ಬೆಂಗಳೂರು: ಕಾಲೇಜುಗಳಲ್ಲಿ ಆರಂಭಗೊಂಡಿದ್ದ ಸಮವಸ್ತ್ರ ವಿವಾದದ ಆರೋಪ ಈಗ ಬಿಎಂಟಿಸಿ ಬಸ್ ಗಳಲ್ಲೂ ಕೂಡ ಕೇಳಿಬರುತ್ತಿದೆ. ಬಿಎಂಟಿಸಿಯ ಕೆಲ ಚಾಲಕ ಮತ್ತು ನಿರ್ವಾಹಕರು ಸಮವಸ್ತ್ರದೊಂದಿಗೆ ಟೋಪಿ ಹಾಗೂ ಶಾಲು ಹಾಕಿಕೊಂಡು ಬರುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಈ ಸಂಬಂಧದ ವೀಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆದರೆ ಇದನ್ನು ಸಾರಿಗೆ ನೌಕರರ ಸಂಘ ಹಾಗೂ ಅಧಿಕಾರಿ ಇಬ್ಬರೂ ಕೂಡ ನಿರಾಕರಿಸಿದ್ದು, ಈ ಬಗ್ಗೆ ರಾಜ್ಯ ಸಾರಿಗೆ ನೌಕರರ ಕೂಟದ ಅಧ್ಯಕ್ಷ ಚಂದ್ರಶೇಖರ್ ಪ್ರತಿಕ್ರಿಯಿಸಿದ್ದಾರೆ. ‘ಬಿಎಂಟಿಸಿ ಸೇರಿದಂತೆ ಎಲ್ಲಾ ಸಾರಿಗೆ ನಿಯಮಗಳ ನೌಕರರು ಸಹೋದರರಂತೆ ಕೆಲಸ ಮಾಡುತ್ತಿದ್ದಾರೆ. ನಮ್ಮಲ್ಲಿ ಜಾತಿ, ಧರ್ಮದ ಹೆಸರಿನಲ್ಲಿ ಯಾರು ಕೆಲಸ ಮಾಡುತ್ತಿಲ್ಲ. ಇನ್ನು ಆರೋಪ ಮತ್ತು ವೀಡಿಯೋ ತುಣುಕುಗಳು ಸತ್ಯಕ್ಕೆ ದೂರವಾಗಿದೆ ಎಂದು ತಿಳಿಸಿದ್ದಾರೆ.
ನಂತರ ಬಿಎಂಟಿಸಿ ನಿರ್ದೇಶಕಿ ಜಿ.ರಾಧಿಕಾ ಪ್ರತಿಕ್ರಿಯಿಸಿದ್ದು, ತಪ್ಪು ಸಂದೇಶ ರವಾನೆಯಾಗಿದ್ದು ಯಾವುದೇ ಧರ್ಮ, ಜಾತಿ ಆಧಾರದಲ್ಲಿ ಕೆಲಸ ಮಾಡುತ್ತಿಲ್ಲ. ಎಲ್ಲ ಸಿಬ್ಬಂದಿಗಳು ಹೊಂದಾಣಿಕೆಯಿಂದ ಕೆಲಸ ಮಾಡುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.