ಸಂಚಾರಿ ನಿಯಮ ಉಲ್ಲಂಘಿಸಿ ವಾಹನ ಚಲಾಯಿಸುತ್ತೀರಾ? ಹಾಗಾದ್ರೆ ಈ ಸುದ್ದಿನಾ ನೋಡ್ಲೇಬೇಕು. ಯಾಕಂದ್ರೆ ಬೈಕ್ ಸವಾರರೊಬ್ಬರ ಮೇಲೆ ದಾಖಲಾಗಿದ್ದ 45 ಕೇಸ್‌ಗೆ ಸಂಬಂಧಿಸಿದಂತೆ ಪೊಲೀಸರು ಅವರಿಗೆ ಇಷ್ಟುದ್ದದ ದಂಡದ ರಶೀದಿ ನೀಡಿದ್ದಾರೆ. 50% ರಿಯಾಯತಿ ಅಡಿಯಲ್ಲಿ ಬರೋಬ್ಬರಿ 12ಸಾವಿರ ರೂಪಾಯಿ ದಂಡ ಪಾವತಿಸಿದ್ದಾರೆ.
ಅಜಯ್ ಕಲಾಲ ಎಂಬ ವಾಹನ ಸವಾರನ ಮೇಲೆ ಈ ಎಲ್ಲಾ ಪ್ರಕರಣಗಳು ದಾಖಲಾಗಿದ್ದವು. ಸಾರಿಗೆ ಇಲಾಖೆಯ ನಿರ್ದೇಶನದಂತೆ ರಾಜ್ಯಾದ್ಯಂತ 50% ರಿಯಾಯಿತಿಯಲ್ಲಿ ದಂಡ ಪಾವತಿಸುವ ಅವಕಾಶವಿದ್ದು, ಇದರ ಅನುಸರಣೆಯಾಗಿ ಧಾರವಾಡ ಸಂಚಾರ ಠಾಣೆಯ ಪೊಲೀಸ್ ಅಧಿಕಾರಿಗಳು ಆರೋಪಿಯ ಮನೆಗೆ ಹೋಗಿ ದಂಡದ ರಶೀದಿ ನೀಡಿದ್ದಾರೆ.
ಅಜಯ್ ಕಲಾಲ ಅವರು ₹12,250 ದಂಡವನ್ನು ರಿಯಾಯಿತಿಯಡಿಯಲ್ಲಿ ತಕ್ಷಣ ಪಾವತಿಸಿದ್ದಾರೆ. ಇದು ಸಂಚಾರಿ ನಿಯಮ ಉಲ್ಲಂಘನೆ ಮಾಡುವ ಇತರ ವಾಹನ ಸವಾರರಿಗೆ ಎಚ್ಚರಿಕೆಯ ಸಂದೇಶವನ್ನೂ ನೀಡಿದೆ.
ಒಟ್ಟಿನಲ್ಲಿ ನಮ್ಮನ್ಯಾರು ಟ್ರಾಫಿಕ್ ಪೊಲೀಸರು ಗಮನಿಸಿಲ್ಲ ಎಂದು ಸಂಚಾರಿ ನಿಯಮ ಗಾಳಿಗೆ ತೂರಿ ವಾಹನ ಚಲಾಯಿಸುವವರಿಗೆ ಈಗ ಧಾರವಾಡ ಸಂಚಾರಿ ಠಾಣೆಯ ಪೊಲೀಸರು 50% ಆಫ್ ನೀಡುವುದರ ಜತೆಗೆ ದಂಡ ಪಾವತಿಸಿಕೊಳ್ಳುವ ಮೂಲಕ ಕಾನೂನು ಉಲ್ಲಂಘಿಸಿ ವಾಹನ ಚಾಲನೆ ಮಾಡುವವರಿಗೆ ಬಿಸಿಮುಟ್ಟಿಸಿದ್ದಾರೆ.
ಸಂಚಾರಿ ಇಲಾಖೆ ಈ ರೀತಿ ಮನೆ ಮನೆಗೆ ಹೋಗಿ ದಂಡ ವಸೂಲಿ ಮಾಡುವ ಮೂಲಕ, ಸಾರ್ವಜನಿಕರಲ್ಲಿ ನಿಯಮ ಪಾಲನೆಯ ಬಗ್ಗೆ ಜಾಗೃತಿ ಮೂಡಿಸುತ್ತಿದ್ದು, ಮುಂದಿನ ದಿನಗಳಲ್ಲಿ ಇಂತಹ ಕ್ರಮಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಯೋಜನೆ ಮಾಡಲಾಗಿದೆ.
ವರದಿ : ಲಾವಣ್ಯ ಅನಿಗೋಳ