ಟ್ರಂಪ್‌ ‘ಮಿನಿ ವಿಶ್ವಸಂಸ್ಥೆ’ ಸ್ಥಾಪನೆ!

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿಶ್ವಸಂಸ್ಥೆಗೇ ಸೆಡ್ಡು ಹೊಡೆದಿದ್ದಾರೆ. ಸಂಘರ್ಷಪೀಡಿತ ಗಾಜಾ ಪ್ರದೇಶದ ಮರುನಿರ್ಮಾಣ ಮತ್ತು ಶಾಂತಿ ಸ್ಥಾಪನೆಗಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ‘ಗಾಜಾ ಬೋರ್ಡ್ ಆಫ್ ಪೀಸ್’ ಸ್ಥಾಪನೆಗೆ ಅಧಿಕೃತ ಚಾಲನೆ ನೀಡಿದ್ದಾರೆ. ಶಾಂತಿ ಸ್ಥಾಪನೆಗೆ ವಿಶ್ವಸಂಸ್ಥೆ ಜಾಗತಿಕವಾಗಿ ಇದ್ದರೂ ಅದಕ್ಕೆ ಪರ್ಯಾಯವಾಗಿ ಟ್ರಂಪ್‌ ‘ಮಿನಿ ವಿಶ್ವಸಂಸ್ಥೆ’ಗೆ ಚಾಲನೆ ನೀಡಿದ್ದು ಜಾಗತಿಕ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ದಾವೋಸ್‌ನಲ್ಲಿ ನಡೆಯುತ್ತಿರುವ ಜಾಗತಿಕ ಆರ್ಥಿಕ ಶೃಂಗಸಭೆಯ ವೇಳೆ ಹಲವು ರಾಷ್ಟ್ರಗಳ ನಾಯಕರು ಸಮ್ಮುಖದಲ್ಲೇ ಟ್ರಂಪ್‌ ಈ ಶಾಂತಿ ಮಂಡಳಿಯನ್ನು ಘೋಷಿಸಿದರು. ಈ ವೇಳೆ ಮಾತನಾಡಿದ ಅವರು,
ಹಮಾಸ್‌ ಶಸ್ತ್ರತ್ಯಾಗ ಮಾಡದಿದ್ದರೆ ಯಾವುದೇ ರಾಜಿ ಇಲ್ಲ. ಅಗತ್ಯವಿದ್ದರೆ ಅವರನ್ನು ಸಂಪೂರ್ಣವಾಗಿ ನಿರ್ನಾಮ ಮಾಡಲಾಗುತ್ತದೆ ಎಂದು ಕಠಿಣ ಎಚ್ಚರಿಕೆ ನೀಡಿದರು.

ಟ್ರಂಪ್‌ ಅವರ ಪ್ರಕಾರ, ಈ ಶಾಂತಿ ಮಂಡಳಿ ವಿಶ್ವಸಂಸ್ಥೆಯೊಂದಿಗೆ ಸಹಕಾರದಲ್ಲೇ ಕೆಲಸ ಮಾಡಲಿದೆ. ಗಾಜಾದ ಶಾಂತಿ ಸ್ಥಾಪನೆಯೇ ಮೊದಲ ಗುರಿಯಾಗಿದ್ದರೂ, ಭವಿಷ್ಯದಲ್ಲಿ ವಿಶ್ವದ ಇತರೆ ಸಂಘರ್ಷಗಳನ್ನು ತಡೆಯುವ ಉದ್ದೇಶವೂ ಇದಕ್ಕಿದೆ. ಇದೇ ಕಾರಣಕ್ಕೆ ಈ ಮಂಡಳಿಯನ್ನು ‘ಮಿನಿ ವಿಶ್ವಸಂಸ್ಥೆ’ ಎಂದೇ ಕರೆಯಲಾಗುತ್ತಿದೆ.

ಈ ಮಂಡಳಿಯಲ್ಲಿ ಇಸ್ರೇಲ್‌ ವಿರೋಧದ ನಡುವೆಯೂ ಪಾಕಿಸ್ತಾನ ಸೇರಿ ಒಟ್ಟು 35 ದೇಶಗಳು ಸದಸ್ಯತ್ವ ಪಡೆದಿವೆ. ಆದರೆ ಭಾರತ, ಫ್ರಾನ್ಸ್‌ ಸೇರಿದಂತೆ ಟ್ರಂಪ್‌ ಕೆಲ ಪ್ರಮುಖ ರಾಷ್ಟ್ರಗಳು ಆಹ್ವಾನ ಬಂದರೂ ಇನ್ನೂ ನಿರ್ಧಾರ ಕೈಗೊಂಡಿಲ್ಲ.

ಹಾಗಾದ್ರೆ ಮಿನಿ ವಿಶ್ವಸಂಸ್ಥೆ ಹೇಗೆ ಕಾರ್ಯನಿರ್ವಹಿಸುತ್ತದೆ? ಗಾಜಾದಲ್ಲಿ ಶಾಂತಿ ಸ್ಥಾಪನೆಗೆ ಮೊದಲ ಆದ್ಯತೆ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಇತರೆ ಜಾಗತಿಕ ಸಂಘರ್ಷಗಳಲ್ಲಿಯೂ ಮಧ್ಯಸ್ಥಿಕೆ ವಹಿಸುವ ಉದ್ದೇಶ ಮಂಡಳಿಯದ್ದಾಗಿದೆ. ಈ ಮಂಡಳಿಯಲ್ಲಿ ಶಾಶ್ವತ ಸದಸ್ಯತ್ವ ಪಡೆಯಲು ಒಂದು ದೇಶವು ಸುಮಾರು ₹9,000 ಕೋಟಿ ಪಾವತಿಸಬೇಕಾಗಿದೆ.

ವರದಿ : ಲಾವಣ್ಯ ಅನಿಗೋಳ

About The Author