ಚಿತ್ರದುರ್ಗದ ರೇಣುಕಾಸ್ವಾಮಿ ಅವರ ಕೊಲೆ ಪ್ರಕರಣದಲ್ಲಿ ಸದ್ಯ ಬಳ್ಳಾರಿ ಜೈಲು ಸೇರಿರುವ ದರ್ಶನ್ ಅವರನ್ನು ನೋಡಲು ಇಂದು (ಗುರುವಾರ) ಜೈಲಿಗೆ ಅವರ ಪತ್ನಿ ವಿಜಯಲಕ್ಷ್ಮಿ ಹಾಗು ಸಹೋದರ ದಿನಕರ್ ತೂಗುದೀಪ ಭೇಟಿ ನೀಡಿದ್ದಾರೆ. ಅಲ್ಲದೆ ವಕೀಲರ ಜೊತೆ ಆಮಸಿರುವ ಅವರು, ಚಾರ್ಜ್ ಶೀಟ್ ಕೂಡ ತಂದಿದ್ದಾರೆ.
ಇನ್ನು, ಈ ವೇಳೆ ಜೈಲಿಗೆ ಭೇಟಿ ಕೊಟ್ಟ ವಿಜಯಲಕ್ಷ್ಮಿ ಮತ್ತು ದಿನಕರ್ ತೂಗುದೀಪ ಅವರು, ಕಾನೂನು ಕುರಿತು ಹಾಗು ಜಾಮೀನು ಅರ್ಜಿ ಸಲ್ಲಿಸುವ ವಿಷಯ ಕುರಿತಂತೆ ಒಂದಷ್ಟು ಮಾತನಾಡಿದ್ದಾರೆ. ಇನ್ನು, ಈ ವೇಳೆ, ವಿಜಯಲಕ್ಷ್ಮಿ ಅವರು ದರ್ಶನ್ ಅವರಿಗಾಗಿ ಡ್ರೈ ಫ್ರೂಟ್ಸ್, ಬಿಸ್ಕೆಟ್ ಹಾಗೂ ದೇವರ ಪ್ರಸಾದ ಕೊಟ್ಟಿದ್ದಾರೆ. ದರ್ಶನ್ ಅವರು ವಿಜಯಲಕ್ಷ್ಮಿ ಅವರು ತಂದ ವಸ್ತುಗಳಿದ್ದ ಬ್ಯಾಗ್ ಅನ್ನು ಹಿಡಿದು ಸೆಲ್ ನತ್ತ ಧಾವಿಸುವ ದೃಶ್ಯ ಕೂಡ ಸಾಮಾನ್ಯವಾಗಿತ್ತು.
ರೇಣುಕಾಸ್ವಾಮಿ ಹತ್ಯೆಗೆ ಸಂಬಂಧಿಸಿದಂತೆ ಜೂನ್ 11 ರಂದು ದರ್ಶನ್ ಸೇರಿದಂತೆ ಒಟ್ಟು 17 ಆರೋಪಿಗಳನ್ನು ಬಂಧಿಸಲಾಗಿದೆ. ಇತ್ತೀಚೆಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಲೀಕ್ ಆದಂತಹ ಒಂದು ಫೋಟೋದಿಂದಾಗಿ ದರ್ಶನ್ ಅವರನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ಅಲ್ಲಿನ ವ್ಯವಸ್ಥೆ ಸರಿ ಇಲ್ಲ ಅಂತ ದರ್ಶನ್ ಕೂಡ ಪೊಲೀಸರಲ್ಲಿ ಮನವಿ ಮಾಡಿ, ಸರ್ಜಿಕಲ್ ಚೇರ್ ಪಡೆದಿದ್ದರು. ಅಲ್ಲದೆ, ಫೋನ್ ವ್ಯವಸ್ಥೆ ಮಾಡುವಂತೆಯೂ ಮನವಿ ಮಾಡಿದ್ದರು. ಇದರ ಜೊತೆಗೆ ಟಿವಿಗೆ ಬೇಡಿಕೆ ಇಟ್ಟಿದ್ದರು. ಜೈಲಿನ ನಿಯಮಾನುಸಾರ ಜೈಲು ಅಧಿಕಾರಿಗಳು ಬೇಡಿಕೆಗೆ ಅಸ್ತು ಅಂದಿದ್ದರು.