ಟಾಕ್ಸಿಕ್‌ ಟ್ರೇಲರ್‌ ಡೇಟ್‌ ಫಿಕ್ಸ್!‌ ಯಶ್‌ ಏನ್‌ ಕ್ರೇಜ್‌ ಗುರೂ

ಟಾಕ್ಸಿಕ್‌ ಪ್ಯಾನ್‌ ಇಂಡಿಯಾ ಸಿನಿಮಾ ಅಲ್ಲ. ಇದು ಪಕ್ಕಾ ಪ್ಯಾನ್‌ ವರ್ಲ್ಡ್‌ ಸಿನಿಮಾ. ಈಗಾಗಲೇ ಸಾಗರದಾಚೆಗೂ ಹೋಗಿ ಸದ್ದು ಮಾಡಿರುವ ಟಾಕ್ಸಿಕ್‌, ಬಹು ನಿರೀಕ್ಷೆಯನ್ನೇ ಹೆಚ್ಚಿಸಿದೆ. ಮಾರ್ಚ್‌ 19ಕ್ಕೆ ದೇಶ-ವಿದೇಶದಲ್ಲೂ ಟಾಕ್ಸಿಕ್‌ ಅಬ್ಬರ ಶುರುವಾಗಲಿದೆ. ಸದ್ಯ ಚಿತ್ರದ ಟೀಸರ್‌ ರಿಲೀಸ್‌ ಆಗಿದ್ದು, ಜಾಗತಿಕ ಮಟ್ಟದಲ್ಲಿ ದೊಡ್ಡ ಹವಾ ಸೃಷ್ಟಿಸಿದೆ. ಇತ್ತೀಚೆಗಷ್ಟೇ ಬಿಡುಗಡೆ ಆಗಿದ್ದ ಟಾಕ್ಸಿಕ್‌ ಟೀಸರ್‌ ಬಗ್ಗೆಯೇ ಮಾತು. ಆ ಟೀಸರ್‌ ಚರ್ಚೆಯ ಜೊತೆಗೆ ಟೀಕೆಗೂ ಗುರಿಯಾಯ್ತು. ಒಂದಷ್ಟು ವಿವಾದಕ್ಕೂ ಕಾರಣವಾಯ್ತು. ಈ ಮಧ್ಯೆಯೇ ಸಿನಿಮಾದ ಟ್ರೇಲರ್‌ ಬಿಡುಗಡೆಗೆ ಚಿತ್ರತಂಡ ಪ್ಲಾನ್‌ ಮಾಡಿದೆ. ಟ್ರೇಲರ್‌ಗಾಗಿ ಇಡೀ ದೇಶ ಎದುರು ನೋಡುತ್ತಿದೆ. ಅದರಲ್ಲೂ ಯಶ್‌ ಫ್ಯಾನ್ಸ್‌ ಟ್ರೇಲರ್‌ ನೋಡಲು ತುದಿಗಾಲ ಮೇಲೆ ನಿಂತಿದ್ದಾರೆ.

