ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಬುದ್ಧಿ ಕಲಿತಂತೆ ಕಾಣ್ತಿಲ್ಲ. ಒಮ್ಮೆ ಸ್ನೇಹ ಅಂತಾರೆ. ಮತ್ತೊಮ್ಮೆ ಸುಂಕ ಅಂತಾರೆ. ಈ ಬಾರಿ ಬ್ರಾಂಡೆಂಡ್ ಮತ್ತು ಪೇಟೆಂಟ್ ಪಡೆದ ಔಷಧಗಳ ಆಮದಿನ ಮೇಲೆ, ಶೇಕಡ 100ರಷ್ಟು ಸುಂಕ ವಿಧಿಸಿದ್ದಾರೆ. ಇಂಥದ್ದೊಂದು ಕಾರ್ಯಾದೇಶಕ್ಕೆ ಸೆಪ್ಟೆಂಬರ್ 25ರಂದು ಟ್ರಂಪ್ ಸಹಿ ಹಾಕಿದ್ದಾರೆ.
2025ರ ಅಕ್ಟೋಬರ್ 1ರಿಂದಲೇ ಶೇಕಡ 100ರಷ್ಟು ಸುಂಕ ಜಾತಿಗೆ ಬರಲಿದೆ. ಜೊತೆಗೆ ಯಾವುದಾದರೂ ಒಂದು ಕಂಪನಿ, ಅಮೆರಿಕಾದಲ್ಲೇ ಔಷಧೀಯ ಉತ್ಪಾದನಾ ಘಟಕ ಆರಂಭಿಸಲು ನಿರ್ಧರಿಸಿದ್ರೆ, ಆಗ ಮಾತ್ರ ಸುಂಕದಿಂದ ವಿನಾಯಿತಿ ನೀಡುವ ನಿರ್ಧರಿಸಲಾಗಿದೆ. ಈ ಮೂಲಕ ವಿದೇಶಗಳಲ್ಲಿ ಕಾರ್ಖಾನೆಗಳನ್ನು ನಡೆಸುವ ಬದಲು, ಅಮೆರಿಕಾದಲ್ಲೇ ಕಾರ್ಯಾಚರಣೆ ನಡೆಸುವಂತೆ ಒತ್ತಡ ಹೇರುವ ತಂತ್ರ ಮಾಡ್ತಿರೋದು ಬಹಿರಂಗವಾಗಿದೆ.
ಭಾರತದ ಔಷಧೀಯ ಸರಕುಗಳಿಗೆ, ಅಮೆರಿಕಾ ಅತಿದೊಡ್ಡ ರಫ್ತು ಮಾರುಕಟ್ಟೆಯಾಗಿದೆ. 2024ರ ಹಣಕಾಸು ವರ್ಷದಲ್ಲಿ, 27.9 ಬಿಲಿಯನ್ ಡಾಲರ್ ಮೌಲ್ಯದ ಔಷಧ ರಫ್ತು ಮಾಡಲಾಗಿದೆ. ಈ ಪೈಕಿ ಶೇಕಡ 31ರಷ್ಟನ್ನು ಅಮೆರಿಕಾವೊಂದಕ್ಕೆ ರಫ್ತು ಮಾಡಲಾಗಿದೆ. ಇದರ ಮೊತ್ತ 8.7 ಬಿಲಿಯನ್ ಡಾಲರ್ ಆಗಿದೆ.
2025ರ ಆರಂಭದಿಂದ ಇಲ್ಲಿಯವರೆಗೆ ಭಾರತ 32 ಸಾವಿರದ 505 ಕೋಟಿ ಮೌಲ್ಯದ ಔಷಧ ಉತ್ಪನ್ನಗಳನ್ನು ರಫ್ತು ಮಾಡಿದೆ. ಹೀಗಾಗಿ ಡೊನಾಲ್ಡ್ ಟ್ರಂಪ್ ಈ ನಿರ್ಧಾರ, ಭಾರತದ ಔಷಧ ವಲಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ. ಇದಕ್ಕೆ ಪ್ರತಿಯಾಗಿ ಭಾರತದ ಔಷಧ ವಲಯ ಪರ್ಯಾಯ ಮಾರ್ಗಗಳ ಹುಡುಕಾಟ ಆರಂಭಿಸಿದೆ.