ಪ್ರಪಂಚದ ಪ್ರಮುಖ ಸುದ್ದಿಗಳು – 15/12/2025

1) ಕಾಂಗ್ರೆಸ್ ರ‍್ಯಾಲಿಯಲ್ಲಿ ‘ಮೋದಿ ಸಮಾಧಿ’ ಘೋಷಣೆ

ದೆಹಲಿಯ ರಾಮಲೀಲಾ ಮೈದಾನದಲ್ಲಿ ಭಾನುವಾರ ನಡೆದ ಕಾಂಗ್ರೆಸ್ ರ‍್ಯಾಲಿಯಲ್ಲಿ ಮೋದಿ, ನಿಮ್ಮ ಸಮಾಧಿಯನ್ನು ಇಂದು ಅಲ್ಲದಿದ್ದರೆ ನಾಳೆ ಅಗೆಯಲಾಗುತ್ತದೆ ಎಂಬ ಘೋಷಣೆಗಳು ಕೇಳಿಬಂದ ಬೆನ್ನಲ್ಲೇ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ‌ ಕ್ಷಮೆಯಾಚಿಸಬೇಕೆಂದು ಬಿಜೆಪಿ ನಾಯಕರು ಲೋಕಸಭೆ, ರಾಜ್ಯಸಭೆಯಲ್ಲಿ ಕೋಲಾಹಲ ಸೃಷ್ಟಿಸಿದರು. ಲೋಕಸಭೆಯಲ್ಲಿ ಕೇಂದ್ರ ಸಚಿವ ಕಿರಣ್ ರಿಜಿಜು ಹಾಗೂ ರಾಜ್ಯಸಭೆಯಲ್ಲಿ ಕೇಂದ್ರ ಸಚಿವ ಜೆ.ಪಿ. ನಡ್ಡಾ ಈ ವಿಷಯವನ್ನು ಪ್ರಸ್ತಾಪಿಸಿ ಸೋನಿಯಾ ಗಾಂಧಿ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದರು. ಲೋಕಸಭೆಯಲ್ಲಿ ಮಾತನಾಡಿದ ಕಿರಣ್ ರಿಜಿಜು, ಕಾಂಗ್ರೆಸ್ ರ‍್ಯಾಲಿಯಲ್ಲಿ ಪ್ರಧಾನಿ ಮೋದಿಯವರಿಗೆ ಸಮಾಧಿ ಅಗೆಯುವ ಬಗ್ಗೆ ಚರ್ಚೆ ನಡೆಸಿದೆ. ಈ ಮೂಲಕ ಕಾಂಗ್ರೆಸ್ ರಾಜಕೀಯ ಕೀಳು ಮಟ್ಟವನ್ನು ತಲುಪಿದೆ. ಈ ದೇಶಕ್ಕೆ ಇದಕ್ಕಿಂತ ನಾಚಿಕೆಗೇಡಿನ ಮತ್ತು ದುರಾದೃಷ್ಟಕರ ಘಟನೆ ಇನ್ನೊಂದಿಲ್ಲ. ಈ ಘಟನೆಗೆ ಪಕ್ಷದ ನಾಯಕತ್ವ ಕ್ಷಮೆಯಾಚಿಸಬೇಕು ಎಂದು ಹೇಳಿದರು. ಕಿರಣ್ ರಿಜಿಜು ಕ್ಷಮೆಯಾಚಿಸುವ ಬಗ್ಗೆ ಮಾತನಾಡಿದಾಗ, ಸದನದಲ್ಲಿ ಹಾಜರಿದ್ದ ಇತರ ಸಂಸದರು ಮತ್ತು ಸಚಿವರು ಸಹ ಅವರ ಬೆಂಬಲಕ್ಕೆ ನಿಂತರು. ಅರ್ಜುನ್ ರಾಮ್ ಮೇಘವಾಲ್, ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಮತ್ತು ಇತರ ಅನೇಕ ಬಿಜೆಪಿ ಸಂಸದರು ಕಾಂಗ್ರೆಸ್ ಕ್ಷಮೆಯಾಚಿಸಬೇಕೆಂದು ಒಮ್ಮತದಿಂದ ಒತ್ತಾಯಿಸಿದರು.

