ವಾಲ್ಮೀಕಿ ನಿಗಮದ ಬಹುಕೋಟಿ ಹಗರಣ ಮತ್ತೊಮ್ಮೆ ಕರ್ನಾಟಕ ರಾಜಕಾರಣದಲ್ಲಿ ಸದ್ದು ಮಾಡ್ತಿದೆ. ಈ ಪ್ರಕರಣದ ಆರೋಪ ಎದುರಿಸುತ್ತಿರುವ ಬಿ. ನಾಗೇಂದ್ರ ಅವರು ಮತ್ತೊಮ್ಮೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಷ್ಟೇ ಅಲ್ಲ…ಡಿಕೆ ಶಿವಕುಮಾರ್ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಕೇವಲ 25 ದಿನಗಳಲ್ಲೇ ನಾಗೇಂದ್ರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಆದ್ರೆ… ಅಸಲಿಗೆ ವಾಲ್ಮೀಕಿ ನಿಗಮದಲ್ಲಿ ನಡೆದಿದ್ದೇನು?
2024ರ ಮೇ ತಿಂಗಳಲ್ಲಿ ನಿಗಮದ ಲೆಕ್ಕಪತ್ರ ಅಧೀಕ್ಷಕರಾಗಿದ್ದ ಪಿ. ಚಂದ್ರಶೇಖರನ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರು ಬರೆದಿಟ್ಟಿದ್ದ ಡೆತ್ನೋಟ್ ಬಳಿಕ ನಿಗಮದಲ್ಲಿ ನಡೆದಿದ್ದ ಹಣಕಾಸಿನ ಅವ್ಯವಹಾರದ ವಿಚಾರ ಬಹಿರಂಗವಾಗಿತ್ತು. ತನಿಖೆಯ ಪ್ರಕಾರ, ನಿಗಮಕ್ಕೆ ಸರ್ಕಾರ ಸೇರಿದಂತೆ ವಿವಿಧ ಮೂಲಗಳಿಂದ ಸುಮಾರು 187 ಕೋಟಿ ರೂಪಾಯಿ ಹಣ ಬಂದಿತ್ತು. ಇದರಲ್ಲಿ ಬರೋಬ್ಬರಿ 89.63 ಕೋಟಿ ರೂಪಾಯಿ ಹಣವನ್ನು ಅಕ್ರಮವಾಗಿ ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಬೆಂಗಳೂರಿನ ಎಂಜಿ ರಸ್ತೆಯಲ್ಲಿದ್ದ ಯೂನಿಯನ್ ಬ್ಯಾಂಕ್ ಖಾತೆಯಿಂದ ನಕಲಿ ಚೆಕ್ಗಳು, ಆರ್ಟಿಜಿಎಸ್ ಮತ್ತು ಆನ್ಲೈನ್ ವರ್ಗಾವಣೆಗಳ ಮೂಲಕ ಹಣವನ್ನು ಅನಧಿಕೃತ ಖಾತೆಗಳಿಗೆ ಕಳುಹಿಸಲಾಗಿದೆ ಎನ್ನಲಾಗಿದೆ.
ನಂತರ ಈ ಹಣವನ್ನು ನೂರಾರು ಬ್ಯಾಂಕ್ ಖಾತೆಗಳ ಮೂಲಕ ತಿರುಗಿಸಿ…ನಗದು, ಚಿನ್ನ ಮತ್ತು ಇತರ ಆಸ್ತಿಗಳ ರೂಪಕ್ಕೆ ಪರಿವರ್ತಿಸಲಾಗಿದೆ ಎಂದು ತನಿಖಾ ಸಂಸ್ಥೆಗಳು ಆರೋಪಿಸಿ, ಈ ಪ್ರಕರಣದಲ್ಲಿ ಅಂದಿನ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರಾಗಿದ್ದ ಬಿ. ನಾಗೇಂದ್ರ ಅವರ ಹೆಸರೂ ಪ್ರಮುಖವಾಗಿ ಕೇಳಿಬಂದಿತ್ತು. ಇಡಿ ಆರೋಪದ ಪ್ರಕಾರ, ನಿಗಮದ ಬ್ಯಾಂಕ್ ಖಾತೆಯನ್ನು ನಿರ್ದಿಷ್ಟ ಶಾಖೆಗೆ ಸ್ಥಳಾಂತರಿಸುವುದು ಸೇರಿದಂತೆ ಹಲವು ವಿಚಾರಗಳಲ್ಲಿ ನಾಗೇಂದ್ರ ಅವರ ಪ್ರಭಾವ ಬಳಕೆಯಾಗಿದೆ ಎನ್ನಲಾಗಿತ್ತು. ಸಿಬಿಐ ಚಾರ್ಜ್ಶೀಟ್ನಲ್ಲೂ ನಾಗೇಂದ್ರ ಸೇರಿದಂತೆ ಹಲವು ಮಂದಿ ಆರೋಪಿಗಳಾಗಿದ್ದಾರೆ ಎಂಬ ವರದಿಗಳಿವೆ.
