ಮೃತ ವ್ಯಕ್ತಿಯ ಎಟಿಎಂ ಕಾರ್ಡ್ ಬಳಸಿ ಹಣವನ್ನು ಹಿಂಪಡೆಯುವುದು ಕೇವಲ ತಪ್ಪಲ್ಲ, ಕಾನೂನುಬಾಹಿರವೂ ಆಗಿದೆ ಎಂಬುದು ಅನೇಕರಿಗೆ ತಿಳಿದಿಲ್ಲ. ಮನೆಮಂದಿಯಲ್ಲಿ ಯಾರಾದರೂ ಸತ್ತಾಗ, ತುರ್ತು ಖರ್ಚುಗಳಿಗೆ ಅವರ ಎಟಿಎಂ ಮೂಲಕ ಹಣ ತೆಗೆದುಕೊಳ್ಳುವುದು ಸಹಜವೆನಿಸಬಹುದು. ಆದರೆ ಬ್ಯಾಂಕ್ ನಿಯಮಗಳ ಪ್ರಕಾರ, ಮರಣದ ನಂತರ ಆ ಖಾತೆಯಿಂದ ಎಟಿಎಂ ಮೂಲಕ ಹಣ ತೆಗೆದುಕೊಳ್ಳುವುದು ಅಪರಾಧ. ಇದರಲ್ಲಿ ಸಿಕ್ಕಿಬಿದ್ದರೆ ದಂಡ, ಜೈಲು ಶಿಕ್ಷೆಯೂ ಸಾಧ್ಯ.
ಎಟಿಎಂ ಕಾರ್ಡ್ ಮೃತ ವ್ಯಕ್ತಿಯದ್ದಾದರೂ, ನಾಮಿನಿ ಇದ್ದರೂ ಸಹ, ಬ್ಯಾಂಕಿಗೆ ಮಾಹಿತಿ ನೀಡದೇ ಹಣ ಹಿಂಪಡೆಯಲು ಅವಕಾಶವಿಲ್ಲ. ಖಾತೆದಾರರ ಮರಣದ ನಂತರ ಯಾವುದೇ ವ್ಯವಹಾರವೂ ಅಪರಾಧ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಮರಣದ ಮಾಹಿತಿ ಬ್ಯಾಂಕಿಗೆ ನೀಡುವುದು ಮೊದಲ ಕರ್ತವ್ಯ. ನಾಮಿನಿಯಾಗಿದ್ದರೂ ಸಹ, ಬ್ಯಾಂಕ್ ಪ್ರಕ್ರಿಯೆ ಪೂರ್ಣಗೊಳಿಸುವ ತನಕ ಹಣವನ್ನು ಎಟಿಎಂ ಮೂಲಕ ತೆಗೆದುಕೊಳ್ಳಲು ಕಡ್ಡಾಯವಾಗಿ ನಿಷೇಧವಿದೆ.
ಮೃತ ವ್ಯಕ್ತಿಯ ಆಸ್ತಿಯನ್ನು ತಮ್ಮ ಹೆಸರಿಗೆ ವರ್ಗಾಯಿಸುವುದು ಕಾನೂನು ಪ್ರಕ್ರಿಯೆಯಾಗಿದೆ. ನಾಮಿನಿ ಅಥವಾ ಕುಟುಂಬ ಸದಸ್ಯರು ಮರಣ ಪ್ರಮಾಣಪತ್ರ, ತಮ್ಮ ಗುರುತುಪತ್ರಗಳು, ಖಾತೆಯ ದಾಖಲೆಗಳು ಮತ್ತು ಬ್ಯಾಂಕ್ ನೀಡುವ ಕ್ಲೈಮ್ ಫಾರ್ಮ್ ಅನ್ನು ಸಲ್ಲಿಸಬೇಕು. ಒಂದಕ್ಕಿಂತ ಹೆಚ್ಚು ನಾಮಿನಿಗಳಿದ್ದರೆ, ಎಲ್ಲರ ಸಹಮತಿಪತ್ರವನ್ನು ಬ್ಯಾಂಕ್‌ಗೆ ನೀಡುವುದು ಕಡ್ಡಾಯ. ದಾಖಲೆಗಳ ಪರಿಶೀಲನೆ ಪೂರ್ಣವಾದ ನಂತರವೇ ಬ್ಯಾಂಕ್ ಹಣವನ್ನು ಬಿಡುಗಡೆ ಮಾಡುತ್ತದೆ.
ಹಣವನ್ನು ತುರ್ತು ಅಗತ್ಯಕ್ಕಾಗಿ ತಕ್ಷಣ ತೆಗೆದುಕೊಳ್ಳಬೇಕೆಂಬ ಒತ್ತಡ ಇದ್ದರೂ, ಕಾನೂನು ತಪ್ಪು ಮಾಡಬೇಡಿ. ಸರಿಯಾದ ದಾಖಲಾತಿಗಳು, ನಾಮಿನಿ ಪ್ರಕ್ರಿಯೆ ಮತ್ತು ಬ್ಯಾಂಕ್ ಅನುಮತಿ ಮೂಲಕವೇ ಹಣವನ್ನು ಪಡೆಯಬಹುದು. ಕ್ಲೈಮ್ ಫಾರ್ಮ್ ಜೊತೆಗೆ ಪಾಸ್‌ಬುಕ್, ಟಿಡಿಆರ್, ಚೆಕ್‌ಬುಕ್, ಮರಣ ಪ್ರಮಾಣಪತ್ರ, ಆಧಾರ್ ಮತ್ತು ಪ್ಯಾನ್ ಕಾರ್ಡ್ ಲಗತ್ತಿಸಬೇಕು. ಬ್ಯಾಂಕ್ ಪರಿಶೀಲನೆಗಳಲ್ಲಿ ಯಾತೊಂದು ಅನುಮಾನವಿಲ್ಲ ಎಂಬುದು ದೃಢಪಟ್ಟ ನಂತರ, ಹಣವನ್ನು ಕಾನೂನುಬದ್ಧವಾಗಿ ಬಿಡುಗಡೆ ಮಾಡಲಾಗುತ್ತದೆ, ಇದು ನಿಮಗೆ ಭವಿಷ್ಯದ ಯಾವುದೇ ಸಮಸ್ಯೆಯಿಂದ ದೂರ ಇರಲು ಸಹಾಯ ಮಾಡುತ್ತದೆ.
ವರದಿ : ಗಾಯತ್ರಿ ಗುಬ್ಬಿ