=============================

2) ಪ್ರಿಯಾಂಕ್-ಪ್ರಶಾಂತ್‌ ಕಿಶೋರ್‌ ಭೇಟಿಯಾಗಿದ್ದೇಕೆ?

ಕಾಂಗ್ರೆಸ್‌ ಸಂಸದೆ ಪ್ರಿಯಾಂಕಾ ವಾದ್ರಾ ಮತ್ತು ಚುನಾವಣಾ ತಂತ್ರಗಾರ, ಜನ ಸುರಾಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್‌ ಕಿಶೋರ್‌ ಮೂರು ವರ್ಷದ ಬಳಿಕ ಮಾತುಕತೆ ನಡೆಸಿದ್ದು ಮತ್ತೆ ಕಾಂಗ್ರೆಸ್‌ ಪರ ಪಿಕೆ ರಣತಂತ್ರ ರೂಪಿಸುತ್ತಾರಾ ಎಂಬ ಪ್ರಶ್ನೆ ಎದ್ದಿದೆ. ಬಿಹಾರ ಚುನಾವಣೆ ನಡೆದ ಒಂದು ತಿಂಗಳ ನಂತರ ಈ ಮಹತ್ವದ ಭೇಟಿ ನಡೆದಿದೆ. ಬಿಹಾರದಲ್ಲಿ ಕಾಂಗ್ರೆಸ್‌ ಪಕ್ಷದ ಟೀಕೆ ಮಾಡಿದ್ದ ಪ್ರಶಾಂತ್‌ ಕಿಶೋರ್‌ ಈಗ ಪ್ರಿಯಾಂಕಾ ಅವರನ್ನು ಭೇಟಿ ಮಾಡಿ ಮಾತನಾಡಿದ್ದು ಯಾವ ವಿಚಾರದ ಬಗ್ಗೆ ಮಾತುಕತೆ ನಡೆಸಿದ್ದಾರೆ ಎನ್ನುವುದು ತಿಳಿದುಬಂದಿಲ್ಲ. ಬಿಹಾರ ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್‌ನ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಮತ್ತು ರಾಹುಲ್ ಗಾಂಧಿಯವರ ಮತ ಕಳ್ಳತನ ಅಭಿಯಾನ ರಾಜ್ಯದ ಜನತೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದಿದ್ದರು. ಹಾಗೆ ನೋಡಿದರೆ ಈ ಹಿಂದೆ ಪ್ರಶಾಂತ್‌ ಕಿಶೋರ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ಪರ ಕೆಲಸ ಮಾಡಿದ್ದರು. ಆದರೆ ಇವರ ಸಲಹೆಗಳು ಕಾಂಗ್ರೆಸ್‌ ಹಿರಿಯ ನಾಯಕರಿಗೆ ಹಿಡಿಸದ ಕಾರಣ ಇವರ ವಿರುದ್ಧ ಮಾತುಗಳು ಕೇಳಿ ಬಂದಿತ್ತು.