ಅಕ್ರಮ ಹಣದಿಂದ ನಾಗೇಂದ್ರ ಅವರಿಗೆ ಸುಮಾರು 1.20 ಕೋಟಿ ರೂಪಾಯಿ ಲಾಭವಾಗಿದೆ ಎಂಬ ಆರೋಪವೂ ಇದೆ. ಆದರೆ…ಈ ಎಲ್ಲಾ ಆರೋಪಗಳನ್ನು ಬಿ. ನಾಗೇಂದ್ರ ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ಯಾವುದೇ ಹಣಕಾಸಿನ ವಹಿವಾಟಿನಲ್ಲಿ ತಮ್ಮ ಸಹಿ ಇಲ್ಲ…
ತಾವು ಯಾವುದೇ ಆದೇಶ ನೀಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ತಮ್ಮನ್ನು ರಾಜಕೀಯ ಕಾರಣಕ್ಕಾಗಿ ಗುರಿಯಾಗಿಸಲಾಗುತ್ತಿದೆ ಎಂದೂ ನಾಗೇಂದ್ರ ಆರೋಪಿಸಿದ್ದಾರೆ. ಇನ್ನು ರಾಜ್ಯದ ಎಸ್ಐಟಿ ತನಿಖೆಯಲ್ಲಿ ನಾಗೇಂದ್ರ ಅವರಿಗೆ ಕ್ಲೀನ್ಚಿಟ್ ಸಿಕ್ಕಿತ್ತು ಎಂಬ ವರದಿಗಳಿದ್ದರೂ, ಇಡಿ ಮತ್ತು ಸಿಬಿಐ ತನಿಖೆಗಳು ಬೇರೆ ದಿಕ್ಕಿನಲ್ಲಿ ಸಾಗಿವೆ.
ಇದೇ ಪ್ರಕರಣದ ಹಿನ್ನೆಲೆಯಲ್ಲಿ 2024ರ ಜೂನ್ 6ರಂದು ನಾಗೇಂದ್ರ ಮೊದಲ ಬಾರಿಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ಅವರನ್ನು ಇಡಿ ಬಂಧಿಸಿತ್ತು. ಜಾಮೀನಿನ ಬಳಿಕ..2026ರ ಆಗಸ್ಟ್ 3ರಂದು ಡಿಕೆ ಶಿವಕುಮಾರ್ ನೇತೃತ್ವದ ಸರ್ಕಾರದಲ್ಲಿ ನಾಗೇಂದ್ರ ಮತ್ತೆ ಸಚಿವರಾಗಿ ಸಂಪುಟಕ್ಕೆ ಸೇರ್ಪಡೆಯಾಗಿದ್ದರು. ಆದರೆ..ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಕೇವಲ 25 ದಿನಗಳಲ್ಲೇ ಮತ್ತೊಮ್ಮೆ ರಾಜೀನಾಮೆ ನೀಡಿದ್ದಾರೆ. ವಿಪಕ್ಷಗಳ ನಿರಂತರ ಪ್ರತಿಭಟನೆ..ತನಿಖಾ ಸಂಸ್ಥೆಗಳ ಕ್ರಮ…ಮತ್ತು ಸಿಬಿಐನಿಂದ ಪ್ರಾಸಿಕ್ಯೂಶನ್ಗೆ ಅನುಮತಿ ಕೋರಿದ ಬೆಳವಣಿಗೆಗಳ ನಡುವೆ ನಾಗೇಂದ್ರ ರಾಜೀನಾಮೆ ಘೋಷಿಸಿದ್ದಾರೆ.
