ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ಆರೋಗ್ಯವಾಗಿದ್ದಾರೆ. ನಾನು ಫಿಟ್ ಅಂಡ್ ಫೈನ್ ಎಂದು HDK ಅವರೇ ಸ್ಪಷ್ಟಪಡಿಸಿದ್ದಾರೆ. ತಮ್ಮ ಆರೋಗ್ಯದ ಬಗ್ಗೆ ಹರಿದಾಡುತ್ತಿದ್ದ ಎಲ್ಲಾ ಊಹಾಪೋಹಗಳಿಗೆ ಇದೇ ಮೊದಲ ಬಾರಿಗೆ ಖುದ್ದು ಕುಮಾರಸ್ವಾಮಿ ಅವರೇ ತೆರೆ ಎಳೆದಿದ್ದಾರೆ. ತಾವು ಆರೋಗ್ಯವಾಗಿ ಚೆನ್ನಾಗಿದ್ದು, ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
ನಾನು ಚೆನ್ನಾಗಿದ್ದೇನೆ. ಯಾವುದೇ ಆತಂಕಕ್ಕೆ ಕಾರಣವಿಲ್ಲ. ವೈದ್ಯರ ಸಲಹೆಯ ಮೇರೆಗೆ ತೂಕ ಇಳಿಸಿಕೊಂಡಿದ್ದೇನೆ ಅಷ್ಟೇ. ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವಾಲಯದ ನನ್ನ ದೈನಂದಿನ ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದೇನೆ ಎಂದು ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.
ಕಳೆದ ಕೆಲ ದಿನಗಳಿಂದ ಸೋಷಿಯಲ್ ಮೀಡಿಯಾಗಳಲ್ಲಿ ಕುಮಾರಸ್ವಾಮಿ ಅವರ ಆರೋಗ್ಯದ ಬಗ್ಗೆ ಹೆಚ್ಚು ಚರ್ಚೆಯಾಗಿತ್ತು. ಕೆಲವು ಫೋಟೋಗಳಲ್ಲಿ ಕುಮಾರಸ್ವಾಮಿ ಅವರು ತೆಳ್ಳಗೆ ಕಾಣುತ್ತಿದ್ದು, ಅವರ ಆರೋಗ್ಯದ ಬಗ್ಗೆ ಅವರ ಅಭಿಮಾನಿಗಳಲ್ಲಿ ಆತಂಕವೂ ಎದುರಾಗಿತ್ತು.
ಕುಮಾರಸ್ವಾಮಿಯವರಿಗೆ ಹೃದಯ ಸಂಬಂಧಿ ಕಾಯಿಲೆ ಇರುವುದು ಎಲ್ಲರಿಗೂ ತಿಳಿದಿರುವ ವಿಷಯ. ಇದರಿಂದ ದೆಹಲಿಯ ಹವಾಮಾನದಿಂದ ಅವರಿಗೆ ಸ್ವಲ್ಪ ಮಟ್ಟದ ಆರೋಗ್ಯದಲ್ಲಿ ಏರುಪೇರು ಆಗಿತ್ತು. ಕೇಂದ್ರ ಸಚಿವರಾದ ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾದ ಬಳಿಕ ಹೆಚ್ಚು ಪ್ರಯಾಣ ಮಾಡಬೇಕಾಗಿತ್ತು.
ಈ ನಡುವೆ, ತಮ್ಮ ತಂದೆಯ ಆರೋಗ್ಯದ ಬಗ್ಗೆ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಅವರು ಸ್ಪಷ್ಟನೆ ನೀಡಿದ್ದರು. ದೇವನಹಳ್ಳಿ ಸಮಾವೇಶದಲ್ಲಿ ಮಾತನಾಡಿದ ನಿಖಿಲ್, ಕುಮಾರಸ್ವಾಮಿ ಅವರ ಆರೋಗ್ಯದಲ್ಲಿ ಸಣ್ಣ ಬದಲಾವಣೆಗಳಾಗಿದ್ದು ನಿಜ. ಆದರೆ ಅವರು ಈಗ ಚೆನ್ನಾಗಿದ್ದಾರೆ ಮತ್ತು ಯಾವುದೇ ಚಿಂತೆ ಇಲ್ಲ. ಅವರ ಆರೋಗ್ಯದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಆದರೆ ಅವರ ಪೋಷಕರ ಆಶೀರ್ವಾದ ಮತ್ತು ದೇವರ ಅನುಗ್ರಹದಿಂದ ಅವರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಪಕ್ಷದ ಕಾರ್ಯಕರ್ತರು ಮತ್ತು ರಾಜ್ಯದ ಜನರು ಅವರ ಆರೋಗ್ಯದ ಬಗ್ಗೆ ಚಿಂತಿಸಬೇಕಾಗಿಲ್ಲ ಎಂದು ಹೇಳಿದ್ದರು.
ಕಳೆದ ಕೆಲವು ವಾರಗಳಿಂದ ಕುಮಾರಸ್ವಾಮಿ ಅವರು ದೆಹಲಿಯಿಂದ ರಾಜ್ಯಕ್ಕೆ ಬರೋದನ್ನು ಕಡಿಮೆ ಮಾಡಿದ್ದರು. ಹೀಗಾಗಿ ಆರೋಗ್ಯದ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆಗಳು ನಡೆದಿದ್ದವು. ಇದೀಗ ಮೊದಲ ಬಾರಿಗೆ ಕುಮಾರಸ್ವಾಮಿ ಅವರೇ ಈ ಬಗ್ಗೆ ಮಾತನಾಡಿ ಎಲ್ಲಾ ಊಹಾಪೋಹಗಳಿಗೂ ತೆರೆ ಎಳೆದಿದ್ದಾರೆ.