ಮುಂದಿನ ಪ್ರಧಾನಿ ಕೂಗು – ಸಂಕಷ್ಟದಲ್ಲಿ ತಮಿಳುನಾಡು ಸಿಎಂ!

ತಮಿಳುನಾಡು ರಾಜಕಾರಣದಲ್ಲಿ ಈಗ ಹೊಸ ಬಿರುಗಾಳಿ ಎಬ್ಬಿಸಿದೆ. ‘ಮುಂದಿನ ಪ್ರಧಾನಿ ವಿಜಯ್’ ಎಂಬ ಕೂಗು ತಮಿಳುನಾಡಿನಲ್ಲಿ ಹೆಚ್ಚು ಕೇಳಿಬರ್ತಿದ್ದು, ಟಿವಿಕೆ ಪಕ್ಷದ ಮುಖ್ಯಸ್ಥ ಹಾಗೂ ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರನ್ನು 2029ರ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸುತ್ತಿರುವ ಈ ಬೆಳವಣಿಗೆ ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದೆ ಅಂತಾನೆ ಹೇಳಬಹುದು. ಇದರ ಬೆನ್ನಲ್ಲೇ ಮಿತ್ರಪಕ್ಷ ಕಾಂಗ್ರೆಸ್ ಸಂಪುಟ ತೊರೆಯುವ ಎಚ್ಚರಿಕೆ ನೀಡಿದ್ದರೆ, ವಿಪಕ್ಷ ಡಿಎಂಕೆ ತೀವ್ರವಾಗಿ ಲೇವಡಿ ಮಾಡಿದೆ ಎನ್ನಲಾಗ್ತಿದೆ.

ಇತ್ತೀಚಿಗೆ ಹೊರಬಿದ್ದ ‘ಮೂಡ್ ಆಫ್ ದಿ ನೇಷನ್’ ಸಮೀಕ್ಷೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಹುಲ್ ಗಾಂಧಿ ನಂತರದ ಮೂರನೇ ಅತ್ಯಂತ ಜನಪ್ರಿಯ ಪ್ರಧಾನಿ ಮುಖವಾಗಿ ವಿಜಯ್ ಹೊರಹೊಮ್ಮಿದ್ದರು. ಮುಖ್ಯಮಂತ್ರಿಯಾಗಿ ನೂರು ದಿನ ಪೂರೈಸಿದ ಬೆನ್ನಲ್ಲೇ ಈ ಸಮೀಕ್ಷಾ ವರದಿ ಹೊರಬಿದ್ದಿದ್ದು, ತಮಿಳುನಾಡಿನ ಹಲವೆಡೆ 2029ಕ್ಕೆ ವಿಜಯ್ ಪ್ರಧಾನಿ ಎಂಬ ಪೋಸ್ಟರ್‌ಗಳು ರಾರಾಜಿಸುತ್ತಿವೆ.