ರಾಜೀನಾಮೆ ನೀಡುವ ಸಂದರ್ಭದಲ್ಲಿ ಭಾವನಾತ್ಮಕವಾಗಿ ಮಾತನಾಡಿದ ನಾಗೇಂದ್ರ, ಪಕ್ಷ ಮತ್ತು ಸರ್ಕಾರಕ್ಕೆ ಮುಜುಗರವಾಗಬಾರದು ಎಂಬ ಕಾರಣಕ್ಕೆ ಸ್ವಯಂಪ್ರೇರಿತವಾಗಿ ಸ್ಥಾನ ತೊರೆಯುತ್ತಿರುವುದಾಗಿ ಹೇಳಿದ್ದಾರೆ. ಇತ್ತ ಬಿಜೆಪಿ ಮತ್ತು ಜೆಡಿಎಸ್ ಇದನ್ನು ತಮ್ಮ ಹೋರಾಟದ ಗೆಲುವು ಎಂದು ಬಣ್ಣಿಸಿವೆ. ಆದ್ರೆ ಈಗ ದೊಡ್ಡ ಪ್ರಶ್ನೆ ಏನು ಗೊತ್ತಾ? ವಾಲ್ಮೀಕಿ ನಿಗಮದ 89 ಕೋಟಿ ರೂಪಾಯಿಗೂ ಅಧಿಕ ಹಣ ಅಕ್ರಮವಾಗಿ ವರ್ಗಾವಣೆಯಾದ ಪ್ರಕರಣದ ಹಿಂದೆ ನಿಜವಾದ ಮಾಸ್ಟರ್ಮೈಂಡ್ ಯಾರು? ಈ ಹಣದಲ್ಲಿ ಯಾರಿಗೆಷ್ಟು ಪಾಲು ಸಿಕ್ಕಿತು? ಬುಡಕಟ್ಟು ಸಮುದಾಯದ ಅಭಿವೃದ್ಧಿಗಾಗಿ ಮೀಸಲಿಟ್ಟ ಹಣ ಕೊನೆಗೆ ಎಲ್ಲಿಗೆ ಹೋಯಿತು? ಈ ಪ್ರಶ್ನೆಗಳಿಗೆ ಇನ್ನೂ ಸಂಪೂರ್ಣ ಉತ್ತರ ಸಿಕ್ಕಿಲ್ಲ.
ಸದ್ಯ ಇಡಿ, ಸಿಬಿಐ ಮತ್ತು ರಾಜ್ಯದ ವಿಶೇಷ ತನಿಖಾ ತಂಡ ತನಿಖೆ ಮುಂದುವರಿಸಿವೆ. ಪ್ರಕರಣ ನ್ಯಾಯಾಲಯದಲ್ಲೂ ವಿಚಾರಣೆಯಲ್ಲಿದೆ. ಹೀಗಾಗಿ ತನಿಖಾ ಸಂಸ್ಥೆಗಳು ಮಾಡಿರುವ ಆರೋಪಗಳು ನ್ಯಾಯಾಲಯದಲ್ಲಿ ಅಂತಿಮವಾಗಿ ಸಾಬೀತಾಗಬೇಕಿದೆ. ನ್ಯಾಯಾಲಯದ ತೀರ್ಪು ಬರುವವರೆಗೆ ಆರೋಪಗಳು ಆರೋಪಗಳಾಗಿಯೇ ಉಳಿಯುತ್ತವೆ. ಆದರೆ ಒಂದು ವಿಚಾರ ಮಾತ್ರ ಸ್ಪಷ್ಟ…ಬಿ. ನಾಗೇಂದ್ರ ಅವರ ರಾಜೀನಾಮೆಯೊಂದಿಗೆ ವಾಲ್ಮೀಕಿ ಹಗರಣದ ಅಧ್ಯಾಯ ಮುಗಿದಿಲ್ಲ ಬದಲಾಗಿ…₹89 ಕೋಟಿ ಹಣದ ಅಸಲಿ ಕಥೆ ಏನು? ಅದರ ಹಿಂದೆ ಯಾರಿದ್ದಾರೆ? ಅಂತಿಮವಾಗಿ ಈ ಹಣ ಯಾರ ಪಾಲಾಯಿತು? ಎಂಬ ಪ್ರಶ್ನೆಗಳಿಗೆ ಉತ್ತರ ಸಿಗುವವರೆಗೂ ಈ ಪ್ರಕರಣ ಕರ್ನಾಟಕ ರಾಜಕಾರಣದಲ್ಲಿ ಮತ್ತಷ್ಟು ಸದ್ದು ಮಾಡುವ ಸಾಧ್ಯತೆಯಿದೆ.