=================================

3) ವೋಟ್‌ ಚೋರಿಯಿಂದ ದೂರ ಉಳಿದ ಜಮ್ಮು CM

ಕಾಂಗ್ರೆಸ್ ಎತ್ತಿರುವ ‘ವೋಟ್ ಚೋರಿ’ ವಿವಾದದಿಂದ ದೂರ ಉಳಿದಿರುವ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಇದಕ್ಕೂ ಇಂಡಿಯಾ ಬಣ’ಕ್ಕೂ ಯಾವುದೇ ಸಂಬಂಧ ಇಲ್ಲ ಎಂದಿದ್ದಾರೆ. ರಾಷ್ಟ್ರ ರಾಜಧಾನಿಯ ರಾಮಲೀಲಾ ಮೈದಾನದಲ್ಲಿ ಭಾನುವಾರ ನಡೆದ ವೋಟ್ ಚೋರ್ ಗಡ್ಡಿ ಛೋಡ್’ ಪ್ರತಿಭಟನೆಯಲ್ಲಿ ಕಾಂಗ್ರೆಸ್ ನಾಯಕರು ಬಿಜೆಪಿ ಹಾಗೂ ಚುನಾವಣಾ ಆಯುಕ್ತರ ವಿರುದ್ಧ ವಾಗ್ದಾಳಿ ನಡೆಸಿದ ಒಂದು ದಿನದ ಬಳಿಕ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಈ ರೀತಿಯ ಹೇಳಿಕೆ ನೀಡಿದ್ದಾರೆ. ಒಮರ್ ಅಬ್ದುಲ್ಲಾ ಅವರ ‘ನ್ಯಾಷನಲ್ ಕಾನ್ಫರೆನ್ಸ್’ ಇಂಡಿಯಾ ಬಣದಲ್ಲಿರುವ ಪ್ರಮುಖ ಮಿತ್ರಪಕ್ಷವಾಗಿದೆ. ಲೋಕಸಭೆಯಲ್ಲಿ ವಿರೋಧ ಪಕ್ಷದ ಸಂಸದರ ಸಂಖ್ಯೆಗೆ ಅನುಗುಣವಾಗಿ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿದೆ. ಮತ ಚೋರಿ’ ಮತ್ತು ಚುನಾವಣಾ ಅಕ್ರಮ ಕುರಿತು ಕಾಂಗ್ರೆಸ್ ಆರೋಪಗಳ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಬ್ದುಲ್ಲಾ, ಇದಕ್ಕೂ ಇಂಡಿಯಾ ಬಣಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಪ್ರತಿಯೊಂದು ರಾಜಕೀಯ ಪಕ್ಷವು ತನ್ನದೇ ಆದ ಅಜೆಂಡಾ ರೂಪಿಸಲು ಸ್ವತಂತ್ರವಾಗಿದೆ. ಕಾಂಗ್ರೆಸ್ ‘ವೋಟ್ ಚೋರಿ’ ಮತ್ತು ಎಸ್‌ಐಆರ್ ಅನ್ನು ತನ್ನ ಮುಖ್ಯ ವಿಷಯವನ್ನಾಗಿ ಮಾಡಿಕೊಂಡಿದೆ. ಇದನ್ನು ಮಾಡಬೇಡಿ ಎಂದು ಹೇಳಲು ನಾವು ಯಾರು? ಎಂದರು.