ಆರಂಭದಲ್ಲಿ ಟಾಕ್ಸಿಕ್‌ ಶೀರ್ಷಿಕೆಯೇ ಕುತೂಹಲ ಮೂಡಿಸಿತ್ತು. ಫಸ್ಟ್‌ ಲುಕ್‌ ಇನ್ನೂ ನಿರೀಕ್ಷೆ ಹೆಚ್ಚಿಸಿತ್ತು. ಟೀಸರ್‌ ಕೂಡ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಈಗ ಟ್ರೇಲರ್‌ ಸರದಿ. ಟ್ರೇಲರ್‌ ರಿಲೀಸ್‌ ಬಳಿಕ ದೊಡ್ಡ ಟ್ರೆಂಡ್‌ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಸದ್ಯ ಸಿನಿಮಾದ ಟ್ರೇಲರ್‌ ರಿಲೀಸ್‌ಗೆ ಡೇಟ್‌ ಫಿಕ್ಸ್‌ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ‘ಟಾಕ್ಸಿಕ್’ ಭಾರತೀಯ ಚಿತ್ರರಂಗದ ಅತ್ಯಂತ ನಿರೀಕ್ಷೆಯ ಚಿತ್ರ. ಮಾರ್ಚ್‌ 19ಕ್ಕೆ ಟಾಕ್ಸಿಕ್‌ ಬಿಡುಗಡೆಯಾಗಲಿದೆ. ಸಿನಿಮಾ ಬಿಡುಗಡೆಯ ಒಂದು ವಾರದ ಹಿಂದಷ್ಟೇ ಟ್ರೇಲರ್‌ ಬಿಡುಗಡೆಯಾಗಲಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಮಾರ್ಚ್ ಮೊದಲ ವಾರದಲ್ಲಿ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ರೂಪಿಸಿದೆ. ಈಗಾಗಲೇ ಬಿಡುಗಡೆ ಆಗಿರುವ ಟೀಸರ್​​ಗಿಂತಲೂ, ಟ್ರೇಲರ್‌ ಸಖತ್ ಪವರ್​​ಫುಲ್ ಆಗಿರಲಿದೆ ಎಂಬುದು ಚಿತ್ರತಂಡದ ಮಾತು.

ಸದ್ಯ ಎಲ್ಲೆಡೆ ‘ಟಾಕ್ಸಿಕ್’ ಸಿನಿಮಾದ್ದೇ ಟಾಕ್.‌ ಈಗಾಗಲೇ ಸಿನಿಮಾ ರೈಟ್ಸ್‌ ಮಾರಾಟ ಜೋರಾಗಿದೆ. ಆಂಧ್ರ-ತೆಲಂಗಾಣ, ಉತ್ತರ ಭಾರತ, ವಿದೇಶದ ಹಕ್ಕುಗಳು ಭಾರೀ ದೊಡ್ಡ ಮೊತ್ತಕ್ಕೆ ಮಾರಾಟವಾಗಿವೆ. ಆಂಧ್ರ-ತೆಲಂಗಾಣದಲ್ಲಂತೂ ‘ಟಾಕ್ಸಿಕ್’ ಸಿನಿಮಾ ಹಕ್ಕುಗಳು ದಾಖಲೆಯ ಮೊತ್ತಕ್ಕೆ ಮಾರಾಟವಾಗಿದೆ. ಖ್ಯಾತ ನಿರ್ಮಾಪಕ ದಿಲ್ ರಾಜು ಅವರು ಸಿನಿಮಾದ ಹಕ್ಕುಗಳ ಖರೀದಿ ಮಾಡಿದ್ದಾರೆ. ಈ ಹಿಂದೆ ಸಿನಿಮಾ ರೈಟ್ಸ್‌ ಕುರಿತು ಅಪಸ್ವರ ಕೇಳಿಬಂದಿತ್ತು. ಸೋಶಿಯಲ್‌ ಮೀಡಿಯಾದಲ್ಲಿ ಟಾಕ್ಸಿಕ್‌ ಸಿನಿಮಾಗೆ ಅಷ್ಟೊಂದು ಹಣ ಕೊಟ್ಟು ಹಕ್ಕು ಪಡೆಯಲಾಗಿದೆಯೇ ಎಂಬ ಪ್ರಶ್ನೆಗಳು ಶುರುವಾಗಿದ್ದವು. ಅದಕ್ಕೆ ದಿಲ್‌ ರಾಜು ಅವರು, ಇಷ್ಟರಲ್ಲೇ ನಾನು ಬ್ಯಾಂಕ್‌ ಗೆ ಹೋಗಿ ಟಾಕ್ಸಿಕ್‌ ಸಿನಿಮಾದ ರೈಟ್ಸ್ ನ ಹಣವನ್ನು ಹಾಕಿ, ಅದರ ರಶೀದಿಯನ್ನು ತಂದು ತೋರಿಸಲೆ? ಎಂದು ಪ್ರಶ್ನಿಸಿದ್ದರು. ಅಲ್ಲಿಗೆ ದಿಲ್‌ ರಾಜು ಮಾತು ಸುಳ್ಳಲ್ಲ ಅನ್ನುವುದು ಖಾತ್ರಿಯಾಗಿತ್ತು.

