Vijayapura: ಅಬ್ಬಾ! ಈ ಎತ್ತು 18 ಲಕ್ಷಕ್ಕೆ ಮಾರಾಟ

ವಿಜಯಪುರ: ಸಾಮಾನ್ಯವಾಗಿ ಎತ್ತುಗಳು ಲಕ್ಷ ಲಕ್ಷ ರೂಪಾಯಿಗಳಿಗೆ ಮಾರಾಟವಾಗೋದು ವಿರಳ. ಜೋಡಿ ಎತ್ತುಗಳೇ ದೊಡ್ಡ ಮೊತ್ತಕ್ಕೆ ಮಾರಾಟವಾಗೋದು ಕಷ್ಟ. ಹೀಗಿರುವಾಗ ಒಂಟಿ ಎತ್ತೊಂದು ದಾಖಲೆ ಪ್ರಮಾಣದ ಮೊತ್ತಕ್ಕೆ ಮಾರಾಟವಾದ ಘಟನೆ ವಿಜಯಪುರದಲ್ಲಿ ನಡೆದಿದೆ.

ಒಂದೇ ಎತ್ತು ಬರೋಬ್ಬರಿ 18 ಲಕ್ಷ 1 ಸಾವಿರ ರೂ.ಗೆ ಮಾರಾಟವಾಗಿದೆ. ಜಾನುವಾರು ಮಾರಾಟದ ವಿಚಾರದಲ್ಲಿ ದಾಖಲೆ ಮೊತ್ತಕ್ಕೆ ಮಾರಾಟವಾದ ಎತ್ತು ಇದಾಗಿದೆ. ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಬಬಲಾದಿ ಗ್ರಾಮದ ರಾಮನಗೌಡ ಪಾಟೀಲ್ ಎಂಬುವವರ ಎತ್ತು ಈ ದಾಖಲೆ ಬರೆದಿದೆ. ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಹಿಟ್ನಾಳ ಗ್ರಾಮದ ಸದಾಶಿವ ಎಂಬುವವರು ದಾಖಲೆ ಮೊತ್ತಕ್ಕೆ ಎತ್ತನ್ನು ಖರೀದಿಸಿದ್ದಾರೆ. ಎಲ್ಲರೂ ಹುಬ್ಬೇರಿಸೋ ದಾಖಲೆ ಮೊತ್ತಕ್ಕೆ ಈ ಎತ್ತು ಮಾರಾಟವಾಗಿದ್ದು, ತೇರು ಬಂಡಿ ಎಳೆಯುವುದರಲ್ಲಿ ಈ ಎತ್ತು ಪ್ರಸಿದ್ಧಿಯಾಗಿತ್ತು.

ಅಷ್ಟಕ್ಕೂ ಈ ಎತ್ತು ಸುಖಾಸುಮ್ಮನೆ ಬೃಹತ್ ಮೊತ್ತಕ್ಕೆ ಮಾರಾಟವಾಗಿಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ತೇರುಬಂಡಿ ಸ್ಪರ್ಧೆಯಲ್ಲಿ ಅನೇಕ ಬಹುಮಾನಗಳನ್ನು ಈ ಎತ್ತು ತಂದುಕೊಟ್ಟಿದೆ. ಹಿಂದೂಸ್ಥಾನ್ ಹೆಚ್‌ಪಿ ಎಂಬ ಹೆಸರಿನಿಂದ ಮಾಲೀಕರು ಈ ಎತ್ತನ್ನು ಕರೆಯುತ್ತಿದ್ದರು. ಇಲ್ಲಿವರೆಗೆ ಈ ಎತ್ತು 40 ಗ್ರಾಂ ಚಿನ್ನ, ಎರಡು ಬೆಳ್ಳಿ ಗದೆ, 4 ಬೈಕ್ ಗೆದ್ದುಕೊಟ್ಟಿದೆ. ಐದೂವರೆ ಅಡಿ ಎತ್ತರವಿರೋ ಎತ್ತಿಗೆ ಮನೆಯವರು ನಿತ್ಯ ಪೌಷ್ಟಿಕಾಂಶ ಆಹಾರ ನೀಡುತ್ತಿದ್ದರು. ಹಾಲು, ದವಸ, ಧಾನ್ಯಗಳನ್ನು ಆಹಾರವಾಗಿ ನೀಡುತ್ತಿದ್ದರು. ಈ ಎತ್ತು ದಾಖಲೆ ಮೊತ್ತಕ್ಕೆ ಮಾರಾಟವಾಗಿದ್ದು ವಿಜಯಪುರ ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.

About The Author