==============================

4) “ಆಪರೇಷನ್‌ ಮಹಾದೇವ್‌” ಚಾರ್ಜ್‌ಶೀಟ್‌ ಸಲ್ಲಿಕೆ

ಏಪ್ರಿಲ್‌ 22ರಂದು ಕಾಶ್ಮೀರದಲ್ಲಿ ನಡೆದ ಪಹಲ್ಗಾಮ್‌ ಭಯೋತ್ಪಾದಕ ದಾಳಿ ಪ್ರಕರಣದ ತನಿಖೆ ನಡೆಸಿದ ರಾಷ್ಟ್ರೀಯ ತನಿಖಾ ಸಂಸ್ಥೆ ಇಂದು ದೋಷಾರೋಪ ಪಟ್ಟಿ ಸಲ್ಲಿಸಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ತನಿಖಾಧಿಕಾರಿಗಳ ಪ್ರಕಾರ, ಆಪರೇಷನ್‌ ಮಹಾದೇವ್‌ನಲ್ಲಿ ಹತ್ಯೆಯಾದ ಲಷ್ಕರ್-ಎ-ತೈಬಾ ಗುಂಪಿನ ಉಗ್ರರ ಹೆಸರನ್ನ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ಪಹಲ್ಗಾಮ್‌ ದಾಳಿಯು ಪ್ರತ್ಯೇಕ ಘಟನೆಯಾಗಿರಲಿಲ್ಲ. ಕಾಶ್ಮೀರದಲ್ಲಿ ಲಷ್ಕರ್‌ ಸಾಮ್ರಾಜ್ಯ ವಿಸ್ತರಿಸುವ ಹಾಗೂ ಸಂಘಟಿತ ಭಯೋತ್ಪಾದನಾ ಕಾರ್ಯತಂತ್ರದ ಭಾಗವಾಗಿತ್ತು ಎಂದು ಆರೋಪ ಪಟ್ಟಿಯಲ್ಲಿ ತಿಳಿಸಲಾಗಿದೆ. ಆಪರೇಷನ್‌ ಮಹಾದೇವ್‌ನಲ್ಲಿ ಹತ್ಯೆಗೀಡಾದ ಉಗ್ರರಲ್ಲಿ ಇಬ್ಬರು, ಗುಜ್ಜರ್ ಮತ್ತು ಬಕ್ಕರ್‌ವಾಲ್ ಸಮುದಾಯಕ್ಕೆ ಸೇರಿದ ಸ್ಥಳೀಯರಿಂದ ನಿರಂತರ ಸಹಾಯ ಪಡೆದುಕೊಂಡಿದ್ದರು. ಇಡೀ ಸಮಯದಾಯದ ಜನ ಇದರಲ್ಲಿ ಭಾಗಿಯಾಗಿರಲಿಲ್ಲ. ಆಶ್ರಯ ನೀಡಿದ್ದ ಸ್ಥಳೀಯರು, ವ್ಯವಸ್ಥಿತ ಬೆಂಬಲ ನೀಡಿದ್ದರು. ಅಲ್ಲದೇ ನಿರ್ಣಾಯಕ ಮಾರ್ಗಗಳ ಬಗ್ಗೆ ಎಲ್ಲಾ ವಿವರ ಕೊಟ್ಟಿದ್ದರು. ಇದು ಉಗ್ರರು ಭದ್ರತಾಪಡೆಗಳಿಂದ ತಪ್ಪಿಸಿಕೊಂಡು ಅರಣ್ಯ ಪ್ರದೇಶದಲ್ಲಿ ಅಡಿಗಿಕೊಳ್ಳಲು ಸಹಾಯವಾಗಿತ್ತು ಎಂದು ಆರೋಪ ಪಟ್ಟಿಯಲ್ಲಿ ತಿಳಿಸಲಾಗಿದೆ.

=================================

5) ಮನ್ರೇಗಾ ಬದಲು ಗ್ರಾಮ್‌! ಶೀಘ್ರವೇ ಮಂಡನೆ

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಹೆಸರನ್ನು ದಿ ವಿಕ್ಷಿತ್‌ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ ಎಂಬುದಾಗಿ ಮರುನಾಮಕರಣ ಮಾಡಿದ್ದು ಈ ಚಳಿಗಾಲದ ಅಧಿವೇಶನದಲ್ಲೇ ಮಸೂದೆ ಮಂಡನೆ ಮಾಡಲಿದೆ. ದಿ ವಿಕ್ಷಿತ್‌ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ ಸಂಕ್ಷಿಪ್ತವಾಗಿ VB G RAM G ಎಂದು ಕರೆಯಲಾಗುತ್ತದೆ. ಹೊಸ ಮಸೂದೆಯು ವಿಕ್ಷಿತ್ ಭಾರತ್ 2047 ದೃಷ್ಟಿಕೋನವನ್ನು ಪೂರೈಸುವ ಗುರಿಯನ್ನು ಹೊಂದಿದೆ ಎಂದು ಸರ್ಕಾರ ಹೇಳಿಕೊಂಡಿದೆ. 2005 ರಲ್ಲಿ ಆಗಿನ ಯುಪಿಎ ಸರ್ಕಾರವು ಪ್ರಾರಂಭಿಸಿದ MGNREGA ಯೋಜನೆಯು ಗ್ರಾಮೀಣ ಪ್ರದೇಶಗಳಲ್ಲಿ 100 ದಿನಗಳ ಕೆಲಸವನ್ನು ಖಾತರಿಪಡಿಸುತ್ತದೆ. ಹೊಸ ಮಸೂದೆಯಲ್ಲಿ 100 ದಿನಗಳ ಖಾತರಿಯನ್ನು 125 ಕ್ಕೆ ಹೆಚ್ಚಿಸಲಾಗಿದೆ. ಕೆಲಸ ಪೂರ್ಣಗೊಂಡ ಒಂದು ವಾರ ಅಥವಾ 15 ದಿನಗಳಲ್ಲಿ ಪಾವತಿಗಳನ್ನು ಮಾಡಲಾಗುತ್ತದೆ ಎಂಬ ಪ್ರಸ್ತಾಪವಿದೆ. ಗಡುವಿನೊಳಗೆ ಪಾವತಿಗಳನ್ನು ಮಾಡದಿದ್ದರೆ, ನಿರುದ್ಯೋಗ ಭತ್ಯೆಗೆ ಅವಕಾಶವೂ ಇದೆ. ಹೊಸ ಮಸೂದೆಯು ಯೋಜನೆಯಡಿಯಲ್ಲಿ ಕೆಲಸವನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸುತ್ತದೆ – ನೀರಿನ ಭದ್ರತೆ, ಗ್ರಾಮೀಣ ಮೂಲಸೌಕರ್ಯ, ಜೀವನೋಪಾಯ ಮೂಲಸೌಕರ್ಯ ಮತ್ತು ವಿಪತ್ತು ಎಂದು ವಿಂಗಡಿಸಲಾಗಿದೆ.