‘ಟಾಕ್ಸಿಕ್’ ಸಿನಿಮಾದ ಪ್ರಚಾರ ಶುರು ಮಾಡಿಲ್ಲ. ಆದರೆ, ಆಗಲೇ ಚಿತ್ರ ಮಹತ್ವ ಪಡೆದುಕೊಂಡಿದೆ. ಇನ್ನೂ ಯಶ್‌ ಕೂಡ ಪ್ರಚಾರಕ್ಕೆ ಇಳಿದಿಲ್ಲ. ಅವರು ಪ್ರಚಾರಕ್ಕಿಳಿದರೆ ಟಾಕ್ಸಿಕ್‌ ಹವಾ ಮತ್ತಷ್ಟು ಹೆಚ್ಚುತ್ತೆ. ‘ಕೆಜಿಎಫ್’, ‘ಕೆಜಿಎಫ್ 2’ ಸಿನಿಮಾ ಪ್ರಚಾರಕ್ಕೆ ದೇಶ ಸುತ್ತಿದ್ದರು ಯಶ್.‌ ಆದರೆ ‘ಟಾಕ್ಸಿಕ್’ ಸಿನಿಮಾಕ್ಕೆ ಬೇರೆಯದೇ ಮಾದರಿಯನ್ನು ಅನುಸರಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಪ್ರಮುಖ ನಗರಗಳಲ್ಲಿ ದೊಡ್ಡ ಪ್ರೀ ರಿಲೀಸ್​​ಗಳನ್ನು ಆಯೋಜನೆ ಮಾಡಲಿದ್ದಾರೆ ಎನ್ನಲಾಗುತ್ತಿದೆ.

‘ಟಾಕ್ಸಿಕ್’ ಸಿನಿಮಾವನ್ನು ಗೀತು ಮೋಹನ್​​ಸಾಸ್ ನಿರ್ದೇಶನ ಮಾಡಿದ್ದು, ಸಿನಿಮಾದ ಕಥೆಗೆ ಯಶ್ ಕೂಡ ಸಾಥ್‌ ನೀಡಿದ್ದಾರೆ. ಈ ಬಹುನಿರೀಕ್ಷೆಯ ಸಿನಿಮಾದಲ್ಲಿ ನಯನ ತಾರಾ, ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್, ಹುಮಾ ಖುರೇಷಿ ಮತ್ತು ತಾರಾ ಸುತಾರಿಯಾ ಅವರುಗಳು ನಾಯಕಿಯರಾಗಿ ನಟಿಸಿದ್ದಾರೆ. ಯಶ್ ಅವರು ಇಲ್ಲಿ ಗ್ಯಾಂಗ್​​ಸ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಟಾಕ್ಸಿಕ ರಿಲೀಸ್‌ಗೆ ಇನ್ನು ಬೆರಳೆಣೆಕೆ ದಿನಗಳು ಬಾಕಿ ಉಳಿದಿವೆ. ಅದಾಗಲೇ ಎಲ್ಲೆಡೆ ಸಾಕಷ್ಟು ಕ್ರೇಜ್‌ ಹುಟ್ಟಿಸಿದೆ. ಯಶ್‌ ಫ್ಯಾನ್ಸ್‌ ದೊಡ್ಡ ಜಾತ್ರೆಗೆ ಸಜ್ಜಾಗಿದ್ದಾರೆ. ಟಾಕ್ಸಿಕ್‌ ಎಂಬ ತೇರು ಎಳೆಯೋಕೆ ಬದ್ಧರಾಗಿದ್ದಾರೆ. ಅದೇನೆ ಇರಲಿ, ಕನ್ನಡದ ದೊಡ್ಡ ಸಿನಿಮಾ ಎಲ್ಲರ ಮನಸ್ಸನ್ನು ಗೆಲ್ಲಲಿ ಎಂಬುದೇ ಆಶಯ.

About The Author