Banglore News : ಯುಜಿನೀಟ್-2023ಕ್ಕೆ ನೋಂದಣಿ ಮಾಡಿಕೊಳ್ಳಲು ಹಲವು ಬಾರಿ ದಿನಾಂಕ ವಿಸ್ತರಿಸಿದ್ದರೂ ಅಭ್ಯರ್ಥಿಗಳು ನೊಂದಣಿಗಾಗಿ ಪ್ರಾಧಿಕಾರವನ್ನು ಕೋರುತ್ತಿದ್ದಾರೆ. ಹೀಗಾಗಿ ಅಭ್ಯರ್ಥಿಗಳ ಅರ್ಹತೆ ಮತ್ತು ಆಸಕ್ತಿ ಪರಿಗಣಿಸಿ, ಯುಜಿನೀಟ್-2023ಕ್ಕೆ ನೋಂದಣಿ ಮಾಡಿಕೊಳ್ಳಲು ಆಗಸ್ಟ್ 1ರ ಸಂಜೆ 5 ಗಂಟೆಯಿಂದ ಆಗಸ್ಟ್ ರಿಂದ 2ರ ರಾತ್ರಿ 8 ಗಂಟೆಯವರೆಗೆ ಅಂತಿಮ ಅವಕಾಶ ಕಲ್ಪಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ತಿಳಿಸಿದ್ದಾರೆ.
ಆನ್‌ಲೈನ್ ಮೂಲಕ ಇಲ್ಲಿಯವರೆಗೆ ನೋಂದಣಿ ಮಾಡದೆ ಇರುವ ಆಸಕ್ತ ಅರ್ಹ ಅಭ್ಯರ್ಥಿಗಳು ಈ ಅವಕಾಶ ಬಳಸಿಕೊಂಡು ಆನ್‌ಲೈನ್ ಮೂಲಕ ನೋಂದಾಯಿಸಿಕೊಂಡು ಅರ್ಜಿ ಸಲ್ಲಿಸಿ ಶುಲ್ಕ ಪಾವತಿಸಬಹುದಾಗಿರುತ್ತದೆ. ಯುಜಿನೀಟ್-2023ರ ‘ಸಿ’ ಮತ್ತು ‘ಡಿ’ ಅರ್ಹತಾ ಕಂಡಿಕೆಯ ಅಭ್ಯರ್ಥಿಗಳಿಗೆ ಈಗಾಗಲೇ ಎರಡು ಬಾರಿ ಕನ್ನಡ ಭಾಷಾ ಪರೀಕ್ಷೆಯನ್ನು ಜುಲೈ 25 ಮತ್ತು ಆ. 1ರಂದು ನಡೆಸಿರುವುದರಿಂದ, ಪ್ರಸ್ತುತ ವಿಸ್ತರಣೆಯಾಗಿರುವ ದಿನಾಂಕಗಳಲ್ಲಿ ‘ಸಿ’ ಅಥವಾ ‘ಡಿ’ ಅರ್ಹತಾ ಕಂಡಿಕೆಯನ್ನು ಕ್ಲೇಮ್ ಮಾಡಲು ಅರ್ಹತೆ ಪಡೆಯುವುದಿಲ್ಲ.
ನೋಂದಣಿ ಮಾಡಿ ಅರ್ಜಿ ಸಲ್ಲಿಸುವಿಕೆಯನ್ನು ಪೂರ್ಣ ಮಾಡದೇ ಇರುವ ಅಭ್ಯರ್ಥಿಗಳೂ ಅರ್ಜಿಯನ್ನು ಪೂರ್ಣವಾಗಿ ಭರ್ತಿ ಮಾಡಿ ಶುಲ್ಕ ಪಾವತಿಸಬಹುದು ಎಂದು ಅವರು ತಿಳಿಸಿದ್ದಾರೆ. ಯುಜಿನೀಟ್-2023ಕ್ಕೆ ಈ ಮೇಲಿನ ದಿನಾಂಕಗಳಂದು ನೋಂದಣಿ ಮಾಡಿ ಅರ್ಜಿ ಸಲ್ಲಿಸಿ ಶುಲ್ಕ ಪಾವತಿಸುವ ಅಭ್ಯರ್ಥಿಗಳು ಆಗಸ್ಟ್ 3ರಂದು ಬೆಳಿಗ್ಗೆ 10 ಗಂಟೆಗೆ ಪ್ರಾಧಿಕಾರದಲ್ಲಿ ದಾಖಲೆಗಳ ಪರಿಶೀಲನೆಗೆ ಹಾಜರಾಗಬಹುದು ಎಂದು ಅದು ತಿಳಿಸಿದ್ದಾರೆ.