==============================

6) ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಇಳಿಕೆ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೋಮವಾರ ಬೆಳಗ್ಗೆ ಮತ್ತೊಮ್ಮೆ ದಟ್ಟವಾದ ಮಂಜು ಆವೃತವಾಗಿದ್ದು, ಗಾಳಿಯ ಗುಣಮಟ್ಟ ತೀವ್ರ ಹದಗೆಟ್ಟಿದೆ. ದೆಹಲಿಯಲ್ಲಿ ಇಂದು ದಟ್ಟವಾದ ಮಂಜು ಆವರಿಸಿದ್ದರಿಂದ ಕನಿಷ್ಠ 170 ವಿಮಾನಗಳು ರದ್ದಾಗಿದ್ದು, ರೈಲುಗಳು ಗಂಟೆಗಟ್ಟಲೆ ತಡವಾಗಿ ಸಂಚರಿಸಿವೆ. ದೆಹಲಿಯ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ ಈಗ 498ಕ್ಕೆ ಏರಿದ್ದು, ಮಾಲಿನ್ಯಕಾರಕಗಳು ದಟ್ಟವಾದ ಮಂಜು ಮತ್ತು ಗಾಳಿಯಲ್ಲಿ ಸಿಲುಕಿಕೊಂಡಿದ್ದರಿಂದ ನಗರದ ಗಾಳಿಯ ಗುಣಮಟ್ಟ ‘ಗಂಭೀರ’ವಾಗಿದೆ. ರಾಷ್ಟ್ರ ರಾಜಧಾನಿಯಾದ್ಯಂತ ಒಟ್ಟು 40 ವಾಯು ಗುಣಮಟ್ಟ ಮೇಲ್ವಿಚಾರಣಾ ಕೇಂದ್ರಗಳಲ್ಲಿ, 38 ಕಡೆ ‘ಗಂಭೀರ’ ಗಾಳಿಯ ಗುಣಮಟ್ಟ ವರದಿ ಮಾಡಿದರೆ, ಎರಡು ಕೇಂದ್ರಗಳು ‘ತುಂಬಾ ಕಳಪೆ’ ಮಟ್ಟವನ್ನು ದಾಖಲಿಸಿವೆ. ಜಹಾಂಗೀರ್‌ಪುರಿ ಅತ್ಯಂತ ಕಲುಷಿತ ಪ್ರದೇಶವಾಗಿ ಹೊರಹೊಮ್ಮಿದ್ದು, AQI 498 ದಾಖಲಿಸಿದೆ. ಇದು ಎಲ್ಲಾ ಕೇಂದ್ರಗಳಲ್ಲಿ ಅತ್ಯಧಿಕವಾಗಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಾರ, 401 ಮತ್ತು 500 ರ ನಡುವಿನ AQI ‘ಗಂಭೀರ’ ಎಂದು ವರ್ಗೀಕರಿಸಲಾಗಿದೆ. ಇದು ಗಂಭೀರ ಆರೋಗ್ಯ ಅಪಾಯಗಳನ್ನುಂಟುಮಾಡುತ್ತದೆ.

