ರೈಲುಗಳ ಮೇಲೆ ಕಲ್ಲು ತೂರಾಟದ ಘಟನೆಗಳು
ರೈಲು ನಂ.20608 ಮೈಸೂರು-ಚೆನ್ನೈ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಕೆಲವು ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರಿಂದ ಕೋಚ್‌ನ ಎರಡು ಗಾಜುಗಳಿಗೆ ಹಾನಿಯಾಗಿದೆ. ಕೃಷ್ಣರಾಜಪುರಂ-ಬೆಂಗಳೂರು ಕಂಟೋನ್ಮೆಂಟ್ ರೈಲು ನಿಲ್ದಾಣಗಳ ನಡುವೆ ಇಂದು ಈ ಘಟನೆ ನಡೆದಿದೆ. ಯಾವುದೇ ವ್ಯಕ್ತಿ ಗಾಯಗೊಂಡಿಲ್ಲ.
ಇತ್ತೀಚೆಗೆ ರೈಲುಗಳ ಮೇಲೆ ಕಲ್ಲು ತೂರಾಟದ ಘಟನೆಗಳು ಆಗಾಗ ನಡೆಯುತ್ತಿವೆ. ರೈಲ್ವೆ ಸಂರಕ್ಷಣಾ ಪಡೆ (ಆರ್‌ಪಿಎಫ್) ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗದಲ್ಲಿ ಜನವರಿ, 2023 ರಲ್ಲಿ 21 ಕಲ್ಲು ತೂರಾಟ ಪ್ರಕರಣಗಳನ್ನು ಮತ್ತು ಫೆಬ್ರವರಿ 2023 ರಲ್ಲಿ 13 ಪ್ರಕರಣಗಳನ್ನು ದಾಖಲಿಸಿದೆ. ಲೊಟ್ಟೆಗೊಲ್ಲಹಳ್ಳಿ-ಕೊಡಿಗೇಹಳ್ಳಿ, ಬಯ್ಯಪ್ಪನಹಳ್ಳಿ-ಚನ್ನಸಂದ್ರ, ಚನ್ನಸಂದ್ರ-ಯಲಹಂಕ, ಚಿಕ್ಕಬಾಣಾವರ-ಯಶವಂತಪುರ ವಿಭಾಗಗಳಲ್ಲಿ ಹಾಗೂ ಕೃಷ್ಣರಾಜಪುರ, ಬೈಯ್ಯಪ್ಪನಹಳ್ಳಿ, ತುಮಕೂರು, ಬಾಣಸವಾಡಿ, ಕಾರ್ಮೆಲಾರಂ, ಬೆಂಗಳೂರು ಕ್ಯಾಂಟನ್‌ಮೆಂಟ್ ವ್ಯಾಪ್ತಿಯಲ್ಲಿ ನಡೆದಿರುವ ಘಟನೆಗಳನ್ನು ಆಧರಿಸಿ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.
ರೈಲುಗಳಿಗೆ ಕಲ್ಲು ತೂರಾಟದಿಂದ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾಗುತ್ತದೆ. ಇದು ರೈಲಿನಲ್ಲಿರುವ ಪ್ರಯಾಣಿಕರಿಗೆ ಗಾಯವನ್ನು ಉಂಟುಮಾಡುತ್ತದೆ ಮತ್ತು ಕೆಲವೊಮ್ಮೆ ಮಾರಣಾಂತಿಕವಾಗಿದೆ.
ರೈಲುಗಳ ಮೇಲೆ ಕಲ್ಲು ತೂರಾಟ ಮಾಡುವುದು ಜಾಮೀನು ರಹಿತ ಅಪರಾಧ. ರೈಲ್ವೇ ಕಾಯಿದೆಯ ಸೆಕ್ಷನ್ 152 ರ ಪ್ರಕಾರ, ಯಾವುದೇ ವ್ಯಕ್ತಿ ರೈಲಿಗೆ ಕಲ್ಲು ಎಸೆದರೆ ಮತ್ತು ಅಂತಹ ಕೃತ್ಯವು ರೈಲಿನಲ್ಲಿ ಪ್ರಯಾಣಿಕರ ಸುರಕ್ಷತೆಗೆ ಅಪಾಯವನ್ನುಂಟುಮಾಡಿದರೆ, ಅವನು ಜೀವಾವಧಿ ಶಿಕ್ಷೆ ಅಥವಾ ಹತ್ತು ವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆಗೆ ಗುರಿಯಾಗುತ್ತಾನೆ.
ಜಾಗರೂಕತೆಯನ್ನು ಹೆಚ್ಚಿಸುವುದರ ಜೊತೆಗೆ, ಇಂತಹ ಘಟನೆಗಳ ಸ್ಥಳಗಳಲ್ಲಿ ಮತ್ತು ಶಾಲೆಗಳು, ಹಳ್ಳಿಗಳು ಇತ್ಯಾದಿಗಳನ್ನು ಒಳಗೊಂಡ ನೆರೆಹೊರೆಯ ಪ್ರದೇಶಗಳಲ್ಲಿ ಆರ್‌ಪಿಎಫ್‌ನಿಂದ ಜಾಗೃತಿ ಅಭಿಯಾನಗಳನ್ನು ಆಯೋಜಿಸಲಾಗುತ್ತಿದೆ. ಇದರಿಂದಾಗಿ ದುಷ್ಕರ್ಮಿಗಳು ರೈಲು ಕಾರ್ಯಾಚರಣೆಯ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಕೃತ್ಯಗಳಿಂದ ದೂರವಿರುತ್ತಾರೆ. ರೈಲು ನಿಲ್ದಾಣಗಳು, ವೇಟಿಂಗ್ ಹಾಲ್‌ಗಳು ಮತ್ತು ಸಾರ್ವಜನಿಕ ಸಂಪರ್ಕದ ಇತರ ರೈಲ್ವೆ ಪ್ರದೇಶಗಳಲ್ಲಿನ ಸಿಸಿಟಿವಿಗಳಲ್ಲಿ ಪ್ರಕಟಣೆಗಳು ಮತ್ತು ಸಂದೇಶಗಳ ಪ್ರದರ್ಶನದ ಮೂಲಕ ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ.
ಅತಿಕ್ರಮಣ ಮತ್ತು ಕಲ್ಲು ತೂರಾಟದಂತಹ ಘಟನೆಗಳು ಕಂಡುಬಂದಲ್ಲಿ ಟೋಲ್-ಫ್ರೀ ಸಹಾಯವಾಣಿ ಸಂಖ್ಯೆ (139) ಗೆ ತಿಳಿಸುವಂತೆ ಸಾರ್ವಜನಿಕರಿಗೆ ಮತ್ತು ಪ್ರಯಾಣಿಕರಿಗೆ ರೈಲ್ವೆ ಮನವಿ ಮಾಡಿದೆ.
ರೈಲ್ವೆ ಆಸ್ತಿ ಸಾರ್ವಜನಿಕ ಆಸ್ತಿ ಮತ್ತು ಸಾರ್ವಜನಿಕ ಆಸ್ತಿಯ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.
ಸಾರ್ವಜನಿಕ ಸಂಪರ್ಕಾಧಿಕಾರಿ.