ತುಂಗಾಭದ್ರಾ ಡ್ಯಾಂ ಅಪಾಯದ ಸ್ಥಿತಿಯಲ್ಲಿದೆಯಾ ಎಂಬ ಆತಂಕ ಮೂಡುತ್ತಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ, ಅಂದರೆ, ಇಲ್ಲಿಗೆ ಸರಿಯಾಗಿ ಒಂದು ವರ್ಷದ ಹಿಂದೆ ಅನಾಹುತ ನಡೆದಿತ್ತು. ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟೊಂದು ತುಂಬಿದ್ದ ಜಲಾಶಯದ ನೀರಿನ ಪ್ರೆಶರ್‌ನಿಂದಾಗಿ ಕಿತ್ತುಕೊಂಡು, ನೀರಿನಲ್ಲಿ ಕೊಚ್ಚಿ ಹೋಗಿತ್ತು. ಅದರಿಂದ ಅಪಾರ ಪ್ರಮಾಣದಲ್ಲಿ ನೀರು ಪೋಲಾಗಿತ್ತು. ಈ ವರ್ಷ, ಜಲಾಶಯದ 7 ಕ್ರಸ್ಟ್ ಗೇಟ್ ಗಳು ದುರ್ಬಲವಾಗಿದ್ದು ತುಕ್ಕು ಹಿಡಿದು ಅವು ಕೆಲಸ ಮಾಡದೇ ಸ್ತಬ್ದವಾಗಿದೆ.
ಈ ವಿಷಯವನ್ನು ಕೊಪ್ಪಳ ಜಿಲ್ಲಾ ಉಸ್ತುವಾರಿಯಾಗಿರುವ ಶಿವರಾಜ್ ತಂಗಡಗಿ ಮಾಧ್ಯಮಗಳ ಮುಂದೆ ಹೇಳಿದ್ದಾರೆ. ಆಗಸ್ಟ್ 15ರಂದು ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸ್ವಾತಂತ್ರೋತ್ಸವ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಆನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ತುಂಗಭದ್ರಾ ಜಲಾಶಯದ 31 ಗೇಟ್‌ಗಳ ಪೈಕಿ ಗೇಟ್ ನಂ-11, 18, 20, 24, 27, 28 ಹಾಗೂ 04ನೇ ಗೇಟ್ ಮೇಲೆತ್ತಲಾಗುತ್ತಿಲ್ಲ. ಇದರಿಂದ ನದಿಗೆ ಎಲ್ಲಗೇಟ್ ಗಳ ಮೂಲಕ ನೀರು ಬಿಡುತ್ತಿಲ್ಲ. ಕ್ರಸ್ಟ್ ಗೇಟ್ ದುರಸ್ತಿಗೆ ಸರಕಾರ ಬದ್ಧವಾಗಿದೆ ಆದರೆ, ಟಿಬಿ ಬೋರ್ಡ್ ಹಾಗೂ ಕೇಂದ್ರ ಸರಕಾರ ಒಪ್ಪಿಗೆ ನೀಡಬೇಕಿದೆ, ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.
19ನೇ ಗೇಟ್‌ನ ದುರಸ್ತಿ ಕೈಗೊಳ್ಳಲು ಟೆಂಡರ್ ಪ್ರಕ್ರಿಯೆ ಮುಗಿದಿದೆ. ಗುತ್ತಿಗೆದಾರರು 8 ತಿಂಗಳ ಕಾಲಾವಕಾಶ ಕೇಳಿರುವುದರಿಂದ ನೀರಿನ ಸಂಗ್ರಹ ನೋಡಿಕೊಂಡು ಕಾಮಗಾರಿ ಆರಂಭಿಸಬೇಕಿದೆ. ಇದರಿಂದ ಈ ಬಾರಿ ಒಂದೇ ಬೆಳೆಗೆ ಜಲಾಶಯದಿಂದ ನೀರು ಸಿಗಲಿದೆ. ಎರಡನೇ ಬೆಳೆಗೂ ಒದಗಿಸಲು ಪ್ರಯತ್ನ ಮಾಡಲಾಗುವುದು, ಎಂದು ಹೇಳಿದ್ದಾರೆ.
ಇನ್ನು ಸದ್ಯಕ್ಕೆ ಮೂರು ಕ್ರಸ್ಟ್ ಗೇಟ್ ಗಳಿಂದ ಮಾತ್ರ ನೀರು ಹೊರಕ್ಕೆ ಬಿಡಲಾಗುತ್ತಿದೆ. ತುಂಗಾ ಮತ್ತು ಭದ್ರಾ ನದಿಗಳ ಉಗಮಸ್ಥಾನವಾದ ಮಲೆನಾಡಿನಲ್ಲಿ ಹೇರಳವಾಗಿ ಮಳೆ ಸುರಿಯುತ್ತಿದೆ. ಇದರಿಂದ ತುಂಗಭದ್ರಾ ನದಿಗೆ ಹೆಚ್ಚುವರಿ ನೀರು ಹರಿದುಬರುತ್ತಿದೆ. ಜಲಾಶಯ ಬಹುತೇಕ ತುಂಬಿದೆ. ಈ ಹಂತದಲ್ಲಿ ಎಲ್ಲಾ ಕ್ರೆಸ್ಟ್ ಗೇಟ್ ಗಳನ್ನು ತೆರೆದು ಜಲಾಶಯದಿಂದ ನೀರು ಹೊರಬಿಡಬೇಕು. ಆದರೆ, ಏಳು ಕ್ರೆಸ್ಟ್ ಗೇಟ್ ಗಳು ಕೆಲಸ ಮಾಡುತ್ತಿಲ್ಲ. ಹಾಗಾಗಿ, ಅಲ್ಲಿ ಸದ್ಯಕ್ಕೆ ಮೂರು ಕ್ರೆಸ್ಟ್ ಗೇಟ್ ಗಳಿಂದ ಮಾತ್ರ ನೀರು ಹೊರಕ್ಕೆ ಬಿಡಲಾಗುತ್ತಿದೆ. ಹಾಗಂತ, ಜಲಾಶಯಕ್ಕೇನೂ ಅಪಾಯವಿಲ್ಲ ಎಂದು ತಜ್ಞರು ಹೇಳಿದ್ದಾರೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