ಅಪಾರ ತೈಲ ಸಂಪತ್ತಿನಿಂದ ಪ್ರಸಿದ್ಧವಾಗಿರುವ ದಕ್ಷಿಣ ಅಮೆರಿಕದ ದೇಶ ವೆನಿಜುವೆಲಾದಲ್ಲಿ ಭಾರೀ ರಾಜಕೀಯ ಬಿಕ್ಕಟ್ಟು ಉಂಟಾಗಿದೆ. ಅಮೆರಿಕ ನಡೆಸಿದ ದಾಳಿಯಲ್ಲಿ ವೆನಿಜುವೆಲಾದ ಅಧ್ಯಕ್ಷರು ಹಾಗೂ ಅವರ ಪತ್ನಿಯನ್ನು ಬಂಧಿಸಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ಈ ಬೆಳವಣಿಗೆಯ ಬಳಿಕ, ವೆನಿಜುವೆಲಾದಲ್ಲಿ ಮುಂದಿನ ದಿನಗಳಲ್ಲಿ ಆಡಳಿತ ಯಾರ ಕೈಯಲ್ಲಿ ಇರುತ್ತದೆ. ದೇಶದ ನಾಯಕತ್ವ ಹೇಗಿರಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಈ ಕುರಿತಂತೆ ಜಾಗತಿಕ ಚಿಂತನಾ ಸಂಸ್ಥೆಯಾದ ಗ್ಲೋಬಲ್ ಟ್ರೇಡ್ ರಿಸರ್ಚ್ ಇನಿಶಿಯೇಟಿವ್ ವಿಶ್ಲೇಷಣೆ ನಡೆಸಿದ್ದು, ವೆನಿಜುವೆಲಾದ ಬಿಕ್ಕಟ್ಟಿನಿಂದ ಭಾರತದ ಮೇಲೆ ಹೆಚ್ಚಿನ ಪರಿಣಾಮವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. 2024-25ರಲ್ಲಿ ವೆನಿಜುವೆಲಾದಿಂದ ಭಾರತ ಎಲ್ಲಾ ಸರಕುಗಳನ್ನು ಸೇರಿ ಮಾಡಿಕೊಂಡ ಆಮದು ಒಟ್ಟು 364.5 ಮಿಲಿಯನ್ ಡಾಲರ್. ಇದರಲ್ಲಿ ಕಚ್ಛಾ ತೈಲವೇ 255.3 ಮಿಲಿಯನ್ ಡಾಲರ್ ಇದೆ.
ಹಿಂದಿನ 2023-24ರಲ್ಲಿ 1.4 ಬಿಲಿಯನ್ ಡಾಲರ್ನಷ್ಟು ಕಚ್ಚಾ ತೈಲವನ್ನು ವೆನಿಜುವೆಲಾದಿಂದ ಭಾರತ ಆಮದು ಮಾಡಿಕೊಂಡಿತ್ತು. ಅದಕ್ಕೆ ಮರುವರ್ಷ ಭಾರತದ ಆಮದು ಗಣನೀಯವಾಗಿ ತಗ್ಗಿದೆ. ಇನ್ನು, ವೆನಿಜುವೆಲಾಗೆ ಭಾರತದ ರಫ್ತು ಕೂಡ ಹೆಚ್ಚೇನಿಲ್ಲ. 95.3 ಮಿಲಿಯನ್ ಡಾಲರ್ನಷ್ಟು ಮಾತ್ರವೇ ಭಾರತ ರಫ್ತು ಮಾಡಿರುವುದು. ಇದರಲ್ಲಿ 41.4 ಮಿಲಿಯನ್ ಡಾಲರ್ನಷ್ಟು ರಫ್ತು ಫಾರ್ಮಾ ಉತ್ಪನ್ನಗಳದ್ದೇ ಇದೆ ಎಂದು ಜಿಟಿಆರ್ಐನ ವರದಿ ಹೇಳುತ್ತದೆ.
ವೆನಿಜುವೆಲಾ ಜೊತೆ ರಫ್ತಾಗಲೀ ಆಮದಾಗಲೀ ಭಾರತ ವ್ಯಾಪಾರ ಪ್ರಮಾಣ ಕಡಿಮೆಯೇ. ಹೀಗಾಗಿ, ವೆನಿಜುವೆಲಾದಲ್ಲಿ ಮುಂದಿನ ಪರಿಸ್ಥಿತಿ ಏನೇ ಆದರೂ ಭಾರತದ ವ್ಯಾಪಾರ ವಹಿವಾಟಿನ ಮೇಲೆ ಪರಿಣಾಮ ಬೀರುವುದಿಲ್ಲ. ವೆನಿಜುವೆಲಾದಲ್ಲಿ ಭಾರೀ ಪ್ರಮಾಣದಲ್ಲಿ ತೈಲ ಸಂಪತ್ತು ಇದೆ. ವಿಶ್ವದ ತೈಲ ಸಂಗ್ರಹದಲ್ಲಿ ಶೇ. 18ರಷ್ಟು ತೈಲವು ವೆನಿಜುವೆಲಾದಲ್ಲೇ ಇದೆ. ಸೌದಿ ಅರೇಬಿಯಾದಲ್ಲಿರುವುದಕ್ಕಿಂತಲೂ ಹೆಚ್ಚಿನ ತೈಲವು ವೆನಿಜುವೆಲಾದಲ್ಲಿದೆ.
ವರದಿ : ಲಾವಣ್ಯ ಅನಿಗೋಳ




