ಈ ವರ್ಷ ದಕ್ಷಿಣ ಭಾರತದಲ್ಲಿ 1,06,000 ಟೊಯೋಟಾ ಕಾರುಗಳು ಮಾರಾಟಗೊಂಡಿದ್ದು, ಇದರಲ್ಲಿ ಬೆಂಗಳೂರಿನ ಪಾಲು ಶೇ.31 ರಷ್ಟಿದೆ ಅಂತ ಟೊಯೋಟಾ ಕಂಪನಿಯ ದಕ್ಷಿಣ ಭಾರತದ ಉಪಾಧ್ಯಕ್ಷ ವೈಸ್‌ಲೈನ್ ಸಿಗಮಣಿ ತಿಳಿಸಿದ್ದಾರೆ. ಬಿಡದಿಯ ಕಾರು ಉತ್ಪಾದನಾ ಘಟಕದಲ್ಲಿ ಶುಕ್ರವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದ್ದಾರೆ. ದೇಶವ್ಯಾಪಿ ಕಾರು ಖರೀದಿಯಲ್ಲಿ ರಾಜ್ಯದ ಪ್ರಮಾಣ ಶೇ.11ರಷ್ಟಿದೆ, ಮತ್ತು ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದ್ರೆ ಶೇ.35ರಷ್ಟು ಮಾರುಕಟ್ಟೆ ಬೆಳವಣಿಗೆ ಕಂಡು ಬಂದಿದೆ.
ಟೊಯೋಟ ಕಾರು ಕಂಪನಿಯು ತನ್ನ ಕಾರುಗಳಲ್ಲಿ ಹೈಬ್ರಿಡ್ ತಂತ್ರಜ್ಞಾನವನ್ನು ಅಳವಡಿಕೆ ಮಾಡಿದ್ದು, ಸ್ವಯಂಚಾಲಿತ ಚಾರ್ಜ್ ತಂತ್ರಾಂಶದ ಮೂಲಕ ಪರಿಸರ ಹಾಗೂ ಗ್ರಾಹಕ ಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿದೆ. ಟೊಯೋಟಾ ಕಂಪನಿಯ ದಕ್ಷಿಣ ಭಾರತದ ಉಪಾಧ್ಯಕ್ಷ ಸಿಗಮಣಿ, ‘ಹೈಬ್ರಿಡ್ ತಂತ್ರಾಂಶ ಒಳಗೊಂಡಿರುವ ಟೊಯೋಟಾ ಕಾರುಗಳು ಈಗಾಗಲೇ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿವೆ.
ಇವುಗಳ ವಿಶೇಷತೆಯೆಂದರೆ, ಈ ಕಾರುಗಳ ಬ್ಯಾಟರಿಗಳು ಸ್ವಯಂಚಾಲಿತವಾಗಿ ಚಾರ್ಜ್ ಆಗುವುದಲ್ಲದೇ, ಬ್ಯಾಟರಿ ಚಾಲಿತವಾಗಿಯೇ ವಾಹನ ಚಲಾಯಿಸಲ್ಪಡುತ್ತವೆ. ಅಲ್ಲದೆ, ಬ್ಯಾಟರಿಯ ಚಾರ್ಜ್ ಕಡಿಮೆಯಾದಾಗ ತನ್ನಿಂತಾನೆ ಪೆಟ್ರೊಲ್ ಎಂಜಿನ್‌ಗೆ ಬದಲಾಗುವ ಮೂಲಕ ಕಾರ್ಯನಿರ್ವಹಿಸುತ್ತದೆ’ ಎಂದು ಮಾಹಿತಿ ನೀಡಿದ್ದಾರೆ.
‘ನೂತನ ಹೈಬ್ರಿಡ್ ಕಾರುಗಳು ಶೇ.60 ರಷ್ಟು ಎಲೆಕ್ಟ್ರಿಕ್ ಮೂಲಕವೇ ಚಲಾಯಿಸುತ್ತವೆ. ಇದು ನಗರದಲ್ಲಿ ಏರುಗತಿಯಲ್ಲಿರುವ ವಾಯುಮಾಲಿನ್ಯ, ಶಬ್ದಮಾಲಿನ್ಯ ತಡೆಗಟ್ಟುವಲ್ಲಿ ಗಣನೀಯ ಕೊಡುಗೆ ನೀಡುವ ಜೊತೆಗೆ ಗ್ರಾಹಕರಿಗೆ ಉತ್ತಮ ಮೈಲೇಜ್ ನೀಡುವ ಮೂಲಕ ಹಣಕಾಸಿನ ಹೊರೆಯನ್ನು ತಗ್ಗಿಸಲಿದೆ’ಎಂದು ತಿಳಿಸಿದರು.
ಕಂಪನಿಯ ಬೆಳವಣಿಗೆ ಜತೆಗೆ, ಉದ್ಯೋಗಿಗಳ ಜೀವನಶೈಲಿ ಬದಲಾದರೆ ಮಾತ್ರ ಯಶಸ್ಸು ಸಾಧ್ಯ ಎಂಬುದನ್ನು ಮನಗಂಡ ನಾವು ಇಲ್ಲಿಯವರೆಗೂ ಸುಮಾರು 1000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಜಪಾನ್‌ಗೆ ಕಳುಹಿಸಿ ತರಬೇತಿ ಕೊಡಿಸುವ ಮೂಲಕ ಹೊಸತನ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಟೊಯೋಟೊ ಹಣಕಾಸು ಆಡಳಿತ ವಿಭಾಗದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಜಿ.ಶಂಕರ್ ತಿಳಿಸಿದರು.
ವರದಿ : ಲಾವಣ್ಯ ಅನಿಗೋಳ