============================

7) ಇಂಡಿಗೋದಲ್ಲೇ ಲಾಕ್‌ ಆದ ಸಚಿವರು, ಶಾಸಕರು

ದಟ್ಟವಾದ ಮಂಜು, ಹೊಗೆಯಿಂದ ಕರ್ನಾಟಕದ 21 ಶಾಸಕರು ಇಂಡಿಗೋ ವಿಮಾನದ ಒಳಗಡೆಯೇ ಸಿಲುಕಿದ್ದಾರೆ. ಭಾನುವಾರ ಆಯೋಜನೆಗೊಂಡಿದ್ದ ವೋಟ್‌ ಚೋರಿ ಸಮಾವೇಶಕ್ಕೆ ಮಂತ್ರಿಗಳು, ಕಾಂಗ್ರೆಸ್ ಶಾಸಕರು ದೆಹಲಿಗೆ ಆಗಮಿಸಿದ್ದರು. ಇಂದು ದಾವಣಗೆರೆಯಲ್ಲಿ ನಡೆಯಲಿರುವ ಶಾಮನೂರು ಶಿವಶಂಕರಪ್ಪಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ದೆಹಲಿಯಿಂದ ಬೆಳಗಾವಿಗೆ ಹೋಗುವ ವಿಮಾನ ಏರಿದ್ದರು. ಶಾಸಕರ ವಿಮಾನ ಬೆಳಗ್ಗೆ 5:30ಕ್ಕೆ ದೆಹಲಿಯಿಂದ ಹೊರಡಬೇಕಿತ್ತು. ವಿಮಾನದ ಒಳಗಡೆ ಕುಳಿತುಕೊಂಡ ಬಳಿಕ ದಟ್ಟವಾದ ಹೊಗೆಯಿಂದಾಗಿ ವಿಮಾನ ಟೇಕಾಫ್‌ ಆಗಿಲ್ಲ. ಸುಮಾರು 4 ಗಂಟೆಯಿಂದ ಶಾಸಕರು ವಿಮಾನದಲ್ಲೇ ಕುಳಿತ್ತಿದ್ದು ಬೆಳಗ್ಗೆ 10 ಗಂಟೆಯಾದರೂ ವಿಮಾನ ಟೇಕಾಫ್‌ ಅಗಿಲ್ಲ. ವಿಮಾನ ಎಷ್ಟು ಗಂಟೆಗೆ ಟೇಕಾಫ್‌ ಆಗಲಿದೆ ಎಂಬ ಮಾಹಿತಿಯನ್ನು ಸಿಬ್ಬಂದಿ ನೀಡಿಲ್ಲ. ದೆಹಲಿಯಲ್ಲಿ ಹವಾಮಾನ ವೈಪರೀತ್ಯದಿಂದ ವಿಮಾನಗಳ ಟೇಕಾಫ್‌ ಮತ್ತು ಲ್ಯಾಂಡಿಂಗ್‌ಗೆ ಸಮಸ್ಯೆಯಾಗಿದೆ. ಕೋನರೆಡ್ಡಿ, ಬಸನಗೌಡ ಬಾದರ್ಲಿ, ಆನಂದ್ ಗಡದೇವರಮಠ, ಹೆಚ್‌ಕೆ ಪಾಟೀಲ್, ಲಕ್ಷ್ಮೀ ಹೆಬಾಳ್ಕರ್, ಶರಣ ಪ್ರಕಾಶ್ ಪಾಟೀಲ್, ರಾಜು ಗೌಡ, ಸಲೀಂ ಅಹಮದ್, ತನ್ವೀರ್ ಸೇಠ್, ಸತೀಶ್ ಜಾರಕಿಹೊಳಿ, ಜಿ ಎಸ್ ಪಾಟೀಲ್, ಮಾಲೀಕಯ್ಯ ಗುತ್ತೇದಾರ್, ಈಶ್ವರ್ ಖಂಡ್ರೆ, ಜೆ ಟಿ ಪಾಟೀಲ್, ತಿಪ್ಪಣ್ಣ ಕಾಮಕನೂರ್, ನಾಗೇಂದ್ರ, ಎಂ ಬಿ ಪಾಟೀಲ್, ಅಲ್ಲಮಪ್ರಭು, ರೆಹಮಾನ್ ಖಾನ್, ಕೆಜೆ ಜಾರ್ಜ್. ವಿಮಾನದಲ್ಲಿ ಇದ್ದರು.