ಈ ಬೆಳವಣಿಗೆಯಿಂದ ತಮಿಳುನಾಡಿನಲ್ಲಿ ಟಿವಿಕೆ ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರದಲ್ಲಿರುವ ಕಾಂಗ್ರೆಸ್ ತೀವ್ರ ಅಸಮಾಧಾನಗೊಂಡಿದೆ. ಈ ಕುರಿತು ಮಾತನಾಡಿರುವ ಕಾಂಗ್ರೆಸ್ ಸಚಿವ ರಾಜೇಶ್ ಕುಮಾರ್, “ಎರಡು ಸಾವಿರದ ಇಪ್ಪತ್ತೊಂಬತ್ತರ ಚುನಾವಣೆಗೆ ಸಂಬಂಧಿಸಿದಂತೆ ನಮ್ಮ ನಿಲುವು ಸ್ಪಷ್ಟವಾಗಿದೆ. ನಮ್ಮ ನಾಯಕ ರಾಹುಲ್ ಗಾಂಧಿ ಮುಂದಿನ ಪ್ರಧಾನಿಯಾಗಲಿದ್ದಾರೆ. ಒಂದು ವೇಳೆ ಟಿವಿಕೆ ಪಕ್ಷವು ರಾಹುಲ್ ಗಾಂಧಿಯವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಒಪ್ಪಿಕೊಳ್ಳದಿದ್ದರೆ, ನಮ್ಮಿಬ್ಬರ ಕಾಂಗ್ರೆಸ್ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ” ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಇತ್ತ ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷ ಮಾಣಿಕ್ಕಂ ಟ್ಯಾಗೋರ್ ಕೂಡ ಸಮೀಕ್ಷೆಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿ, ಎಕ್ಸ್ ಖಾತೆಯಲ್ಲಿ ‘ನರಿ ನಡೆಸಿದ ನಕಲಿ ಸಮೀಕ್ಷೆ’ ಎಂಬ ನೀತಿಕಥೆಯನ್ನು ಹಂಚಿಕೊಳ್ಳುವ ಮೂಲಕ ಅಸಮಾಧಾನ ಹೊರಹಾಕಿದ್ದಾರೆ. ಮತ್ತೊಂದೆಡೆ, ಟಿವಿಕೆ ಕಾರ್ಯಕರ್ತರ ಈ ಪ್ರಧಾನಿ ಕೂಗನ್ನು ವಿಪಕ್ಷ ಡಿಎಂಕೆ ತೀವ್ರವಾಗಿ ಅಣಕಿಸಿದೆ. ಡಿಎಂಕೆ ಕಾರ್ಯದರ್ಶಿ ಆರ್.ಎಸ್. ಭಾರತಿ ಮಾತನಾಡಿ, “ಅವರ ಕಲ್ಪನೆಗಳಿಗೆ ಯಾವುದೇ ಮಿತಿಯಿಲ್ಲ. ನಾಳೆ ಅವರು ವಿಜಯ್ ವಿಶ್ವಸಂಸ್ಥೆಯ ಮುಖ್ಯಸ್ಥರಾಗುತ್ತಾರೆ ಎಂದರೂ ಅಚ್ಚರಿಯಿಲ್ಲ” ಎಂದು ಲೇವಡಿ ಮಾಡಿದ್ದಾರೆ.

ಅಲ್ಲದೆ ಮೈತ್ರಿ ಪಕ್ಷ ಕಾಂಗ್ರೆಸ್ ಕಾಲೆಳೆದಿರುವ ಅವರು, “ಒಬ್ಬರು ತಾವೇ ಪ್ರಧಾನಿ ಎನ್ನುತ್ತಿದ್ದಾರೆ ಅಂದ್ರೆ, ರಾಹುಲ್ ಗಾಂಧಿ ಪ್ರಧಾನಿ ಆಗುವುದಿಲ್ಲ ಎಂದು ಅವರೇ ನಿರ್ಧರಿಸಿದಂತಲ್ಲವೇ? ಕಾಂಗ್ರೆಸ್ ಕಾರ್ಯಕರ್ತರಿಗೆ ಸ್ವಾಭಿಮಾನವಿದ್ದರೆ ಇದನ್ನು ಒಪ್ಪುವುದಿಲ್ಲ ಎಂದು ಹೇಳಿ ಹೊರಬರಬೇಕು” ಎಂದು ಸವಾಲು ಹಾಕಿದ್ದಾರೆ.

ಈ ಎಲ್ಲಾ ಗೊಂದಲಗಳ ನಡುವೆ ವಿಜಯ್ ಅವರ ಮತ್ತೊಂದು ಮಿತ್ರಪಕ್ಷ ಎಂಡಿಎಂಕೆಯ ನಾಯಕ ವೈಕೋ ಮೈತ್ರಿಧರ್ಮ ಕಾಪಾಡುವ ಯತ್ನ ಮಾಡಿದ್ದು, “ಇಂಡಿಯಾ ಒಕ್ಕೂಟಕ್ಕೆ ರಾಹುಲ್ ಗಾಂಧಿ ಬಿಟ್ಟರೆ ಬೇರೆ ಪರ್ಯಾಯ ಪ್ರಧಾನಿ ಅಭ್ಯರ್ಥಿಯಿಲ್ಲ. ಸ್ವತಃ ಮುಖ್ಯಮಂತ್ರಿ ವಿಜಯ್ ಅವರಿಗೂ ಇಂತಹ ಆಸಕ್ತಿ ಇಲ್ಲ ಎಂದು ನಾನು ಭಾವಿಸುತ್ತೇನೆ” ಎಂದು ಸ್ಪಷ್ಟಪಡಿಸುವ ಮೂಲಕ ವಿವಾದ ಶಮನಕ್ಕೆ ಯತ್ನಿಸಿದ್ದಾರೆ.

About The Author