ರಾಜ್ಯದಲ್ಲಿ ನಾಯಕತ್ವ ಬಿಕ್ಕಟ್ಟು ಗರಿಷ್ಠ ಮಟ್ಟಕ್ಕೆ ಏರಿರುವ ಹಿನ್ನೆಲೆ, ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಮಹತ್ವದ ಸಭೆ ನಡೆಸಲು ಸಿದ್ಧವಾಗುತ್ತಿದೆ. ಬಿಹಾರ ಚುನಾವಣೆ ತಂತ್ರ ಹಾಗೂ ಹಿಂದುಳಿದ ವರ್ಗಗಳ ಪರ ಕಾರ್ಯಕ್ರಮ ರೂಪಿಸುವ ವಿಚಾರಗಳೊಂದಿಗೆ, ಕರ್ನಾಟಕದ ರಾಜಕೀಯ ಪರಿಸ್ಥಿತಿಯ ಮೇಲೂ ಈ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ.
ವಿದೇಶ ಪ್ರವಾಸದಲ್ಲಿದ್ದ ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ದೆಹಲಿಗೆ ವಾಪಸ್ಸಾಗುತ್ತಿರುವುದರಿಂದ, ನಾಯಕತ್ವ ಬಿಕ್ಕಟ್ಟಿನ ಪರಿಹಾರಕ್ಕೆ ಇನ್ನೊಂದು ಪ್ರಮುಖ ಸುತ್ತಿನ ಚರ್ಚೆ ನಡೆಯುವ ನಿರೀಕ್ಷೆ ಇದೆ.
ಸೋನಿಯಾ ಗಾಂಧಿ ವಾಪಸ್ಸಾದ ಬಳಿಕ, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರೊಂದಿಗೆ ಹೈಕಮಾಂಡ್ ಚರ್ಚೆ ನಡೆಸಿ ಅಂತಿಮ ತೀರ್ಮಾನಕ್ಕೆ ಬರಬಹುದು ಎಂದು ಪಕ್ಷದ ವಲಯದಲ್ಲಿ ಊಹೆಗಳು ಗಟ್ಟಿಯಾಗಿವೆ.
ರಾಜ್ಯದ ರಾಜಕೀಯ ಗೊಂದಲಗಳು ತೀವ್ರವಾಗುತ್ತಿರುವ ನಡುವಿನಲ್ಲಿ ಹೈಕಮಾಂಡ್ ನಾಯಕರು ಇಕ್ಕಟ್ಟಿಗೆ ಸಿಲುಕಿರುವ ಸ್ಥಿತಿ ಉಂಟಾಗಿದೆ. ರಾಜ್ಯದಲ್ಲಿ ಯಾವುದೇ ಬಿಕ್ಕಟ್ಟು ಹೆಚ್ಚಳವಾಗದಂತೆ ತುರ್ತು ಮತ್ತು ಸಮನ್ವಯತ್ಮಕ ತೀರ್ಮಾನ ಕೈಗೊಳ್ಳುವುದು ಹೈಕಮಾಂಡ್ ಮುಂದೆ ಪ್ರಮುಖ ಜವಾಬ್ದಾರಿಯಾಗಿದೆ.
ಅದರ ಕಾರಣಕ್ಕೆ, ಎಲ್ಲಾ ಸಾಧ್ಯತೆಗಳನ್ನು ಪರಿಶೀಲಿಸಿ, ಮುಂದಿನ ಹೆಜ್ಜೆಯನ್ನು ಅತ್ಯಂತ ಎಚ್ಚರಿಕೆಯಿಂದ ಇಡುವ ಸಾಧ್ಯತೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ವರದಿ : ಲಾವಣ್ಯ ಅನಿಗೋಳ

