ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 42 ವರ್ಷ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಾಯಕರಾಗಿದ್ದಾರೆ. ಅವರ ವಿರುದ್ಧ ಏನೇ ಆಪಾದನೆ ಮಾಡಿರೂ ಕೂಡ ಅದಕ್ಕೆ ಪೂರಕ ದಾಖಲೆಗಳು ಇರುವುದಿಲ್ಲ. ಈ ಮುನ್ನ ರಾಜಕಾರಣದಲ್ಲಿ ಕುರುಬ ಅಂತ ಹೇಳಲು ಆಗುತ್ತಿರಲಿಲ್ಲ. ಆದರೆ ಈಗ ನಾನು ಕುರುಬ ಎಂದು ಹೇಳಲು ಹೆಮ್ಮಯಿದೆ ಎಂದು ನಗರಾಭಿವೃದ್ದಿ ಸಚಿವ ಭೈರತಿ ಸುರೇಶ್ ಸಿದ್ದರಾಮಯ್ಯ ಅವರನ್ನು ಕೊಂಡಾಡಿದ್ದಾರೆ.
ಬೆಂಗಳೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ಸಿದ್ದರಾಮಯ್ಯ ಅವರ ಮೇಲಿನ ಹೊಟ್ಟೆ ಉರಿಯ ಕಾರಣಕ್ಕೆ ಕೆಲವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಆದರೆ ಯಾವುದೇ ಆರೋಪಗಳು ಮುಖ್ಯಮಂತ್ರಿ ಅವರ ಬಳಿಯೂ ಸುಳಿಯುವುದಿಲ್ಲ ಸಿಎಂ ಸಿದ್ದು ಪರ ಬ್ಯಾಟ್ ಬೀಸಿದ್ದಾರೆ.
ದೇಶದಲ್ಲಿಯೇ ಅತ್ಯಂತ ಪ್ರಾಮಾಣಿಕ ಸಿಎಂ ಯಾರಾದರೂ ಇದ್ದರೆ ಅದು ನಮ್ಮ ಸಿದ್ದರಾಮಯ್ಯನವರು. ಅವರ ವಿರುದ್ಧ ಏನೇನೋ ಆರೋಪ ಮಾಡುತ್ತಾ, ಗಾಳಿಯಲ್ಲಿ ಗುಂಡು ಹೊಡೆಯೋ ಕೆಲಸ ಬೇರೆ ರಾಜಕಾರಣಿಗಳು ಮಾಡುತ್ತಾರೆ ಎಂದು ಕಿಡಿಕಾರಿದ್ದಾರೆ.
16 ಬಜೆಟ್ ಬಾರಿ ಮಂಡಿಸಿದವರು ಸಿದ್ದರಾಮಯ್ಯ, ದೇವರಾಜ್ ಅರಸ್ ದಾಖಲೆ ಮುರಿದು ರಾಜ್ಯದ ಸಿಎಂ ಆಗಿ ಸೇವೆಸಲ್ಲಿಸುತ್ತಿದ್ದಾರೆ. ನಿಮ್ಮ ಪ್ರೀತಿ ವಿಶ್ವಾಸ ಅವರ ಮೇಲಿರಲಿ. ನಿಮ್ಮ ಆಶೀರ್ವಾದ ಇರುವವರೆಗೂ ಸಿದ್ದರಾಮಯ್ಯ ಅವರನ್ನು ಯಾರು ಏನು ಮಾಡಲು ಆಗುವುದಿಲ್ಲ ಎಂದು ವಿರೋಧಿಗಳ ವಿರುದ್ದ ಭೈರತಿ ಗುಡುಗಿದ್ದಾರೆ.
ಇಂತವರ ಕ್ಯಾಬಿನೆಟ್‌ನಲ್ಲಿ ನಾನು ಮಂತ್ರಿ ಆಗಿರುವುದು ನನ್ನ ಪುಣ್ಯವಾಗಿದೆ. ಈ ಹಿಂದೆ ಅನೇಕರು ಈ ಸಮಾಜದವರು ಮಂತ್ರಿ ಆಗಿದ್ದರು. ಆದರೆ ಅವರು ಯಾರು ಏನು ಮಾಡಿಲ್ಲ, ಯಾವುದೇ ಕೊಡುಗೆ ನೀಡಿಲ್ಲ. ಇದೆಲ್ಲವನ್ನೂ ಮಾಡಿದ್ದು, ಸಿದ್ದರಾಮಯ್ಯ ಮಾತ್ರ. ಯಾಕೆಂದರೆ ಸಿದ್ದರಾಮಯ್ಯ ಅವರು ಜನಪರ ಯೋಜನೆಗಳನ್ನು ನೀಡಿದ್ದಾರೆ. ಅವರು ಕುರುಬ ಸಮುದಾಯದಲ್ಲಿ ಹುಟ್ಟಿರುವುದು ಪುಣ್ಯ ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ಹಾಡಿ ಹೊಗಳಿದ್ದಾರೆ.
ನಮ್ಮ ಸಮಾಜದಲ್ಲಿನ ಕೆಲವರಿಗೆ ಸಿದ್ದರಾಮಯ್ಯ ಅವರನ್ನ ಕಂಡರೆ ಜಲಸ್, ಹೊಟ್ಟೆ ಉರಿಯಿಂದ ಸಿಎಂ ವಿರುದ್ಧ ಮಾತನಾಡುತ್ತಾರೆ. ಸಿದ್ದರಾಮಯ್ಯ ಅವರು ಮಾಡಿದ ಶೇಕಡಾ 1ರಷ್ಟು ಕೆಲಸವನ್ನು ಸಮುದಾಯದ ಯಾವ ನಾಯಕರು ಮಾಡಿಲ್ಲ. ಸಿದ್ದರಾಮಯ್ಯ ಯಾರಿಗೆ ಸಹಾಯ ಮಾಡಿದ್ರು ಅದರ ಕ್ರೆಡಿಟ್ ತೆಗೆದುಕೊಳ್ಳುವ ಗೋಜಿಗೆ ಹೋಗುವುದಿಲ್ಲ. ನನ್ನನ್ನು ಮಂತ್ರಿ ಮಾಡುವಾಗ ಹಿಂದಿನ ದಿನವೂ ನನಗೆ ಹೇಳಿರಲಿಲ್ಲ. ಆದರೆ ಅವರ ಆಶೀರ್ವಾದದಿಂದ ಅನೇಕರು ಶಾಸಕರು, ಮಂತ್ರಿಗಳು ಆಗಿದ್ದಾರೆ. ನಿಮ್ಮ ಸಹಕಾರ ಸಿದ್ದರಾಮಯ್ಯಗೆ ಇರಲಿ ಎಂದು ಸಚಿವ ಭೈರತಿ ಸುರೇಶ್ ರಾಜ್ಯದ ಜನರಲ್ಲಿ ಮನವಿ ಮಾಡುವ ಮೂಲಕ ಬಹಿರಂಗವಾಗಿಯೇ ಸಿದ್ದರಾಮಯ್ಯ ಜಪ ಮಾಡಿ ಗಮನ ಸೆಳೆದಿದ್ದಾರೆ