Thursday, November 27, 2025

Latest Posts

ಮಾಜಿ ಉಪರಾಷ್ಟ್ರಪತಿಗಳಿಂದ ಪಿಂಚಣಿಗೆ ಅರ್ಜಿ!

- Advertisement -

ಭಾರತದ ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನ್ಖರ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ನಂತರ, ಈಗ ಮಾಜಿ ಶಾಸಕರ ಪಿಂಚಣಿಗೆ ಅರ್ಜಿ ಸಲ್ಲಿಸಿದ್ದಾರೆ. ಧನ್ಖರ್ ಅವರು 1993ರಿಂದ 1998ರವರೆಗೆ ರಾಜಸ್ಥಾನದ ಕಿಶನ್‌ಗಢ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಸೇವೆ ಸಲ್ಲಿಸಿದ್ದರು.

ಈ ಹಿನ್ನೆಲೆಯಲ್ಲಿ ಅವರು ರಾಜಸ್ಥಾನ ವಿಧಾನಸಭೆಯ ಸಚಿವಾಲಯದಲ್ಲಿ ಅಧಿಕೃತವಾಗಿ ಪಿಂಚಣಿಗಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಅರ್ಜಿ ಅನುಮೋದನೆ ಪ್ರಕ್ರಿಯೆ ಪ್ರಾರಂಭವಾಗಿದೆ. ವಿಧಾನಸಭಾ ನಿಯಮಗಳ ಪ್ರಕಾರ, ಅವರು ಕನಿಷ್ಠ ₹42,000 ಪಿಂಚಣಿಯನ್ನು ಪಡೆಯುತ್ತಾರೆ. ಜೊತೆಗೆ, ಇತರ ಮಾಜಿ ಶಾಸಕರಿಗೆ ಲಭಿಸುವ ನಾನಾ ಸೌಲಭ್ಯಗಳು ಅವರಿಗೆ ಲಭ್ಯವಾಗಲಿವೆ.

ಧನ್ಖರ್ ಅವರು 1989ರಿಂದ 1991ರ ವರೆಗೆ ಜುಂಜುನು ಲೋಕಸಭಾ ಕ್ಷೇತ್ರದಿಂದ ಸಂಸದರಾಗಿದ್ದರು. ಚಂದ್ರಶೇಖರ್ ನೇತೃತ್ವದ ಸರ್ಕಾರದಲ್ಲಿ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು. ನಂತರ 2019ರಿಂದ 2022ರವರೆಗೆ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದರು. ಈ ಅವಧಿಯಲ್ಲಿ ಅವರ ಕಾರ್ಯ ಹಾಗೂ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರದೊಂದಿಗೆ ರಾಜಭವನದ ಘರ್ಷಣೆಗಳು ಗಮನ ಸೆಳೆದಿದ್ದವು.

2022ರಲ್ಲಿ ಭಾರತದ 14ನೇ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ರು. ಇತ್ತೀಚೆಗೆ ಅವರು ಆರೋಗ್ಯ ಸಮಸ್ಯೆಗಳನ್ನು ಉಲ್ಲೇಖಿಸಿ ಜುಲೈ 21ರಂದು ರಾಜೀನಾಮೆ ಸಲ್ಲಿಸಿದರು. ರಾಜೀನಾಮೆಯ ನಂತರ, ಧನ್ಖರ್ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸದೆ, ಕುಟುಂಬದೊಂದಿಗೆ ಸಮಯ ಕಳೆಯುತ್ತಾ ಯೋಗಾಭ್ಯಾಸ ಹಾಗೂ ಟೇಬಲ್ ಟೆನಿಸ್‌ನೊಂದಿಗೆ ದಿನಚರಿಯನ್ನು ಮುಂದುವರೆಸುತ್ತಿದ್ದಾರೆ. ಉಪರಾಷ್ಟ್ರಪತಿ ಸ್ಥಾನಕ್ಕೆ ಮುಂದಿನ ಚುನಾವಣೆ ಸೆಪ್ಟೆಂಬರ್ 9ರಂದು ನಡೆಯಲಿದೆ.

- Advertisement -

Latest Posts

Don't Miss