ದೇಶಾದ್ಯಂತ ಮಳೆರಾಯನ ಆರ್ಭಟ ಜೋರಾಗಿದೆ. ಕೆಲ ರಾಜ್ಯಗಳಲ್ಲಿ ಮೇಘಸ್ಪೋಟ ಸಂಭವಿಸಿ ತತ್ತರಿಸಿ ಹೋಗಿವೆ. ಪ್ರಕೃತಿ ವಿಕೋಪದಿಂದ ಅಪಾರ ಸಾವು-ನೋವು ಸಂಭವಿಸಿದೆ. ಈಗ ಹಿಮಾಚಲ ಪ್ರದೇಶದಲ್ಲಿ ಮಂಗಳವಾರ ಸುರಿದ ಧಾರಕಾರ ಮಳೆಯಿಂದಾಗಿ ಭೂಕುಸಿತ ಹಾಗೂ ಹಠಾತ್ ಪ್ರವಾಹ ಉಂಟಾಗಿ ಕನಿಷ್ಠ 16 ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ನಾಲ್ಕು ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ 1,337 ರಸ್ತೆಗಳಲ್ಲಿ ಸಂಚಾರ ಸ್ಥಗಿತಗೊಂಡಿದೆ. ಅವುಗಳಲ್ಲಿ ಮಂಡಿಯಲ್ಲಿ-282, ಶಿಮ್ಲಾದಲ್ಲಿ-255 ,ಚಂಬಾದಲ್ಲಿ 239, ಕುಲ್ಲು 205 ಮತ್ತು ಸಿರಮೌರ್ ಜಿಲ್ಲೆಯ 140 ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದೆ. ಹಿಮಾಚಲ ಪ್ರದೇಶದ ಎಲ್ಲ ಜಿಲ್ಲೆಗಳಲ್ಲಿ ಮಳೆ ಸಂಬಂಧಿತ ಹಾನಿಯಿಂದಾಗಿ 3,056 ಕೋಟಿ ರೂಪಾಯಿಯಷ್ಟು ಆಸ್ತಿ ನಷ್ಟ ಉಂಟಾಗಿದ್ದು, ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಹಿಮಾಚಲ ಪ್ರದೇಶವನ್ನು ವಿಪತ್ತು ಪೀಡಿತ ರಾಜ್ಯವೆಂದು ಘೋಷಿಸಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಜೂನ್ 20 ರಂದು ಮಾನ್ಸೂನ್ ಆರಂಭವಾಗಿದ್ದು, ಅಲ್ಲಿಂದ ಈವರೆಗೆ ರಾಜ್ಯದಲ್ಲಿ 95 ಹಠಾತ್ ಪ್ರವಾಹ, 45 ಮೇಘಸ್ಫೋಟ ಮತ್ತು 121 ಭೂಕುಸಿತ ಸಂಭವಿಸಿವೆ. ಮಳೆ ಸಂಬಂಧಿತ ಅವಘಡ ಹಾಗೂ ರಸ್ತೆ ಅಪಘಾತಗಳಲ್ಲಿ ಕನಿಷ್ಠ 340 ಜನ ಮೃತಪಟ್ಟಿದ್ದಾರೆ. 41 ಮಂದಿ ನಾಪತ್ತೆಯಾಗಿದ್ದಾರೆ.
ಮೇಘಸ್ಫೋಟ, ದಿಢೀರ್ ಪ್ರವಾಹ ಮತ್ತು ಭೂಕುಸಿತಗಳಿಂದ ಉಂಟಾದ ವಿನಾಶದ ಪ್ರಮಾಣವನ್ನು ಉಲ್ಲೇಖಿಸಿ ಔಪಚಾರಿಕ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಮುಂದಿನ 2 ದಿನಗಳವರೆಗೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದ್ದು, ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ.
ಕಾಂಗ್ರಾ, ಮಂಡಿ, ಸಿರಮೌರ್ ಮತ್ತು ಕಿರ್ ಜಿಲ್ಲೆಗಳಲ್ಲಿ ಬುಧವಾರ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಸ್ಥಳೀಯ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಉನಾ ಮತ್ತು ಬಿಲಾಸ್ಪುರ ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ ನೀಡಿದೆ. ಹಿಮಾಚಲ ಪ್ರದೇಶದಲ್ಲಿ 76 ವರ್ಷಗಳಲ್ಲೇ ಈ ಬಾರಿ ಅಧಿಕ ಮಳೆಯಾಗಿದೆ. ಆಗಸ್ಟ್‌ನಲ್ಲಿ 431.3 ಮಿಲಿ ಮೀಟರ್ ಮಳೆಯಾಗಿದೆ ಎಂದು ಶಿಮ್ಲಾ ಹವಾಮಾನ ಇಲಾಖೆ ಹೇಳಿದೆ. ಸಾಮಾನ್ಯವಾಗಿ ಪ್ರತಿವರ್ಷ 256.8 ಮಿಲಿ ಮೀಟರ್ ಮಳೆಯಾಗುತ್ತಿತ್ತು. ಈ ಬಾರಿ 431.3 ಮಿಲಿ ಮೀಟರ್ ಮಳೆಯಾಗಿದ್ದು ಶೇ 68ರಷ್ಟು ಹೆಚ್ಚು ಮಳೆಯಾದಂತಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