=============================

8) ವಿಜ್ಞಾನಿಗೆ ಡಿಜಿಟಲ್‌ ಅರೆಸ್ಟ್‌, ₹57 ಲಕ್ಷ ಮೋಸ

ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಮತ್ತು ವಿಜ್ಞಾನಿ ಟಿ ರಾಮಸಾಮಿ ಅವರಿಗೆ ಸೈಬರ್ ವಂಚಕರು 57 ಲಕ್ಷ ರೂಪಾಯಿ ವಂಚಿಸಿದ್ದಾರೆ, ಇಡಿ ಅಧಿಕಾರಿಗಳೆಂದು ಹೇಳಿಕೊಂಡು ಒಂದು ವಾರ ಡಿಜಿಟಲ್ ಅರೆಸ್ಟ್ ಮಾಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಚೆನ್ನೈ ನಿವಾಸಿ ರಾಮಸಾಮಿ (77), ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಮಾಜಿ ಕಾರ್ಯದರ್ಶಿಯಾಗಿದ್ದು, ಪ್ರಸ್ತುತ ಚೆನ್ನೈನ ಅಣ್ಣಾ ವಿಶ್ವವಿದ್ಯಾಲಯದಲ್ಲಿ ಚರ್ಮ ತಂತ್ರಜ್ಞಾನ ವಿಭಾಗದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪೊಲೀಸರ ಪ್ರಕಾರ, ಈ ಘಟನೆ ಸೆಪ್ಟೆಂಬರ್‌ನಲ್ಲಿ ನಡೆದಿದ್ದು, ದೂರಿನ ಆಧಾರದ ಮೇಲೆ, ನವೆಂಬರ್ 6 ರಂದು ಚೆನ್ನೈ ಸೈಬರ್ ಅಪರಾಧ ಘಟಕದಲ್ಲಿ ಪ್ರಕರಣ ದಾಖಲಾಗಿದೆ. ಪ್ರಸ್ತುತ ತನಿಖೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ. ಸೆಪ್ಟೆಂಬರ್‌ನಲ್ಲಿ ಬೆಳಿಗ್ಗೆ 11:30 ರ ಸುಮಾರಿಗೆ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿತು ಮತ್ತು ಕರೆ ಮಾಡಿದವರು ದೂರಸಂಪರ್ಕ ಇಲಾಖೆಯಿಂದ ಬಂದವರು ಎಂದು ಹೇಳಿಕೊಂಡರು ಎಂದು ರಾಮಸಾಮಿ ತಮ್ಮ ದೂರಿನಲ್ಲಿ ಪೊಲೀಸರಿಗೆ ತಿಳಿಸಿದ್ದಾರೆ. ಕರೆ ಮಾಡಿದವರು ರಾಮಸಾಮಿ ಅವರ ಆಧಾರ್ ಕಾರ್ಡ್ ವಿವರಗಳನ್ನು ಬಳಸಿಕೊಂಡು ದೆಹಲಿಯಲ್ಲಿ ಸಿಮ್ ಕಾರ್ಡ್ ಖರೀದಿಸಲಾಗಿದೆ ಎಂದು ಹೇಳಿದ್ದರು ಮತ್ತು ಆ ಸಿಮ್ ಬಳಸಿ ನಡೆಸಲಾದ ಕಾನೂನುಬಾಹಿರ ಚಟುವಟಿಕೆಗಳ ಕುರಿತು ದೆಹಲಿ ಪೊಲೀಸರಿಗೆ 14 ದೂರುಗಳು ದಾಖಲಾಗಿವೆ.

