ಉತ್ತರ ಕರ್ನಾಟಕದ ಬಹುದೊಡ್ಡ ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತಕ್ಕೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಈ ಯೋಜನೆಯಡಿ ರೈತರಿಗೆ ಮೂರು ವರ್ಷಗಳ ಅವಧಿಯಲ್ಲಿ ಪರಿಹಾರ ಒದಗಿಸಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ ಘೋಷಿಸಿದ್ದಾರೆ. ಬೀಳಗಿಯ ತುಂಗಳ ಗ್ರಾಮದ ವೆಂಕಟೇಶ್ವರ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪಾಟೀಲರು ವಿವರಿಸಿದ ಪ್ರಕಾರ, 75 ಸಾವಿರ ಎಕರೆ ಭೂಸ್ವಾಧೀನಕ್ಕೆ ₹30 ಸಾವಿರ ಕೋಟಿ ಹಾಗೂ ಎಡ ಮತ್ತು ಬಲದಂಡೆ ಕಾಲುವೆಗಳಿಗಾಗಿ 50 ಸಾವಿರ ಎಕರೆ ಜಮೀನಿಗೆ ₹25 ಸಾವಿರ ಕೋಟಿ ಪರಿಹಾರ ನೀಡಲಾಗುತ್ತದೆ. ಹೀಗಾಗಿ ಒಟ್ಟು ₹55 ಸಾವಿರ ಕೋಟಿ ಪರಿಹಾರವನ್ನು ರೈತರಿಗೆ ಮೂರು ವರ್ಷಗಳಲ್ಲಿ ವಿತರಿಸಲಾಗುತ್ತದೆ. ಈ ಯೋಜನೆಯಿಂದ 5.04 ಲಕ್ಷ ಹೆಕ್ಟೇರ್, ಅಂದರೆ ಸುಮಾರು 12 ಲಕ್ಷ ಎಕರೆ ಜಮೀನುಗಳಿಗೆ ನೀರಾವರಿ ಸೌಲಭ್ಯ ದೊರಕಲಿದೆ.
ಯೋಜನೆಗೆ ಕೇಂದ್ರ ಸರ್ಕಾರದ ಅನುಮೋದನೆ ಅಗತ್ಯವಿದ್ದು, 524.265 ಮೀಟರ್ ನೀರು ಸಂಗ್ರಹಿಸಲು ಪರವಾನಗಿ ಪಡೆಯಬೇಕಿದೆ. ಇದಕ್ಕೆ ಸುಮಾರು 2.5 ವರ್ಷಗಳ ಕಾಲಾವಧಿ ಬೇಕಾಗಬಹುದು. ಅನುಮೋದನೆ ಸಿಕ್ಕಿಲ್ಲದಿದ್ದರೆ ಸುಪ್ರೀಂ ಕೋರ್ಟ್ ಮೊರೆ ಹೋಗುವ ಪರಿಸ್ಥಿತಿ ಎದುರಾಗಬಹುದು ಎಂದು ಸಚಿವರು ಸ್ಪಷ್ಟಪಡಿಸಿದರು. ನೀರಾವರಿ ಯೋಜನೆಯಿಂದ ರೈತರ ಬದುಕು ಹಸನಾಗಲಿದೆ. ಜೊತೆಗೆ ಪಂಚಗ್ಯಾರಂಟಿ ಯೋಜನೆಗಳಿಂದ ಬಡ ಕುಟುಂಬಗಳಿಗೆ ತಿಂಗಳಿಗೆ ₹5 ಸಾವಿರ ತಲುಪುತ್ತಿದೆ ಎಂದರು.
ಈ ವೇಳೆ ಬೀಳಗಿ ಶಾಸಕ ಜೆ.ಟಿ. ಪಾಟೀಲ ಮಾತನಾಡಿ, ಜಮಖಂಡಿ ಕ್ಷೇತ್ರದ ಕೊನೆಯ ಹಳ್ಳಿಗಳಿಗೆ ತುಬಚಿ ಏತ ನೀರಾವರಿ ಯೋಜನೆ ಜಾರಿಗೊಳಿಸುವ ಅಗತ್ಯವಿದೆ ಎಂದು ಒತ್ತಾಯಿಸಿದರು. ಸಾವಳಗಿ–ತುಂಗಳ ಏತ ನೀರಾವರಿ ನೀರು ಕೊನೆಯ ಹಳ್ಳಿಗಳವರೆಗೆ ತಲುಪುತ್ತಿಲ್ಲ ಎಂದು ಅವರು ವಿಷಾದ ವ್ಯಕ್ತಪಡಿಸಿದರು. ಸರ್ಕಾರ ಯುಕೆಪಿ ಮೂರನೇ ಹಂತದ ಯೋಜನೆಯನ್ನು ಜಾರಿಗೊಳಿಸಲು ಒಪ್ಪಿದೆ ಮೂರು ವರ್ಷಗಳ ಆವಧಿಯಲ್ಲಿ ಪರಿಹಾರ ವಿತರಿಸುವ ಕೆಲಸವಾಗಲಿದೆ ಎಂದು ಹೇಳಿದರು.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

