ಕನ್ನಡ ಟೆಲಿವಿಷನ್ ಲೋಕದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾದ ‘ಮಹಾನಟಿ’ ಸೀಸನ್ 2ರ ಗ್ರ್ಯಾಂಡ್ ಫಿನಾಲೆ ಶನಿವಾರ ಅದ್ಧೂರಿಯಾಗಿ ನೆರವೇರಿತು. ಮನರಂಜನೆ, ನಟನೆ ಮತ್ತು ಕೌಶಲ್ಯಗಳ ಪೈಪೋಟಿಯಲ್ಲಿ ಅಂತಿಮವಾಗಿ ಮಂಗಳೂರಿನ ವಂಶಿ ರತ್ನಕುಮಾರ್ ತಮ್ಮ ಪ್ರತಿಭೆಯಿಂದ ಎಲ್ಲರ ಮನ ಗೆದ್ದು, ಈ ಸೀಸನ್‌ನ ವಿನ್ನರ್ ಪಟ್ಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ಐದು ಫೈನಲಿಸ್ಟ್‌ಗಳಾದ ಮಾನ್ಯ ರಮೇಶ್, ವರ್ಷಾ ಡಿಗ್ರಜೆ, ವಂಶಿ ರತ್ನಕುಮಾರ್, ಶ್ರೀಯ ಅಗಮ್ಯ ಮತ್ತು ಭೂಮಿಕಾ ತಮ್ಮೇಗೌಡರಲ್ಲಿ ಕೊನೆಯವರೆಗೆ ವಂಶಿ ಮತ್ತು ಬೆಳಗಾವಿಯ ವರ್ಷಾ ಡಿಗ್ರಜೆ ನಡುವಿನ ಪೈಪೋಟಿ ಕುತೂಹಲ ಕೆರಳಿಸಿತ್ತು. ಕೊನೆಗೆ ವಂಶಿ ಜಯದ ಕಿರೀಟವನ್ನು ತಲೆಯ ಮೇಲೆ ತೊಟ್ಟು, ತಮ್ಮ ಕನಸು ನನಸಾಗಿಸಿಕೊಂಡರು. ವಂಶಿಗೆ ʻಮಹಾನಟಿʼ ಸೀಸನ್ 2ರ ಟ್ರೋಫಿ ಜೊತೆಗೆ ವೈಟ್ ಗೋಲ್ಡ್ ಸಂಸ್ಥೆಯಿಂದ 15 ಲಕ್ಷ ರೂಪಾಯಿಗಳ ಮೌಲ್ಯದ ಚಿನ್ನದ ಕಿರೀಟ ಲಭಿಸಿದೆ. ಮತ್ತೊಂದೆಡೆ, ಮೊದಲ ರನ್ನರ್-ಅಪ್ ಆಗಿರುವ ವರ್ಷಾ ಡಿಗ್ರಜೆ ಅವರಿಗೆ ಜಾರ್ ಆ್ಯಪ್ ವತಿಯಿಂದ 10 ಲಕ್ಷ ರೂಪಾಯಿಗಳ ನಗದು ಬಹುಮಾನ ನೀಡಿ ಗೌರವಿಸಲಾಯಿತು.
ವಿಜಯದ ಕ್ಷಣವನ್ನು ಹಂಚಿಕೊಂಡ ವಂಶಿ ಭಾವನಾತ್ಮಕವಾಗಿ ಮಾತನಾಡಿ, ತುಂಬಾ ಖುಷಿಯಾಗ್ತಿದೆ. ಬಿ ಸರೋಜಾ ದೇವಿ ಅಮ್ಮನವರನ್ನು ನಾನು ನೇರವಾಗಿ ನೋಡಿಲ್ಲ, ಆದರೆ ಅವರ ನಟನೆ ನನ್ನ ಪ್ರೇರಣೆ. ಈ ಟ್ರೋಫಿ ಅವರ ಆಶೀರ್ವಾದದ ಫಲ. ನಾನು ಒಳ್ಳೆಯ ನಟಿಯಾಗಬೇಕು ಅನ್ನೋ ಕನಸು ಹೊತ್ತು ಬಂದಿದ್ದೆ, ಇಂದು ಅದು ನನಸಾಗಿದೆ. ಇಷ್ಟು ದಿನದ ಹಾರ್ಡ್ ವರ್ಕ್‌ಗೆ ಈ ಟ್ರೋಫಿ ಅತ್ಯುತ್ತಮ ಬಹುಮಾನ ಎಂದು ಸಂತೋಷ ಹಂಚಿಕೊಂಡರು.
ನಮ್ಮಂಥ ಹೊಸ ಪ್ರತಿಭೆಗಳಿಗೆ ಇಂತಹ ವೇದಿಕೆಯನ್ನು ನೀಡಿದ ಜೀ ತಂಡಕ್ಕೆ ಹೃತ್ಪೂರ್ವಕ ಧನ್ಯವಾದಗಳು. ಅಮ್ಮ, ನಿನ್ನ ಮಗಳು ಈ ಟ್ರೋಫಿ ಗೆದ್ದಿದ್ದಾಳೆ ಎಂದು ಭಾವನಾತ್ಮಕವಾಗಿ ಹೇಳಿದರು. ಈ ಮೂಲಕ ಮಹಾನಟಿ ಸೀಸನ್ 2 ತನ್ನ ಅತ್ಯಂತ ಘನ ಕ್ಷಣವನ್ನು ಕಂಡಿದೆ — ಕನಸು, ಪರಿಶ್ರಮ ಮತ್ತು ನಟನೆಗೆ ಗೌರವ ನೀಡಿದ ಈ ವೇದಿಕೆ ಕನ್ನಡ ಕಿರುತೆರೆಯ ಇತಿಹಾಸದಲ್ಲಿ ಮತ್ತೊಂದು ಸ್ಮರಣೀಯ ಅಧ್ಯಾಯವನ್ನು ಬರೆದಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

