ಕರ್ನಾಟಕ ರಾಜ್ಯ ಸಾರಿಗೆ ನಿಗಮಗಳ ನೌಕರರು ತಮ್ಮ 38 ತಿಂಗಳ ಹಿಂಬಾಕಿ ಮತ್ತು 2024ರಿಂದ ವೇತನ ಪರಿಷ್ಕರಣೆಗೆ ಒತ್ತಾಯಿಸಿ ಇಂದು ಬೆಂಗಳೂರು ಚಲೋ ನಡೆಸುತ್ತಿದ್ದಾರೆ. ಸರ್ಕಾರದ ಭರವಸೆಯನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಸಾರಿಗೆ ನೌಕರರು ಘೋಷಣೆ ಕೂಗಿದ್ದಾರೆ. “ನಾವು ಒಪ್ಪುವುದಿಲ್ಲ” ಎಂದು ನೌಕರರು ಸ್ಪಷ್ಟಪಡಿಸಿದ್ದಾರೆ. ಮುಷ್ಕರ ನಡೆಸುವ ಕುರಿತು ಇನ್ನೂ ಅನಿಶ್ಚಿತತೆ ಇದೆ ಎಂದು ಜಂಟಿ ಕ್ರಿಯಾ ಸಮಿತಿ ತಿಳಿಸಿದೆ.
ಈ ಕುರಿತು ಮಾತನಾಡಿದ ಸಾರಿಗೆ ನಿಗಮದ ಎಂಡಿ ಅಕ್ರಮ್ ಪಾಷಾ, ಸಚಿವರು ಸಭೆಗೆ ದಿನಾಂಕ ನಿಗದಿಪಡಿಸಬೇಕಾಗಿದೆ ಎಂದು ಹೇಳಿದರು. “ನಾನು ಸಚಿವರೊಂದಿಗೆ ಮಾತುಕತೆ ನಡೆಸಿದ್ದೇನೆ. ಶೀಘ್ರದಲ್ಲೇ ಭೇಟಿಗೆ – ಮಾತುಕತೆಗೆ ದಿನಾಂಕ ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದರು.
ಸಚಿವರು ದಿನಾಂಕ ನೀಡಿದ ಬಳಿಕ ನಾಲ್ಕು ಎಂಡಿಗಳನ್ನು ಕರೆದು ಸಭೆ ಏರ್ಪಡಿಸಲಾಗುತ್ತದೆ. ಬೇಡಿಕೆಗಳ ಎಷ್ಟು ಶೇಕಡಾವಾರು ಈಡೇರಿಸಬಹುದು ಎಂಬುದನ್ನು ಸಭೆಯಲ್ಲಿ ನಿರ್ಧರಿಸಲಾಗುತ್ತದೆ. ಸಭೆಯನ್ನು ಅತಿ ಶೀಘ್ರದಲ್ಲಿ ನಡೆಸುತ್ತೇವೆ ಎಂದು ತಿಳಿಸಿದರು.
ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಿಗದಿಪಡಿಸಿದ ಸಮಯದೊಳಗೆ ಸ್ಪಷ್ಟನೆ ಸಿಗದಿದ್ದರೆ ನಾಳೆಯಿಂದ ಬಸ್‌ಗಳನ್ನು ನಿಲ್ಲಿಸಿ ಪ್ರತಿಭಟನೆ ನಡೆಸುವ ಎಚ್ಚರಿಕೆ ಇದೆ. ಆದರೆ ನಾವು ಮನವಿ ಮಾಡಿದ್ದೇವೆ. ಆ ಪರಿಸ್ಥಿತಿ ಉಂಟಾಗುವುದಿಲ್ಲ ಎಂಬ ವಿಶ್ವಾಸ ಇದೆ ಎಂದರು.
ನೌಕರರ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸುವ ದಿಶೆಯಲ್ಲಿ ಮಾತುಕತೆಗೆ ನಾವು ಸಿದ್ಧರಿದ್ದೇವೆ. ಈಗಾಗಲೇ ಸಚಿವರು ಮುಕ್ತವಾಗಿ ಚರ್ಚೆಗೆ ಆಹ್ವಾನ ನೀಡಿದ್ದಾರೆ. ಮಾತುಕತೆಯಲ್ಲಿ ಏನು ನಿರ್ಧಾರವಾಗುತ್ತದೆಯೋ ಅದಕ್ಕೆ ನಾವು ಬದ್ಧರಾಗುತ್ತೇವೆ ಎಂದು ಎಂಡಿ ಅಕ್ರಮ್ ಪಾಷಾ ಹೇಳಿದರು.




