ಸೆಪ್ಟೆಂಬರ್ 9ರಂದು ನಡೆಯಲಿರುವ ಉಪ ರಾಷ್ಟ್ರಪತಿ ಚುನಾವಣೆಗೆ ತಯಾರಿ ಶುರುವಾಗಿದೆ. BJP ಪಕ್ಷದಲ್ಲಿ ಈ ಬಗ್ಗೆ ಪ್ರಬಲ ಚರ್ಚೆಗಳು ನಡೆಯುತ್ತಿವೆ. ಈಗಾಗಲೇ ಹಲವು ಹಿರಿಯ ನಾಯಕರ ಹೆಸರುಗಳು ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಉಲ್ಲೇಖವಾಗಿದೆ. ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪ್ರಮುಖ ಅಭ್ಯರ್ಥಿಯಾಗಿದ್ದಾರೆ.
ಜುಲೈ 21 ರಂದು ಉಪ ರಾಷ್ಟ್ರಪತಿಯಾಗಿದ್ದ ಜಗದೀಪ್ ಧನಕರ್ ಅವರು ಆರೋಗ್ಯ ಕಾರಣಗಳನ್ನು ಉಲ್ಲೇಖಿಸಿ ರಾಜೀನಾಮೆ ನೀಡಿದ್ದರು. ಅವರ ಈ ನಿರೀಕ್ಷೆಗತೀತ ನಿರ್ಗಮನದಿಂದಾಗಿ ಉಪ ರಾಷ್ಟ್ರಪತಿಯ ಸ್ಥಾನ ಖಾಲಿಯಾಗಿದ್ದು, ಇದೀಗ ಚುನಾವಣೆ ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಬಿಜೆಪಿ ನಾಯಕತ್ವ ಈಗಾಗಲೇ ಹಲವಾರು ರಾಜಕೀಯ ಹಾಗೂ ಆಡಳಿತಾತ್ಮಕ ಹಿನ್ನೆಲೆಯ ಹಿರಿಯ ಮುಖಂಡರ ಹೆಸರನ್ನು ಪರಿಗಣನೆಗೆ ತೆಗೆದುಕೊಂಡಿದೆ.
ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಗುಜರಾತ್ ರಾಜ್ಯಪಾಲ ಅಚಾರ್ಯ ದೇವವ್ರತ್, ಸಿಕ್ಕಿಂ ರಾಜ್ಯಪಾಲ ಓಂ ಮಥೂರ್, ಜಮ್ಮು-ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೆನಾ ಮತ್ತು ಬಿಹಾರದ ರಾಜ್ಯಪಾಲ ಅರಿಫ್ ಮೊಹಮ್ಮದ್ ಖಾನ್ ಸೇರಿದಂತೆ ಹಲವರ ಹೆಸರುಗಳು ಚರ್ಚೆಯಲ್ಲಿವೆ.
ಇದಲ್ಲದೆ, ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಹಿರಿಯ ವಿಚಾರವಾದಿ ಶೇಷಾದ್ರಿ ಚಾರಿ, ಹಾಗೂ ಪ್ರಸ್ತುತ ರಾಜ್ಯಸಭಾ ಉಪಸಭಾಪತಿ ಹರಿವಂಶ್ ನಾರಾಯಣ ಸಿಂಗ್ ಅವರ ಹೆಸರುಗಳೂ ಬಿಜೆಪಿ ಪೈಪೋಟಿಯಲ್ಲಿದೆ ಎಂಬ ಮಾಹಿತಿಯಿದೆ.
ಚುನಾವಣೆ ತೀವ್ರ ಗಂಭೀರತೆಗೆ ತಲುಪುತ್ತಿರುವ ಹಿನ್ನಲೆಯಲ್ಲಿ, ಕಳೆದ ಒಂದು ತಿಂಗಳಲ್ಲಿ ಹಲವು ರಾಜ್ಯಪಾಲರು ಮತ್ತು ಲೆಫ್ಟಿನೆಂಟ್ ಗವರ್ನರ್‌ಗಳು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿ ಉನ್ನತ ಮಟ್ಟದ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸುತ್ತಿವೆ.