ್ಲಿ ನಂದಿನಿ ಹಾಲುದರ ಏರಿಕೆಯಾಗಿತ್ತು. ಇದೀಗ ಮತ್ತೆ ಬೆಲೆ ಏರಿಕೆಗೆ ಕೆಎಂಎಫ್ ಮುಂದಾಗಿದೆ. ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 5 ರೂ. ಏರಿಸುವ ಕುರಿತು ಕರ್ನಾಟಕ ಹಾಲು ಮಹಾಮಂಡಳ ಅಧ್ಯಕ್ಷ ಎಲ್. ಭೀಮಾನಾಯ್ಕ ಗುರುವಾರ ಮುನ್ಸೂಚನೆ ನೀಡಿದ್ದಾರೆ. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಂದಿನಿ ಹಾಲಿನ ದರ ಏರಿಕೆ ಪ್ರಸ್ತಾವನೆ ಹೋಗಿದ್ದು, ಸರ್ಕಾರದ ಹಂತದಲ್ಲಿ ದರ ಏರಿಕೆ ಕುರಿತಾಗಿ ತೀರ್ಮಾನ ಕೈಗೊಳ್ಳಬೇಕು ಎನ್ನುವ ಅಭಿಪ್ರಾಯವನ್ನು ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ ಹೇಳಿದ್ದಾರೆ. ಹಾಲು ಉತ್ಪಾದಕ ರೈತರು ತೀವ್ರ ಸಂಕಷ್ಟದಲ್ಲಿರುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗಮನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹೊಸ ವರ್ಷದಲ್ಲಿ ರೈತರಿಗೆ ಕನಿಷ್ಠ 5 ರೂ.ನಷ್ಟು ಹಾಲಿನ ದರ ಹೆಚ್ಚಿಸುವ ಮೂಲಕ ಹಾಲು ಉತ್ಪಾದಕರಿಗೆ ಸಿಹಿ ಸುದ್ದಿ ನೀಡಲಿದ್ದಾರೆ. ಸಿಎಂ ಶೀಘ್ರದಲ್ಲೇ ರಾಜ್ಯದ ಒಕ್ಕೂಟಗಳ ಅಧ್ಯಕ್ಷರ ಸಭೆ ಕರೆದು, ಹಾಲು ಉತ್ಪಾದಕ ರೈತರಹಿತ ನಿರ್ಣಯ ಕೈಗೊಳ್ಳಲಿದ್ದಾರೆ ಅಂತ ಸ್ಪಷ್ಟಪಡಿಸಿದ್ದಾರೆ.
9. ಪುಷ್ಪ-2 ಕಾಲ್ತುಳಿತ ಪ್ರಕರಣ, ರೇವಂತ್ ರೆಡ್ಡಿ ಖಡಕ್ ವಾರ್ನಿಂಗ್
‘ಪುಷ್ಪ 2’ ಸಿನಿಮಾ ಪ್ರದರ್ಶನ ಆಗುವಾಗ ಮಹಿಳೆಯೊಬ್ಬರು ಕಾಲ್ತುಳಿತದಿಂದ ನಿಧನರಾದ ಕಾರಣ ಆ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದ ಅಲ್ಲು ಅರ್ಜುನ್ ಅವರನ್ನು ಪೊಲೀಸರು ಬಂಧಿಸಿದ್ದರು. ನಟನ ಬಂಧನಕ್ಕೆ ಹಲವರು ಖಂಡನೆ ವ್ಯಕ್ತಪಡಿಸಿದ್ದರು. ಸರ್ಕಾರ ಮತ್ತು ಚಿತ್ರರಂಗದ ನಡುವೆ ಉತ್ತಮ ಬಾಂಧವ್ಯ ಹೊಂದುವ ಉದ್ದೇಶದಿಂದ ಇಂದು ಸಂಧಾನ ಸಭೆ ಮಾಡಲಾಗಿದೆ. ಈ ಮೀಟಿಂಗ್ನಲ್ಲಿ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಚಿತ್ರರಂಗಕ್ಕೆ ಒಂದಷ್ಟು ಮಹತ್ವದ ಸೂಚನೆಗಳನ್ನು ನೀಡಿದ್ದಾರೆ. ಸೆಲೆಬ್ರಿಟಿಗಳು ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಜನರನ್ನು ನಿಯಂತ್ರಿಸುವ ಜವಾಬ್ದಾರಿ ಪೊಲೀಸರಷ್ಟೇ ಸೆಲೆಬ್ರಿಟಿಗಳಿಗೂ ಇರಬೇಕು. ಅಲ್ಲು ಅರ್ಜುನ್ ಅವರು ‘ಸಂಧ್ಯಾ’ ಚಿತ್ರಮಂದಿರಕ್ಕೆ ಭೇಟಿ ನೀಡಿದಾಗ ರೇವತಿ ಎಂಬ ಅಭಿಮಾನಿಯು ಕಾಲ್ತುಳಿತದಿಂದ ಮೃತರಾದರು. ಇಂಥ ಸಂದರ್ಭಗಳಲ್ಲಿ ಶಾಂತಿ ಕಾಪಾಡಲು ಸೆಲೆಬ್ರಿಟಿಗಳು ಪೊಲೀಸರಿಗೆ ನೆರವು ನೀಡಬೇಕು ಅಂತ ರೇವಂತ್ ರೆಡ್ಡಿ ಹೇಳಿದ್ದಾರೆ.ಸಿನಿಮಾಗಳ ವಿಶೇಷ ಪ್ರದರ್ಶನಗಳನ್ನು ಏರ್ಪಡಿಸಿದಾಗ ಇಂಥ ದುರ್ಘಟನೆಗಳು ನಡೆಯುತ್ತವೆ. ಹಾಗಾಗಿ ಸದ್ಯಕ್ಕೆ ಎಲ್ಲ ರೀತಿಯ ಸ್ಪೆಷಲ್ ಶೋಗಳನ್ನು ನಿಷೇಧಿಸಲಾಗಿದೆ. ಅಲ್ಲದೇ, ಸೆಲೆಬ್ರಿಟಿಗಳು ತಮ್ಮ ಸ್ವಂತ ಬೌನ್ಸರ್ಗಳನ್ನು ನೇಮಿಸಿಕೊಂಡಾಗ ಬೌನ್ಸರ್ಗಳು ಜನರೊಂದಿಗೆ ಅಪಾಯಕಾರಿಯಾಗಿ ನಡೆದುಕೊಳ್ಳುವಂತಿಲ್ಲ ಅಂತ ಕೂಡ ರೇವಂತ್ ರೆಡ್ಡಿ ಎಚ್ಚರಿಗೆ