ಸದನದಲ್ಲಿ ಆರ್‌ಎಸ್ಎಸ್ ಗೀತೆ ಹಾಡಿದ ಬಳಿಕ, ಡಿಸಿಎಂ ಡಿಕೆ ಶಿವಕುಮಾರ್ ಇಮೇಜ್ ಕಮ್ಮಿಯಾಗಿದೇ ಎಂದೇ ಹೇಳಲಾಗ್ತಿತ್ತು. ಕಾಂಗ್ರೆಸ್ ವಲಯದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದ್ದ ಡಿಕೆಶಿ, ಇತ್ತೀಚೆಗೆ ಸಾಫ್ಟ್ ಕಾರ್ನರ್ ಆಗಿದ್ದಾರೆ. ಆಗಸ್ಟ್ 31ರಂದು ಉಡುಪಿಯ ಕೃಷ್ಣಮಠದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಈ ವೇಳೆ ಭಗವದ್ಗೀತೆಯ ಶ್ಲೋಕ ಹಾಡಿದ್ದಾರೆ. ಈ ಮೂಲಕ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿದ್ದಾರೆ.
ಇದೇ ವೇಳೆ ನನ್ನ ಮಾತಲ್ಲಿ ತಪ್ಪು ಹುಡುಕುವವರೇ ಹೆಚ್ಚು. ನನ್ನ ಬಾಯಿಂದ ಯಾವುದೇ ತಪ್ಪು ನುಡಿಸದಂತೆ ಶ್ರೀಕೃಷ್ಣ ಪರಮಾತ್ಮನಲ್ಲಿ ಪ್ರಾರ್ಥಿಸುತ್ತೇನೆ ಅಂತಾ ಡಿಕೆಶಿ ಹೇಳಿದ್ರು. ಕೆಲವರು ನನ್ನನ್ನು ಬಂಡೆ ಎಂದು ಕರೆಯುತ್ತಾರೆ. ಬಂಡೆ ಪ್ರಕೃತಿ, ಕಡಿದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ. ಬಂಡೆಯಿಂದಲೇ ಮೆಟ್ಟಿಲು, ಆಧಾರ ಸ್ತಂಭ, ಜಲ್ಲಿ, ವಿಗ್ರಹ ಮಾಡಬಹುದು. ನನ್ನನ್ನು ಹೇಗೆ ಬೇಕಾದರೂ ಬಳಸಿಕೊಳ್ಳಿ ಅಂತಾ, ಉಡುಪಿಯ ಶ್ರೀಗಳಿಗೆ ಡಿಕೆಶಿ ಹೇಳಿದ್ರು.
ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠದ ಮಠಾಧೀಶ ಶ್ರೀ ಸುಗಣೇಂದ್ರತೀರ್ಥ ಶ್ರೀಪಾದರ, 64ನೇ ಜನ್ಮನಕ್ಷತ್ರೋತ್ಸವ ಸಮಾರಂಭದಲ್ಲಿ ಡಿಕೆಶಿ ಭಾಗಿಯಾಗಿದ್ರು. ಈ ವೇಳೆ ಮಾತನಾಡಿದ ಡಿಕೆಶಿ, ಧರ್ಮ, ಪೂಜೆ ಹಾಗೂ ಭಕ್ತಿ ಪ್ರದರ್ಶನಕ್ಕಿರುವ ವಸ್ತುಗಳಲ್ಲ. ಎಲ್ಲರ ಆಚಾರ, ವಿಚಾರಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗಬೇಕಿರುವುದು ನಮ್ಮ ಕರ್ತವ್ಯ. ನಾನು ಅನೇಕ ಬಾರಿ ಕೃಷ್ಣ ಮಠಕ್ಕೆ ಹಾಗೂ ಕೃಷ್ಣನ ದಿವ್ಯ ಸಾನಿಧ್ಯಕ್ಕೆ ಬಂದಿದ್ದೇನೆ ಎಂದ್ರು.
ಶ್ರೀಗಳು ನನಗೆ ಕೃಷ್ಣನ ವಿಶ್ವರೂಪ ದರ್ಶನ ತೋರಿಸಿದರು. ನಾನು ಬಂಧಿಖಾನೆ ಸಚಿವನಾಗಿದ್ದಾಗಲೂ ನನಗೆ ಮಠದಿಂದ ಆಹ್ವಾನ ಬಂದಿತ್ತು. ಈ ವಿಶ್ವರೂಪ ದರ್ಶನವನ್ನು ನೋಡಿದಾಗ ನನಗೆ ನನ್ನ 50, 60 ವರ್ಷಗಳ ಬದುಕಿನ ನೆನಪುಗಳು ತಲೆಯಲ್ಲಿ ಸುಳಿದವು ಅಂತಾ ಭಗವದ್ಗೀತೆಯ ಶ್ಲೋಕ ಪಠಿಸಿದರು.
ಇನ್ನು, ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಭಗವದ್ಗೀತೆ ಬರೆಯುವ ದೀಕ್ಷೆಯನ್ನು, ಡಿಸಿಎಂ ಡಿಕೆಶಿ ಪಡೆದಿದ್ದಾರೆ. ಮಠದಲ್ಲಿ ಕೋಟಿ ಗೀತಾ ಪುಸ್ತಕ ಪಡೆದಿದ್ದಾರೆ. ಅವರು ಈ ಪುಸ್ತಕ ಬರೆದು ಮುಗಿಸುವುದರೊಳಗೆ, ಅವರ ಮನಸ್ಸಿನ ಇಚ್ಛೆ ಫಲಿಸಲಿ ಅಂತಾ, ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥರು ಆಶೀರ್ವಾದ ಮಾಡಿದ್ರು. ಡಿಕೆಶಿ ಕನಕಪುರದ ಬಂಡೆ. ಅವರು ರಾಕ್ ಸ್ಟಾರ್ ರಾಜಕಾರಣಿ. ರಾಜಕಾರಣಿಗಳು ಆಸ್ತಿಕರಾಗುವುದು ಬಹಳ ಮುಖ್ಯ. ರಾಜಕಾರಣಿಗು ಆಸ್ತಿಕರಾದ್ರೆ ಮಾತ್ರ ಜಗತ್ತು ಕ್ಷೇಮವಾಗಿರಲು ಸಾಧ್ಯ ಅಂತಾ ಶ್ರೀಗಳು ಹೇಳಿದ್ರು.