ಅಭ್ಯರ್ಥಿಗಳು ದಾಖಲೆಗಳ ಪರಿಶೀಲನೆಗೆ ಹಾಜರಾಗುವ ಅರ್ಹತೆಯ ಬಗ್ಗೆ ವಿವರಗಳನ್ನು ಪ್ರಾಧಿಕಾರದ ವೆಬ್‌ಸೈಟಿನಿಂದ ಪಡೆಯಬಹುದು. ಯುಜಿನೀಟ್ – 2023 ರಲ್ಲಿ ಅರ್ಹತೆ ಪಡೆದಿರುವ ಅಭ್ಯರ್ಥಿಗಳು ವೈದ್ಯಕೀಯ / ದಂತ ವೈದ್ಯಕೀಯ | ಆರ್ಯುವೇದ, ಯುನಾನಿ, ಹೋಮಿಯೋಪತಿ ಪದವಿ ಕೋರ್ಸುಗಳ ಪ್ರವೇಶಕ್ಕೆ ಹೆಚ್ಚಿನ ಮಾಹಿತಿಯನ್ನು ಪ್ರಾಧಿಕಾರದ ವೆಬ್‌ಸೈಟಿನಿಂದ ಪಡೆಯಬಹುದಾಗಿದೆ.
ಪಿಜಿನೀಟ್-2023- ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ ಪಿಜಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸುಗಳ ಪ್ರವೇಶಾತಿಗೆ ಇಲ್ಲಿಯವರೆಗೆ ನೋಂದಣಿ ಮಾಡದೆ ಇರುವ ಆಸಕ್ತ ಅರ್ಹ ಅಭ್ಯರ್ಥಿಗಳು ಆಗಸ್ಟ್ 2ರ ಸಂಜೆ 6 ಗಂಟೆಯಿಂದ ಆಗಸ್ಟ್ 3ರ ಸಂಜೆ 6ರವರೆಗೆ ಆನ್‌ಲೈನ್ ಮೂಲಕ ನೋಂದಣಿ ಮಾಡಿ ಅರ್ಜಿ ಸಲ್ಲಿಸಿ ಶುಲ್ಕ ಪಾವತಿಸಬಹುದಾಗಿರುತ್ತದೆ.
ಪಿಜಿನೀಟ್ – 2023 / ನೀಟ್ ಎಂಡಿಎಸ್ 2023 ರಲ್ಲಿ ಅರ್ಹತೆ ಪಡೆದಿರುವ ಅಭ್ಯರ್ಥಿಗಳು ಪಿಜಿ ವೈದ್ಯಕೀಯ / ಪಿಜಿ ದಂತ ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕೆ ನೋಂದಣಿ ಮಾಡಿಕೊಳ್ಳಲು ಅರ್ಹರಿರುತ್ತಾರೆ. ನೋಂದಣಿ ಮಾಡಿ ಅರ್ಜಿ ಸಲ್ಲಿಸುವಿಕೆಯನ್ನು ಪೂರ್ಣ ಮಾಡದೇ ಇರುವ ಅಭ್ಯರ್ಥಿಗಳೂ ಅರ್ಜಿಯನ್ನು ಪೂರ್ಣವಾಗಿ ಭರ್ತಿ ಮಾಡಿ ಶುಲ್ಕ ಪಾವತಿಸಬಹುದು.
ಪಿಜಿನೀಟ್-2023ಕ್ಕೆ ಆನ್‌ಲೈನ್ ಮೂಲಕ ನೋಂದಣಿ ಮಾಡಲು ಮತ್ತು ಅರ್ಜಿ ಸಲ್ಲಿಸಲು ಮತ್ತೊಮ್ಮೆ ದಿನಾಂಕವನ್ನು ವಿಸ್ತರಣೆ ಮಾಡುವುದಿಲ್ಲ. ಪಿಜಿನೀಟ್-2023 ಪ್ರವೇಶ ಪ್ರಕ್ರಿಯೆ ಕುರಿತು ಹೆಚ್ಚಿನ ಮಾಹಿತಿಯನ್ನು ಪ್ರಾಧಿಕಾರದ ವೆಬ್ ಸೈಟಿನಿಂದ ಮಾಹಿತಿ ಪಡೆಯಬಹುದು ಎಂದು ತಿಳಿಸಲಾಗಿದೆ.