=================================

9) ಐಇಡಿ ಸ್ಫೋಟ, ಕಮಾಂಡೋಗಳಿಗೆ ಗಾಯ

ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ನಕ್ಸಲರು ಇಟ್ಟಿದ್ದ ಸುಧಾರಿತ ಸ್ಫೋಟಕ ಸಾಧನ ಸ್ಫೋಟಗೊಂಡು ಸಿಆರ್‌ಪಿಎಫ್‌ನ ಕಮಾಂಡೋ ಬೆಟಾಲಿಯನ್ ಫಾರ್ ರೆಸಲ್ಯೂಟ್ ಆಕ್ಷನ್ ಘಟಕದ ಇಬ್ಬರು ಕಮಾಂಡೋಗಳು ಗಾಯಗೊಂಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಭಾನುವಾರ ಮಧ್ಯಾಹ್ನ ಫರ್ಸೆಗಢ ಪೊಲೀಸ್ ಠಾಣೆ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿಯ ಜಂಟಿ ತಂಡ ನಕ್ಸಲ್ ವಿರೋಧಿ ಕಾರ್ಯಾಚರಣೆಗೆ ಹೊರಟಿದ್ದಾಗ ಸ್ಫೋಟ ಸಂಭವಿಸಿದೆ. ರಾಜ್ಯ ಪೊಲೀಸರ ಎರಡೂ ಘಟಕಗಳಾದ ವಿಶೇಷ ಕಾರ್ಯಪಡೆ ಮತ್ತು ಜಿಲ್ಲಾ ಮೀಸಲು ಪಡೆ ಮತ್ತು ಕೋಬ್ರಾಗೆ ಸೇರಿದ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು, ಇದು ಇನ್ನೂ ಮುಂದುವರೆದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಗಸ್ತು ತಂಡವು ಫರ್ಸೆಘರ್-ಪಿಲ್ಲೂರ್ ಕಂಡ್ಲಪರ್ತಿಯ ಅರಣ್ಯವನ್ನು ಸುತ್ತುವರೆದಿದ್ದಾಗ, ನಕ್ಸಲರು ಇಟ್ಟಿದ್ದ ಐಇಡಿ ಸ್ಫೋಟಗೊಂಡಿದ್ದು, ಇಬ್ಬರು ಕೋಬ್ರಾ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಗೊಂಡ ಸಿಬ್ಬಂದಿಯನ್ನು ರಾಯ್‌ಪುರದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಮತ್ತು ಅಪಾಯದಿಂದ ಪಾರಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

================================

10) ಕಾರೊಳಗೆ ಚೀಲದಲ್ಲಿದ್ದ ವ್ಯಕ್ತಿ ಸಜೀವದಹನ

ವ್ಯಕ್ತಿಯನ್ನು ಗೋಣಿಚೀಲದಲ್ಲಿ ತುಂಬಿ ಕಾರಿನಲ್ಲಿರಿಸಿ, ಬೆಂಕಿ ಹಚ್ಚಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಲಾತೂರ್ ಜಿಲ್ಲೆಯಲ್ಲಿ ಭಾನುವಾರ ನಡೆದಿದೆ. ಗೋಣಿಚೀಲದಲ್ಲಿ ವ್ಯಕ್ತಿಯನ್ನು ತುಂಬಿ ಹಗ್ಗದಿಂದ ಕಟ್ಟಲಾಗಿತ್ತು. ಔಸಾ ತಾಂಡಾ ನಿವಾಸಿ ಗಣೇಶ್ ಚವಾಣ್ ಮೃತ ವ್ಯಕ್ತಿ. ಅವರನ್ನು ಚೀಲದೊಳಗೆ ತುಂಬಿ, ಕಾರಿನಲ್ಲಿರಿಸಿ ಬಳಿಕ ಅಪರಿಚಿತ ದುಷ್ಕರ್ಮಿಗಳು ವಾಹನಕ್ಕೆ ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಚವಾಣ್ ಐಸಿಐಸಿಐ ಬ್ಯಾಂಕಿನಲ್ಲಿ ರಿಕವರಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದರು. ಪೊಲೀಸರು ಅಪರಾಧ ಸ್ಥಳದಲ್ಲಿ ಪ್ರಾಥಮಿಕ ತನಿಖೆ ನಡೆಸಿ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ. ಕೊಲೆಗೆ ಕಾರಣವೇನೆಂದು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

About The Author